‘ಕೆಂಪು ದಾಸವಾಳ’ ಕೃತಿಯು ಆಶಾ ರಘು ಅವರ ಕಥಾಸಂಕಲನವಾಗಿದೆ. ಇಲ್ಲಿ ಲೇಖಕಿಯ ಅಪೂರ್ಣವಾದ ಬದುಕಿನ ನೋವು, ಕ್ರೂರತೆ, ವ್ಯಂಗ್ಯ, ಮಾಯೆಯ ಏರಿಳಿತದ ಕಣ್ಣುಮುಚ್ಚಾಲೆ, ಪ್ರಾಮಾಣಿಕ ಸೋಲಿನಲ್ಲೂ ಸಾಂತ್ವನವನ್ನು ಕಾಣುವ ಪಾತ್ರಗಳನ್ನು, ಅದರಲ್ಲೂ ವಿಶೇಷವಾಗಿ ಸ್ತ್ರೀ ಪಾತ್ರಗಳನ್ನು ಗಟ್ಟಿಯಾಗಿ ಚಿತ್ರಿಸಿದ್ದಾರೆ. ಕೆಲವೊಮ್ಮೆ ಲೇಖಕರು ಅನುಭವಿಸಿದ ಭಾವನೆಗಳು ಕೂಡ ಅಂತಹ ಹಲವು ಪಾತ್ರಗಳ ವ್ಯಕ್ತಿತ್ವವನ್ನು ಇನ್ನಷ್ಟು ಗಟ್ಟಿಯಾಗಿ ಚಿತ್ರಿಸಲು ಸಹಾಯವಾಗಿರಬಹುದು. ಬದುಕು ಮಾಗಿದಂತೆ ಲೇಖಕ ಸೃಷ್ಟಿಸುವ ಪಾತ್ರಗಳು ಕೂಡ ಅಷ್ಟೇ ಜವಾಬ್ದಾರಿಯಿಂದ ವರ್ತಿಸುತ್ತವೆ. ಈ ಸಂಕಲನದ ಪ್ರತಿ ಕಥೆಗಳನ್ನು ಓದಿದಾಗ ಮೂಡುವ ಭಾವನೆ ಅಂತಹ ಕಾಳಜಿಯದ್ದು. ಅಂತಃಕರಣವೇ ಬದುಕಿನ ಸಾರವಾದಾಗ ಅದರ ಇರುವಿಕೆ, ಇಲ್ಲದಿರುವಿಕೆ ಮೂಡಿಸುವ ಶೂನ್ಯತೆ ಇವರ ಕತೆಗಳ ಮನೋಬಲತೆಯನ್ನು ತಿಳಿಸುತ್ತದೆ. ಯುದ್ಧಕ್ಕೆ ಹೊರಟ ಯೋಧನ ಮನವು ಕೆಲವೊಮ್ಮೆ ತನ್ನ ಪ್ರೀತಿಯ ಕುಟುಂಬವನ್ನೂ, ಸಾವಿನ ಸ್ಮಶಾನವನ್ನೂ ನೆನಪು ಮಾಡಿಕೊಳ್ಳುತ್ತಿರುತ್ತದೆ. ದ್ವಂದ್ವಗಳು ಹುಟ್ಟುವುದೇ ಇಂತಹ ಸಂದರ್ಭಗಳಿಂದ. ಜೀವನದ ಇಂತಹ ಅನೇಕ ಸಂದಿಗ್ಧ ಪರಿಸ್ಥಿತಿಗಳನ್ನು ಆಶಾರಘು ಅವರು ಈ ಕೃತಿಯ ಮೂಲಕ ನೆನಪಿಸುತ್ತಾರೆ. ಅವರ ನಿರಂತರವಾದ ಓದು, ಲೋಕ ಗ್ರಹಿಕೆ, ಕಾಪಿಟ್ಟುಕೊಂಡ ಬರವಣಿಗೆಯ ಗಟ್ಟಿತನವು ಕಥೆಗಳ ಮೌಲ್ಯವನ್ನು ಹೆಚ್ಚಿಸಿದೆ ಎಂಬುದನ್ನು ಸರಳವಾಗಿ ವಿಶ್ಲೇಷಿಸಬಹುದು.
