ಗ್ರಾಮೀಣ ಬದುಕು- ಬವಣೆ, ಸಂತಸ, ದುಖಃ,ಆಡು- ಪಾಡು, ಗದ್ದೆ ಮನೆ, ಹೀಗೆ ಹಳ್ಳಿಗಾಡಿನ ಸೊಗಡನ್ನು ವಿವರಿಸುವಂತಹ ಅಪ್ಪಟ್ಟ ಗ್ರಾಮೀಣ ಕಥೆಗಳು ಈ ಕೃತಿಯಲ್ಲಿವೆ. ಹಳ್ಳಿ ಬದುಕನ್ನು ಸಹಜವಾಗಿಯೇ ವಿವರಿಸುತ್ತಾ ಭಿನ್ನ ಆಯಾಮಗಳನ್ನು ನೀಡುವ ಕಥೆಗಳು ಓದುಗರ ಮನ ಮುಟ್ಟುತ್ತವೆ.
ಹಿನ್ನುಡಿಯಲ್ಲಿ ಒಂದರ್ಥದಲ್ಲಿ ಇಲ್ಲಿಯ ಬಹುತೇಕ ಕತೆಗಳು ಅರಿವಿನ ಯಾತ್ರೆಗಳಾಗಿವೆ. ಕುಸಿಯುತ್ತಿರುವ ವರ್ತಮಾನದ ಮಧ್ಯೆ ಗ್ರಾಮೀಣ ಜನತೆಯ ನಂಬಿಕೆಗಳು ಸೂರ್ಯನಿಗೆ ಸಮ ಸಮವಾಗಿ ಫಳ ಫಳ ಹೊಳೆಯುತ್ತವೆ. ಎನ್ನುವ ಎಸ್.ಎಂ.ಯೋಗಪ್ಪನವರ ಅವರು ಚನ್ನಪ್ಪ ಅವರ ಬರವಣಿಗೆಗಳಲ್ಲಿ ನಮ್ಮ ನೆಲದ ಕೂಗನ್ನು ಬಿಟ್ಟರೆ ಮತ್ತೇನೂ ಕೇಳಿಸಲಾರದು! ಎಂದು ಕೃತಿಯ ಹಂದರವನ್ನು ವಿವರಿಸುತ್ತಾರೆ. ಈ ಕೃತಿಯಲ್ಲಿ ಬಳಸಿರುವ ಉತ್ತರ ಕರ್ನಾಟಕದ ಗ್ರಾಮೀಣ ಭಾಷೆಯು ಜನಪದ ಮಣ್ಣಿನ ಸೊಗಡು, ಉಪಮೆಗಳು ಓದುಗನ ಕೈಯಲ್ಲಿ ಕಣ್ಣುಗಳನ್ನಿಟ್ಟಂತಿವೆ.
