ʼಮೊತ್ತ ಮತ್ತು ಇತರ ಕಥೆಗಳುʼ ಲೇಖಕ ಸಿ.ಎನ್.ರಾಮಚಂದ್ರ ಅವರ ಕಥಾ ಸಂಕಲನ. ಒಟ್ಟು ಹತ್ತು ಕಥೆಗಳಿವೆ. ತೀರ ಆಪ್ತವಾದ ಧಾಟಿಯಲ್ಲಿ, ಸ್ವಗತದ ವಿನಯವಂತಿಕೆಯನ್ನು ಪಡೆದಿರುವ ಈ ಕಥೆಗಳು ಅದೇ ಕಾರಣಕ್ಕೆ ಓದಿಗೆ ಒಂದು ಬಗೆಯ ಆಹ್ವಾನವನ್ನು ನೀಡುವಂತಿವೆ. ಪ್ರಮುಖವಾಗಿ ಇಲ್ಲಿನ ಎಲ್ಲ ಕಥೆಗಳಲ್ಲಿ ಭಾವನೆಗಳ ಸ್ತರದಲ್ಲಿ ಮನುಷ್ಯ ಸಂಬಂಧಗಳನ್ನು ವಿಶ್ಲೇಷಿಸುವ ಮತ್ತು ಆ ಮೂಲಕ ಬದುಕನ್ನು ಅರಿಯುವ ಪ್ರಯತ್ನವೊಂದು ನಡೆಯುತ್ತದೆ. ಮನುಷ್ಯ ಸಂಬಂಧಗಳ ವಿಚಾರ ಬಂದಾಗ ಹೆಚ್ಚಿನ ಸಂಬಂಧಗಳು ಸುತ್ತುವುದು ಗಂಡು ಹೆಣ್ಣು ಸಂಬಂಧದ ಸುತ್ತವೇ ಎಂಬುದು ನಿಜವಾದರೂ ರಾಮಚಂದ್ರರು ಇದರಾಚೆಗೂ ತಮ್ಮ ಹರಹು ಚಾಚಿರುವುದು ಗಮನಾರ್ಹ. ಗಂಡು-ಹೆಣ್ಣು ಸಂಬಂಧವಿರಲಿ, ಬದುಕಿನ ಅಸಹಾಯಕ ಘಳಿಗೆಗಳಿರಲಿ, ಮನಸ್ಸನ್ನು ಕಾಡುವ, ಚುಚ್ಚುವ ಇನ್ಯಾವುದೇ ಹಳೆಯ ಸಂಗತಿಯಿರಲಿ ಅವು ಇಲ್ಲಿನ ನಿರೂಪಕ ಅಥವಾ ನಾಯಕ ಪಾತ್ರವನ್ನು ತನ್ನ ಇಡೀ ಬದುಕಿನ ತುಲನೆಗೆ ಹಚ್ಚುವುದು ಮತ್ತು ಆ ಮೂಲಕ ಒಂದು ವಿಶ್ಲೇಷಣೆಗೆ ಕಾರಣವಾಗುವುದು ಇಲ್ಲಿನ ಹೆಚ್ಚಿನ ಕಥೆಗಳ ಸಾಮಾನ್ಯ ಅಂಶ. ಈ ರೀತಿ ಈ ಕಥೆಗಳು ವರ್ತಮಾನದಿಂದ ಭೂತದತ್ತ ಸಾಗುತ್ತ, ಭಾವನೆಗಳನ್ನು, ನೋವುಗಳನ್ನು ತೋಡಿಕೊಳ್ಳುತ್ತ, ಸಂಬಂಧಗಳ ಅನೇಕ ಗೋಜಲುಗಳನ್ನು ಬಿಡಿಸಿಡಲು ಪ್ರಯತ್ನಿಸುತ್ತವೆ.
ರಾಮಚಂದ್ರನ್ ಅವರು ಜನಿಸಿದ್ದು (ಜ ೧೯೩೬) ಮೈಸೂರು ಜಿಲ್ಲೆಯ ಚಿಲ್ಕುಂದ ಗ್ರಾಮದಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ, ಅಮೆರಿಕೆಯ ಮಯಾಮಿ ವಿಶ್ವವಿದ್ಯಾಲಯದಿಂದ ಪಿಎಚ್. ಡಿ. ಪದವಿ. ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ, ಸೌದಿ ಅರೇಬಿಯಾ, ಸೋಮಾಲಿಯಾಗಳಲ್ಲಿ ಅಧ್ಯಾಪಕರಾಗಿ ಕಾರ್‍ಯ ನಿರ್ವಹಿಸಿದ್ದಾರೆ. ೧೯೯೬ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಅಧ್ಯಾಪಕರಾಗಿ ನಿವೃತ್ತಿ. ಸಾಹಿತ್ಯ ವಿಮರ್ಶೆ, ವಸಾಹತೋತ್ತರ ಚಿಂತನೆ, ತೌಲನಿಕ ಸಾಹಿತ್ಯ, ಪರಂಪರೆ ಪ್ರತಿರೋಧ, ಎಡ್ವರ್ಡ್ ಸೈದ್, ಬಯಲುರೂಪ, ರಕ್ತ-ರೂಪಣೆ, ಹೊಸ ಮಡಿಯ ಮೇಲೆ ಚದುರಂಗ, ಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳು ವಿಮರ್ಶಾ ಕೃತಿಗಳು. ಶೋಧ ಕಾದಂಬರಿ, ಕಸಾಂದ್ರ ಕಥಾ ಸಂಕಲನ. ಇನಾಂದಾರ್ ಪ್ರಶಸ್ತಿ, ...
READ MORE