ಮಾಸ್ತಿಯವರ ಕತೆಗಳನ್ನು ಓದುವಾಗ ನಿರೂಪಕನನ್ನು ಹೊರತುಪಡಿಸಿ ಎಲ್ಲವನ್ನೂ ಪಾತ್ರಗಳ ಮಟ್ಟಿಗೆ ಸರಳೀಕರಿಸಿದರೆ, ಇಲ್ಲವೆ ನಿರೂಪಕನ ಘೋಷಿತ ನೆಲೆಗಳಿಗೆ ಕತೆಯ ಅನುಭವವನ್ನು ಇಳಿಸಿಬಿಟ್ಟರೆ ನಮಗೆ ಏನೂ ದೊರೆಯುವುದಿಲ್ಲ, ನಿರೂಪಣೆ ಮತ್ತು ನಿರೂಪಕನಿಗಿರುವ ದ್ವಂದ್ವಾತ್ಮಕ ಸಂಬಂಧದಲ್ಲೇ ಕತೆಯ ಅನುಭವ ಮೈದಾಳಬೇಕು. ಒಂದೇ ಕತೆಯನ್ನು ಹಲವಾರು ಬಾರಿ ಕೇಳಿದಾಗ ಅಥವಾ ಬೇರೆ ಬೇರೆಯವರ ಬಾಯಿಗಳಿಂದ ಕೇಳಿದಾಗ ಚೌಕಟ್ಟು ಒಂದೇ ಎನಿಸಿದರೂ ಅನುಭವದ ವಿನ್ಯಾಸಗಳು ಬೇರೆ ಎನಿಸುವುದಕ್ಕೆ ಇದೇ ಕಾರಣ. ನಿರೂಪಕನ ವ್ಯಾಖ್ಯಾನವನ್ನೂ ಮೀರಿ ಕತೆ ನಮ್ಮನ್ನು ತಟ್ಟದೇ ಇದ್ದಲ್ಲಿ ಪ್ರಾಯಶಃ ಅದೊಂದು ಅಷ್ಟು ಒಳ್ಳೆಯ ಕತೆಯಾಗಲಾರದು. ಎರಡನೆಯದಾಗಿ, ಕತೆ ಹೇಳುವ ಮತ್ತು ಕೇಳುವ ಪರಿಕ್ರಮದಲ್ಲಿ ನಿರೂಪಕ ಮತ್ತು ಕೇಳುಗರ ಮೌಲ್ಯ ಪ್ರಜ್ಞೆಯಲ್ಲಿ ಆಗುವ ಬದಲಾವಣೆ, ಬೆಳವಣಿಗೆಗಳೂ ಮುಖ್ಯವಾಗುತ್ತವೆ. ಕಥನ ಪ್ರಕ್ರಿಯೆಯ ಸೃಜನಶೀಲ ಗಳಿಗೆಗಳಲ್ಲಾದರೂ ಈ ಇಬ್ಬರು ಮನುಷ್ಯರು ತಮ್ಮ ಮಿತಿಗಳನ್ನು ಎಷ್ಟರಮಟ್ಟಿಗೆ ಮೀರಲು ಸಾಧ್ಯರಾಗುತ್ತಾರೆ ಎಂಬುದೂ ತುಂಬ ಮುಖ್ಯ. ಇಲ್ಲದಿದ್ದಲ್ಲಿ ಈ ಕ್ರಿಯೆಗೆ ಸೃಜನಾತ್ಮಕ ಆಯಾಮಗಳು ಅಸಾಧ್ಯವಾಗಿ ಬಿಡುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಮಾಸ್ತಿಯವರ ಕತೆಗಳಿಗೆ ಸಾಂಸ್ಕೃತಿಕ ಮಹತ್ವವಿದೆ ಎನಿಸುತ್ತದೆ. ಕತೆ ಹೇಳುವುದು ಮಾಸ್ತಿಯವರಿಗೆ ಕೇವಲ ಒಂದು ಸಾಹಿತ್ಯಕ ಚಟುವಟಿಕೆಯಲ್ಲ, ಬದುಕಿನ ಒಂದು ಕ್ರಮವೇ ಆಗಿತ್ತು.
ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ `ಶ್ರೀನಿವಾಸ'ರ (ಮಾಸ್ತಿ ವೆಂಕಟೇಶ ಅಯ್ಯಂಗಾರ್) ಕೃತಿ ವಾಸ್ತವವಾಗಿ ಎರಡು ಕೃತಿಗಳ ಸಂಯುಕ್ತ ಸಂಪುಟ. ಮೊದಲನೆಯದಾದ 'ಸಣ್ಣಕಥೆಗಳು-12' ಪ್ರಕಟವಾದದ್ದು 1964ರಲ್ಲಿ. ಇದರಲ್ಲಿ ಆರು ಕಥೆಗಳಿವೆ. ಕೊನೆಯದಾದ 'ನಾಲ್ಕನೆಯ ಅಧ್ಯಾಯ' ಎಂಬುದು ಕಥೆಯಾಗಿರದೆ, ನಿರಂಜನ, ಕಸ್ತೂರಿ ಮತ್ತು ವಾಣಿ ಅವರು ಒಂದೊಂದು ಅಧ್ಯಾಯದಲ್ಲಿ ಬೆಳೆಸಿಕೊಂಡು ಬಂದ ಕಥೆಯ ಮುಂದುವರಿದ ಕೊನೆಯ ಅಧ್ಯಾಯವಾಗಿದೆ. ಆದರೂ ಅದಕ್ಕೆ ಸ್ವತಂತ್ರ ಕಥೆಯ ಸ್ವರೂಪವಿದೆ.
ಎರಡನೆಯ ಸಂಪುಟ 'ಸಣ್ಣಕಥೆಗಳು-13' ಪ್ರಕಟವಾದದ್ದು 1967ರಲ್ಲಿ. ಇದರಲ್ಲಿ ಒಂಬತ್ತು ಕಥೆಗಳಿವೆ. ಈ ಎರಡೂ ಸಂಕಲನಗಳ ಕಥೆಗಳು ಮಾಸ್ತಿಯವರ ಸುದೀರ್ಘವಾದ ಕಥನ ಕಲೆಯ ಒಂದು ವಿಶಿಷ್ಟ ಘಟ್ಟವನ್ನು ಪ್ರತಿನಿಧಿಸುತ್ತವೆ. ಇವುಗಳಲ್ಲಿ ಯಾವುದೇ ಕ್ರಿಯೆಯ ಕೇಂದ್ರವಿಲ್ಲ. ಘಟನೆಗಳ ಆಧಾರದ ಮೇಲೆ ವ್ಯಕ್ತಿಗಳು ಬಿಚ್ಚಿಕೊಳ್ಳುತ್ತಾರೆ. ವ್ಯಕ್ತಿತ್ವ ನಿರೂಪಣೆಯಿಂದಲೇ ಕಥೆಗಳಿಗೆ ಆಕರ್ಷಣೆಯೊದಗುತ್ತದೆ. ಕಥೆಗಳು ವ್ಯಕ್ತಿಚಿತ್ರಗಳ ಸ್ವರೂಪವನ್ನೂ ಪಡೆದುಕೊಳ್ಳುತ್ತಿವೆ. ಇಲ್ಲಿನ ಕಥೆಗಳಲ್ಲಿ ಸಮಕಾಲೀನ ವಾತ್ರವಲ್ಲ, ಇತಿಹಾಸ, ಪುರಾಣಗಳೂ
ಇವೆ. ಈಜಿಪ್ಟ್, ರೋಮ್, ಮೆಕ್ಸಿಕೊ, ಇಂಗ್ಲೆಂಡ್, ಮಾಸ್ಕೊ ಮುಂತಾದ ಲೋಕದ ಬೇರೆ ಬೇರೆ ಭಾಗಗಳಲ್ಲಿ ಈ ಕಥೆಗಳು ನಡೆಯುತ್ತವೆ. ಇಸಡೂರಾ ಡಂಕನ್, ಷೇಕ್ಸ್‌ಪಿಯರ್, ವಾಲ್ಟೇರ್, ಟಾಲ್‌ಸ್ಟಾಯ್, ಪ್ಲುಟಾರ್ಕ್ ಮೊದಲಾದವರೊಡನೆ ನಮ್ಮ ಪುರಾಣಗಳ ಶ್ರೀಕೃಷ್ಣ ಕುಚೇಲರಂಥವರೂ, ವಶಿಷ್ಟ, ದಶರಥರಂಥವರೂ ಇಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಟ್‌ಷೇಪ್ ಸಿಟೂ, ನೇಷ್ ಹುಮ್ ಕೊಯೊಟ್‌ಲ್ -ಅಂಥವರು ನಮಗೆ ತೀರ ಅಪರಿಚಿತರು. ಚಟ್ಟೇಕಾರ ತಾಯಿಯಂಥ ಅನಾಮಧೇಯರೂ ಈ ಕಥೆಗಳನ್ನು ತುಂಬಿಕೊಳ್ಳುತ್ತಾರೆ. ಸಾಮರ್‌ಸೆಟ್‌ಮಾಮ್, ರಾಬರ್ಟ್‌ಲಿಂಗ್ ಅವರು ಇಲ್ಲಿ ಕಥೆ ಹೇಳುತ್ತಾರೆ.
