ಛೂಮಂತ್ರಯ್ಯನ ಕಥೆಗಳು

Author : ಕೃಷ್ಣಮೂರ್ತಿ ಬಿಳಿಗೆರೆ

Pages 116

₹ 140.00




Year of Publication: 2021
Published by: ಬಹುರೂಪಿ ಪ್ರಕಾಶನ
Address: # 11- ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ., ಕುಮಾರಪಾರ್ಕ್ ಪೂರ್ವ, ಬೆಂಗಳೂರು-560001
Phone: 07019182729

Synopsys

ಲೇಖಕ ಕೃಷ್ಣಮೂರ್ತಿ ಬಿಳಿಗೆರೆ ಅವರ ಕಥೆಗಳ ಸಂಕಲನ-ಛೂಮಂತ್ರಯ್ಯನ ಕಥೆಗಳು. ಕೃಷಿಲೋಕದ ವೈಚಿತ್ಯ್ರಗಳನ್ನು, ವಿಸ್ಮಯಗಳನ್ನು, ಕುತೂಹಲಗಳನ್ನು, ವೈರುದ್ಧ್ಯಗಳನ್ನು ಕಥೆಗಳ ಮೂಲಕ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಜ್ಞಾನದ ಕಣಜಗಳು ಎಂಬಂತೆ ನೀಡಿದ್ದಾರೆ. ಕೃಷಿಯಲ್ಲಿಯ ಬದುಕಿನ ಪಾಠಗಳು, ನೀತಿ-ಬೋಧೆಗಳು, ಜೀವ ಸಂಕುಲಗಳ ಬದುಕು, ಕೃಷಿ ಯೋಜನೆಗಳು ಅವುಗಳ ವೈಫಲ್ಯ, ಅದಕ್ಕಿರುವ ಕಾರಣಗಳನ್ನು, ಪರಿಣಾಮಗಳ ಮುನ್ನೋಟವನ್ನು ಕಥೆಯ ಮೂಲಕವೇ ವಿಶ್ಲೇಷಿಸಿ ಮನದಟ್ಟು ಮಾಡಿಕೊಡುವುದು ಇಲ್ಲಿಯ ಬಹುತೇಕ ಕಥೆಗಳ ವೈಶಿಷ್ಟ್ಯ.

About the Author

ಕೃಷ್ಣಮೂರ್ತಿ ಬಿಳಿಗೆರೆ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿರುವ ಕೃಷ್ಣಮೂರ್ತಿ ಬಿಳಿಗೆರೆ ಅವರು ಕೃಷಿ ಚರಿತ್ರೆಯ ಅನುಶೋಧನೆಯಲ್ಲಿ ತೊಡಗಿದ್ದಾರೆ. ಸಾವಯವ ಕೃಷಿ ಮತ್ತು ಮಳೆನೀರಿನ ಚಳುವಳಿಯಲ್ಲಿ ಸಕ್ರಿಯವಾಗಿರುವ ಬಿಳಿಗೆರೆಗೆ ತತ್ವಪದ ಮತ್ತು ಕೃಷಿಗಳನ್ನು ಹಾಡುವ ರೂಢಿಯಿದೆ. ಕಣ್ಮುಚ್ಚಾಲೆ ಮಕ್ಕಳ ಗುಂಪು, ನಮ್ಮ ಪ್ರಕಾಶನ ಮತ್ತು ಸಿರಿಸಮೃದ್ಧಿ ಬಳಗ ಮುಂತಾದ ಸಂಘಟನೆಗಳಲ್ಲಿ ಅವರು ಸಕ್ರಿಯರಾಗಿದ್ದಾರೆ. ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ ಇವು ಇವರ ಕಾವ್ಯ ಕೃತಿಗಳು. ಜೀರಿಂಬೆ ಹಾಡು, ಗುಡು ಗುಡು ಗುಡ್ಡ, ಪದ್ಯದ ...

