ಯುವ ಕಥೆಗಾರ ಗೋವಿಂದರಾಜು ಎಂ. ಕಲ್ಲೂರು ಅವರ ಮೊದಲ ಕಥಾ ಸಂಕಲನ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಈ ಸಂಕಲನವು ಎಂಟು ಕಥೆಗಳನ್ನು ಒಳಗೊಂಡಿದ್ದು ಇಲ್ಲಿನ ಬಹುತೇಕ ಕಥೆಗಳು ವಿವಿಧ ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ. ಈ ಸಂಕಲನಕ್ಕೆ ಮುನ್ನುಡಿ ಬರೆದಿರುವ ಚ. ಹ ರಘುನಾಥ ಗೋವಿಂದರಾಜು ಕಥೆಗಳನ್ನು ಕುರಿತು ಹೀಗೆ ಅಭಿಪ್ರಾಯ ಪಡುತ್ತಾರೆ.
"ವರ್ತಮಾನವನ್ನು ಎದುರುಗೊಳ್ಳುವ ಸವಾಲಿನಲ್ಲಿ ಬರಹಗಾರನೊಬ್ಬ ಆಯ್ದುಕೊಳ್ಳುವ ದಾರಿ, ಬರವಣಿಗೆಯ ಧ್ಯಾನದ ಬಗ್ಗೆ ಆ ಬರಹಗಾರ ಎಷ್ಟು ಗಂಭೀರವಾಗಿದ್ದಾನೆ ಎನ್ನುವುದನ್ನೂ ಸೂಚಿಸುತ್ತಿರುತ್ತದೆ. ತಾನು ಬದುಕುತ್ತಿರುವ ಕಾಲದ ವಿರೋಧಾಭಾಸಗಳನ್ನು ಕೃತಿಯಲ್ಲಿ ತರುವ ಹುಮ್ಮಸ್ಸಿನಲ್ಲಿ ಹೆಚ್ಚಿನ ಬರಹಗಾರರು ವಾಚಾಳಿಗಳಾಗುತ್ತಾರೆ ಹಾಗೂ ಮಾತಿನ ಹುಮ್ಮಸ್ಸಿನಲ್ಲಿ ಕಲೆಯ ಸಾಧ್ಯತೆಗಳನ್ನು ನಿರ್ಲಕ್ಷಿಸುತ್ತಾರೆ. ಮತ್ತೆ ಕೆಲವು ಬರಹಗಾರರು ಕಲೆಯ ಧ್ಯಾನದಲ್ಲಿ ಮುಳುಗಿ, ತಮ್ಮ ಕಾಲದ ಕಂಪನಗಳನ್ನು ಬರವಣಿಗೆಯ ಅಂತರಂಗವಾಗಿಸುವುದರಲ್ಲಿ ಸೋಲುಕಾಣುತ್ತಾರೆ. ಸದ್ಯದ ಮಾತುಗಳು ವಾಚ್ಯವಾಗದಂತೆಯೂ, ಕಲೆಯಾಗಿಯೂ ಅವು ಜಡವಾಗದಂತೆ ಬರವಣಿಗೆಯನ್ನು ನಿರ್ವಹಿಸುವಲ್ಲಿ ಕೆಲವು ಬರಹಗಾರರಷ್ಟೇ ಯಶಸ್ವಿಯಾಗುತ್ತಾರೆ. ಅಂಥ ಯಶಸ್ಸಿನ ಮಾದರಿಯ ರೂಪದಲ್ಲಿ ಗೋವಿಂದರಾಜು ಎಂ. ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಸಂಕಲನದ ಕಥೆಗಳು ಕಾಣಿಸುತ್ತಿವೆ.