ಕತೆ ಕೇಳೋಣ ಬನ್ನಿ ಸರಣಿಯಲ್ಲಿ ಕತೆಗಾರ ಚನ್ನಪ್ಪ ಕಟ್ಟಿ ಅವರಿಂದ ‘ಏಕತಾರಿ’ ಕತೆ ವಾಚನ
ಗ್ರಾಮ ಬದುಕಿನ ವಿಸ್ಮಯಗಳ ಅನಾವರಣ: ಬುಕ್ ಬ್ರಹ್ಮ
ವೈಚಾರಿಕ ನಿಲುವಿಗೆ ಬದ್ಧವಾದ ಆಧುನಿಕ ವಿದ್ಯೆ ಸಮುದಾಯದ ಬದುಕನ್ನು ಮುಕ್ತವಾಗಿ ನೋಡಲು ಹಿಂಜರಿಯುತ್ತದೆ. ಸಮುದಾಯದ ನಂಬಿಕೆ ಮತ್ತು ಶ್ರದ್ಧೆಗಳನ್ನು ಸಂದೇಹದಿಂದಲೇ ನೋಡುತ್ತದೆ. ಸಾಂಸ್ಕೃತಿಕ ವೈವಿಧ್ಯವನ್ನು ಗೌರವಿಸುತ್ತಲೇ ಸಾಂಸ್ಕೃತಿಕ ಆಚರಣೆಗಳನ್ನು ಒಲ್ಲದ ಮನಸ್ಸಿನಿಂದಲೇ ಗಮನಿಸಲು ಹವಣಿಸುತ್ತದೆ. ಹಾಗೆಂದು ಅನುಮಾನಗಳನ್ನು ದೂರವಿರಿಸಿದರೆ ನಂಬಿಕೆಯ ಜೊತೆಯಲ್ಲಿಯೇ ಇರುವ ಮೂಢನಂಬಿಕೆಗಳನ್ನು ಮೆರೆಸಬೇಕಾಗುತ್ತದೆ. ಈ 'ತಾಕಲಾಟ ದಲ್ಲಿರುವ ಮನಸ್ಸು ಸಮುದಾಯವನ್ನು ಮುಕ್ತವಾಗಿ ನೋಡಲು ಸಾಧ್ಯವಾಗದೆ. ಪಾರಂಪರಿಕ ನಂಬಿಕೆಗಳಲ್ಲಿರುವ ಒಳ್ಳೆಯತನ, ಜೀವ-ಜೀವಗಳನ್ನು ಬೆಸೆಯಬಲ್ಲ ಹೃದಯವಂತಿಕೆಯನ್ನು ಗಮನಿಸದೆ ಹೋಗುವ ಅಪಾಯವೂ ಇರುತ್ತದೆ. ಕವಿ, ಕತೆಗಾರ ಚನ್ನಪ್ಪ ಕಟ್ಟಿ ಅವರು ಇಂಥ ಅಪಾಯದಿಂದ ಪಾರಾಗಿರುವುದನ್ನು ಅವರ ಹೊಸ ಕಥಾಸಂಕಲನ 'ಏಕತಾರಿ' ತೋರಿಸುತ್ತದೆ.
ಚನ್ನಪ್ಪ ಕಟ್ಟಿ ಗ್ರಾಮೀಣ ಬದುಕಿನಿಂದ ದೂರವಾದವರಲ್ಲ. ಹುಟ್ಟಿಬೆಳೆದ, ಬದುಕನ್ನು ಕಟ್ಟಿಕೊಂಡ ಸಮುದಾಯದ ಜೊತೆಯಲ್ಲಿಯೇ ಇದ್ದು ಅದರ ಉಸಿರಿನ ಲಯವನ್ನು ಬಲ್ಲವರು. ತನ್ನ ಸಮುದಾಯದ ನಂಬಿಕೆ, ಶ್ರದ್ಧೆಗಳನ್ನು ಅರಿತವರು, ಒಳಗಿದ್ದುಕೊಂಡು, ಗೌರವವಿಟ್ಟುಕೊಂಡೂ, ಸಾಪೇಕ್ಷ ದೂರವನ್ನು