'ಕಥೆಯೊಂದಿಗೆ ಗಣಿತ' ರಾಜೇಂದ್ರ ಶೆಟ್ಟಿಯವರು ಮಕ್ಕಳಿಗಾಗಿ ಬರೆದ ಕಥೆಗಳ ಸಂಕಲನ. ಈ ಕೃತಿಗೆ ಬೆನ್ನುಡಿ ಬರೆದಿರುವ ಎ. ಭಾನು ಅವರು ಪುಸ್ತಕದ ಕುರಿತು ಬರೆಯುತ್ತಾ 'ರಾಜೇಂದ್ರ ಶೆಟ್ಟಿಯವರೊಂದಿಗೆ ಜೊತೆಗೆ ಹಳ್ಳಿಯ ಒಂದು ಶಾಲೆಗೆ ಹೋಗಿದ್ದೆ. ಅಲ್ಲಿ ಅವರು ಮಕ್ಕಳಿಗೆ ಗಣಿತದ ಸುಲಭ ಉಪಾಯಗಳನ್ನು ಕಲಿಸುವಾಗ, “ಅಯ್ಯೋ, ಗಣಿತ ಇಷ್ಟು ಸರಳವೇ? ನಮ್ಮ ಶಾಲಾದಿನಗಳಲ್ಲಿ ನಮಗಿದು ಗೊತ್ತಾಗದೇ ಹೋಯಿತಲ್ಲಾ” ಎಂದು ಅನಿಸಿದ್ದು ನಿಜ. ಅವರ ಈ “ಕಥೆಯೊಂದಿಗೆ ಗಣಿತ” ಪುಸ್ತಕ ಓದಿದಾಗ ಮೇಲಿನ ಭಾವನೆ ಇನ್ನಷ್ಟು ದೃಢವಾಯಿತು. ರಾಜೇಂದ್ರ ಶೆಟ್ಟರು ತಮಗೆ ಗೊತ್ತಿರುವ ಅನೇಕ ಸುಲಭ ಸೂತ್ರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಕಠಿಣವೆನ್ನಿಸುವ ಗಣಿತವನ್ನು ಸುಲಭೋಪಾಯದಿಂದ ಕಲಿಸುವ ಪ್ರಯತ್ನ ಮಾಡುತ್ತಿರುವವರು ಶ್ರೀ ರಾಜೇಂದ್ರ ಬಿ. ಶೆಟ್ಟರು. ಗಣಿತವೆಂಬ ಗುಮ್ಮನನ್ನು ಗೆಳೆಯನನ್ನಾಗಿಸುತ್ತಿರುವ ಕೀರ್ತಿ ಅವರದ್ದು. ಹಲವಾರು ವರ್ಷಗಳಿಂದ ಗ್ರಾಮೀಣ ಶಾಲೆಗಳಿಗೆ ತಾವೇ ಸ್ವಯಿಚ್ಛೆಯಿಂದ ಹೋಗಿ ಅಲ್ಲಿನ ವಿದ್ಯಾರ್ಥಿಗಳಿಗೆ ಸರಳವಾದ ಗಣಿತದ ಸೂತ್ರಗಳನ್ನು ವಿವರಿಸಿ, ಲೆಕ್ಕಗಳ ಕುರಿತು ಆ ಪುಟ್ಟ ಮನಸ್ಸುಗಳಲ್ಲಿರಬಹುದಾದ ಆತಂಕ, ನಕಾರಾತ್ಮಕ ಕಲ್ಪನೆಗಳನು ಹೋಗಲಾಡಿಸಿ, ಪರೀಕ್ಷೆಯಲ್ಲಿ ಅವರು ಹೆಚ್ಚು ಅಂಕಗಳನ್ನು ಗಳಿಸುವ ಸುಲಭ ಮಾರ್ಗವನ್ನು ತೋರುತ್ತ, ಸಮಾಜಮುಖಿ ಸುಕೃತದಲ್ಲಿ ನಿರತರಾಗಿದ್ದಾರೆ. ಈ ಪುಸ್ತಕದಲ್ಲಿ ತಾವು ಅಧ್ಯಯನ ಮಾಡಿರುವ ಗಣಿತದ ವಿಚಾರಗಳನ್ನು ಸವಿವರವಾಗಿ ನಿರೂಪಿಸಿ ವಿದ್ಯಾರ್ಥಿವೃಂದಕ್ಕೆ ಮಹದುಪಕಾರವೆಸಗಿದ್ದಾರೆ. ಈ ಪುಸ್ತಕದ ಸಹಾಯದಿಂದ ವಿದ್ಯಾರ್ಥಿಗಳು ಗಣಿತದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳುವಂತಾದರೆ ಶ್ರೀ ರಾಜೇಂದ್ರ ಶೆಟ್ಟರ ಪರಿಶ್ರಮ ಸಾರ್ಥಕವಾದಂತೆ' ಎಂದಿದ್ದಾರೆ.
ಲೇಖಕ ರಾಜೇಂದ್ರ. ಬಿ.ಶೆಟ್ಟಿ ಅವರು ಉಡುಪಿ ಜಿಲ್ಲೆಯ ಹೆಜಮಾಡಿಯವರು. ಸುರತ್ಕಲ್ಲಿನ ಕೆ. ಆರ್. ಈ. ಸಿ. ಯಲ್ಲಿ( ಈಗಿನ ಎನ್ ಐ ಟಿ ಕೆ ) ಇಂಜಿನಿಯರಿಂಗ್ ಪದವೀಧರರು. ಸುಮಾರು ನಲುವತ್ತು ವರ್ಷ ಬೇರೆ ಬೇರೆ ಊರುಗಳಲ್ಲಿ( ಮುಂಬೈ, ಬೆಂಗಳೂರು, ಜಯಪುರ ಮತ್ತು ಅಸನ್ ಗಾಂವ್ )ಕೆಲಸ ಮಾಡಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಶಾಲಾ ದಿನಗಳಲ್ಲಿ ಕಥೆ ಬರೆಯಲು ಆರಂಭಿಸಿದ್ದು,ಕಾಲೇಜು ದಿನಗಳಲ್ಲಿ ಅವು ಮುಂಬೈ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಕೃತಿಗಳು: ' ನನ್ನದೂ ಒಂದಿಷ್ಟು...'( 2018), ' ಕಥನ ಕುತೂಹಲ '(2021) ಪ್ರಕಟಗೊಂಡಿದೆ. ...
READ MORE