ದು. ಸರಸ್ವತಿ ಅವರ ಕತೆಗಳ ಸಂಕಲನ. ಚಳವಳಿ, ಹೋರಾಟದ ಮೂಲಕ ಹುಟ್ಟಿದ ಬರಹಗಳು ನಗರ ಪ್ರದೇಶದ ತಳಸ್ತರದ ಕಾರ್ಮಿಕರ ಬದುಕನ್ನು ಅದರಲ್ಲೂ ಮಹಿಳಾ ಕಾರ್ಮಿಕರ ಬದುಕನ್ನು ಹತ್ತಿರದಿಂದ ನೋಡುವಂತೆ ಮಾಡಿವೆ. ಆದ್ದರಿಂದಲೇ ಅವೇನಿದ್ದರೂ ವಾಸ್ತವದೊಂದಿಗೆ, ವರ್ತಮಾನದ ರಾಜಕೀಯದೊಂದಿಗೆ ಜನರ ಬದುಕನ್ನು ಮುಖಾಮುಖಿ ಮಾಡುವಂತಹದು. ಈ ಸಂಕಲನದಲ್ಲಿ ಒಟ್ಟು ಎಂಟು ಕತೆಗಳಿವೆ. ದಲಿತರ, ಶೋಷಿತರ ಸಮಸ್ಯೆಗಳನ್ನು ಭಿನ್ನವಾಗಿ ನೋಡುವ ಮೂಲಕ ಹೊಸತೊಂದು ನಗರ ಕಾರ್ಮಿಕ ಸಂವೇದನೆಯನ್ನು ಕಟ್ಟಿ ಕೊಡುತ್ತದೆ. ಸಿದ್ರಾಮ ಮತ್ತು ಯಲ್ಲಮ್ಮ ಅವರ ಪ್ರೇಮವನ್ನು ಕೇಂದ್ರ ವಾಗಿಟ್ಟುಕೊಂಡ 'ಗುರುತಿಲ್ಲದ ವಿಳಾಸ' ಕತೆಯು, ಜಾತಿಯ ಪೇಡಂಭೂತವನ್ನಿಟ್ಟುಕೊಂಡು ಬರೆದಿರುವುದು. ನಗರ ಮತ್ತು ಹಳ್ಳಿ ಬದುಕುಗಳ ಸಂಕೀರ್ಣ, ಎರಡೂ ಕಡೆಗಳಲ್ಲೂ ಶೋಷಣೆಯ ಬೇರೆ ಬೇರೆ ಮುಖಗಳು ಹೇಗೆ ಸುತ್ತಿಕೊಂಡಿವೆ ಎನ್ನುವುದನ್ನು ಹೇಳುತ್ತದೆ. ಹಾಗೆಯೇ ನಗರ ಪ್ರದೇಶದ ಪೌರಕಾರ್ಮಿಕರ ಪಾಡನ್ನು 'ಬಚ್ಚೀಸು' ಮತ್ತು 'ಹೊನ್ನ ಹೇಲು' ಕತೆಗಳು ತೆರೆದಿಡುತ್ತವೆ. ಪೌರಕಾರ್ಮಿಕರ ಹೋರಾಟದಲ್ಲೂ ಸಕ್ರಿಯರಾಗಿರುವ ಲೇಖಕಿಗೆ ಆ ಬದುಕನ್ನು ಅವರ ವೈಯಕ್ತಿಕ ನೋವು ನಲಿವುಗಳನ್ನು ಕತೆಯಲ್ಲಿ ಕಟ್ಟಿಡಲು ಸಾಧ್ಯವಾಗಿದೆ. ಈ ಎರಡೂ ಕತೆಗಳು ಒಂದಕ್ಕೊಂದು ಬೆಸೆದುಕೊಂಡಂತಿದ್ದು, ಪುಟ್ಟ ಬಾಲಕಿಯ ಮೂಲಕ ಅಸೃಶ್ಯತೆಯ ಆಳವನ್ನು ಕಟ್ಟಿಕೊಡಲು “ನಮ್ಮನೆ ಗೌರಮ್ಮನೆ ಇಷ್ಟ' ಕತೆಯ ಮೂಲಕ ಸರಸ್ವತಿ ಪ್ರಯತ್ನಿಸುತ್ತಾರೆ.
ದು.ಸರಸ್ವತಿ- ಹುಟ್ಟಿದ್ದು 20 ಏಪ್ರಿಲ್ , 1963, ಬೆಂಗಳೂರಿನಲ್ಲಿ. ವಿದ್ಯಾಭ್ಯಾಸವೂ ಬೆಂಗಳೂರಿನಲ್ಲಿಯೇ. ರಂಗಭೂಮಿ, ಚಿತ್ರಕಲೆ, ಮಹಿಳಾ ಮತ್ತು ದಲಿತ ಚಳುವಳಿ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಸರಸ್ವತಿ, ಹೆಣೆದರೆ ಜೇಡನಂತೆ(ಕಡೆಂಗೋಡ್ಲು ಕಾವ್ಯ ಪ್ರಶಸ್ತಿ-1997), ಈಗೇನ್ ಮಾಡೀರಿ(ಅನುಭವ ಕಥನ-2000) ಕೃತಿಗಳನ್ನು ಪ್ರಕಟಿಸಿದ್ದಾರೆ. ...
READ MORE