ರಾಜಶ್ರೀ ಟಿ.ರೈ ಪೆರ್ಲ ಅವರ ಕಥಾ ಸಂಕಲನ‘ ಅಗ್ಗಿಷ್ಟಿಕೆ’. ಹದಿನೆಂಟು ಕಥೆಗಳ ಸಂಕಲನವಿದು. ಇಲ್ಲಿನ ಹೆಚ್ಚಿನ ಕತೆಗಳೂ ಸಹ ಬಿಡಿಬಿಡಿಯಾಗಿ ಪ್ರಕಟಣೆಯನ್ನು ಕಂಡಂತವುಗಳು. ಕೃತಿಗೆ ಮೌಲಿಕವಾದ ಮುನ್ನುಡಿಯ ಮಾತುಗಳನ್ನು ಡಾ.ಹರಿಕೃಷ್ಣ ಭರಣ್ಯ ಅವರು ಬರೆದಿದ್ದು, ಸದಾನಂದ ನಾರಾವಿ ಅವರು ಬೆನ್ನುಡಿಯನ್ನು ಬರೆದಿದ್ದಾರೆ. ‘ನಾಡು, ನುಡಿ, ಸಂಸ್ಕೃತಿಯ ಬಗ್ಗೆ ವಿಶೇಷ ಅಭಿಮಾನವನ್ನು ಬೆಳೆಸಿಕೊಂಡಿರುವ ರಾಜಶ್ರೀ ಅವರ ಕತೆಗಳು ಮನುಷ್ಯನ ವಿವಿಧ ಮುಖಗಳ ಸಂಬಂಧಗಳ ಸುತ್ತವೇ ಸಾಗುತ್ತಾ ಮುಂದುವರಿಯುವುದರಿಂದ ಈ ಕತೆಗಳು ನಮಗೆ ಆಪ್ತತೆಯನ್ನುಂಟುಮಾಡುತ್ತವೆ. ಕೆಲವು ಕತೆಗಳು ಹೃದಯವನ್ನೂ ತಟ್ಟಿ ಕಣ್ಣನ್ನು ಆದ್ರ್ರಗೊಳಿಸುತ್ತವೆ. ಇದರ ಜೊತೆಗೆ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ದೇಸೀತನವೂ ಇಲ್ಲಿ ಹಿತವಾಗಿ ಮಿಳಿತಗೊಂಡಿರುವುದು ಕತೆಗಳಿಗೆ ವಿಶೇಷ ಮೆರುಗನ್ನು ನೀಡಿದಂತಾಗಿದೆ. ಕಾವ್ಯದಲ್ಲಿರುವಂತೆ ಉಪಮೆ, ಅಲಂಕಾರಗಳು ಕತೆಗಳಲ್ಲಿಯೂ ಬಳಕೆಯಾದಾಗ ಕತೆಗಳು ವಿಶೇಷವಾಗಿ ಜೀವಕಳೆ ಪಡೆಯುತ್ತವೆ. ಅಂತಹ ನೈಪುಣ್ಯತೆ ಕತೆಗಾರ್ತಿಗೆ ಸಿದ್ಧಿಸಿರುವುದರಿಂದ ಭಾವನಾತ್ಮಕವಾಗಿಯೂ ಇಲ್ಲಿನ ಕತೆಗಳು ಓದುಗನನ್ನು ಸೆಳೆದು ಓದನ್ನು ಸಹ್ಯಗೊಳಿಸುವಂತೆ ಮಾಡುವ ಗುಣವನ್ನು ಹೊಂದಿವೆ. ಕೊರೆಯುವ ಚಳಿಯಿಂದ ಪಾರಾಗಲು ಅಗ್ಗಿಷ್ಟಿಕೆಯ ಮುಂದೆ ಕುಳಿತಾಗ ಸಿಗುವ ಬೆಚ್ಚನೆಯ ಸುಖವು ದೇಹ, ಮನಸ್ಸಿಗೆ ಉಲ್ಲಾಸ ನೀಡುವಂತೆ ಇಲ್ಲಿನ ಕತೆಗಳನ್ನು ಆಸ್ವಾದಿಸುತ್ತಾ ಕುಳಿತರೆ ಓದಿನ ಸುಖದೊಂದಿಗೆ ಮನದ ದುಗುಡಗಳೆಲ್ಲ ಮರೆಯಾಗಿ ಮನಸ್ಸು ನಿರಾಳತೆಯನ್ನು ಅನುಭವಿಸುವಂತೆ ಮಾಡುವ ಗುಣ ಇಲ್ಲಿನ ಕತೆಗಳಲ್ಲಿದ್ದು ಭವಿಷ್ಯದಲ್ಲಿ ಇನ್ನಷ್ಟು ಮೌಲಿಕ ಕೃತಿಗಳನ್ನು ಅವರಿಂದ ನಿರೀಕ್ಷಿಸಬಹುದಾಗಿದೆ’ ಎಂಬುದಾಗಿ ಸದಾನಂದ ನಾರವಿ ಅವರು ಬೆನ್ನುಡಿಯಲ್ಲಿ ಬರೆದಿದ್ದಾರೆ.
ಗಡಿನಾಡು ಕಾಸರಗೋಡಿನ ತುಳು, ಕನ್ನಡ, ಹವ್ಯಕ ಭಾಷೆಯ ಯುವ ಲೇಖಕಿ. ಇತ್ತೀಚೆಗಷ್ಟೇ ತುಳುನಾಡಿನ ಮೂರಿಗಳ ಆರಾಧನೆ ಎಂಬ ಸಂಶೋಧನಾ ಕೃತಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದಿಂದ ಬಿಡುಗಡೆ ಕಂಡಿದೆ. ತುಳು ಸಾಹಿತ್ಯ ಕ್ಷೇತ್ರಕ್ಕೆ ಕಾದಂಬರಿಗಾರ್ತಿಯಾಗಿ ಚಿರಪರಿಚಿತೆ. ತುಳುವಿನಲ್ಲಿ ನಾಲ್ಕು ಕಾದಂಬರಿಗಳು(ಪನಿಯಾರ, ಬಜಿಲಜ್ಜೆ, ಕೊಂಬು,ಚೌಕಿ) ,ಒಂದು ಕಥಾಸಂಕಲನ(ಚವಳೊ) ಮತ್ತು ಒಂದು ಕವನ ಸಂಕಲನ(ಮಮಿನದೊ-ಆಕೃತಿ ಆಶಯ ಪ್ರಕಾಶನ ಮಂಗಳೂರು ) ಪ್ರಕಟಿತ. ಕನ್ನಡದಲ್ಲಿ ಪಾರಂಪರಿಕ ವೈದ್ಯ ಪದ್ಧತಿಯ ಬಗ್ಗೆ ಪ್ರಾದೇಶಿಕ ಅಧ್ಯಯನ ಕೃತಿ(ಕಲ್ಪತರು) ಪ್ರಕಟಿತ. ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕಥೆಗಳ ಸಂಕಲನ ಅಗ್ಗಿಷ್ಟಿಕೆ(ಕಲ್ಪವೃಕ್ಷ ಪ್ರಕಾಶನ ಬೆಂಗಳೂರು) ಚೊಚ್ಚಲ ಕನ್ನಡ ಕಥಾಸಂಕಲನವಾಗಿದೆ. ...
READ MORE