READ MORE

Excerpt / E-Books

‘ಛೂಮಂತ್ರಯ್ಯನ ಕತೆಗಳು’ ಕೃತಿಯ ವಿಮರ್ಶೆ

ಇದೊಂದು ಅಪ್ಪಟ ಜೀವನ ಪ್ರೀತಿ ಜೀವ ಪ್ರೀತಿಯ ಕಥನ. ಅಂತೆಯೇ ಅಪ್ಪಟ ದೇಸೀ ಮನಸೊಂದರ ದೇಸಿ ಜ್ಞಾನದ ಹೂರಣ. ಮಣ್ಣ ಕಣ್ಣೊಳಗೆ ಅನಾವರಣಗೊಳ್ಳುವ ಇಲ್ಲಿನ ಜೀವ ಪ್ರೀತಿಯ ತೊರೆಯೊಳಗೆ, ಗಿಡ, ಮರ, ಪ್ರಾಣಿ, ಪಕ್ಷಿಗಳು ಮಿಂದೆಳುತ್ತವೆ. ಇಲ್ಲಿನ ಈ ಲೋಕ ಪ್ರಕೃತಿ ಪರವೂ ಜನ ಪರವೂ ಆಗಿದ್ದು ಇದರ ಆಶಯಗಳು ಅಜ್ಞಾನ ಹಾಗೂ ಕೇಡಿ ಮನಸ್ಸುಗಳಿಗೆ ಹೇಳಿದ ಬುದ್ದಿವಾದದಂತೆಯೂ, ಮದ್ದಿನಂತೆಯೂ ಕಾಣುತ್ತವೆ. ಇಲ್ಲಿ ವಾಸ್ತವ ಪ್ಯಾಟಸಿಯಂತೆಯೂ, ಪ್ಯಾಂಟಿಸಿ ವಾಸ್ತವದಂತೆಯೂ ಒಂದರೊಳಗೊಂದು ಥಳುಕು ಹಾಕಿಕೊಂಡು ಒಂದಕ್ಕಕೊಂದು ಪೂರಕವಾಗಿ ಒದಗಿ ಬಂದು ಈ ಕಥನದ ಆಶಯಗಳನ್ನು ಸೊಗಸಾಗಿ ಕಟ್ಟಿಕೊಟ್ಟಿವೆ. 

ಇಂಥದೊಂದು ಬದುಕನ್ನು ಸಾಧ್ಯವಾಗಿಸಿಕೊಂಡ ಛೂಂತ್ರಯ್ಯನ ನಾವು ಅಂದುಕೊಂಡಂತೆ ಮಾಟ ಮಂತ್ರ ಮಾಡುವವನಲ್ಲ. ಇವನು ಹಾಕುವ ಮಂತ್ರ ಆಕಾಶದಿಂದ ಉದುರುವುದಿಲ್ಲ. ಅಂತೆಯೇ ಅಗೋಚರವಾಗುದಲ್ಲ. ಬದಲಿಗೆ ತನ್ನ ಸಾಮಾನ್ಯ ತಿಳುವಳಿಕೆಯಿಂದ  ಆಗಾಧ ಜೀವನ ಪ್ರೀತಿಯಿಂದ ಪ್ರಕೃತಿಯೊಳಗೆ ಒಂದಾಗಿ ಕಂಡುಕೊಂಡಿರುವ ಒಂದು ದಾರಿ. ಇದನ್ನು ಸಾಧ್ಯವಾಗಿಸಿಕೊಂಡ ಛೂಮಂತ್ರಯ್ಯ ಒಬ್ಬ ನಿಜದ ಜ್ಞಾನಿ. ಇಲ್ಲಿ ಸಾಂಪ್ರದಾಯಿಕ ಓದಿನ ಮಿತಿ ಜೀವನಾನುಭವದ ಮೂಸೆಯ ಎದುರು ಎದುಸಿರು ಬಿಡುತ್ತದೆ. ತನ್ನ ಸುತ್ತಲ ಮಣ್ಣು, ಜೀವ ಜಂತುಗಳಿಂದ ಹಿಡಿದು ಪ್ರಾಣಿ ಪಕ್ಷಿಗಳಿಗೆಲ್ಲಾ ವಿಷವಿಕ್ಕುತ್ತಿರುವ ಆಧುನಿಕ ಕೃಷಿಯ ಕೇಡಿನ ಎದುರು ಛೂಮಂತ್ರಯ್ಯ ಮತ್ತವನ ತೋಟ ಆ ವಿಷವನ್ನು ಇಷ್ಟಿಷ್ಟೇ ತಣಿಸುತ್ತಾ ಕಡೆಗೆ ಪೂರಾ ತೊಲಗಿಸಿ ಲಕಲಕಿಸುತ್ತಿರುವುದರಿಂದಲೇ ನೋಡಿದವರಿಗೆ ಇದೊಂದು ಪವಾಡದಂತೆ ಕಂಡರೆ ಅಚ್ಚರಿ ಏನಲ್ಲ.

