`ಶ್ರೀಗಳ ಅರಣ್ಯಕಾಂಡ’ ಕೃತಿಯು ಮೌನೇಶ ಬಡಿಗೇರ ಅವರ ಕಥಾಸಂಕಲನವಾಗಿದೆ. 'ಶ್ರೀಗಳ ಅರಣ್ಯಕಾಂಡ' ಎಂಬುದು ಈ ಸಂಕಲನದ ಕಡೆಯ ಕತೆ, ವರ್ಗ ಮತ್ತು ನಗರ ವಲಯ ಎರಡೂ ಅಂಶಗಳಿಂದ ಹಾಗೂ ಮೇಲಿನ ಬೇರೆಲ್ಲಾ ಕತೆಗಳಿಗಿಂತ ಭಿನ್ನವಾದ ಕತೆ, ಲಕ್ಷಾಂತರ ಅನುಯಾಯಿಗಳನ್ನು ಹೊಂದಿ, ಪ್ರಪಂಚದಾದ್ಯಂತ ತಮ್ಮ ಮಠದ ಶಾಖೆಗಳನ್ನು ಸ್ಥಾಪಿಸಿರುವ ಶ್ರೀಗಳು, ಆಧ್ಯಾತ್ಮಿಕ ಪಂಥವೊಂದರ ಗುರು, ಅವರಿಗೆ ಇದ್ದಕ್ಕಿದ್ದಂತೆ ಒಂದು ದಿನ ಕ್ಯಾನ್ಸರ್ ರೋಗ ತಗುಲಿದ್ದು ಇನ್ನು ಈ ಲೋಕದಲ್ಲಿ ಕೆಲವೇ ದಿನ ತಮ್ಮ ಜಾತ್ರೆ ನಡೆಯುವುದು ಎಂಬ ಅರಿವಾಗುತ್ತದೆ. ತಮ್ಮ ಗೆಳೆಯರಾದ ವೈದ್ಯರೊಬ್ಬರ ಸಲಹೆಯ ಮೇರೆಗೆ ಶ್ರೀಗಳು ತಮ್ಮ ಬಿಡುವಿರದ ಮಠದ ಕೆಲಸ ಕಾರ್ಯಗಳಿಂದ ತಪ್ಪಿಸಿಕೊಂಡು ಕಾಡಿನ ಪ್ರವಾಸಿ ತಾಣವೊಂದಕ್ಕೆ ಬಂದು ಗೌಪ್ಯವಾಗಿ ಉಳಿದುಕೊಳ್ಳುತ್ತಾರೆ. ದಿನನಿತ್ಯದ ಜಂಜಡದಿಂದ ದಿಢೀರ್ ಏರ್ಪಟ್ಟ ಕಾಡಿನ ಏಕಾಂತ ವಾಸದಿಂದ ತಮ್ಮ ದೇಹವನ್ನು ಸಂಪೂರ್ಣವಾಗಿ ಕಂಡುಕೊಳ್ಳುವ ಶ್ರೀಗಳು ತಮ್ಮ ದೈಹಿಕ ತೃಪ್ತಿಯನ್ನೂ, ಐಹಿಕ ಬಿಡುಗಡೆಯ ಭಾವವನ್ನೂ ಪಡೆಯುತ್ತಾರೆ. ಇದೊಂದು ಅಸಾಧಾರಣ ಕತೆಯಾಗಿದ್ದು ಡಿ ಎಚ್ ಲಾರೆನ್ಸ್ ನ ಕಡೆಯ ಕಿರುಕಾದಂಬರಿ 'ದ ಮ್ಯಾನ್ ಹೂ ಡೈಡ್' ಕತೆಯನ್ನು ನೆನಪಿಸುತ್ತದೆ. ಅದರಲ್ಲಿ ಏಸುಕ್ರಿಸ್ತನು ಸಾವಿನಿಂದ ಎಚ್ಚೆತ್ತು ತನ್ನ ದಿವ್ಯಪುರುಷತ್ವದಿಂದ ಬಿಡುಗಡೆ ಹೊಂದಿ ಬದುಕಿನ ಸಾಮಾನ್ಯ ಅವಸ್ಥೆ ಯಲ್ಲಿ ತನ್ನ ತೃಪ್ತಿ ಕಂಡುಕೊಳ್ಳುತ್ತಾನೆ. ಆಳವಾಗಿ ಗಮನಿಸಿದರೆ ಆ ಮೂಲಕ ಅವನು ಸಹಜತೆಯನ್ನು ಪಡೆದು, ರಕ್ತಮಾಂಸದ ಜೀವಂತಿಕೆ ಪಡೆದು, ಒಂದು ಹೂವಿನಂತೆ, ಪಶುವಿನಂತೆ, ಪಕ್ಷಿಯಂತೆ ಜೀವ ತುಂಬಿಕೊಂಡು ಸೂರ್ಯನ, ಭೂಮಿಯ, ಸಾಗರದ, ಈ ಇಡೀ ಜೀವಂತ ವಿಶ್ವದ ಭಾಗವಾಗಿ ರಾರಾಜಿಸುತ್ತಾನೆ. ಈ ಕತೆಯಲ್ಲಿ ಬರುವ ಶ್ರೀಗಳು ಕೂಡ ಅಂಥ ವ್ಯಕ್ತಿಯೇ ಆಗಿರಬಹುದೇನೋ!
ರಂಗನಿರ್ದೇಶಕ, ನಟ ಮೌನೇಶ್ ಬಡಿಗೇರ ಕತೆಗಾರ ಕೂಡ. ’ಮಾಯಾ ಕೋಲಾಹಲ’ ಪ್ರಕಟಿತ ಕತೆಗಳ ಸಂಕಲನ. ಸೂಜಿದಾರ’ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಮೌನೇಶ ಅಭಿನಯ ಕಲಿಕೆಯ ಕಾರ್ಯಾಗಾರ ನಡೆಸುತ್ತಿದ್ದಾರೆ. ʻಮಾಯಾಕೋಲಾಹಲʼ ಸಂಕಲನಕ್ಕೆ 2015ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಟೊಟೊ ಪುರಸ್ಕಾರ', 'ಡಾ. ಯು ಆರ್ ಅನಂತಮೂರ್ತಿ ಪುರಸ್ಕಾರ', `ಬಸವರಾಜ ಕಟ್ಟಿಮನಿ ಪುರಸ್ಕಾರ ಪಡೆದಿದ್ದಾರೆ. “ವಿಶಾಂಕೇ ಅರ್ಥಾತ್ ವಿಧ್ವಂಸಕ ಶಾಂತಿ ಕೇಂದ್ರ' ('ರಂಗಭೂಮಿ' ಉಡುಪಿ ನಡೆಸಿದ 'ಡಾ. ಹೆಚ್. ಶಾಂತಾರಾಮ್ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ ಪಡೆದ ಕೃತಿ) ಹಾಗೂ 'ಟಪಾಲುಮನಿ'(ರವೀಂದ್ರನಾಥ ಠಾಕೂರರ ಡಾಕ್‌ಘರ್ ...
READ MORE