ಕಥೆಗಾರ ಹಾಗೂ ಸಾಹಿತಿ ಡಾ. ಬಸು ಬೇವಿನಗಿಡದ ಅವರು ಅಮೆರಿಕನ್ ಕಥೆಗಾರ್ತಿ ಫ್ಲ್ಯಾನರಿ ಓ’ ಕಾನರ್ ಅವರ ಕೆಲವು ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದೇ ಈ ಕೃತಿ-ದಕ್ಕದ ಕಾಡು. ಬಹುಜನಾಂಗೀಯ ಹಾಗೂ ಬಹುಧರ್ಮೀಯರ ಕಳವಳಗಳಿಗೆ ತಮ್ಮ ಕಥೆಗಳಲ್ಲಿ ಉತ್ತಮ ಅಭಿವ್ಯಕ್ತಿ ನೀಡಿದ್ದಾಳೆ. ಕೌಟುಂಬಿಕ ವಿಘಟನೆಗಳು, ಮನುಷ್ಯನ ಕ್ರೌರ್ಯ, ಬಂದೂಕು ಸಂಸ್ಕೃತಿ, ಸಂಶಯ ಇತ್ಯಾದಿ ಅಂಶಗಳನ್ನು ವಸ್ತುವಾಗಿಸಿಕೊಂಡ ಇಲ್ಲಿಯ ಕಥೆಗಳು ತಮ್ಮ ನಿರೂಪಣಾ ಶೈಲಿಯಿಂದ, ಪಾತ್ರಗಳ ಸೃಷ್ಟಿಯಿಂದ, ಪರಿಣಾಮಕಾರಿ ಸಂಭಾಷಣೆಯಿಂದ ಓದುಗರ ಗಮನ ಸೆಳೆಯುತ್ತವೆ. 39 ರ ಹರೆಯದಲ್ಲೇ ಚರ್ಮ ಕ್ಷಯ ರೋಗಕ್ಕೆ ಬಲಿಯಾದ ಫ್ಲ್ಯಾನರಿ ಓ’ ಕಾನರ್ ಅವರ ಕಥೆಗಳು "ಪಾಶ್ಚಾತ್ಯರಲ್ಲಿ ಒಂದು ದೊಡ್ಡ ಓದುಗ ವರ್ಗವನ್ನೇ ಸೃಷ್ಟಿಸಿದ್ದವು.
ಪೆದ್ದರು ಮೊದಲು ಸ್ವರ್ಗವನ್ನು ಪ್ರವೇಶಿಸುವರು, ಒಳ್ಳೆಯ ಮನುಷ್ಯನನ್ನು ಹುಡುಕುತ್ತಾ, ಮನೆಯಲ್ಲಿನ ನೆಮ್ಮದಿ, ದಕ್ಕದ ಕಾಡು, ಕಪ್ಪು-ಬಿಳುಪು-ಹೀಗೆ ಒಟ್ಟು ಐದು ನೀಳ್ಗತೆಗಳು ಇಲ್ಲಿ ಅನುವಾದಗೊಂಡಿವೆ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ರೂಪುಗೊಂಡಿರುವ ಇಲ್ಲಿಯ ಕಥೆಗಳಲ್ಲಿ ಉತ್ತರ ಕರ್ನಾಟಕದ ಭಾಷಾ ಸೊಗಡು ತುಂಬಿರುವ ಅನುವಾದಕರು ಕನ್ನಡ ಸಾಹಿತ್ಯಕ್ಕೆ ಅಪರೂಪ ಎನ್ನಬಹುದಾದ ವಸ್ತುವಿನ ಕಥೆಗಳನ್ನು ಪರಿಚಯಿಸಿದ್ದಾರೆ.