ಯಾರೇ ಆಗಲಿ ಒಂಚೂರು ಮನಸ್ಸು ಮಾಡಿದರೆ ಇಂತಹದ್ದೊಂದು ಅದ್ಭುತವನ್ನು ತಾನೂ ಮಾಡಿ ತೋರಿಸಬಹುದು ಅನ್ನುವುದು ಇಲ್ಲಿನ ಕಥನದ ಮೂಲ ಧಾತುವಾಗಿದೆ. ಅದನ್ನು ಸಾಕಾರ ,ಮಾಡಿಕೊಳ್ಳಲು ಯಾವ ಮಂತ್ರ ತಂತ್ರಗಳನ್ನು ಕಲಿಯಬೇಕಿಲ್ಲ. ಎಲ್ಲೋ ಕುಳಿತು ತಪಸ್ಸು ಮಾಡಬೇಕಿಲ್ಲ. ವಿಶ್ವವಿದ್ಯಾನಿಲಯಗಳಿಗೆ ಹೋಗಿ ಕಲಿಯಬೇಕಿಲ್ಲ. ಇದಕ್ಕೆ ಬೇಕಿರುವುದು ಒಂದು ಸಣ್ಣ ತಿಳುವಳಿಕೆ ಹಾಗೂ ಸಂಯಮ ಎಂಬುದನ್ನು ಈ ಇಡೀ ಕಥಾನಕದಲ್ಲಿ ಛೂಮಂತ್ರಯ್ಯನ ಬದುಕು ಮತ್ತವನ ಕ್ರಿಯೆ ಸಾಕ್ಷೀಕರಿಸುತ್ತದೆ. ಇಲ್ಲಿ ತಾನೂ ಬದುಕಿ ತನ್ನಂತೆಯೇ ಜೀವಿಗಳನ್ನು ಬದುಕಗೂಡಬೇಕು ಅನ್ನುವ ಜೀವಪರ ಆಶಯದಿಂದ ಏನೆಲ್ಲಾ ಆಗಬಲ್ಲದು ಅನ್ನುವುದನ್ನು ಅರಿವಿಗೆ ತರುತ್ತಾನೆ. ಇಲ್ಲಿನ ಛೂಮಂತ್ರಯ್ಯನ ಇಂತಹ ಸಾಧ್ಯತೆಯೇ ಅವನನ್ನು ‘ಹೊರಗಿನಿಂದ’ ನೋಡಿದವರಿಗೆ ಮಂತ್ರವಾದಿಯಂತೆ ಭಾಸವಾಗುವಂತೆ ಮಾಡಿದೆ. ಆದರೆ ಇದದರೊಳ್ಳಕಿದವರಿಗೆ ನಮ್ಮ ತಾತ ಮುತ್ತಾತಂದಿರ ಕಾಲದಿಂದ ಹರಿದು ಬಂದ ಬಲು ದೊಡ್ಡ ತಿಳುವಳಿಕೆಯ ವಾರಸುದಾರನಂತೆ ಕಾಣುತ್ತಾನೆ. ಹಾಗಾಗಿ ಯಾರು ಬೇಕಾದರೂ ಛೂಮಂತ್ರಯ್ಯನ ಆಗಬಹುದು. ಇದಕ್ಕಾಗಿ ತಯಾರುಗೊಳ್ಳುವ ಮಸ್ಸುಗಳೊಳಗೆ, ಆಮನಸ್ಸುಗಳು ತಮ್ಮೊಳಗಿನ ತಕರಾರುಗಳನ್ನು ಸಾವಧಾನದಿಂದ ನಿವಾರಿಸಿಕೊಂಡರೆ, ತಮ್ಮ ಸಾಂಪ್ರದಾಯಿಕ ಮನೋಸ್ಥಿತಿಯಿಂದ ಬಿಡಿಸಿಕೊಂಡರೆ, ಊರಿಗೆ ಒಬ್ಬೊಬ್ಬ ಛೂಮಂತ್ರಯ್ಯ ಸಿಕ್ಕುತ್ತಾರೆ.

