‘ಕೊಂದ್ ಪಾಪ ತಿಂದ್ ಪರಿಹಾರ’ ದಿಗಂತ್ ಬಿಂಬೈಲ್ ಅವರ ಮಲೆನಾಡಿನ ಕಥಾ ಪ್ರಸಂಗಗಳಾಗಿವೆ. ಈ ಕೃತಿಯ ಕುರಿತು ಲೇಖಕರು ಬೆನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ: ‘ತಣ್ಣನೆ ಗಾಳಿ ಚಳಿ ಎಲೆಬಿಸಿಲುಗಳಿಗೆ ಮೈಯೊಡ್ಡಿ, ಹೆತ್ತವ್ವನನು ಬಿಗಿದಪ್ಪಿದ ಮಗುವಿನಂತೆ, ಅಡಿಕೆ ಮರವ ತಬ್ಬಿ ಹಿಡಿದು ಹಿಂಗಾರವಾಗಿ, ಕಾಯಾಗಿ, ಹಣ್ಣಾಗಿ ಮತ್ತೆ ಗಿಡವಾಗಿ ಚಿಗುರಿ ಬೆಳೆಯುವ ಕನಸುಗಳ ಹೊತ್ತ ಅಡಿಕೆಗೊನೆಯ ನಿರ್ದಾಕ್ಷಿಣ್ಯವಾಗಿ ಕತ್ತಿಯಲಿ ಅರಿದೆಳೆದು, ಆ ಎತ್ತರದಿಂದ ದೊಪ್ಪನೆ ಕೆಳಗೆಸೆದು, ಬಂಧವ ಬಡಿದು ಉಮರಾಗಿ ಮಾಡಿ, ಮೆಟ್ಟಿತ್ತಿಯಲಿ ಇನ್ನಿಲ್ಲದಂತೆ ಕೊಯ್ದು ಕತ್ತರಿಸಿ ಚಿತ್ರಹಿಂಸೆಕೊಟ್ಟು ಸಾಲದೆಂಬಂತೆ ಕುದ್ದೇಳುವ ಚೊಗರಿನಲಿ ಸುರುವಿ ಬೇಯಿಸಿ, ಎಳೆಕಾಯ ಕನಸುಗಳ ಹೊಸಕಿ ತನ್ನ ಕನಸುಗಳ ಈಡೇರಿಸುವ ಹೆಬ್ಬಯಕೆಗೆ ಬಿಸಿ ಚೊಗರಿನಲಿ ಬೇಯಿಸಿದನ್ನ ಮತ್ತದೇ ಸುಡು ಬಿಸಿಲಿಗೆ ಹಾಕಿದಂತೆ, ಅವಳ ಮನಸೂ ಶಾಂತಿಯಿಂದ ಕನಸು ಹೆಣೆಯುತ್ತಿದ್ದ, ತುಂಬಿದೆದೆಯ ತನ್ನಿನಿಯನೆದೆಗೆ ಅರ್ಪಿಸಿದ ಕನವರಿಕೆಗಳಿದ್ದವಳ ಎದೆಮೇಲೆ ಬಿದ್ದ ಕೈಗಳು, ಎದೆಗೂಡ ಸುಡುಬಿಸಿಲಿಗೆ ಚೊಗರಿನಿಂದತ್ತಿ ಹಾಕಿದಂತೆ ಬೆವರುತ್ತಿತ್ತು. ಗುಂಡಿಗೆ ಎದುರಾಗುವ ಜೀವ ಹಸಿವಿನಿಂದಿದೆಯೋ, ಹೊಟ್ಟೆ ತುಂಬಿದೆಯೋ, ಪ್ರೇಯಸಿ ಪ್ರಿಯತಮನಿಗಾಗಿ ಕಾದು ಕುಳಿತಿದೆಯೋ, ವಿರಹದಲ್ಲಿದೆಯೋ, ಸರಸದಲ್ಲಿದೆಯೋ, ಗೂಡಿನಲ್ಲಿ ಮರಿಗಳ ಬಿಟ್ಟು ಬಂದಿದೆಯೋ ಇಂತಹ ಯಾವ ಕಾಳಜಿ ಕನಿಕರವಿಲ್ಲದ ನಿರ್ಜೀವ ಗುಂಡು ಕ್ಷಣದಲ್ಲೇ ಕಬ್ಬೆಕ್ಕೊಂದರ ಎದೆ ನುಗ್ಗಿ ಪ್ರಾಣ ಕೆಳ ಚೆಲ್ಲಿತ್ತು. ಇಂತಹ ನಿರ್ಜೀವ ಗುಂಡಿನ ನಿರ್ಮಾತೃ, ಮಕ್ಕಳು ಮನೆ ಕಾರು ದಾರಿ ವೈಭವ ಅದ್ದೂರಿಗಳ ಸ್ವಾರ್ಥವ ಲೇಪಿಸಿಕೊಂಡ ಮಾನವನ ಮುಖದಲ್ಲಿ ಮಂದಹಾಸ! ಎಂದು ಹೇಳಿದ್ದಾರೆ.