ಕೃತಿಗೆ ಮುನ್ನುಡಿ ಬರೆದ ಡಾ. ಓ.ಎಲ್. ನಾಗಭೂಷಣಸ್ವಾಮಿ ‘ಅನುವಾದಕ್ಕೆ ಪೂರಕವಾದ ಮಾಹಿತಿ, ಸಾಮಗ್ರಿಯನ್ನು ಒದಗಿಸಲು ಅನುವಾದಕರು ಶ್ರಮಪಟ್ಟಿರುವುದು ಪ್ರಶಂಸಾರ್ಹ. ‘ಒಳ್ಳೆಯ ಮನುಷ್ಯನನ್ನು ಹುಡುಕುತ್ತಾ’ ಎಂಬ ಕಥೆಯು ಧರ್ಮದ ವಾಸ್ತವಿಕತೆಯನ್ನು ತೆರೆದಿಡುತ್ತದೆ. ಧರ್ಮದ ನಿಲುವುಗಳನ್ನು ಪರೀಕ್ಷೆಗೆ ಒಡ್ಡುವುದು ಕನ್ನಡದ ಸಮಕಾಲೀನ ಕಥೆಗಳಲ್ಲಿ ಅಪರೂಪದ ಸಂಗತಿಯೆ! ಹಾಗಾಗಿ, ಕರುಣೆ, ಮಾನವೀಯತೆಯ ಸ್ವರೂಪವನ್ನು ನಿಷ್ಠುರವಾಗಿ ಶೋಧಿಸುವ ಓ’ ಕಾನರ್ ಕಥೆಗಳು ಯುವ ಲೇಖಕರಿಗೆ ಹೊಸ ಸಾಧ್ಯತೆಗಳನ್ನು ತೋರುವುದು ಸಾಧ್ಯವಿದೆ’ ಎಂದು ಶ್ಲಾಘಿಸಿದ್ದಾರೆ.
ಕೃತಿಗೆ ಬೆನ್ನುಡಿ ಬರೆದ ಸಾಹಿತಿ ಕಂನಾಡಿಗ ನಾರಾಯಣ ಅವರು ‘ಉತ್ತರ ಕರ್ನಾಟಕದ ಆಡುನುಡಿಯ ಪದವಿನ್ಯಾಸಗಳಂತೂ ಈ ಕಥೆಗಳು ನಮ್ಮ ಮನಸ್ಸಿನಿಂದ ಎಂದೂ ಮರೆಯಾಗದಂತೆ ಮಾಡುತ್ತವೆ. ಕನ್ನಡದ ಜಾಯಮಾನಕ್ಕೆ ಹೊಂದುವ ಹಾಗೆ ಅನುವಾದವಾಗಿರುವುದರಿಂದ ಈ ಕತೆಗಳು ಕನ್ನಡ ನೆಲದ್ದೇ ಅನ್ನಿಸುವಷ್ಟರ ಮಟ್ಟಿಗೆ ಸಹಜವಾಗಿವೆ. ಇಲ್ಲಿಯ ಗಾಳಿ-ನೀರು ಉಂಡು ಬದುಕುತ್ತವೆ. ಈ ಕಥೆಗಳು ಹುಟ್ಟುಹಾಕುವ ಕುತೂಹಲ, ನಾಟಕೀಯ ಸ್ವರೂಪ ಮತ್ತು ನಿರೀಕ್ಷೆಗಳನ್ನು ಬುಡಮೇಲು ಮಾಡುವ ಅವುಗಳ ಅಂತ್ಯ ನಮ್ಮ ಕನ್ನಡ ಕಥೆಗಳಿಗೆ ಹೊಸ ಹೊಳವುಗಳನ್ನು ಕೊಡುವಂತಿವೆ’ ಎಂದು ಪ್ರಶಂಸಿಸಿದ್ದಾರೆ.
ಕಥೆಗಾರ ಹಾಗೂ ಅನುವಾದಕ ಬಸು ಬೇವಿನಗಿಡದ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರು. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಬೇಂದ್ರೆ ಕಾವ್ಯ ಪ್ರಬಂಧ ಮಂಡನೆ ಮಾಡಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ತಾಯವ್ವ, ಬಾಳೆಯ ಕಂಬ, ಹೊಡಿ ಚಕ್ಕಡಿ, ಉಗುಳುಬುಟ್ಟಿ , ನೆರಳಿಲ್ಲದ ಮರ, ಬೀಳದ ಗಡಿಯಾರ (ಕಥಾ ಸಂಕಲನಗಳು), ಕನಸು, ಇಳೆಯ ಅರ್ಥ (ಕವನ ಸಂಕಲನಗಳು), ದಕ್ಕದ ಕಾಡು (ಅನುವಾದಿತ ಕಥೆಗಳ ಸಂಕಲನ) ಬಿ.ಎ. ಸನದಿ (ಜೀವನಚಿತ್ರ) , ನಾಳೆಯ ಸೈರ್ಯ, ಓಡಿ ಹೋದ ಹುಡುಗ ...
READ MORE