ಫೂ ಮತ್ತು ಇತರ ಕತೆಗಳು

Author : ಮಂಜುನಾಯಕ ಚಳ್ಳೂರು

Pages 80

₹ 80.00




Published by: ಅಹರ್ನಿಶಿ ಪ್ರಕಾಶನ
Address: ಕಂಟ್ರಿ ಕ್ಲಬ್ ಹತ್ತಿರ, ವಿದ್ಯಾನಗರ, ಶಿವಮೊಗ್ಗ-577203
Phone: 94491 74662

Synopsys

ಹೈದರಾಬಾದ್‌ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಎರಡೂ ಕನ್ನಡಗಳನ್ನು ಪೊಟ್ಟಣ ಕಟ್ಟಿಕೊಟ್ಟಂತೆ ಸೊಗಸಾದ ಭಾಷಾಶೈಲಿಯಿಂದ ಕಂಗೊಳಿಸುತ್ತದೆ ಮಂಜುನಾಯಕ ಚಳ್ಳೂರು ಅವರ ’ಫೂ’.  ಭಾಷೆಯ ಜೊತೆಗೆ ಅಷ್ಟೇ ಸೊಗಸಾಗಿ ಮೂಡಿಬಂದಿರುವುದು ಇಲ್ಲಿನ ಕಥನಗಳು. ಬಹುತೇಕ ಯುವ ಬರಹಗಾರರಲ್ಲಿ ಎದ್ದು ಕಾಣುವ ಬಾಲ್ಯದ ನೆನಪುಗಳನ್ನು ಅಥವಾ ಮಕ್ಕಳ ಕಣ್ಣುಗಳಲ್ಲಿ ಜಗತ್ತನ್ನು ನೋಡುವ ಮುಗ್ಧತೆಯನ್ನು ಇಲ್ಲೂ ಕಾಣಬಹುದಾದರೂ ಇಲ್ಲಿನ ಕತೆಗಳಿಗೆ ಚಳ್ಳೂರು ಮಾತ್ರ ರೂಪಿಸಲು ಸಾಧ್ಯವಾಗುವಂತಹ ಅನನ್ಯತೆ ಇದೆ.

ಒಟ್ಟು ಏಳು ಕತೆಗಳಿರುವ ಸಂಕಲನ ಇದು. 

About the Author

ಮಂಜುನಾಯಕ ಚಳ್ಳೂರು
(31 August 1993)

ಮಂಜುನಾಯಕ ಚಳ್ಳೂರು ಹುಟ್ಟಿದ್ದು 31-08-1993ರಲ್ಲಿ. ಹುಟ್ಟೂರು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಚಳ್ಳೂರು, ಧಾರವಾಡದಲ್ಲಿ ಬಿಎಸ್ಸಿ ಪದವಿ. ಬಳಿಕ ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ. ಕೆಲಕಾಲ ಪತ್ರಕರ್ತನಾಗಿ ದುಡಿಮೆ. ಪ್ರಸ್ತುತ ಕನ್ನಡದ ಪ್ರಖ್ಯಾತ ಮನರಂಜನಾ ವಾಹಿನಿ ಕಲರ್ಸ್ ಕನ್ನಡದಲ್ಲಿ ಉದ್ಯೋಗಿ. ’ಫೂ’ ಅವರ ಮೊದಲ ಕಥಾ ಸಂಕಲನ. ಸಂಕಲನ ಪ್ರಕಟಗೊಳ್ಳುವ ಮೊದಲೇ ಮೊದಲ ಇಲ್ಲಿನ ಮೂರು ಬಿಡಿ ಕತೆಗಳಿಗೆ ಟೋಟೋ ಯುವ ಪುರಸ್ಕಾರ, ಜೊತೆಗೆ ಕಾಜಾಣ ಯುವ ಪುರಸ್ಕಾರ ಲಭಿಸಿದೆ.  ...

