ಲೇಖಕಿ ಗೀತಾ ಕುಂದಾಪುರ ಅವರ ಕತಾಸಂಕಲನ ಒಂಟಿ ಪಯಣಿಗರು. ಲೇಖಕಿ ತೇಜಸ್ವಿನಿ ಹೆಗಡೆ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಹೆಣ್ಣಿನ ವಿವಿಧ ಭಾವನೆಗಳನ್ನು ಭಿನ್ನ ಆಯಾಮಗಳಲ್ಲಿ ಅವರು ತೆರೆದಿಡುವ ಪ್ರಯತ್ನವನ್ನಿಲ್ಲಿ ಮತ್ತಷ್ಟು ಆಪ್ತವಾಗಿ ಮಾಡಿರುವುದು ಕಂಡುಬರುತ್ತದೆ. ಚಂದವಾಗಿ ನೇಯ್ದ ಹದಿನೆಂಟು ಕಥೆಗಳನ್ನು ಪ್ರಸ್ತುತ ಕಥಾಸಂಕಲನದಲ್ಲಿ ನಾವು ಕಾಣಬಹುದು. ಈ ಕಥೆಗಳಲ್ಲಿ ಬರುವ ಸ್ತ್ರೀ ಪಾತ್ರಗಳು ಕೇವಲ ಅಸಹಾಯಕರಲ್ಲ, ಶೋಕದಲ್ಲೇ ತಪ್ತಳಾಗಿರುವವರೂ ಅಲ್ಲ. ತಮ್ಮ ನೋವು, ಹತಾಶೆ, ಸಂಕಟ, ಒದ್ದಾಟ, ಗೊಂದಲ -ಇವೆಲ್ಲವನ್ನೂ ಮೀರಿ ಹೊಸ ಬದುಕನ್ನು ರೂಪಿಸಿಕೊಳ್ಳಲು ತುಡಿಯುವಂಥ ಪಾತ್ರಗಳು. ಇಲ್ಲಿಯ ಬಹುತೇಕ ಕಥೆಗಳ ಕೇಂದ್ರಬಿಂದು ಹೆಣ್ಣೇ. ಆದರೆ ಆಕೆಯನ್ನು ಅನಾವರಣಗೊಳಿಸುವ ಚೌಕಟ್ಟು ಭಿನ್ನವಾಗಿವೆ. ಆಕೆಯ ಮನೋವಲಯಗಳಲ್ಲಾಗುವ ಸಂಕರ‍್ಣ ಏರುಪೇರುಗಳನ್ನು ಬಿತ್ತರಿಸುವ ಪ್ರಯತ್ನ ಗಮನ ಸೆಳೆಯುತ್ತದೆ. ಈ ಸಂಕಲನದಲ್ಲಿ ಕೊರೊನಾ ಕಾಲಘಟ್ಟದಲ್ಲಿ ರಚಿಸಲ್ಪಟ್ಟ ಹಲವು ಕಥೆಗಳನ್ನು ನಾವು ಕಾಣುತ್ತೇವೆ ಎಂಬುದಾಗಿ ಹೇಳಿದ್ದಾರೆ.
ಬರಹಗಾರ್ತಿ ಗೀತಾ ಕುಂದಾಪುರ ಅವರು ಜನಿಸಿದ್ದು 1967 ಜೂನ್ 23ರಂದು ಎಂಕಾಂ ಪದವಿ ಪಡೆದಿರುವ ಇವರು ವಿದೇಶಗಳಲ್ಲಿ ಪ್ಲಾನರ್ ಮತ್ತು ಪ್ರಾಜೆಕ್ಟ್ ಕಂಟ್ರೋಲರ್ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಕಾಲೇಜು ದಿನಗಳಿಂದಲೇ ಸಾಹಿತ್ಯಾಸಕ್ತರಾಗಿದ್ದ ಇವರು ವಿವಿಧ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಿಗೆ ಲೇಖನ ಕತೆಗಳನ್ನು ಬರೆಯುವ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದರು. ಇವರು ಬರೆದ ಸಣ್ಣ ಕತೆಗಳು ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿದ್ದು ‘ಅಪ್ರಮೇಯ’ ಶೀರ್ಷಿಕೆಯಡಿ ಪುಸ್ತಕವಾಗಿ ಪ್ರಕಟಗೊಂಡಿದೆ. ಇವರ ಇನ್ನೊಂದು ಕೃತಿ ದ್ವೀಪಗಳತ್ತ ಯಾನ - ಜಪಾನ್ ಮತ್ತು ಆಸ್ಟ್ರೇಲಿಯಾ ಪ್ರವಾಸ ಕಥನ. ...
READ MORE