`ಜೈಲ್ ಡೈರಿ’ ಕೈದಿಗಳ ನೈಜ ಕಥನ ಕೃತಿಯು ಮ್ಯಾಗೇರಿ ಐ.ಜೆ ಅವರ ಕೃತಿಯಾಗಿದೆ. ಈ ಕೃತಿಯಲ್ಲಿನ ಮಾತುಗಳು ಹೀಗಿವೆ; ಇದು ಕೈದಿಗಳ ಹಿನ್ನೆಲೆಯಲ್ಲಿ ಅಡಗಿರುವ ಅಸಹಾಯಕತೆ, ದಾರುಣ ಬದುಕು ಮತ್ತು ಕ್ರೌರ್ಯಗಳನ್ನು ಶೋಧಿಸುತ್ತದೆ. ಇದನ್ನು ಓದುವಾಗ ಬದುಕು ಇಷ್ಟೊಂದು ಕ್ರೂರವಾಗಿರಲು ಸಾಧ್ಯವೇ ಎಂದು ಸೋಜಿಗವೂ ಗಾಬರಿಯೂ ಆಗುತ್ತದೆ. ಹಸಿ ಬಾಣಂತಿಯನ್ನು ತನ್ನ ಕಾಮುಕತೆಗಾಗಿ ಕೊಂದ ಕುಡುಕ ಗಂಡನ ಪ್ರಸಂಗ ಓದುತ್ತಿದ್ದ ಹಾಗೆ ನಡುಗಿಹೋದೆ. ತಾಯಿಯೇ ಮಗನಿಗೆ ಸುಪಾರಿ ಕೊಟ್ಟು ಕೊಲ್ಲಿಸುವ ಕಥೆಯೂ ಹೀಗೇ ಇದೆ. ಇಲ್ಲಿನ ಕ್ರೌರ್ಯಕ್ಕೆ ಹೆಚ್ಚು ಬಲಿಪಶುಗಳು ಮಹಿಳೆಯರೇ ಆಗಿದ್ದಾರೆ. ಆದರೆ ಈ ಕೊಲೆಗಾರ ಕಳ್ಳರ ಜಗತ್ತಿನಲ್ಲಿ ಕೇವಲ ಅಪರಾಧವಿಲ್ಲ. ಮಾನವೀಯ ಸಂಬಂಧಗಳ ಎಳೆಗಳೂ ಇವೆ. ತನ್ನ ಸಂಸಾರವನ್ನು ಬಿಟ್ಟು ಜೈಲಿಗೆ ಹೋಗಲು ಆಗದೆ ಪೆರೋಲಿನ ಮೇಲೆ ಬಿಡುಗಡೆಯಾಗಿದ್ದ ಒಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಸಂಗವನ್ನು ಈ ಪುಸ್ತಕದಲ್ಲಿ ಗಮನಿಸಬಹುದು.
ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದವರಾದ ಐ.ಜೆ.ಮ್ಯಾಗೇರಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕಾರಾಗೃಹ ಇಲಾಖೆಯಲ್ಲಿ ಉಪ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಸಾಹತುಶಾಹಿ ಅನುಭವ ಮತ್ತು ಕನ್ನಡ ಕಾದಂಬರಿಗಳು ಇವರು ಬರೆದ ಪುಸ್ತಕ. ...
READ MORE