‘ಪ್ರೀತಿಯ ಬೆಳಕು’ ಲೇಖಕ ಬಿ.ಆರ್. ಲಕ್ಷ್ಮಣರಾವ್ ಅವರ ಸಮಗ್ರ ಕತಾ ಸಂಕಲನ. ಕಾವ್ಯದಂತೆ, ಸಣ್ಣಕತೆಯಲ್ಲೂ ಲಕ್ಷ್ಮಣರಾವ್ ನವ್ಯ, ಬಂಡಾಯಗಳ ಹಣೆಪಟ್ಟಿಗೆ ದಕ್ಕುವವರಲ್ಲ. ನವ್ಯದ ಅಂತರ್ಮುಖತೆ, ಅಂತಃಪ್ರಜ್ಞೆ, ಪ್ರಜ್ಞಾಪ್ರವಾಹ ತಂತ್ರ ಇಂತಹವು ಇವರ ಕತೆಗಳಲ್ಲಿ ಕಾಣುವುದಿಲ್ಲ. ಸಾಮಾಜಿಕ ಸಮಸ್ಯೆಗಳಿಂದ ವಿಮುಖರು ಎಂದಲ್ಲ, ಸಾಮಾಜಿಕ ಸಮಸ್ಯೆಗಳು, ಕ್ರೂರ ವ್ಯವಸ್ಥೆ ಇವುಗಳ ಒತ್ತಡದಲ್ಲಿ ದಮನಕಾರಿ ನಿಲುವುಗಳಲ್ಲಿ ಮನುಷ್ಯ ಸಂಬಂಧಗಳು, ಪ್ರೀತಿ ವಿಶ್ವಾಸಗಳು ಹೇಗೆ ನಲುಗಿ ಹೋಗುತ್ತಿವೆ ಎಂಬುದು ಲಕ್ಷ್ಮಣರಾವ್ ಅವರ ಸೃಜನಶೀಲ ಮನಸ್ಸಿನ ಮುಖ್ಯ ಕಾಳಜಿಯಾಗಿದೆ.
ಗಂಡು ಹೆಣ್ಣಿನ ಪ್ರೀತಿ. ಜೀವನಪ್ರೀತಿ-ವ್ಯವಸ್ಥೆಯ ಕ್ರೂರ ಹಿಡಿತದಲ್ಲಿ ನಲುಗಬಾರದು, ನಿಷೇಧ ಮೊದಲಾದ ನಕಾರಾತ್ಮಕ ಪ್ರವೃತ್ತಿಗಳಲ್ಲಿ ಪ್ರೀತಿ ಮುರುಟಿ ಹೋಗಬಾರದು ಎಂಬ ಆರೋಗ್ಯಕರ ಜೀವನದೃಷ್ಟಿ ಲಕ್ಷ್ಮಣರಾವ್ ಅವರ ಕಥೆಗಳ ಹಿಂದಿನ ಮುಖ್ಯ ಮಾನವೀಯ ದನಿಯಾಗಿದೆ ಎನ್ನುತ್ತಾರೆ ಜಿ.ಎನ್. ರಂಗನಾಥರಾವ್.
ಲಕ್ಷ್ಮಣರಾಯರೊಳಗಿನ ಕವಿಯ ಆರೋಗ್ಯಕರ ಜೀವನದೃಷ್ಟಿ, ಸ್ಪಷ್ಟ ವಿಚಾರಗಳ ಜೊತೆಗೆ ಅವರ ಗದ್ಯವು ವಾಚ್ಯವಾಗದೇ ಧ್ವನಿಪೂರ್ಣವಾಗಿ ಕಾವ್ಯಕ್ಕೆ ಹತ್ತಿರವಾಗುತ್ತದೆ. ಜಿ.ಎಸ್. ಆಮೂರರು ಹೇಳಿರುವಂತೆ ಪ್ರಾಮಾಣಿಕತೆ, ತೀಕ್ಷ್ಣತೆ ಮತ್ತು ಹೊಸದೃಷ್ಟಿ ಲಕ್ಷ್ಮಣರಾವ್ ಅವರ ಕಾವ್ಯದ ಮುಖ್ಯ ಗುಣಗಳಾಗಿರುವಂತೆ ಕತೆಗಳ ಮುಖ್ಯ ಗುಣವೂ ಆಗಿದೆ. ಶಕ್ತಿಯೂ ಆಗಿದೆ.
ಕವಿ, ಕತೆಗಾರ, ವಿಮರ್ಶಕ ಹಾಗೂ ಚಲನಚಿತ್ರಕಾರ ಬಿ.ಆರ್. ಲಕ್ಷ್ಮಣರಾವ್ ಅವರು 1946 ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಗಟ್ಟ ತಾಲ್ಲೂಕಿನ ಚೀಮಂಗಲದಲ್ಲಿ ಜನಿಸಿದರು. ತಂದೆ ರಾಜಾರಾವ್. ತಾಯಿ ವೆಂಕಟಲಕ್ಷ್ಮಮ್ಮ. ಚಿಂತಾಮಣಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಚಿಂತಾಮಣಿಯ ಪ್ರೌಢಶಾಲೆ ಉಪಾಧ್ಯಾಯರಾಗಿ ವೃತ್ತಿ ಆರಂಭಿಸಿದ ಇವರು ವಿನಾಯಕ ಟುಟೋರಿಯಲ್ಸ್‌ನ ಪ್ರಿನ್ಸಿಪಾಲರಾಗಿ ಕಾರ್ಯನಿರ್ವಹಿಸಿ ಪ್ರಸ್ತುತ ಸಂಪೂರ್ಣವಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಲಿಲ್ಲಿ ಪುಟ್ಟಿಯ ಹಂಬಲ, ಶಾಂಗ್ರಿ-ಲಾ, ಅಪರಾಧಂಗಳ ಮನ್ನಿಸೊ, ಗೋಪಿ ಮತ್ತು ...
READ MORE