ಹಳವಂಡ

Author : ರಾಜು ಹೆಗಡೆ



Published by: ರಜತ ಸಾಹಿತ್ಯ

Synopsys

‘ಹಳವಂಡ’ ಕೃತಿಯು ರಾಜು ಹೆಗಡೆ ಅವರ ಕಥಾಸಂಕಲನವಾಗಿದೆ. ಎಕ್ಸ್‌ಟ್ರಾ ಮೆರಿಟಲ್ ರಿಲೇಶನ್ನಿನ ರೊಮಾಂಟಿಕ್ ಪ್ರೆಸೆಂಟೇಶನ್ ಮಾಡುವ ‘ವಿಪ್ರಲಂಭ’, ಮಹಾಬಲ ಹೆಗಡೆ ಮತ್ತು ಶಂಭು ಭಟ್ಟರ ಜಿದ್ದಾಜಿದ್ದಿ, ಅದಕ್ಕಿರುವ ಒಂದು ಕೊಲೆ ಪ್ರಸಂಗದ ಹಿನ್ನೆಲೆ, ಟುವಾಲು ಇಟ್ಟು ಹೋದವರ ಜಗಳದ ಪ್ರಸಂಗ ಎಲ್ಲ ಬರುವ ‘ಕುರುರಾಯ ಇದನೆಲ್ಲ ಕಂಡು’, ದೈನಂದಿನದ ನಡುವೆ ಬೆಳೆಯುವ ಮನೆಗೆಲಸದ ಕಲಾವತಿಯ ಕತೆ, ಅವಳ ತಂದೆಯ ಸಾವು, ಮನೆಯಲ್ಲಿನ ಹಳೆಯ ಪ್ರಿಜ್ಜಿನ ವಿಲೇವಾರಿ ಪ್ರಸಂಗ ಇರುವ ‘ಫ್ರಿಜ್ಜು’, ಈಗಾಗಲೇ ವಿವರಿಸಿರುವ ‘ಚಾವಿ’, ನಾರಾಯಣ ಮತ್ತು ರವಿ - ಇಬ್ಬರ ಸ್ನೇಹ, ನಾರಾಯಣ ಅವರ ಕಾಯಿಲೆ, ಅದರ ಸುತ್ತಣ ಗುಟ್ಟು ಇತ್ಯಾದಿ ಬರುವ ‘ಲೌಕಿಕ’, ವಿಪ್ರಲಂಭ ಕತೆಯ ಇನ್ನೊಂದು ಅಧ್ಯಾಯದಂತೆ ಕಾಣಿಸುವ ‘ಪಾರಿಜಾತದ ಗೀರು’, ನುಡಿಚಿತ್ರಗಳೋ, ಪುಟ್ಟ ಪುಟ್ಟ ಪ್ರಸಂಗಗಳೋ ಎಂಬಂತಿರುವ ‘ಲಾಸ್ಟ್ ಪೆಗ್ಗು’, ‘ಎಮ್ಮೆ ಕಳೆದಿದೆ’, ‘ತೇಲುವ ಊರು’ ಮುಂತಾದ ಕಥನಗಳೇ ನಮಗೆ ಒಂದು ನೆಲದ ಜನ, ಪರಿಸರ, ಸಂಸ್ಕಾರ, ನಡವಳಿಕೆ ಇತ್ಯಾದಿಗಳೊಂದಿಗೆ ಹೆಚ್ಚು ಜೀವಂತವಾದ ಕಥಾಜಗತ್ತನ್ನು ಕಟ್ಟಿಕೊಡುತ್ತಿರುವುದು. ರಾಜು ಹೆಗಡೆಯವರ ‘ಹಳವಂಡ’ ಸಂಕಲನದಲ್ಲಿ ಕೂಡ ನಾವು ಕಾಣುವುದು ಇಂಥವೇ ಬರಹಗಳನ್ನು ಅಥವಾ ಕತೆಗಳನ್ನು. ಇವು ನುಡಿಚಿತ್ರದ ಚೌಕಟ್ಟನ್ನು ಮೀರಿವೆ ಮತ್ತು ಶಿಷ್ಟಪ್ರಕಾರದ ಕತೆಗಳಾಗುವ ಮಹತ್ವಾಕಾಂಕ್ಷೆಯನ್ನೂ ತೊರೆದಿವೆ. ಪ್ರಕಾರದ ಹಂಗಿಲ್ಲದ ಈ ಕಥನಗಳನ್ನು ಬರೇ ಓದುವ ಖುಶಿಗಾಗಿ ಓದಬಹುದೆನ್ನುವುದೇ ಇವುಗಳ ಹೆಚ್ಚುಗಾರಿಕೆ. ‘ವಿಪ್ರಲಂಭ’ ಮತ್ತು ‘ಪಾರಿಜಾತದ ಗೀರು’ ಎರಡೂ ಕತೆಗಳು ‘ಅಪ್ಪಚ್ಚಿ’ ಸಂಕಲನದಲ್ಲಿಯೇ ಬರುವ ‘ಅವನು’ ಕತೆಯ ನೆಲೆಯಲ್ಲೇ ಸಾಗುತ್ತ ಆತ್ಮರತ ವಿಹಾರದಲ್ಲಿ ಹೆಚ್ಚು ಒಲವು ತೋರುತ್ತಿದೆ ಎನ್ನುವುದು ನಿಜವಾದರೂ ಇವು ಒಪ್ಪಿಕೊಳ್ಳುವ ಮನುಷ್ಯನ ದೌರ್ಬಲ್ಯ ಕೂಡ ಶಿಷ್ಟ ಜಗತ್ತು ಸದಾ ಅಡಗಿಸಿಡಲು, ನಾಗರಿಕ ಸೋಗಿನಲ್ಲಿ ಮರೆಮಾಚಲು ಬಯಸಿದ್ದು ಎನ್ನುವ ಕಾರಣಕ್ಕಾಗಿ ಇಲ್ಲಿ ಇರಬೇಕು ಅನಿಸುತ್ತದೆ. ಹೀಗೆ ಇಲ್ಲಿ ಪಾರಂಪರಿಕವಾದ ಬಗೆಯ ಕಥೆಗಳಿಲ್ಲ. ಹಾಗಾಗಿ ಈ ಕತೆಗಳ ಆಶಯ, ಸಾಮಾಜಿಕ-ತಾತ್ವಿಕ ಆಯಾಮ, ವಸ್ತುವಿನ ಸಮಕಾಲೀನತೆ ಹಾಗಿರಲಿ, ಮುಖ್ಯ ಮುದ್ದೆಯಾದ ವಸ್ತುವೇ ಐಡೆಂಟಿಫೈಯಬಲ್ ಮಾನದಂಡಗಳಿಗೆ ಸಿಕ್ಕಿಕೊಳ್ಳದ ಹಾಗಿವೆ. 

About the Author

ರಾಜು ಹೆಗಡೆ
(17 July 1964)

ರಾಜು ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಾಗೋಡು ಗ್ರಾಮದವರು. 1964 ರ ಜುಲೈ  17ರಂದು ಜನಿಸಿದರು.  ಶಿರಸಿಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿರುವ ರಾಜು ಹೆಗಡೆ, ಮನುಷ್ಯ ಸಂಬಂಧಗಳ ಬದಲಾಗುವ ಭಾವಗಳನ್ನು ಕುರಿತು ಕಥೆ ಕವನ ಬರೆಯುವುದರಲ್ಲಿ ವಿಶೇಷ ಆಸಕ್ತಿ ವಹಿಸುತ್ತಾರೆ. ಪ್ರಕಟಿತ ಕೃತಿಗಳು- ಪಾಯಸದ ಗಿಡ, ಅಂಗಳದಲ್ಲಿ ಆಕಾಶ, ಟೊಂಗೆಯಲ್ಲಿ ಸಿಕ್ಕ ನಕ್ಷತ್ರ (ಕವನ ಸಂಕಲನಗಳು), ಅಪ್ಪಚ್ಚಿ (ಕಥಾ ಸಂಕಲನ), ಹಳವಂಡ (ಲಘು ಬರಹಗಳ ಸಂಕಲನ), ಗಿರೀಶ್ ಕಾರ್ನಾಡರ ಸಮಗ್ರ ನಾಟಕಗಳ ಸಮೀಕ್ಷೆ (ವಿಮರ್ಶೆ), ಜಿ.ಎಸ್. ಅವಧಾನಿ ಕವಿತೆಗಳು (ಸಂಪಾದನೆ).   ...

READ MORE

Related Books