ಮಾಸ್ತಿಯವರ ಈ ನೇರ ಸರಳ ಕಥೆಗಳ ಕಲೆಗಾರಿಕೆಯಲ್ಲಿ ನೀತಿಯ ಲೇಪನವಿದೆ. ಕಥೆಗಳು ನಿರೂಪಣೆ, ತಂತ್ರಗಳಲ್ಲಿ ನೀತಿಕಥೆಗಳನ್ನೂ (ಫೇಬಲ್ಸ್) ಜನಪದ ಕಥೆಗಳನ್ನೂ ಹೋಲುತ್ತವೆ. 'ಸಣ್ಣ ಕಥೆಗಳು-12ಕ್ಕೆ ಬರೆದ ಮುನ್ನುಡಿಯಲ್ಲಿ ಸಂಕಲನದ 'ಕೆಟ್ಟಕಾಲ' ಎಂಬ ಕಥೆಯನ್ನು ಕುರಿತು ಮಾಸ್ತಿಯವರು ಹೀಗೆ ಹೇಳಿಕೊಂಡಿದ್ದಾರೆ: “ಒಂದು ಜನತೆ ದಾರಿ ತಪ್ಪಿದರೆ ಎಂಥ ದುರವಸ್ಥೆಗೆ ಬರಬಹುದೆಂದು ತೋರಿಸುವ ಈ ಬರೆಹ ಓಟದಲ್ಲಿ ಒಂದು ಉಪನ್ಯಾಸ; ಆ ಜೀವನವನ್ನು ಚಿತ್ರಿಸುವುದರಿಂದ ಕಥೆ ಆಗಿದೆ.'' ವಾಸ್ತವವಾಗಿ, ಈ ಮಾತು ಇಲ್ಲಿನ ಎಲ್ಲ ಕಥೆಗಳಿಗೂ ಚೆನ್ನಾಗಿ ಒಪ್ಪುತ್ತದೆ. ಪ್ರತಿಯೊಂದು ಕಥೆಯ ಒಂದು ಉಪನ್ಯಾಸ; ಜೀವನವನ್ನು ಚಿತ್ರಿಸುತ್ತ ಅದು ಮತ್ತೊಂದು ಕಥೆ ಆಗಿದೆ. ಈ ಉಪನ್ಯಾಸ ಎನ್ನುವುದು ಸಂಸ್ಕೃತಿಯ ಪಾಠ, ಪ್ರತಿಯೊಂದು ಸಂದರ್ಭದಲ್ಲಿಯೂ ಮಾಸ್ತಿಯವರು ತಮ್ಮ ಕಥೆಯನ್ನು ಸಂಸ್ಕೃತಿಯ ಹಿರಿಮೆಗಾಗಿ, ಮೌಲ್ಯ ವಿವೇಚನೆಗಾಗಿ ಬಳಸಿಕೊಳ್ಳುತ್ತಾರೆ. ವ್ಯಕ್ತಿ, ಘಟನೆ, ಸಂದರ್ಭಗಳು ಬದುಕಿನ ವೈವಿಧ್ಯಗಳನ್ನು ಎತ್ತಿ ತೋರಿಸುವುದರ ಜೊತೆಗೆ ಜೀವನ ಪಾಠಗಳನ್ನೂ ಬೋಧಿಸುತ್ತವೆ.
ವಾಲ್ಟೇರ್, ಸಾವನ್ನು ನಿರೀಕ್ಷಿಸುತ್ತಿರುವ ತನ್ನ ಒಂದು ಕಾಲದ ಪ್ರೇಯಸಿಯನ್ನು ಅವಳ ಗಂಡ ಹಾಗೂ ಅವಳ ಇನ್ನೊಬ್ಬ ಪ್ರಿಯಕರನ ಸಾಮೀಪ್ಯದಲ್ಲಿ ಭೇಟಿಯಾಗುವ 'ವಿಚಿತ್ರ ಪ್ರೇಮ' ಎಂಬ ಕಥೆ ಮಾಸ್ತಿಯವರು ತಮ್ಮ ಇಳಿ ವಯಸ್ಸಿನಲ್ಲಿಯೂ ಉಳಿಸಿಕೊಂಡ ಅತ್ಯಂತ ಆರೋಗ್ಯಕರ ಮತ್ತು, ಉದಾರ ದೃಷ್ಟಿಯನ್ನೂ ವೈಚಾರಿಕ ಮನೋಭಾವವನ್ನೂ ಅದ್ಭುತವಾಗಿ ನಿರೂಪಿಸುತ್ತದೆ. ಬದುಕಿನ ಬಗೆಗೆ ಇಂಥ ಧೋರಣೆಯನ್ನು ತಾಳುವುದು ಸುಲಭವಲ್ಲ, ಗಂಡ ಹೆಂಡತಿಗೆ ಹೇಳಿದ ಒಂದು ಮಾತು ಹೀಗಿದೆ: ''ಹೆಂಡಿರಾದವಳು ಬಂದಿಯೆಂದು ನಾನು ತಿಳಿದಿಲ್ಲ. ಗಂಡಹೆಂಡಿರ ಸಂಬಂಧದಲ್ಲಿ ಇವನಲ್ಲಿ ಸರಿ ಎನ್ನುವ ನಡತೆ ಅವಳಲ್ಲಿಯೂ ಸರಿ. ಇದು ನಮ್ಮ ಅಜ್ಜಿ ಹೇಳುತ್ತಿದ್ದ ಒಂದು ಸೂತ್ರ: ಇದು ನನಗೆ ಒಪ್ಪಿಗೆ.” ಇದು ಆ ಗಂಡು ಆಣೆ ಮಾಡಿ ಒಪ್ಪಿದ ಮಾತು.