READ MORE

Reviews

ಕಾಮನಬಿಲ್ಲಿನ ಕತೆಗಳು

ಮಂಜುನಾಯಕ ಚಳ್ಳೂರು ಅವರ “ಫೂ...” ಕತೆಯನ್ನು ವಿಶೇಷಾಂಕವೊಂದರಲ್ಲಿ ಓದಿ ಮೆಚ್ಚಿಕೊಂಡಿದ್ದೆ. ವಸ್ತು ಹಳೆಯದೆನ್ನಿಸಿದ್ದರೂ ಬಳಸಿದ ತಂತ್ರ, ತುಂಗಭದ್ರಾ ಸೀಮೆಯ ನುಡಿಗಟ್ಟು, ಪೂರ್ವಗ್ರಹವಿಲ್ಲದ ಮನೋಭಾವ, ಸ್ಪಷ್ಟ ಪಾತ್ರಚಿತ್ರಣ – ಎಲ್ಲವೂ ಸಮರ್ಪಕವಾಗಿದ್ದವು. ಈ ಕತೆಗಾರರ ಬೇರೆ ಕತೆಯನ್ನು ಎಲ್ಲಿಯೂ ಓದಿರಲಿಲ್ಲ. ಆದರೆ ಚಕ್ಕನೆ ಅವರ ಕಥಾಸಂಕಲನವೇ ಅಂಗಡಿಯಲ್ಲಿ ಕಂಡಾಗ “ಅರೆರೆ...” ಎಂದು ಸಂಭ್ರಮದಿಂದ ಖರೀದಿಸಿದೆ. ಏಳು ಕತೆಗಳ ಬಹು ಪುಟ್ಟ ಪುಸ್ತಕವಿದು. ಆದರೆ ಹೊಸ ಧ್ವನಿಯನ್ನು ಕೇಳಿದ ಭಾವ ಈ ಪುಟ್ಟ ಪುಸ್ತಕ ಓದಿ ಮುಗಿಸುವುದರಲ್ಲಿ ನನಗಾಗಿತ್ತು. ಅವರ “ಫೂ...” ಕತೆಯಲ್ಲಿ ಒಂದು ಸೊಗಸಾದ ಚಿತ್ರಣವಿದೆ. ಬೊಗಸೆಯಷ್ಟು ನೀರನ್ನು ಬಾಯಲ್ಲಿಟ್ಟುಕೊಂಡು ಅದನ್ನು ಆಗಸಕ್ಕೆ ’ಫೂ...’ ಎಂದು ಉಗಿದರೆ, ಬಿಸಿಲಿನ ಝಳಕ್ಕೆ ಅದರಲ್ಲಿ ಕಾಮನಬಿಲ್ಲು ಮೂಡುತ್ತಿರುತ್ತದೆ. ’ಅವಳ ಬಾಯಲ್ಲಿ ಕಾಮನಬಿಲ್ಲು ಇತ್ತು’ ಎಂದು ಲೇಖಕರು ಅದನ್ನು ವರ್ಣಮಯವಾಗಿ ಹೇಳುತ್ತಾರೆ. ಕಾಮನಬಿಲ್ಲಿನ ಏಳು ಬಗೆಯ ವಿಭಿನ್ನ ಬಣ್ಣಗಳು ಈ ಕಥಾಸಂಕಲನದ ಏಳೂ ಕತೆಗಳಲ್ಲೂ ಕಾಣಬಹುದಾಗಿದೆ.
ತುಂಗಾಭದ್ರಾ ನದಿಯ ನೀರು ಕುಡಿದ ಕನ್ನಡದ ಹಲವು ಕತೆಗಾರರು ತಮ್ಮದೇ ರೀತಿಯಲ್ಲಿ ಅಲ್ಲಿಯ ಬದುಕನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಸೀಮೆ ಒಂದೇ ಆದರೂ, ಅವರು ಕಟ್ಟಿಕೊಟ್ಟ ಜಗತ್ತುಗಳು ಬೇರೆ ಬೇರೆಯೇ ಆಗಿವೆ. ಬೀಚಿ, ಕುಂವೀ, ಕೇಶವ ಮಳಿಗಿ, ಅಮರೇಶ ನುಗಡೋಣಿ, ರವಿ ಬೆಳಗೆರೆ – ಎಲ್ಲರೂ ಆ ಸೀಮೆಯ ಬದುಕನ್ನು ತಮ್ಮದೇ ಭಾಷೆ ಮತ್ತು ದೃಷ್ಟಿಕೋನದಲ್ಲಿ ಚಿತ್ರಿಸಿದ್ದಾರೆ. ಮಳೆಬಿಲ್ಲಿನ ಬಣ್ಣಗಳಂತೆ ಅವೆಲ್ಲವೂ ವಿಭಿನ್ನವಾಗಿಯೇ ಇವೆ. ಅದಕ್ಕೆ ಮತ್ತೊಂದು ಬಣ್ಣವಾಗಿ ಚಳ್ಳೂರರ ಕತೆಗಳು ಸೇರಿಕೊಳ್ಳುತ್ತವೆ. ಎಷ್ಟು ವೈವಿಧ್ಯವಾಗಿ ಬರೆದರೂ ಬತ್ತದ ಬದುಕಿನ ವಿಫುಲತೆ ಅಚ್ಚರಿ ಮೂಡಿಸುತ್ತದೆ.

ಗಂಗಾವತಿ ಭಾಗದ ಜನರ ಭಾಷೆ, ಬದುಕು, ಬವಣೆಗಳು ಈ ಕತೆಗಳಲ್ಲಿ ವಿಶೇಷವಾಗಿ ಚಿತ್ರಣಗೊಂಡಿವೆ. ಅವೇ ಈ ಕತೆಗಳ ವೈಶಿಷ್ಟವೆಂದರೂ ತಪ್ಪಾಗುವುದಿಲ್ಲ. ಅತ್ಯಂತ ಪ್ರೀತಿಯಿಂದ, ಮುತುವರ್ಜಿಯಿಂದ, ಯಾವುದೇ ಹಿಂಜರಿಕೆಯಿಲ್ಲದೆ ಅಲ್ಲಿಯ ಜನರ ಭಾಷೆಯ ಉಚ್ಚಾರಣೆಯನ್ನು ಈ ಏಳೂ ಕತೆಗಳು ಹಿಡಿದಿಟ್ಟಿವೆ. ಒಂದು ವೇಳೆ ಕನ್ನಡದ ಸ್ಪೆಲ್‌ ಚೆಕ್ ತಂತ್ರಜ್ಞಾನ ಅಭಿವೃದ್ಧಿಯಾಗಿ, ಅದಕ್ಕೆ ಈ ಕತೆಗಳ ಪಾತ್ರಗಳು ಆಡುವ ಮಾತನ್ನು ಪರಿಶೀಲಿಸಲು ಕೊಟ್ಟರೆ ಎಲ್ಲ ಪದಗಳೂ ತಪ್ಪೆಂದು ಹೇಳುವ ಸಂಭವವಿದೆ! ನಾವು ಬಳಸುವ ಆಡುನುಡಿಯು ಗ್ರಾಂಥಿಕ ಭಾಷೆಗಿಂತಲೂ ಅದೆಷ್ಟು ವಿಭಿನ್ನವಾಗಿದೆ ಎಂಬುದಕ್ಕೆ ಅದು ಸಾಕ್ಷಿಯಾಗುತ್ತದೆ.