ಈ ಕಥನ ಸರಕಾರಿ ಕೃಷಿ ಇಲಾಖೆಗಳು ಯಂತ್ರಾಧಾರಿತ ಕೃಷಿ ಹಾಗು ಮನುಕುಲದ ಮೇಲೆ ಅದರಿಂದಾಗುತ್ತಿರುವ ಅನಾಹುತಗಳನ್ನು ಮೆಟ್ಟಿ ಅದರಾಚೆಗೆ ರೈತನ ಮೊಗದಲ್ಲಿ ನಲಿವುಕ್ಕಿಸಬಲ್ಲ ದಾರ್ಶನಿಕ ಮಾದರಿಯ ದಾರಿ. ಅದೇ ರೀತಿ ಈ ದಾರಿಯಲ್ಲಿ ನಡೆದಂತೆ ಸಾಂಪ್ರದಾಯಕ ವಿದ್ಯೆಯ ಮಿತಿ ಹಾಗೂ ಕೃತಕತೆಗಳು ಅನಾವರಣಗೊಳ್ಳುತ್ತವೆ. ಇಲ್ಲಿ ಮರ ಗಿಡಗಳು ಪ್ರಾಣಿ ಪಕ್ಷಿಗಳು ಮಾತಾಡುತ್ತವೆ. ಗುಟ್ಟು ಹೇಳುತ್ತವೆ. ಇಲ್ಲಿ ಛೂಮಂತ್ರಯ್ಯನಿಗೆ ಕನಸುಗಳು ಬೀಳುತ್ತವೆ. ಆ ಕನಸುಗಳೊಳಗೆ ರಾಜೇಂದ್ರ ಸಿಂಗ್ , ಪುಕುವೋಕಾರು ಬಮದು ಕತೆಗಳನ್ನು ಹೇಳುತ್ತಾರೆ. ‘ನೀರು ನೀರಲ್ಲ, ನೆಲದ ರಕ್ತ. ಅದು ಭೂಮಿಯೊಳಗೇ ಇರಬೇಕು. ಅದು ಭೂಮಿಗೆ ಬೇಕು, ‘ಹಳ್ಳುಗಳುಳಿದರೆ ಜೀವ ಉಳಿದೀತು’, ‘ಕೃಷಿ ಮನುಷ್ಯರು ಮಾಡುವುದು ಅಲ್ಲವೇ ಅಲ್ಲ. ಅದನ್ನು ಪ್ರಕೃತಿಯೇ ಮಾಡುತ್ತದೆ’ ಅನ್ನುವ ತಿಳುವಳಿಕೆಯ ಮಾತನಾಡುತ್ತಾರೆ. ಹೀಗೆ ಮನಸಿಗಿಳಿಯುವ ಹೊಸ ಪರಿ ಆಲೋಚನೆಗೆ ತೊಡಗಿಸುವ ಇವುಗಳನ್ನು ಕೇವಲ ಕಥೆಗಳು ಎಂದು ಓದು, ನೋಡಿ. ಕೇಳಿ ಆನಂದಿಸಿದರೆ  ಸಾಲದು. ಎಲ್ಲಾ ಕರಷಿ ಮನಸ್ಸುಗಳು ಎದೆಗಿಳಿಸಿಕೊಳ್ಳಬೇಕು. ಆ ಮೂಲಕ ತಡವಾಗಿಯಾದರೂ ತಾವೇ ತಂದುಕೊಂಡಿರುವ ಕೆಲವು ಸಂಕಷ್ಟಗಳನ್ನು ನೀಗಿಸಿಕೊಳ್ಳಬಹುದು. ಆ ದಿಕ್ಕಿನತ್ತ ಮನಸ್ಸು ಮಾಡಿದರೆ ಇಲ್ಲಿನ ಈ ನಿಷ್ಕಲ್ಮಶ ಪ್ರೀತಿಯ ಲೋಕವನ್ನೂ ಗೌರವಿಸಿದಂತೆಯೂ  ಆಗುತ್ತದೆ.  ಒಮದು ಅರ್ಥದಲ್ಲಿ ಇದು ಛೂಮಂತ್ರಯ್ಯನ ಕೃಷಿ ಸಂವಿಧಾನ, ಕಂಡಿಲ್ಲದ ಬದುಕಿನ ಕ್ರಮ. ದುರಾಸೆಯ, ಸ್ವಾರ್ಥಗಳಾಚೆಯ ಸಮಭ್ರಮ, ಆದರೆ ಈ ಸಂವಿಧಾನದಲ್ಲಿ ಹಕ್ಕುಗಳಿಗಿಂತ ಕರ್ತವ್ಯಗಳೇ ಮೇಲುಗೈಯಾಗಿದೆ.

