‘ಇನ್‌ಸ್ಟಂಟ್ ಲೈಫ್’ ಕುಪ್ಪಿಲಿ ಪದ್ಮ ಅವರ ತೆಲುಗು ಕಥಾ ಸಂಕಲನವಾಗಿದ್ದು, ಇದನ್ನು ಡಾ. ಮಲ್ಲೇಶಪ್ಪ ಸಿದ್ರಾಂಪುರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಕುಪ್ಪಿಲಿ ಪದ್ಮಾ ತೆಲುಗು ಕತೆಗಾರರಾಗಿದ್ದು, ಆಧುನಿಕ ಬದುಕಿನ ಮತ್ತು ಸಮಾಜದ ಸಂಕೀರ್‍ಣತೆಯನ್ನು ಕಟ್ಟಿಕೊಡುವುದಕ್ಕೆ ಹೆಚ್ಚು ಅವರ ಕತೆಗಳನ್ನು ಗುರುತಿಸಲಾಗಿದೆ. ಈ ಕತೆಗಳು ಯಾವ ಭಾಷೆಯಲ್ಲಿ ಬರೆದರೂ ಇದು ನಮ್ಮದೆ ಎನಿಸುವಷ್ಟು ಆಪ್ತತೆಯನ್ನು ಕಟ್ಟಿಕೊಡುತ್ತದೆ. ಯಾಂತ್ರಿಕತೆ ಮತ್ತು ತಾಂತ್ರಿಕ ಬದುಕು ಅನಿವಾರ್ಯವಾಗಿರುವ ಇಂದಿನ ನಗರ ಜೀವನವನ್ನು ಅರಿತುಕೊಳ್ಳುವುದಕ್ಕೆ, ನಗರದ ಹೆಣ್ಣಿನ ಬದುಕನ್ನು, ಹೆಣ್ಣು ಬದುಕಿನ ಸೂಕ್ಷ್ಮಗಳನ್ನು ತಿಳಿದು ಕೊಳ್ಳುವುದಕ್ಕೆ ಇವು ಹೆಚ್ಚು ಸಹಾಯಕ. ಕುಪ್ಪಿಲಿ ಪದ್ಮ ಅವರ ಇಂತ ಆಯ್ದ ಕತೆಗಳನ್ನು ಡಾ. ಮಲ್ಲೇಶಪ್ಪ ಸಿದ್ರಾಂಪುರ ಅವರು ಕನ್ನಡಿಸಿದ್ದಾರೆ. ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಹಿಡಿತವನ್ನು ಹೊಂದಿರುವ ಮಲ್ಲೇಶಪ್ಪ ಅವರು ಮೂಲ ಕತೆಗಳ ನಾಡಿಯನ್ನು ಹಿಡಿಯುವಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಿದ್ದಾರೆ. ಹೀಗೆ ತೆಲುಗಿನ ಕತೆಗಳಿಗೆ ಕನ್ನಡ ನಾಡಿಮಿಡಿತಕ್ಕೆ ತಾಳಮೇಳವನ್ನು ಕೂಡಿಸಿದ್ದಾರೆ. ಆದುನಿಕತೆಯ ವಸ್ತುವನ್ನು ಹೊಂದಿರುವ ಕನ್ನಡದ ಅಪರೂಪದ ಕತಾಸಂಕಲನಗಳಲ್ಲಿ ಇದೂ ಒಂದು.