ಪರಿತ್ಯಕ್ತೆ- ಈ ಸಂಕಲನದ ಅತ್ಯುತ್ತಮ ಕತೆ. ಒಂದು ಕಾದಂಬರಿಯ ಮೂಲಕ ಹೇಳುವಷ್ಟು ವಿಚಾರವಿದೆ. ಕತೆಯ ಕಾನ್ವಾಸ್ ಚಿಕ್ಕದಾದರೂ ಎರಡು ತಲೆಮಾರಿನ್ನೊಳಗೊಂಡ ಬದುಕಿನ ಕೌಟುಂಬಿಕ ವಸ್ತುವಿದೆ. ಈ ನೀಳ್ಗತೆಯು ಪುಟ್ಟಮ್ಮನ ಸುತ್ತ ಹೆಣೆಯಲಾಗಿದೆ. ನೇರ, ಪರೋಕ್ಷವಾಗಿ ಇಡೀ ಕತೆಯಲ್ಲಿ ಬರುವ ಎಲ್ಲ ಪಾತ್ರಗಳ ಮೂಲಕ ಆಶಾ ರಘು ಅವರು ಪುಟ್ಟಮ್ಮನ ಪಾತ್ರಕ್ಕೆ ಅಷ್ಟು ಜೀವಂತಿಕೆಯನ್ನು ತುಂಬಿದ್ದಾರೆ. ಕತೆಯ ಆರಂಭದಲ್ಲಿ ಬರುವ ಪ್ರತಿ ಪಾತ್ರಗಳು ಓದುಗನಿಗೆ ಒಂದು ಸ್ಪಷ್ಟನೆ ಕೊಟ್ಟು ಪರಿಚಯಗೊಂಡರೂ, ಕತೆಯ ಮಧ್ಯಮ, ಅಂತ್ಯದಲ್ಲಿ ಇನ್ನೊಂದು ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತವೆ.
ಆಶಾ ರಘು ಅವರು ಕನ್ನಡದ ಪ್ರಮುಖ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಇವರು ಕೇಶವ ಅಯ್ಯಂಗಾರ್ ಹಾಗೂ ಸುಲೋಚನ ದಂಪತಿಗಳ ಹಿರಿಯ ಮಗಳಾಗಿ 1979ರ ಜೂನ್ 18 ನೇ ತಾರೀಖಿನಂದು ಬೆಂಗಳೂರಿನಲ್ಲಿ ಹುಟ್ಟಿದರು. ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಉಪನ್ಯಾಸಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಇವರು, ರಂಗಭೂಮಿ, ಕಿರುತೆರೆ, ಬೆಳ್ಳಿತೆರೆಗಳಲ್ಲಿಯೂ ಕಲಾವಿದೆಯಾಗಿ, ಸಂಭಾಷಣೆಕಾರರಾಗಿ, ಸಹಾಯಕ ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. 'ಆವರ್ತ', 'ಗತ', 'ಮಾಯೆ', 'ಚಿತ್ತರಂಗ', ಕೆಂಪು ದಾಸವಾಳ, ವಕ್ಷ ಸ್ಥಲ ಕಾದಂಬರಿಗಳನ್ನು, 'ಆರನೇ ಬೆರಳು', 'ಬೊಗಸೆಯಲ್ಲಿ ಕಥೆಗಳು', 'ಅಪರೂಪದ ಪುರಾಣ ಕಥೆಗಳು' ಮೊದಲಾದ ಕಥಾಸಂಕಲನಗಳನ್ನೂ, 'ಚೂಡಾಮಣಿ', ...
READ MORE