ಉಳಿಸಿಕೊಂಡವರು. ತಳಮಟ್ಟ ಹೋಗಿ ಅಲ್ಲಿನ ಸಾರವನ್ನು, ಸೊಗಸನ್ನು, ಜೀವನ ಪ್ರೀತಿಯನ್ನು ಶೋಧಿಸಬಲ್ಲವರು. ಇವರ ಕತೆಗಳಲ್ಲಿ ಭಾಷೆ ಎನ್ನುವುದು ಕೇವಲ ಪ್ರಾದೇಶಿಕ ಕಸುವು, ಸೊಗಡು, ಸೊಗಸನ್ನು ಮೆರೆಸುವ ಅಲಂಕಾರವಲ್ಲ. ಅದು ಅಲ್ಲಿನ ಲಯ ವಿನ್ಯಾಸಗಳನ್ನು, ಭಾವ ಪಲ್ಲಟಗಳನ್ನು ಜೀವಂತ ವ್ಯಕ್ತಿಗಳ ನಾಡಿಮಿಡಿತವನ್ನು ಹಿಡಿಯಬಲ್ಲ ಸಾಧನ ಸೌಲಭ್ಯ ಇಲ್ಲಿನ ಕತೆಗಳಲ್ಲಿ ಸಮುದಾಯದ ಬದುಕು ಮೈಮುರಿದು ಮೇಲೇಳುವುದನ್ನು ನೋಡಬಹುದಾಗಿದೆ. ಗ್ರಾಮೀಣ ಬದುಕಿನಲ್ಲಿ ಇನ್ನೂ ಉಸಿರು ಹಿಡಿದುಕೊಂಡಿರುವ ಜೀವಪೋಷಕ ಧಾತುಗಳೂ ಇಲ್ಲಿ ಮುಖತೋರುತ್ತವೆ. ಮತ್ತೆಮತ್ತೆ ಕಾಯಕಕ್ಕೆ, ವ್ಯಕ್ತಿಯ ಘನತೆಗೆ, ನೆಲದ ನಿಜ ಸಂಬಂಧಕ್ಕೆ ತುಡಿಯುವ ಆಶಯವೂ ಇಲ್ಲಿ ಕಾಣುವುದು (ರತ್ನಾಗಿರಿ ಎಂಬ ಮಾಯೆ, ರಾಯಪ್ಪನ ಬಾಡಿಗೆ ಸಾಯಿಕಲ್ಲು ಇತ್ಯಾದಿ) ಕಟ್ಟಿಯವರ ತಾತ್ವಿಕ ನಿಲುವನ್ನು ತೋರುತ್ತದೆ. ನೆಲದಿಂದ ದೂರವಾಗುತ್ತಿರುವ ವಿದ್ಯಾವಂತರ ಸಮಸ್ಯೆಯ ಮೂಲವಿರುವುದೆಲ್ಲಿ ಎಂಬುದರ ಹುಡುಕಾಟವೂ ಇಲ್ಲಿ ಸೂಚ್ಯವಾಗಿ ಕ್ರಿಯಾಶೀಲವಾಗಿದೆ. ದ್ವೇಷದ ಜಾಗದಲ್ಲಿ ಪ್ರೀತಿಯ ಬೀಜವನ್ನು ನೆಟ್ಟು ಬದುಕನ್ನು ಹೇಗೆ ಸಹನೀಯ ಮಾಡಬಹುದು (ಹೊಸ್ತಿಲೊಳಗಣ ಹುತ್ತ) ಎನ್ನುವುದನ್ನು ಕಟ್ಟಿ ಕಲಾವಿದರಾಗಿಯೇ ಸಮರ್ಥವಾಗಿ ನಿರ್ವಹಿಸುತ್ತಾರೆ. ಉಡಿಯಲ್ಲಿ ಚೆಮ್ಮಾವುಗೆ ಕಟ್ಟಿಕೊಂಡು, ಡೊಳ್ಳಿನ ವಾಲಗದೊಂದಿಗೆ ಬರಿಗಾಲಲ್ಲಿ ನಡೆದು ಗುಡಿಯ ಕಂಬಕ್ಕೆ ಚಿಮ್ಮಾವುಗೆ ಕಟ್ಟಿ ಬರುವ ರೆಬಕಾಯಿಯ ವಾಡಿಕೆ ಒಂದು ಕಡೆ; ಬ್ಯಾಂಡ್ ಕಂಪನಿಯ ಮೆರವಣಿಗೆಯೊಂದಿಗೆ, ಪ್ಯಾಟೆಯಿಂದ ತಂದ ಮಿರಮಿರ ಮಿಂಚುವ ಚಪ್ಪಲಿಗಳನ್ನು ಟ್ರ್ಯಾಕ್ಟರಿನ ಮೇಲೆ ಇಟ್ಟು ಮೆರವಣಿಗೆಯಲ್ಲಿ ಸಾಗುವ ರೆಬಕಾಯಿ ಮಗ ಆರುಣಕುಮಾರ ಇನ್ನೊಂದು ಕಡೆ. ಒಂದು ಸಾಂಪ್ರದಾಯಿಕ, ಇನ್ನೊಂದು ಆಧುನಿಕ. ಇವುಗಳ ಮುಖಾಮುಖಿಯಲ್ಲಿ ನಿಜವಾದ ಜೀವಸೆಲೆ ಎಲ್ಲಿದೆ ಎನ್ನುವುದನ್ನು ತೋರಿಸುವ, ಅತ್ಯಂತ ಸೂಕ್ಷ್ಮವಾದ, ಹಾಗೆಯೇ ಬಹುದೊಡ್ಡ ಸವಾಲಿನ ಕತೆಯೇ-ಸುಖದ ನಾದ ಹೊರಡಿಸುವ ಕೊಳಲು, ಒಂದಿಷ್ಟು ಎಚ್ಚರ ತಪ್ಪಿದರೆ ಜಾತಿಪದ್ಧತಿಯ ಸಮರ್ಥನೆಯಾಗುವ ಈ ಕತೆಯನ್ನು ಚನ್ನಪ್ಪ ಎಷ್ಟೊಂದು ಸಮರ್ಥವಾಗಿ, ಕಲಾತ್ಮಕವಾಗಿ ನಿರ್ವಹಿಸಿದ್ದಾರೆ! ಈ ಸಂಕಲನದಲ್ಲಿ ಇನ್ನೊಂದು ಅಪರೂಪದ 'ಅಟ್ಟ' ಕತೆ ಪುಟ್ಟ ಬಾಲಕನೊಬ್ಬನ ಮೂಲಕ ಹೊರಜಗತ್ತನ್ನು ಹಿರಿಯರ ಪ್ರಪಂಚವನ್ನು, ವಿಭಿನ್ನ ವಿದ್ಯಮಾನಗಳನ್ನು ನೋಡಲು ಹವಣಿಸುತ್ತದೆ. ಇಂಥ ಕತೆಗಳು ಕನ್ನಡದಲ್ಲಿ ಸಾಕಷ್ಟಿವೆ. ಕೃಷ್ಣ = ಆಲನಹಳ್ಳಿಯವರ 'ಕಾಡು', ಕೆ.ಸದಾಶಿವ ಅವರ 'ರಾಮನ ಸವಾರಿ ಸಂತೆಗೆ ಹೋದದ್ದು', ಲಂಕೇಶರ 'ಉಮಾಪತಿಯ ಸ್ಕಾಲರ್ ಷಿಪ್ ಯಾತ್ರೆ' ಹೀಗೆ ಉದಾಹರಣೆಗಳನ್ನು ಕೊಡುತ್ತ ಹೋಗಬಹುದು. ಈ ಕತೆಯ ಕೊನೆಯಲ್ಲಿ ಚಿತ್ರಿತವಾಗಿರುವ ರೂಪಕವೊಂದು ಅತ್ಯಂತ ಸಮರ್ಥವಾಗಿ ಕತೆಯ ಧ್ವನಿಯನ್ನು ಹಿಗ್ಗಿಸಿಬಿಡುತ್ತದೆ. ತನ್ನ ನೆಲದ ಮಣ್ಣನ್ನೇ ಕುಂಬಾರ ನಾದಿನಾದಿ ತನಗೆ ಬೇಕಾದ ಆಕಾರಕ್ಕೆ ತಿರುಗಿಸುವ ಕಲಾವಿದನಂತೆ ಚನ್ನಪ್ಪ ಕಟ್ಟಿ ತನ್ನ ಸುತ್ತಲಿನ ಬದುಕಿನಿಂದ, ತನ್ನ ಸಮುದಾಯದ ಜನರಿಂದ ಎಲ್ಲವನ್ನೂ ಎತ್ತಿಕೊಂಡು, ತಮಗೆ ಬೇಕಾದ ರೀತಿಯಲ್ಲಿ ಕಲಾಕೃತಿಯನ್ನು ನಿರ್ಮಿಸಬಲ್ಲ ಶಕ್ತಿಯನ್ನು ಪಡೆದಿದ್ದಾರೆ. ಅವರು ಕಟ್ಟಿಕೊಡುವ ರೂಪಕಗಳು ಸರಳ, ಸ್ಥಳೇಯ ಮತ್ತು ಅತ್ಯಂತ ಪರಿಣಾಮಕಾರಿಯಾದವು. 'ಅಟ್ಟ' ಕತೆಯಲ್ಲಿ ಬರುವ ಬಸರೀಮರ, ಕಾಗೆ, ಗೂಡು, ಮೊಟ್ಟೆ ಮರಿ, ಬತ್ತೀರಪ್ಪನ ಗುಡ್ಡ, ಹಾಗೆಯೇ 'ಹೊಸ್ತಿಲೊಳಗಣ ಹುತ್ತ' ಕತೆಯಲ್ಲಿನ ಮಣ್ಣಿನ ಹೆಂಟೆ(ಮೂಗು, ಕಿವಿ, ಬಾಯಿ, ಹಣೆ ಮೂಡಿ ತನ್ನನ್ನು ಅಣಕಿಸುವ ರುಂಡವೊಂದು ಕುಳಿತಂತೆ ತೋರುವ ಮಣ್ಣಿನ ಹೆಂಟೆ ತನ್ನ ವೈರಿ ಪರಪ್ಪನಾಗಿ ಕಾಣುವ) ಇವೆಲ್ಲ ಪರಿಣಾಮಕಾರೀ ರೂಪಕಗಳಾಗುವುದು ಚನ್ನಪ್ಪನವರ ಕಲೆಗಾರಿಕೆ, ಚಿತ್ರಕಶಕ್ತಿ ಮತ್ತು ಪ್ರತಿಭೆಗೆ ಹಿಡಿದ ಕನ್ನಡಿಗಳಾಗಿವೆ. ಇದೇ ಕತೆಯಲ್ಲಿ ಬರುವ ಮುಶೀ, ಅದಕ್ಕೆ ತಂಬಾಕು ತುಂಬುವುದು, ವಲ್ಲಿಯನ್ನು ಫಿಲ್ಟರ್ ಮಾಡಿಕೊಂಡು ಜರುಕಿ ಎಳೆಯುತ್ತ ಬ್ರಹ್ಮಾನಂದ ಅನುಭವಿಸುವುದು-ಇದೆಲ್ಲವನ್ನೂ ಒಂದು ಧಾರ್ಮಿಕ ಆಚರಣೆಯಂತೆ ಜೀವಂತವಾಗಿ ಚಿತ್ರಿತವಾಗಿರುವುದು ಪ್ರತಿಭಾಪೂರ್ಣವಾಗಿದೆ.
ಈ ಸಂಕಲನಕ್ಕೆ ತೀರ ಅಪವಾದ ಎನ್ನಿಸುವಂತಿರುವ 'ಊರ್ಧ್ವರೇತ' ಕತೆಯ ನಡೆಯಾಗಲಿ, ಗೊತ್ತುಗುರಿಯಾಗಲಿ ನನ್ನಂಥವನ ತಿಳುವಿಗೆ, ಗ್ರಹಿಕೆಗೆ ಎಟುಕುವುದಿಲ್ಲ.
- ಜಿ.ಪಿ. ಬಸವರಾಜು
(ಹೊಸ ಮನುಷ್ಯ: ಏಪ್ರಿಲ್ 2೦20ರ ಸಂಚಿಕೆಯಿಂದ)
©2024 Book Brahma Private Limited.