ಹೀಗೆ ಇಂತಹ ಕಥೆಗಳನ್ನು ಕಟ್ಟಿಕೊಟ್ಟಿರುವ ಕೃಷ್ಣಮೂರ್ತಿ ಬಿಳಿಗೆರೆಗೆ ಈ ಲೋಕ ಅಷ್ಟು ಸುಲಭಕ್ಕೆ ದಕ್ಕಿದ್ದಲ್ಲ. ಮೇಲಕು ನೋಟಕ್ಕೆ ದಕ್ಕುವುದೂ ಸಾಧ್ಯವಿಲ್ಲ. ಏಕೆಂದರೆ ಇಂತಹದ್ದೊಂದು ಬದುಕಿಗೆ ಒಡ್ಡಿಕೊಳ್ಳುವ ಮೊದಲಿಗೆ ಸಂಪ್ರದಾಯವನ್ನು ,ಮುರಿಯುವ ಧೈರ್ಯವಿರಬೇಕು. ಜೊತೆಗೆ ಹೊಸದರ ಬಗ್ಗೆ ನಂಬಿಕೆ ಹಾಗೂ ಅಪಾರ ಕಾಳಜಿಯೂ ಇರಬೇಕು.

ಇವೆಲ್ಲಾ ಪಕ್ಕಾ ಅನುಭವ ಜನ್ಯ ಕಥೆಗಳಾಗಿವೆ. ತಾಳ್ಮೆ ಅದಕ್ಕೆ ಉಸಿರಾಗಿದೆ. ಹಂಚಿ ತಿನ್ನುವ, ಕೂಡಿ ಬಾಳುಬ ಬದುಕಿಗೆ ಮಾದರಿಯಾಗಿವೆ. ಹಾಗಾಗಿ, ಇಲ್ಲಿನ ಒಂದೊಂದು ಕತೆಯಲ್ಲೂ ಒಂದೊಂದು ತೆರನಾದ ಜೀವ ವೈವಿಧ್ಯವನ್ನೂ ಜೀವಪರ ತುಡಿತವನ್ನೂ ಕಾಣುತ್ತೇವೆ. ಇಂತಹದ್ದೊಂದು ಕೃಷಿ ಬದುಕಿಗೆ ಮುಖಾಮುಖಿಯಾಗುವುದರ ಮೂಲಕ ಹಸನಾದ ಅಂತೆಯೇ ಖಷಿಯಾದ ಬುದುಕಿನ ಸಾಧ್ಯೆಯನ್ನು ಮಾಡಿ ತೋರಿಸಿದ್ದಾರೆ ಲೇಖಕ.   

(ಕೃಪೆ : ವಾರ್ತಾಭಾರತಿ, ಬರಹ : ಎಸ್ ಗಂಗಾಧರಯ್ಯ)

---

Related Books