ಕನಕರಾಜ್ ಆರನಕಟ್ಟೆ ಅವರ ಕಥಾಸಂಕಲನ ‘ಸಿಲೋನ್ ಸೈಕಲ್’. ಈ ಕೃತಿಗೆ ಕನ್ನಡದ ಪ್ರಮುಖ ವಿಮರ್ಶಕ, ಕಥೆಗಾರ ರಾಜೇಂದ್ರ ಚೆನ್ನಿ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ..‘ಕನಕರಾಜ್ ಅವರು ಬರೆದ ಕಥೆಗಳ ಈ ಸಂಗ್ರಹ ಅತ್ಯಂತ ವಿಶಿಷ್ಟವೂ ಮುಖ್ಯವೂ ಆದ ಕೃತಿಯಾಗಿದೆ. ನಿಸ್ಸಂಶಯವಾಗಿ ಸೂಕ್ಷ್ಮ ಸಂವೇದನೆ, ವಿಸ್ತಾರವಾದ ಅನುಭವ ಹಾಗೂ ಬದುಕನ್ನು ನೋಡುವ ಖಚಿತವಾದ ದೃಷ್ಟಿಕೋನವಿರುವ ಪ್ರತಿಭಾವಂತ ಬರಹಗಾರನ ಕಥೆಗಳಿವು ಎನ್ನುತ್ತಾರೆ’.
ಇತ್ತೀಚಿನ ದಿನಗಳಲ್ಲಿ ಅತ್ಯಂತ ವಿಭಿನ್ನ ರೀತಿಯಲ್ಲಿ ಕಥೆ ಬರೆಯುವ ಕನಕರಾಜ್ ಆಯ್ದುಕೊಳ್ಳುವ ಅನುಭವ ಲೋಕದ ವೈವಿಧ್ಯತೆಯು ಅವರ ಕಥನ ಪ್ರತಿಭೆಯ ಲಕ್ಷಣವಾಗಿದೆ. ಬುದ್ದಿಮಾಂದ್ಯ ಮೊಮ್ಮಗಳನ್ನು ಕರಡಿಯಂತೆ ನೋಡಿಕೊಂಡು ಅವಳ ಮೇಲೆ ಅತ್ಯಾಚಾರವಾದ ನಂತರ ಪ್ರಾಣ ಬಿಡುವ, ಜೀವನ ನಿರ್ವಹಣೆಗಾಗಿ "ರುಡಾಲಿ"ಯಾಗಿದ್ದ ಅಜ್ಜಿ: ತನ್ನ ತಂದೆಯ ಸಿಲೋನ್ ಸೈಕಲ್‍ನಲ್ಲಿ ಅವನ ಆತ್ಮವಿದೆ ಎಂದು ನಂಬಿದ್ದ ತನ್ನ ತಂದೆಯ ವಿರುದ್ಧ ಕ್ಷುಲ್ಲಕ ಕಾರಣಕ್ಕಾಗಿ ಬಂಡೆದ್ದು ಅಜ್ಜನ ಸೈಕಲ್ ಅನ್ನು ಹಾಳುಮಾಡುವ ಅವನ ಮೊಮ್ಮಗ, ಒಡೆಯನೊಂದಿಗೆ ಅಕ್ರಮ ಸಂಬಂಧವಿದೆ ಎಂಬ ಸುಳ್ಳು ಸಂಶಯದಿಂದಾಗಿ ಓಡಿ ಹೋಗಿ ವಿದೇಶದ ಜೈಲಿನಲ್ಲಿರುವ ಮುಸ್ಲಿಂ ಹೆಂಗಸು, ಹಿಂದೆ ತಾನು ಮಾಡಿರಬಹುದಾದ ಕಳ್ಳತನದಿಂದಾಗಿ ಒಂದು ಮನೆಯೇ ಮಣ್ಣಗೂಡಿದ್ದನ್ನು ಅಕಸ್ಮಾತ್ತಾಗಿ ಅದೇ ಮನೆಗೆ ಬಂದಾಗ ನೋಡಿ ಕೇಳುವ ಮಾಜಿ-ಕಳ್ಳ ಹೀಗೆ ಹತ್ತಾರು ವಿಚಿತ್ರ ಸನ್ನಿವೇಶಗಳಲ್ಲಿ ಸಿಕ್ಕಿಕೊಳ್ಳುವ ಮನುಷ್ಯ ಜೀವಿಗಳ ವೈವಿಧ್ಯ ಪೂರ್ಣ ಜಗತ್ತನ್ನೇ ಕನಕರಾಜ್ ವಿಭಿನ್ನವಾಗಿ ಚಿತ್ರಿಸಿದ್ದಾರೆ. ಈ ಕಥಾ ಸಂಕಲನಕ್ಕೆ ಡಾ. ಯು.ಆರ್. ಅನಂತಮೂರ್ತಿ ಪ್ರಶಸ್ತಿ ದೊರಕಿದೆ.
ಸಮಕಾಲೀನ ಕನ್ನಡ ಗದ್ಯ ಸಾಹಿತ್ಯದಲ್ಲಿ ಹೊಸ ಹಾದಿಯನ್ನು ಹಿಡಿದಿರುವ ಕನಕರಾಜ್ ಆರನಕಟ್ಟೆ ಮೂಲತ: ಚಿತ್ರದುರ್ಗ ಜಿಲ್ಲೆಯವರು. ಕರ್ನಾಟಕ, ಭಾರತ ಮೊದಲ್ಗೊಂಡು ಹಲವಾರು ದೇಶ, ಭಾಷೆ, ಸಂಸ್ಕೃತಿಗಳ ಮುಖಾಮುಖಿಯಾಗಿಸಿ ಓದುಗರಿಗೆ ಹೊಸದಾದ ಅನುಭವ ನೀಡುವ ಇವರ ಲೇಖನ ಮತ್ತು ಕಥೆಗಳು ಕನ್ನಡ ನವ್ಯೋತ್ತರ ಸಾಹಿತ್ಯದ ಯುವ ಫಸಲು. ಸಾಹಿತ್ಯ ಮಾತ್ರವಲ್ಲದೆ ಸಿನಿಮಾದಲ್ಲೂ ಆಸಕ್ತಿ ಹೊಂದಿರುವ ಇವರು ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಇವರ ಮೊದಲನೇ ಕಿರುಚಿತ್ರ “ಬರ್ಮಾ ಎಕ್ಸ್ ಪ್ರೆಸ್” ಹಲವು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಆಯ್ಕೆಗೊಂಡು ನ್ಯೂಯಾರ್ಕ್‍ನ “ಸೌತ್ ಏಷಿಯನ್ ಇಂಟರ್‍ನ್ಯಾಷನಲ್ ಫಿಲ್ಮ್ ಫೆಸ್ಟಿವಲ್” ಮತ್ತು “ರಾಜಸ್ತಾನ ಫಿಲಂ ಫೆಸ್ಟಿವಲ್” ಗಳಲ್ಲಿ ಉತ್ತಮ ...
READ MOREಸಿಲೋನ್ ಸೈಕಲ್ ಪುಸ್ತಕ ಬಿಡುಗಡೆ ಕಾರ್ಯಕ್ರಮ.