ಈ ಸಂಕಲನಗಳ ಪ್ರತಿಯೊಂದು ಕಥೆಯಲ್ಲಿಯ ಮಾನವೀಯತೆಗಾಗಿ ಮೊರೆಯುವ ಶುದ್ಧ ಅಂತಃಕರಣದ ದರ್ಶನವಾಗುತ್ತದೆ. ಜೀವನದ ಹರವಿನಲ್ಲಿ ಅಲ್ಲಿನ ಸಮಸ್ಯೆಗಳ ನಾನಾ ಮುಖಗಳು ಎದ್ದು ತೋರುತ್ತವೆ. ಈ ಕಥೆಗಳನ್ನು ಓದಿದ ಮೇಲೆ 'ಹೆಸರು ಸಾಯುವುದಿಲ್ಲ' ಎಂಬ ಕಥೆಯಲ್ಲಿ ಅಮ್ಮೋನಿಯಸ್ ಎಂಬ ಪಾತ್ರ ಆಡುವ ಮಾತುಗಳು ನೆನಪಾಗುತ್ತವೆ: ''ಹೆಸರುಗಳನ್ನು ಬದಿಗಿರಿಸು, ಉಳಿಯುವುದೇನು ? ಈ ಸತ್ಯವಂತ, ಈ ಅಯೋಗ್ಯ. ಇವರ ಬಾಳಿಂದ ಕಾಣುವುದೇನು ? ಹಣ ಇರಲಿ ಎಂದವನು ಸತ್ಯವನ್ನು ಬಿಡುತಾನೆ, ಸತ್ಯ ಇರಲಿ ಎಂದವನು ಹಣವನ್ನು ಬಿಡುತಾನೆ, ಕಳವಿಲ್ಲದ ಆಸ್ತಿ ಇಲ್ಲ. ಬಡತನ ಕಷ್ಟ ಅಲ್ಲ. ಇದನ್ನು ಒಬ್ಬ ಪದ್ಯಮಾಡಿ ಹಾಡುತಾನೆ ; ಒಬ್ಬ ಕಥೆ ಕಟ್ಟಿ ಹೇಳುತಾನೆ: ಒಬ್ಬ ಚರಿತ್ರೆ ಎಂತ ಬರೆಯುತಾನೆ. ಎಲ್ಲರ ಕೆಲಸವೂ ಒಂದೆ ಮನುಷ್ಯ ಜಾತಿಗೆ ದಾರಿತೋರಿಸುವುದು"
ಎಪ್ಪತೈದರ ಮುಪ್ಪಿನಲ್ಲಿ ಮಾಸ್ತಿಯವರು ಬರೆದ ಈ ಕಥೆಗಳಲ್ಲಿ ಈ ಕಾವ್ಯವಿದೆ, ಚರಿತ್ರೆಯಿದೆ, ತತ್ವವಿದೆ, ಉಪದೇಶವಿದೆ. ಇದೆಲ್ಲ ಮಾಡುವ ಕೆಲಸ ಒಂದೇ: ಮನುಷ್ಯ ಜಾತಿಗೆ ದಾರಿ ತೋರಿಸುವುದು.
- ಹಾ. ಮಾ. ನಾಯಕ
ಸಣ್ಣಕತೆಗಳು 12-13 (ಸಣ್ಣಕತೆ)
ಸಣ್ಣಕತೆಗಳು 12 ಮೊದಲನೆಯ ಆವೃತ್ತಿ 1965,
ಸಣ್ಣಕತೆಗಳು 13 ಮೊದಲನೆಯ ಆವೃತ್ತಿ 1967
ಸಂಯುಕ್ತ ಸಂಪುಟ - ಜೀವನ ಕಾದ್ಯಾಲಯ ಬೆಂಗಳೂರು 560 019
ಕ್ರೌನ್ ಅಷ್ಟ 154 ಪುಟಗಳು ಬೆಲೆ ರೂ3-50
ಕೃಪೆ: ಗ್ರಂಥಲೋಕ, ಜನೆವರಿ 1981
©2024 Book Brahma Private Limited.