"ಕೊಳೆತ ಮಾವಿನ ಹಣ್ಣು" ಮನೋಹರ ಪೈ ಅವರ ಕಥಾ ಸಂಕಲನ. ಬುಟ್ಟಿಯಲ್ಲಿ ತರೆಹವಾರಿ ಕಳಿತ ಹಣ್ಣುಗಳಿರುವಾಗ ಕೊಳೆತ ಹಣ್ಣನ್ನು ಯಾರು ಕೇಳುತ್ತಾರೆ? ಮೂಗು ಮುರಿಯುವರೇ ಹೆಚ್ಚು. ಅದು ಏಕೆ ಕೊಳೆಯಿತು? ಬಲಿತು ಹಣ್ಣಾಗಿ ಯಾರ ಕಣ್ಣಿಗೂ ಬೀಳದೆ ಕೊಳೆಯಿತೆ!? ಎಳೆಯದು ಹಣ್ಣಾಗದೆ ಕೊಳೆಯಿತೆ? ಬೇರೆ ಹಣ್ಣುಗಳನ್ನು ಕೆಡಿಸುವ ಮುನ್ನ ಅದನ್ನು ಬೇರ್ಪಡಿಸಲೇ!? ಕೆಟ್ಟಿರುವ ಒಂದು ಹಣ್ಣಿಗೆ ತಲೆಕೆಡಿಸಿಕೊಳ್ಳಲೇ? ಎಂಬೆಲ್ಲಾ ತಾರ್ಕಿಕ ಉತ್ತರಗಳು ಸಿಗುವಂತೆ ಮಾಡಿರುವ ಈ ಕಥಾಸಂಕಲನದ ತಲೆಬರಹವೇ ಕಣ್ಣರಳಿಸಿ ನೋಡುವಂತೆ ಮಾಡುತ್ತದೆ. "ಕೊಳೆತ ಮಾವಿನ ಹಣ್ಣು" ಎಂಬ ಹದಿನೈದು ಕತೆಗಳ ಈ ಸಂಕಲನದಲ್ಲಿ ಸಾಮಾಜಿಕ ಸಮಸ್ಯೆಗಳ ಕಡೆಗೆ ಮುಖಮಾಡಿನಿಂತ ನವಿರಾದ ಕತೆಗಳಿವೆ. ಇವೆಲ್ಲ ಸಮಾಜದ ಸುತ್ತ -ಮುತ್ತ ನಡೆಯುತ್ತಿರುವ ಆಗುಹೋಗುಗಳ ಬಗೆಗೆ ಕಣ್ತೆರಿಸಿ ಓದುಗ ಗಂಭೀರ ಆಲೋಚನೆ ಮಾಡುವಂತೆ ಮಾಡುತ್ತವೆ. ತಮ್ಮ ಸಮೃದ್ಧ ಅನುಭವವನ್ನು ಹೊಸದಾಗಿ ಕಾಣಿಸುವ ನಿಟ್ಟಿನಲ್ಲಿ ಲೇಖಕರು ಮಾಡಿಕೊಂಡಿರುವ ಅತ್ಯಂತ ಗಾಢವಾದ ಸಿದ್ಧತೆ ಪ್ರತಿಕತೆಯಲ್ಲೂ ಕಾಣಸಿಗುತ್ತದೆ. ಕೆಲವು ಕಡೆ ಅವು ಸಾರ್ಥಕವಾದಂತೆ ಕಾಣುತ್ತದೆ. ಪಾತ್ರಗಳು ನಿಜ ವಾತಾವರಣದೊಡನೆ ಕಾಣಿಸಿಕೊಂಡು ಸೊಬಗನ್ನುಂಟುಮಾಡುತ್ತವೆ.