ವರ್ತಮಾನದ ತವಕ ತಲ್ಲಣಗಳ ಶೋಧಕ್ಕೆ ಪುರಾಣಗಳನ್ನು ಆಶ್ರಯಿಸುವ ಕನ್ನಡ ಸಾಹಿತ್ಯ ಪರಂಪರೆಗೆ ಆದಿಕವಿ ಪಂಪನೇ ಮೂಲಪುರುಷ. ಈ ಪರಂಪರೆಯ ಕವಲುರೂಪದಲ್ಲಿ ಕೆಲವು ಬರಹಗಾರರು, ಹೊಸ ಪುರಾಣಗಳನ್ನು ಸೃಷ್ಟಿಸುವ ಮೂಲಕವೂ ಕಥೆ ಹೇಳುವುದಿದೆ. ಗೋವಿಂದರಾಜು ಆರಿಸಿಕೊಂಡಿರುವುದು ಹಳೆಯ ಕಥನಗಳನ್ನು ಹೊಸತಾಗಿಸುತ್ತ, ವರ್ತಮಾನದಲ್ಲಿ ಪುರಾಣ-ಜಾನಪದಗಳ ಹಂದರ ಕಟ್ಟುವ ರೂಪಕಗಳ ದಾರಿಯನ್ನು. ಅಪಾರ ಸಾವಧಾನವನ್ನೂ ಕಲ್ಪನಾಶಕ್ತಿಯನ್ನೂ ಕಸುಬುದಾರಿಕೆಯನ್ನೂ ಬೇಡುವ ಈ ದಾರಿಯೇ ಗೋವಿಂದರಾಜು ಅವರನ್ನು ಅವರ ಓರಗೆಯ ಕಥೆಗಾರರಿಗಿಂತ ಭಿನ್ನವಾಗಿಸಿದೆ." -ರಘುನಾಥ ಚ ಹ ಮುನ್ನುಡಿಯಿಂದ
ಯುವಕತೆಗಾರ ಗೋವಿಂದರಾಜು ಎಂ. ಕಲ್ಲೂರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕಲ್ಲೂರಿನವರು. ಸದ್ಯ, ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ಇವರಿಗೆ ಕ್ರೈಸ್ಟ್ ಯೂನಿವರ್ಸಿಟಿ ಮತ್ತು ಈ- ಹೊತ್ತಿಗೆ ಕಥಾ ಸ್ಪರ್ಧೆಗಳಲ್ಲಿ ಬಹುಮಾನ, ಬೇಂದ್ರೆ ಕಾವ್ಯ ಕೂಟದಿಂದ ಲೇಖನ, ಕವನ ಸ್ಪರ್ಧೆಗಳಲ್ಲಿ ಬಹುಮಾನ ಲಭಿಸಿದೆ. ಪ್ರಜಾವಾಣಿ, ಹೊಸಮನುಷ್ಯ, ಸಮಾಜಮುಖಿ, ಸಂವಾದ ಪತ್ರಿಕೆಗಳಲ್ಲಿ ಬರೆಹಗಳನ್ನು ಪ್ರಕಟಿಸಿದ್ದಾರೆ. ...
READ MOREನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು
ಗೋವಿಂದು- ಮುನ್ನುಡಿ ಓದಿದೆ, ಲೇಖಕರ ನುಡಿ ಓದಿದೆ. ಎಂಟೂ ಕತೆಗಳನ್ನು ಓದಿದೆ. ಹಿಂದೆ ತೀರ್ಪುಗಾರರ ಟಿಪ್ಪಣಿ, ಶಿವರುದ್ರಪ್ಪನವರ ಪದ್ಯ, ಬೆನ್ನುಡಿಯನ್ನು ಸಹ ಅಕ್ಷರ ಬಿಡದೇ ಓದಿದೆ. ಎಲ್ಲಾ ಓದಿಬಿಟ್ಟು ಹೊಸತಾಗಿ ಏನು ಹೇಳಲಿ ಎಂದು ಯೋಚಿಸುತ್ತಿರುವೆ. ಹಿರಿಯರೆಲ್ಲರ ಮಾತೇ ನನ್ನದೂ ಆಗಿದೆ. ಇಲ್ಲಿನ ಅರ್ಧಕ್ಕಿಂತ ಅಧಿಕ ಕತೆಗಳು ಈಗಾಗಲೇ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಂತವು, ಹಾಗಾಗಿ ಮತ್ತೊಮ್ಮೆ ನ್ಯಾಯಾಧೀಶನಾಗದೇ ಕೇವಲ ಓದಿನ ಸುಖಕ್ಕಾಗಿ ಓದಿದೆ. ಬಹಳ ಆನಂದಿಸಿದೆ. ಬಹಳ ಚಿಕ್ಕವಯಸ್ಸಿಗೆ ಬಹಳ ಕ್ಲಿಷ್ಟ ವಿಷಯಗಳನ್ನು ಎತ್ತಿಕೊಂಡು ಗಂಭೀರ ಪ್ರಶ್ನೆಗಳನ್ನು ಹಾಕಿಕೊಂಡು ಪೌರಾಣಿಕ ಕತೆಗಳ ಮೂಲಕ ಅತ್ಯಂತ ಪ್ರಬುದ್ಧವಾಗಿ ಕಾವ್ಯಾತ್ಮಕವಾಗಿ ಅನೇಕಾನೇಕ ಬದುಕಿನ ವಿವರಗಳೊಂದಿಗೆ ಕತೆಗಳನ್ನು ಹೆಣೆದಿದ್ದೀರಿ.
-ಮಧು ವೈ ಎನ್
ಮನುಷ್ಯ ಲೋಕದ ಸಕಲ ವ್ಯವಹಾರಗಳನ್ನು ಹಾಗೂ ಅನೇಕ ಸ್ತರಗಳಲ್ಲಿ ಹುದುಗಿರುವ ಅದರ ಸತ್ಯಾಸತ್ಯತೆಗಳನ್ನು ವಿಹಂಗಮನೋಟದಲ್ಲಿ ವೀಕ್ಷಿಸುವ ಮೂಖಸಾಕ್ಷಿಗಳಾದ ಪಕ್ಷಿ ದಂಪತಿಗಳ ಸಂಭಾಷಣೆಯಿಂದಲೇ ಆರಂಭವಾಗುವ ' ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು' ಕತೆ ಹಲವು ಕಾರಣಗಳಿಂದಾಗಿ ಗಮನಾರ್ಹವೆನಿಸುತ್ತದೆ. ಮನುಷ್ಯ ಲೋಕದ ಈ ಕತೆ ಅಲ್ಲಿಂದ ಜಿಗಿದು ಪಶು-ಪಕ್ಷಿಗಳ ಪ್ರಪಂಚಕ್ಕೂ ವ್ಯಾಪಿಸಿ ಅಲ್ಲಿಗೂ ನಿಲ್ಲದೆ ಆಕಾಶಕಾಯಗಳವರೆಗೂ ತನ್ನ ಹರವನ್ನು ವಿಸ್ತರಿಸಿಕೊಂಡಿದೆ. ರೂಪಕಗಳಿಂದ ಇಡಿಕ್ಕಿರಿದಿರುವ ಪ್ರಸ್ತುತ ಕಥನವನ್ನು ಹೇಳಲು ಕಥೆಗಾರರು Magical Realismಅನ್ನು ದುಡಿಸಿಕೊಂಡಿದ್ದಾರೆ. ಮ್ಯಾಜಿಕಲ್ ರಿಯಲಿಸಮ್ ಎಂಬುದು ಇಲ್ಲಿ ನಿರೂಪಣಾ ತಂತ್ರವೂ ಹೌದು, ವಾಸ್ತವವನ್ನು ಕುರಿತ ಪಠ್ಯ ತತ್ತ್ವವೂ ಹೌದು. ಜಾತಿ ವ್ಯವಸ್ಥೆ ಸಮಾಜದಲ್ಲಿ ಉಂಟುಮಾಡಿರುವ ಅನೇಕ ಅನ್ಯಾಯ ಅಪದ್ಧಗಳನ್ನು ಹಾಗು ಅದರ ಪ್ರತಿಫಲವೇ ಆಗಿರುವ ಶೋಷಣೆಯ ಹಲವು ಮಗ್ಗಲುಗಳನ್ನು ಕತೆ ಸಶಕ್ತವಾಗಿ ಹಿಡಿದಿಟ್ಟಿದೆ. ಅಲ್ಲದೆ ವ್ಯವಸ್ಥೆಯ ರೂಕ್ಷತೆಯಿಂದ ಸದಾ ಪರಿತಪಿಸುವ ಹೆಣ್ಣು ಲೋಕವನ್ನು ಅದರ ಸೂಕ್ಷ್ಮಾತಿಸೂಕ್ಷ್ಮ ಸಂವೇದನೆಯೊಂದಿಗೆ ನಿರೂಪಿಸಲಾಗಿದೆ. ಸೂತಕದ ಅಂಟು ಇರುವುದು ಹೆಣ್ಣಿನ ಮುಟ್ಟಿನ ನೆತ್ತರಿನಲ್ಲಿಯೋ ಅಥವಾ ಹುಟ್ಟು-ಸಾವುಗಳ ಕ್ರಿಯೆಯಲ್ಲಿಯೋ ಅಲ್ಲ, ಬದಲಿಗೆ ಅದರ ಇರುವಿಕೆ ಪ್ರಕಟಗೊಳ್ಳುವುದು ಮನುಷ್ಯರ ಬದುಕಿನಲ್ಲಿ ಅಥವಾ ಅವರ ಆಲೋಚನೆಗಳಲ್ಲಿ. ನಮ್ಮ ನಡುವಿನ ಅಧಿಕಾರ ಸಂಬಂಧಗಳನ್ನು ಮತ್ತು ಅದು ಸೃಷ್ಟಿಸಿದ ಭೇದ-ಭಾವದ ರೇಖೆಗಳನ್ನು ಅಳಿಸಿದಾಗ ಮಾತ್ರ ಬದುಕು ತಾನಾಗಿಯೇ ಹಸನಾಗುತ್ತದೆ ಇನ್ನೂ ವೈನಾಗುತ್ತದೆ ಎಂಬ ಆಶಯದೊಂದಿಗೆ ಕತೆ ಪರಿಸಮಾಪ್ತಿಗೊಳ್ಳುತ್ತದೆ. ಆದರೆ ