ವಿಕಾಸ್ ನೇಗಿಲೋಣಿ ಅವರ ಕಥಾ ಸಂಕಲನ ಬಸವರಾಜ ವಿಳಾಸ. ತೀರ್ಥಹಳ್ಳಿಯ ಕಾಡಿನ ನಿಗೂಢ ಮೌನ ಮತ್ತು ನೀರಿನ ತಿಳಿಯಾದ ಸಪ್ಪಳ, ಒಂಟಿ ಮನೆಗಳ ಏಕಾಂತದ ನಿಟ್ಟುಸಿರು, ಕಿರುದಾರಿಗಳಲ್ಲಿ ಎದುರಾಗುವ ದಾರಿಹೋಕರ ಮುಗುಳ್ನಗು, ಶಿರಸಿಯ ಜಾತ್ರೆಯ ದಿಗಿಲುಕ್ಕಿಸುವ ರಾಟವಾಳಗಳೆಲ್ಲ ವಿಕಾಸ್ ಅವರ ಕತೆಗಳಲ್ಲಿ ಎದುರಾಗುತ್ತವೆ. ಅವಳು ನಲ್ಲನ ಹಿಂದೆ ಹೋದಳೇ ಗಂಡನ ಜೊತೆಗೇ ಉಳಿದಳೇ, ಮಗಳು ತಂದ ಕಪ್ಪು ಮಾಳ ಬೆಕ್ಕಿನ ಕಣ್ಣು ಹಲ್ಲುಗಳು ತಂದೆಗೆ ಮಾತ್ರ ಕ್ರೂರವಾಗಿ ಕಾಣಿಸುವುದೇಕೆ, ಬಾಗಿಲ್ತಾಯರು ನೀರಿನಲ್ಲಿ ತೇಲಿ ಹೋಗುವುದಕ್ಕೂ ಮಂಗನ ಕಾಟಕ್ಕೂ ಏನು ಸಂಬಂಧ, ನಡುಗಡ್ಡೆಯಲ್ಲಿರುವ ಒಂಟಿ ಜೀವಗಳ ಮನೆಯ ಬಾಗಿಲನ್ನು ರಾತ್ರಿ ನಿಜಕ್ಕೂ ಹುಲಿ ಪರಚಿತೇ, ಬಸವರಾಜ ಹುಡುಕುತ್ತಿದ್ದ ಹುಡುಗಿ ಆ ಮನೆಯಲ್ಲಿದ್ದಳೇ, ಕತೆಯ ಪಾತ್ರವೇ ಬಂದು ಕತೆಯನ್ನು ಬದಲಿಸು ಎಂದು ಕದ ತಟ್ಟಿತೇ, ಸಾಯುವ ಮುನ್ನ ಚಿದಂಬರನಿಗೆ ಅವಳು ಬರೆ ಹಾಕಿದ್ದೇಕೆ- ಇಂಥ ಪ್ರಶ್ನೆಗಳು ವಿಕಾಸರ ಇನ್ನೊಂದು ಕತೆ ಓದುವಂತೆ ನಮ್ಮನ್ನು ಕೈ ಹಿಡಿದು ಜಗ್ಗುತ್ತವೆ.
’ಈ ಕತೆಗಳನ್ನು ಹೇಳದೆ ಬಿಡುಗಡೆಯೇ ಇಲ್ಲ ಎಂಬಂತೆ ತೀವ್ರವಾಗಿ ವಿಕಾಸ್ ಬರೆದಿದ್ದಾರೆ. ಜೀವನವೆಂಬುದು ಒಮ್ಮೆ ಉರುಳಲು ಶುರುವಾದರೆ ನಿಲ್ಲಿಸಲು ಸಾಧ್ಯವಾಗದ ದೈತ್ಯ ಚಕ್ರ. ವಿಕಾಸರ ಕತೆಗಳು ಈ ಗಾಲಿಯ ಅಂಚಿನಿಂದ ಫಕ್ಕನೆ ಹಾರಿದ ಚಿಟ್ಟೆ ಎಂದು ಬೆನ್ನುಡಿಯಲ್ಲಿ ಹರೀಶ್ ಕೇರ ವಿಕಾಸ್ ಅವರ ಕತೆಗಳ ಬಗ್ಗೆ ವಿವರಿಸಿದ್ದಾರೆ.
ವಿಕಾಸ ನೇಗಿಲೋಣಿ, ಹುಟ್ಟಿದ್ದು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ನೇಗಿಲೋಣಿಯಲ್ಲಿ. ಊರಲ್ಲೇ ಪ್ರಾಥಮಿಕ ಶಿಕ್ಷಣ, ಉಡುಪಿಯಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿದರು. ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ವ್ಯಾಸಂಗ ಪೂರ್ಣಗೊಳಿಸಿದರು. ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತರಾಗಿ, ಅನಂತರ ವಿಜಯ ಕರ್ನಾಟಕ, ಉದಯವಾಣಿ, ಕನ್ನಡ ಪ್ರಭ, ಸುವರ್ಣ ನ್ಯೂಸ್, ಸಖಿ ನಿಯತಕಾಲಿಕೆಗಳಲ್ಲಿ ಸುಮಾರು 16 ವರ್ಷಗಳ ಕಾಲ ವೃತ್ತಿ ನಿರ್ವಹಿಸಿದರು. ‘ಯಶೋದೆ’, ‘ಗಾಂಧಾರಿ’ ಸೇರಿದಂತೆ ಹಲವು ಧಾರಾವಾಹಿಗಳಿಗೆ ಸಂಭಾಷಣೆ ರಚಿಸಿದ್ದಾರೆ. ‘ಯಶೋದೆ’, ‘ಗಾಂಧಾರಿ’, ‘ರಾಧಾ ರಮಣ’, ‘ಅಗ್ನಿಸಾಕ್ಷಿ’, ‘ಸೀತಾವಲ್ಲಭ’, ‘ನಮ್ಮನೆ ಯುವರಾಣಿ’, ‘ಮಿಥುನ ರಾಶಿ’ ಮೊದಲಾದ ಧಾರಾವಾಹಿಗಳಿಗೆ ಹಾಡುಗಳನ್ನು ಬರೆದ ...
READ MORE