ಕತೆಯ ಪರಿಧಿಯನ್ನು ಬಲವಂತವಾಗಿ ಎಳೆದು ವೃತ್ತವಾಗಿಸುವ ಹಟ ಈ ಕತೆಗಾರನಿಗಿಲ್ಲ. ಸುಮ್ಮನೆ ಆ ಭಾಗದ ವಿಶಿಷ್ಟ ವ್ಯಕ್ತಿಗಳ ಚಿತ್ರಣವನ್ನೋ, ಆಚರಣೆಗಳ ಅನುಭವವನ್ನೋ ನೀಡಿ ಸುಮ್ಮನಾಗುವ ಪ್ರಬುದ್ಧತೆ ಇಲ್ಲಿನ ಹಲವು ಕತೆಗಳಿಗಿವೆ. ಆರಂಭದ ಕತೆಗಾರರಲ್ಲಿ ಇಂತಹ ಗುಣ ಅಪರೂಪ. ’ತೇರು ಸಾಗಿತಮ್ಮ ನೋಡಿರೆ...’ ಎಂಬ ಕತೆಯಲ್ಲಿ ಕೇವಲ ಭಜನೆಯ ಹಾಡುಗಳನ್ನು ಹೇಳುತ್ತಲೇ ಇರುವ, ಸ್ವಲ್ಪ ಮನಸ್ಥಿತಿ ಅಳ್ಳಕಗೊಂಡಿರುವ, ಊರವರಿಂದ ’ಹುಚ್‌ಶೈಲಾ’ ಎಂದು ಕರೆಸಿಕೊಳ್ಳುವ ಹರೆಯದ ಹುಡುಗನ ಚಿತ್ರಣವಿದೆ. ಅವನ ಬದುಕನ್ನು ಹೇಳುತ್ತಲೇ ಊರಿನ ಸ್ಥಿತಿಯನ್ನೂ ತಿಳಿಸುವುದಷ್ಟೇ ಇಲ್ಲಿಯ ಉದ್ದೇಶವಾಗಿದೆ. ಕತೆಯನ್ನು ಯಾವುದೇ ’ಮೆಲೋಡ್ರಾಮಾ’ಕ್ಕೆ ಒಯ್ಯುವ ಹಪಾಹಪಿ ಕತೆಗಾರನಿಗಿಲ್ಲ. ಅದೇ ರೀತಿ ’ವಜ್ರಮುನಿ’ ಕತೆಯಲ್ಲಿ ಬಂಕದಲ್ಲಿಯೇ ಕಲ್ಲಾಗಿ ಕುಳಿತುಬಿಟ್ಟ ಅಪ್ಪನ ಚಿತ್ರವಿದೆ. ’ಖತಲ್ ರಾತ್ರಿ’ ಯಲ್ಲಿ ಉತ್ತರ ಕರ್ನಾಟಕದ ವಿಶಿಷ್ಟ ಮೊಹರಂ ಹಬ್ಬದ ಆಚರಣೆಯ ಹಿನ್ನೆಲೆಯನ್ನು ಹೇಳುತ್ತಲೇ ತಂದೆ ಕಳೆದುಕೊಂಡ ಮಕ್ಕಳು ಮತ್ತು ವಿಧವೆ ತಾಯಿಯ ಸಂಕಟವನ್ನೂ ಬಿಚ್ಚಿಡಲು ಪ್ರಯತ್ನಿಸುತ್ತದೆ. ವಿಷ ಕುಡಿದು ಸತ್ತ ಅಪ್ಪನಾಗಲಿ, ಬಂಕದಲ್ಲಿ ತಳವೂರಿ ಬದುಕಿಗೆ ವಿಮುಖನಾದ ಅಪ್ಪನಾಗಲಿ ಈ ಕತೆಗಾರನಲ್ಲಿ ದ್ವೇಷ, ಸಿಟ್ಟನ್ನು ಮೂಡಿಸುವುದಿಲ್ಲ ಎನ್ನುವುದು ಬಹಳ ಆರೋಗ್ಯಕರ ಸಂಗತಿಯಾಗಿ ನನಗೆ ಕಾಣುತ್ತದೆ. ಯಾವ ಪಾತ್ರವನ್ನೂ ತನ್ನ ಪೂರ್ವಗ್ರಹದಿಂದ ಹತೋಟಿಯಲ್ಲಿಡಲು ಇವರು ಹೋಗಿಲ್ಲ. ಎಲ್ಲ ಪಾತ್ರಗಳ ಪರಿಸ್ಥಿತಿಯನ್ನೂ ಅತ್ಯಂತ ಮಾನವೀಯತೆಯಿಂದ ಕಾಣುವುದು ಸಾಧ್ಯವಾಗಿದೆ ಎನ್ನುವುದೇ ಈ ಕತೆಗಾರನ ಬಗ್ಗೆ ಹೆಚ್ಚು ಭರವಸೆಯನ್ನು ಮೂಡಿಸುತ್ತದೆ.

ಕತೆಯ ಎಲ್ಲವನ್ನೂ ಹೇಳಿಬಿಟ್ಟು ಖಾಲಿಯಾಗುವ ಜಾಯಮಾನ ಮಂಜುನಾಯಕ ಚಳ್ಳೂರರದಲ್ಲ. ಅತ್ಯಂತ ಮಿತವಾಗಿ ಕತೆ ಬಿಚ್ಚುತ್ತಾ, ಯಾವ ಅವಸರಕ್ಕೂ ಒಳಗಾಗದೆ ವಿವರಗಳನ್ನು ನೀಡುತ್ತಾ, ಓದುಗರಿಗೆ ಹಲವು ಸಾಧ್ಯತೆಗಳನ್ನು ಊಹಿಸಿಕೊಳ್ಳುವ ಸ್ವಾತಂತ್ರ್ಯ ಕೊಡುವುದು ಇವರ ಕಥನದ ರೀತಿ. ’ಪಾತಿ’ ಎನ್ನುವ ತುಸು ದೀರ್ಘವಾದ ಕತೆಯಲ್ಲಿ ಎರಡು ಯುವ ಮನಸ್ಸುಗಳ ನಡುವೆ ನಡೆಯುವ ಸಂಗತಿಗಳನ್ನು ಆತ್ಮೀಯವಾಗಿ ಹೇಳುತ್ತಲೇ ಹೋಗುತ್ತಾರೆ. ’ಫಾತಿಮಾ’ ಎನ್ನುವ ಮುಸಲ್ಮಾನರ ಹುಡುಗಿ ಮತ್ತು ಹಿಂದೂ ಕಥಾನಾಯಕರ ನಡುವೆ ಹಲವಾರು ಮಾತು, ಘಟನೆಗಳು ಬಂದು ಹೋಗುತ್ತವೆ. ಆದರೆ ಇವರಿಬ್ಬರ ಮಧ್ಯೆ ಇದ್ದ ಸಂಬಂಧ ಇಂತಹದೇ ಎನ್ನುವ ಮುದ್ರೆ ಒತ್ತುವ ಹಟ ಕತೆಗಾರನಿಗೆ ಇಲ್ಲ. ಇಬ್ಬರ ವಿಭಿನ್ನ ಧರ್ಮಗಳು ಈ ಸೀಮೆಯಲ್ಲಿ ಮುಖ್ಯ ವಸ್ತುವೇ ಅಲ್ಲ ಎನ್ನುವ ಕತೆಗಾರನ ನಿರ್ಲಕ್ಷ ಮತ್ತೊಂದು ರೀತಿಯಲ್ಲಿ ಈ ಕತೆಯನ್ನು ಆಪ್ತಗೊಳಿಸುತ್ತವೆ. ಬಹುತೇಕ ಉತ್ತರ ಕರ್ನಾಟಕದ ಕತೆಗಾರರು ಅಲ್ಲಿರುವ ಹಿಂದು-ಮುಸಲ್ಮಾನ್‌ ಜನರ ನಡುವೆ ಸೌಹಾರ್ದದ ಬದುಕನ್ನು ಹೇಳುತ್ತಲೇ ಬಂದಿದ್ದಾರೆ. ಆ ಸಂಗತಿಗೆ ಚಳ್ಳೂರರು ತಮ್ಮ ಸಮ್ಮತಿಯನ್ನು ಈ ಸಂಕಲನದಲ್ಲಿ ಹೇಳುತ್ತಾರೆ.

ಹಾಗಂತ ಎಲ್ಲ ಕತೆಗಳ ಹಂದರವೂ ಅಮೂರ್ತವೇನೂ ಅಲ್ಲ. ಸಂಕಲನಕ್ಕೆ ಹೆಸರು ಕೊಟ್ಟ “ಫೂ...” ಕತೆ ತನ್ನ ಆದಿ, ಅಂತ್ಯ ಮತ್ತು ಮಧ್ಯವನ್ನು ಸಮರ್ಪಕವಾಗಿ ನಿಭಾಯಿಸುತ್ತದೆ. ಮನೆಯಲ್ಲಿ ಅಣ್ಣ-ಅತ್ತಿಗೆಯ ನಿರ್ಲಕ್ಷ್ಯಕ್ಕೆ ಗುರಿಯಾದ ಅಬಲೆಯೊಬ್ಬಳ ಬದುಕಿನ ದುರಂತವನ್ನು ಪುಟ್ಟ ಹುಡುಗನ ಕಣ್ಣುಗಳ ಮುಖಾಂತರ, ನೀರನ್ನು ಆಗಸಕ್ಕೆ “ಫೂ...” ಮಾಡಿ ಮಳೆಬಿಲ್ಲು ಮೂಡಿಸುವ ರೂಪಕದೊಂದಿಗೆ ಹೇಳುತ್ತಾರೆ. ಈ ಹಿಂದೆ ಇಂತಹ ಕತೆಯ ಮಾದರಿಗಳು ಕನ್ನಡದಲ್ಲಿ ವಿಫುಲವಾಗಿ ಸಿಕ್ಕುತ್ತವೆ. ತಕ್ಷಣಕ್ಕೆ ಮೊಗಳ್ಳಿ ಗಣೇಶರ “ಅತ್ತೆ” ಕತೆ ಜ್ಞಾಪಕಕ್ಕೆ ಬರುತ್ತಿದೆ. ಆದರೆ ಮೊಗಳ್ಳಿಯವರು ಹೆಣ್ಣಿನ ಮೇಲಾಗುವ ದೈಹಿಕ ದೌರ್ಜನ್ಯದ ಜೊತೆಗೆ ಕಾಮದ ಕಟು ವಾಸನೆಯನ್ನು ಕತೆಯಲ್ಲಿ ನೇಯ್ದು ಅದನ್ನು ಮತ್ತೊಂದು ಎತ್ತರಕ್ಕೆ ಒಯ್ದಿದ್ದರು.

’ಮಿಣುಕು ಹುಳು’ ಎಂಬ ಕೊನೆಯ ಕತೆಯಲ್ಲಿ ಮಾಂತ್ರಿಕ ವಾಸ್ತವವನ್ನು ಬಳಸಲು ಕತೆಗಾರರು ಪ್ರಯತ್ನಿಸಿದ್ದಾರೆ. ಕೆಲವು ವಿವರಗಳು ಇಷ್ಟವಾಗುತ್ತವಾದರೂ, ತಂತ್ರ ಇಲ್ಲಿ ಸಮರ್ಪಕವಾಗಿ ಫಲಿಸಿಲ್ಲ. ಕತೆ ನನ್ನ ಮನದಾಳಕ್ಕೆ ಇಳಿಯಲು ಸಾಧ್ಯವಾಗಲಿಲ್ಲ. ಕತೆಗಾರ ಈ ತಂತ್ರವನ್ನು ಬಳಸಲು ಇನ್ನಷ್ಟು ಆಯಾಮಗಳನ್ನು, ವಿಸ್ತಾರವನ್ನೂ ಪರಿಗಣಿಸುವುದು ಅವಶ್ಯಕವಾಗಿರುತ್ತದೆ. ಆದರೆ ಮುಂದಿನ ದಿನಗಳಲ್ಲಿ ಇಂತಹ ತಂತ್ರದ ಸಮರ್ಥ ಕತೆಗಳು ಇವರಿಂದ ಮೂಡಿ ಬರಬಹುದು ಎನ್ನುವ ಸೂಚನೆ ಈ ಕತೆಯಲ್ಲಿದೆ. ಮತ್ತೊಂದು ಕತೆ ’ಕನಸಿನ ವಾಸನೆ’ಯಲ್ಲಿಯೂ ಅಲೌಕಿಕವಾದ ಸಂಗತಿಯೊಂದು ನಮ್ಮ ದೈಹಿಕ ಬಯಕೆಯ ರೂಪಕವಾಗಿ ಬದುಕಲ್ಲಿ ಸುತ್ತಿಕೊಂಡು ಕಾಡುವ ಪರಿಯ ವಿವರಗಳು ಬಂದಿವೆ. ಕಾಮವನ್ನು ಬಚ್ಚಿಟ್ಟು ಬದುಕುತ್ತಿರುವ ವಿಧವೆಯೊಬ್ಬಳ ಹೆಬ್ಬಯೆಕೆಯ ಕೆರೆಯೊಂದು ಊರಿನ ಪೋಲಿ ಯುವಕನೊಬ್ಬನ ಪಡ್ಡೆತನದಿಂದ ಕೋಡಿ ಹರಿಯುವ ಪರಿಯ ಚಿತ್ರಣ ನೈಜವಾಗಿದೆ. ಆದರೆ ಅದಕ್ಕೆ ಮತ್ತೊಂದು ಧ್ರುವವಾಗಿ ಆ ಪೋಲಿ ಹುಡುಗನ ಬದುಕಿನಲ್ಲಿ ಸಂಭವಿಸುವ ಸಂಗತಿಗಳು ತುಸು ನಾಟಕೀಯವೆನ್ನಿಸುತ್ತವೆ. ಆದ್ದರಿಂದ ಕತೆಯ ಅಂತ್ಯದ ತೀವ್ರತೆ ಅಷ್ಟಾಗಿ ನನ್ನನ್ನು ಕಾಡಲಿಲ್ಲ.

ದೇಶೀನುಡಿಗಟ್ಟಿನ ಬಳಕೆ ಲೇಖಕರ ಶಕ್ತಿಯೂ ಆಗಬಹುದು, ಮಿತಿಯೂ ಆಗಬಹುದು. ಕೇವಲ ಅದೊಂದನ್ನೇ ನಂಬಿಕೊಂಡು ಕತೆಗಳನ್ನು ಬರೆಯಲು ಹೋಗಿ ತಮ್ಮ ಮುಂದಿನ ಸಂಕಲನಗಳಲ್ಲಿ ವಸ್ತುವಿನ ಸಾಂದ್ರತೆಯಿಲ್ಲದೆ ಕುಸಿದ ಕತೆಗಾರರನ್ನು ನಾವು ಕಂಡಿದ್ದೇವೆ. ಆ ಕಾರಣದಿಂದಾಗಿ ಚಳ್ಳೂರರ ಮುಂದಿನ ಸಂಕಲನ ನನಗೆ ಬಹಳ ಮುಖ್ಯವೆನ್ನಿಸುತ್ತದೆ. ಅವರಿನ್ನೂ ವಯಸ್ಸಿನಿಂದ ಚಿಕ್ಕವರು. (೨೬ ವರ್ಷ) ಗಾಢವಾದ ಹಳ್ಳಿಯ ಬದುಕಿನ ಅನುಭವ ಅವರ ಬೆನ್ನ ಹಿಂದಿದೆ. ಈಗ ವೃತ್ತಿಗಾಗಿ ನಗರವನ್ನು ಸೇರಿರುವುದರಿಂದ, ಬೆಂಗಳೂರಿನ ಅನುಭವಗಳೂ ಅವರಲ್ಲಿ ಹರಳುಗಟ್ಟುತ್ತಿರುತ್ತವೆ. ಅವೆಲ್ಲಾ ಮುಂದೆ ಅದ್ಯಾವ ಕಲಾತ್ಮಕ ರೂಪದಲ್ಲಿ ಹೊರಹೊಮ್ಮುತ್ತವೆಯೋ ಎಂಬ ಕುತೂಹಲ ನನಗಿದೆ.
ನಾಡಿನ ಇತರ ಭಾಗಗಳಿಂದ ಕತೆಗಾರರು ಪುಂಖಾನುಪುಂಖವಾಗಿ ಬರುತ್ತಿದ್ದಾರೆ. ಆದರೆ ಹೈದ್ರಾಬಾದ್ ಕರ್ನಾಟಕದಿಂದ ಬಂದ ಕತೆಗಾರರ ಸಂಖ್ಯೆ ಕಡಿಮೆ. ಆದರೆ ಈ ಹಿಂದೆ ಅಲ್ಲಿಂದ ಬಂದ ಕತೆಗಾರರು ಕನ್ನಡದ ಬಹುಮುಖ್ಯ ಕತೆಗಾರರಾಗಿ ಬೆಳೆದಿದ್ದಾರೆ. ಆ ಆಶಾಕಿರಣದೊಂದಿಗೆ ಮಂಜುನಾಯಕ ಚಳ್ಳೂರರನ್ನು ಹೃತ್ಪೂರ್ವಕವಾಗಿ ಕನ್ನಡ ಕಥಾಜಗತ್ತಿಗೆ ನಾವೆಲ್ಲಾ ಸ್ವಾಗತಿಸೋಣ. ಅದೇ ಸೀಮೆಯವನಾದ ನನಗೆ, ನಮ್ಮೂರಿನ ಕಡೆಯಿಂದ ಒಳ್ಳೆಯ ಕತೆಗಾರ ಮೂಡಿ ಬಂದ ಎಂಬ ಸಂತೋಷವನ್ನಂತೂ ಈ ಸಂಕಲನ ಕೊಟ್ಟಿದೆ.

ಅಹರ್ನಿಶಿ ಈ ಪುಸ್ತಕವನ್ನು ತಪ್ಪಿಲ್ಲದಂತೆ ಮುದ್ರಿಸಿದೆ. ಬೆಲೆಯೂ ಕಡಿಮೆ. ದೇಶೀ ನುಡಿಗಟ್ಟನ್ನು ಬಳಸಿದ ಕತೆಗಳಲ್ಲಿ ಕರುಡು ದೋಷವಿಲ್ಲದಂತೆ ನೋಡಿಕೊಳ್ಳುವುದು ಕಷ್ಟ. ಅದಕ್ಕಾಗಿ ಪ್ರಕಾಶನ ಸಂಸ್ಥೆಯನ್ನು ಅಭಿನಂದಿಸಲೇ ಬೇಕು. ಅಪಾರ ಅವರ ಮುಖಪುಟ ಸಮರ್ಪಕವಾಗಿದೆಯಾದರೂ, ಏಕೋ ಅವರ ಹಿಂದಿನ ಮುಖಪುಟಗಳ ಆಕರ್ಷಣೆ ಮತ್ತು ಅನನ್ಯತೆ ಇಲ್ಲಿ ಕಾಣುವುದಿಲ್ಲ.

-ವಸುಧೇಂದ್ರ

ಕೃಪೆ: ಮಯೂರ, ಸೆಪ್ಟೆಂಬರ್‌ 2019

................................................................................................................................................................................

ಒಡಲಾಳದ ನೋವನ್ನು ಮೀಟುವ ಕಥೆಗಳು 

ಕಥೆಗಳನ್ನು ಹೇಳುವುದರಲ್ಲಿ ಸಣ್ಣ ಕಥೆಗಳ ಜವಾಬ್ದಾರಿ ತುಂಬ ದೊಡ್ಡದು. ತನ್ನ ನಿರ್ದಿಷ್ಟ ವ್ಯಾಪ್ತಿಯೊಳಗೆ ಒಂದು ಕಥೆ ಏನನ್ನು ಧ್ವನಿಸುತ್ತಿದೆ ಎನ್ನುವುದನ್ನು ಮತ್ತು ಕಥೆಯ ಸಮಗ್ರ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಕೊಂಚ ಯಾಮಾರಿದರೂ ಕಥೆಗಾರ ಸೋಲುತ್ತಾನೆ. ತನ್ನ ಅನುಭವಗಳನ್ನು ಓದುಗನ ಅನುಭೂತಿಯಾಗಿಸುವ ಜಾಣ್ಮೆ ಮತ್ತು ಸಮಾಜದ ತಲ್ಲಣಗಳನ್ನು ಗ್ರಹಿಸುವ ಸೂಕ್ಷ್ಮ ಸಂವೇದನೆ ಕಥೆಗಾರನಿಗಿರಲೇಬೇಕು. ಈ ದೃಷ್ಟಿಯಿಂದ ನೋಡುವಾಗ ಮಂಜುನಾಯಕ ಚಳ್ಳೂರು ಅವರ 'ಪೂ ಮತ್ತು ಇತರೆ ಕಥೆಗಳು' ನಿಸ್ಸಂಶಯವಾಗಿ ಓದುಗರ ಗಮನ ಸೆಳೆಯುತ್ತವೆ. ಇದು ಈ ಯುವ ಬರಹಗಾರನ ಮೊದಲ ಕಥಾಸಂಕಲನ ಎನ್ನುವುದು ಎಲ್ಲಿಯೂ ಅನಿಸುವುದಿಲ್ಲ ಅಷ್ಟೊಂದು ಲೀಲಾಜಾಲ ವಾಗಿ ಲೇಖಕರು ಇಲ್ಲಿನ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಕಥಾ ವಸ್ತುಗಳ ಪ್ರಬುದ್ಧತೆ, ವಿಷಯಗಳ ನಿಭಾವಣೆಯನ್ನು ಕಂಡಾಗ ಅಚ್ಚರಿ ಪಡುವಷ್ಟು ತಮ್ಮ ಬರಹದ ಮೇಲಿನ ಹಿಡಿತವನ್ನು ಸಾಧಿಸಿಕೊಂಡಿದ್ದಾರೆ. 

ಬಯಲು ಸೀಮೆಯಲ್ಲಿ ಹುಟ್ಟು ಕಂಡ ಪ್ರತಿಯೊಬ್ಬರಿಗೂ 'ಇಲ್ಲಿರುವ ಕಥೆಗಳು ನನ್ನಲ್ಲಿ ಸೃಜಿಸುವಷ್ಟು ಭಾವನೆಗಳು ಮತ್ಯಾರಲ್ಲೂ ಸೃಜಿಸಲಾರವೇನೋ! ನನಗೆ ಆಪ್ತವಾದಷ್ಟು ಮತ್ತಾರಿಗೂ ಆಗಲಾರವೇನೋ!' ಎನ್ನಿಸುವುದು ಖಾತ್ರಿ. ಉತ್ತರ ಕರ್ನಾಟಕದ ಜೀವನ ಶೈಲಿ ಮತ್ತು ಬಡತನದ ಬವಣೆಗಳಲ್ಲೂ ಕಾಯ್ದುಕೊಳ್ಳುವ ಜೀವನ ಪ್ರೀತಿಯಿಂದ ತನ್ನದೇ ಆದ ವಿಶಿಷ್ಟ ರೀತಿಯ ಕಥೆಗಳು ಹುಟ್ಟುವುದನ್ನು ಕಾಣುತ್ತೇವೆ. ಅಂತಹ ಕಥೆಗಳೇ ಇಲ್ಲಿ ಉಸಿರಾಡಿವೆ. ಬದುಕನ್ನು ಜಟಿಲ ವಾಗಿಸಿಕೊಂಡು ಯಾವುದೇ ಸೂಕ್ಷ್ಮ ಜೀವನ ವಿಮರ್ಶೆಗೆ ಒಡ್ಡಿಕೊಳ್ಳದೇ ಅದು ಬಂದಂತೆ ತೀರಾ ಸರಳವಾಗಿ ಬದುಕಿ ಬಿಡಬಲ್ಲ ಬಿಸಿಲು ನಾಡಿನ ಜೀವಿಗಳಲ್ಲಿರುವ ಮೇಲ್ಮುಖದ ಒರಟುತನ, ದಾರ್ಷ್ಟವನ್ನು ಮೀರಿ ಮಿಡಿಯುವ ಸಾಮಾಜಿಕ ಅನೋನ್ಯತೆ, ಸರಳತೆ, ಹೃದಯ ವೈಶಾಲ್ಯತೆ, ಭಾವುಕತೆ, ಪ್ರೀತಿ ಇಲ್ಲಿನ ಪ್ರತಿ ಕಥೆಗಳಲ್ಲೂ ಹರಳುಗಟ್ಟಿ ನಿಂತಿವೆ. ಮನೆಯವರಿಗೆ ಬೇಡವಾದ ಜಯತ್ತೆ, ಅವನಿಗೆ ಮಾತ್ರ ಬಾಯಲ್ಲೇ ಕಾಮನಬಿಲ್ಲು ಮೂಡಿಸುವ ಮಾಯಗಾತಿ. ಕಥೆಯಾದ್ಯಾಂತ ತನ್ನ ಕಥೆಯನ್ನು ಅಪೂಟು ಹೊರಗಾಕದೇ ಕೌಟುಂಬಿಕ ಕ್ರೌರ್ಯವನ್ನು ಅವುಡುಗಚ್ಚಿ ಸಹಿಸಿಕೊಂಡು ಕೊನೆಗೊಮ್ಮೆ ತನ್ನ ಬದುಕನ್ನು ಕೊನೆಗೊಳಿಸಿಕೊಳ್ಳುವ ಹೆಣ್ಣು. ಈಕೆಯಂತಹವರು ಎಲ್ಲ ಸಮಾಜದಲ್ಲಿ ಎಲ್ಲ ಕಾಲಕ್ಕೂ ಕಾಣ ಸಿಗುತ್ತಾರೆ. ಆದರೆ ಕಥೆ ಗಿಟ್ಟಿಸಿಕೊಳ್ಳುವ ಸಹಾನುಭೂತಿಯನ್ನು ನಿಜವಾದ ಪಾತ್ರಗಳು ಗಿಟ್ಟಿಸಿಕೊಳ್ಳಲಾರವು. ಇಂತಹ ವಿಪರ್ಯಾಸದ ಅರಿವು ಓದುಗನಿಗಾದರೆ ಕಥೆ ಸಾರ್ಥಕವಾದಂತೆ. ಅಂತಹ ಅರಿವು ಮೂಡಿಸುವಲ್ಲಿ 'ಪೂ' ಕಥೆ ಗೆದ್ದಿದೆ.

ತನಗೆ ಭಜನೆ ಹೇಳಿಕೊಡುವ ಆಪ್ತ ವ್ಯಕ್ತಿಯನ್ನು ಕಳೆದುಕೊಂಡ ಸಂಕಟ ಮತ್ತು ಆ ಸಾವಿನ ಮೈಮುಳ್ಳೇಳಿಸುವಂಥ ಮತ್ತೊಂದು ಘಟನೆಯಿಂದಾಗಿ ಮಾನಸಿಕವಾಗಿ ತತ್ತರಿಸಿ ಹೋಗುವ ಶೈಲ ಊರಿನ ಮಂದಿಗೆ ಹುಚ್ಚುಶೈಲಾ! ಆದರೆ ಊರಿಗಿರುವ ಹುಚ್ಚು ಅವನಿಗೆ ಮಾತ್ರ ಗೊತ್ತು. ಅವನೊಳಗೆ ಮಥಿಸುವ ಬದುಕಿನ ನಶ್ವರತೆಯ ತತ್ವಗಳು ವಾಸ್ತವತೆಗೆ ಕನ್ನಡಿ ಹಿಡಿದಂತಿವೆ. ನಿರಂತರವಾಗಿ ಬದಲಾವಣೆಯ ಹೊಡೆತಕ್ಕೆ ಸಿಕ್ಕುವ ಹೊರಜಗತ್ತಿನ ಹಂಗು ತೊರೆದುಕೊಂಡು ಗ್ರಾದಲಿಯಲ್ಲಿ ತನ್ನದೇ ಪ್ರಪಂಚವನ್ನು ಸೃಷ್ಟಿಸಿಕೊಂಡು ಮೈಮರೆತ ಅಪ್ಪನ ಕಥೆ ಹೇಳಲು ಅದೇ ಗ್ರಾದಲ್ಲಿ ಇದೆ. ಆದರೆ ಹೊರಪ್ರಪಂಚದ ಹಾರಾಟದಲ್ಲಿ ತೂರಿ ಹೋದ ನನಗೆ? ಎಂಬ ಮಗನ ಪ್ರಶ್ನೆ ಇಲ್ಲಿ ನಮ್ಮದೂ ಹೌದು.

ಬಾಲ್ಯದ ತುಂಟಾಟಗಳಿಗೆ ಜತೆಯಾದ ಪಾತಿ ಅವನ ಹರೆಯದ ಹಂಬಲಗಳಿಗೂ ತೆರೆದುಕೊಂಡು ಬಿಡುತ್ತಾಳೆ. ಅತೀ ಸಹಜವಾಗಿ ಘಟಿಸಿ ಹೋದ ಕ್ರಿಯೆ ಮತ್ತೊಮ್ಮೆ ಬೇಕು ಎನ್ನುವ ಅವನ ಕುತೂಹಲ ನಿರಾಕರಿಸಲಾರದ ಅಸಹಾಯಕತೆ ಆಕೆಗೆ. ಅವಳು ಹೊರ ಪ್ರಪಂಚಕ್ಕೆ ಪಾತಕ್ಕನಾಗಿ ಅವನಿಗೆ ಪಾತಿಯಾಗಿಯೇ ಉಳಿಯುತ್ತಾಳಾ? ಎರಡು ಧರ್ಮಗಳ ಎಲ್ಲೆ ಮೀರಿ ಸಂಭವಿಸುವ ಸಲುಗೆಯನ್ನು ಕೊನೆಯಲ್ಲಿ ನಿಯಂತ್ರಿಸುವ ಶಕ್ತಿ ಯಾವುದು? ಕಥೆಯನ್ನೇ ಓದಿ ತಿಳಿಯಬೇಕು. ನಹೀಗೇ ಈ ಸಂಕಲನದಲ್ಲಿ ಅಡಕಗೊಂಡಿರುವ ಏಳು ಕಥೆ ಗಳೂ ಒಂದಕ್ಕೊಂದು ವಿಭಿನ್ನವಾದ ಕಥಾಹಂದರಗಳಿಂದ ಮೈದಳೆದಿವೆ. ಕಥೆಗಾರ ಒಂದೇ ಭೂಮಿಕೆಯನ್ನು ಆಯ್ದು ಕೊಂಡರೂ, ಏಕತಾನತೆ ಕಾಡದಂತೆ ಓದಿಸಿಕೊಳ್ಳುವ ಓಘವನ್ನು ಇಲ್ಲಿನ ಕಥೆಗಳು ಕಾಯ್ದುಕೊಂಡಿವೆ. ಕಣ್ಣಿಗೆ ಕಟ್ಟುವಂತಿರುವ ಹದವಾದ ನಿರೂಪಣೆಯಿಂದ, ಈ ಕಥೆಗಳಲ್ಲಿ ಬರುವ ಪಾತ್ರಗಳು, ತಮ್ಮ ಒಡಲಾಳದ ನೋವಿನೆಳೆಗಳನ್ನು ಮೀಟು ವಂತಹ ರೂಪಕಗಳಿಂದ, ಮುಖ್ಯವಾಗಿ ಬಯಲು ಸೀಮೆಯ ಗ್ರಾಮೀಣ ಭಾಷೆಯನ್ನು ಸಶಕ್ತವಾಗಿ ಬಳಸಿಕೊಂಡ ಪ್ರೌಢಿಮೆಯಿಂದ ಈ ಸಂಕಲನತುಂಬ ಕಾಲ ನೆನಪಿನಲ್ಲಿ ಉಳಿಯಲಿದೆ.

ಕೃಪೆ : ವಿಶ್ವವಾಣಿ 2020 ಜನವರಿ 05

Related Books