‘ಅಪ್ಪಿಗೌಡನ ಶಂಖಪುಷ್ಪ’ ಅಂಜನಾ ಹೆಗಡೆ ಅವರ ಕಥಾಸಂಕಲನವಾಗಿದೆ. ಜೀವಿಸಲು ಜೀವಕ್ಕೆ ಜೀವ ತುಡಿಯಬೇಕು. ತುಡಿಯುವ ಆ ಇನ್ನೊಂದು ಜೀವ ಮನುಷ್ಯನಾಗಿದ್ದರೆ ಸುದೈವ. ಆ ಭಾಗ್ಯ ಇಲ್ಲದವರ ಬದುಕಿನಲ್ಲಿ ಕಾಜುಗಣ್ಣಿನ ಕಾಜಿ ಇದ್ದೇ ಇರುತ್ತೆ. ಮರೆಯಾಗಿ ಹೋದರೂ ತನ್ನ ಪರಂಪರೆಯನ್ನು ಮುಂದುವರೆಸುತ್ತೆ. ಲಲಿತಕ್ಕಳಿಗೆ ಸರಸಿಯ ಮೇಲೆ ಮಮಕಾರ. ದಿವಾಕರ ನಿರಾಸಕ್ತ. ಕಾಜಿ ಕಾಳಜಿಯನ್ನು ಮೂಡಿಸುವ ಸಹೃದಯೀ. ಬದುಕಿನ ಬೇಗೆಯಲಿ ಬೆಂದು ಉಳಿಸಿದ ಸುಟ್ಟಗಾಯದ ಗುರುತಿಗೆ ಕಾಜಿಯಂತೆ ತುಳಸಿಯೂ ಆಸರೆ. ದೀಪಾವಳಿಯ ಬಿಂಗಿ, ಶಿವರಾತ್ರಿಯ ಭಂಗಿ ಇವೆರಡೆಂದರೆ ನೆನಪಾಗುವುದು ಅಪ್ಪಿಗೌಡ. ಇವನ ಊರಿನವರು ಹಲಸಿನ ಪೊಳಜವನ್ನು ಗಟ್ಟಿಯಾಗಿ ಉಣ್ಣುತ್ತಾರೆ. ಇವನಂತೆಯೇ ಅಹಮದನ 407 ಗಾಡಿ ಊರಿಗೆ ಫ಼ೇಮಸ್ಸು. ಅದು ಊರಿನಲ್ಲಿ ಜರುಗುವ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ. ಎಲ್ಲಾ ಘಟನೆಯೆಂದರೆ ಎಲ್ಲವೂ ಅಲ್ಲ. ಜಾಮಿನಿಯ ನಿಗೂಢ ಬದುಕಿಗೆ ಹೊಣೆ ಯಾರೆಂಬುದು ಗುಡ್ ಮಾರ್ನಿಂಗ್ ಮೆಸೇಜು ಕಳಿಸುವವರ ಹತ್ತಿರ ತಿಳಿಯಲಾಗುವುದಿಲ್ಲ. ನಿಗೂಢತೆಗೆ ಕಾರಣನಾದವ ಬಹುಶ: ಲಾಸ್ಟ್ ಬಸ್ಸನ್ನು ಹಿಡಿದು ಎಂದೋ ಪರಾರಿಯಾಗಿರಬೇಕು.
ಲೇಖಕಿ ಅಂಜನಾ ಹೆಗಡೆ ಹುಟ್ಟಿ ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ. ಮದುವೆಯಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಹತ್ತು ವರ್ಷಗಳ ಕಾಲ ಬಿಪಿಓ ಒಂದರಲ್ಲಿ ಕೆಲಸ ಮಾಡಿದ ಅನುಭವವಿದ್ದು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. "ಕಾಡ ಕತ್ತಲೆಯ ಮೌನಮಾತುಗಳು" ಕವನ ಸಂಕಲನ ಹಾಗೂ "ಬೊಗಸೆಯಲ್ಲೊಂದು ಹೂನಗೆ" ಪ್ರಬಂಧಗಳ ಸಂಕಲನ ಪ್ರಕಟವಾಗಿವೆ. ಓದು-ಬರೆಹದ ಜೊತೆಗೆ ಗಾರ್ಡನಿಂಗ್ ನೆಚ್ಚಿನ ಹವ್ಯಾಸ. ...
READ MORE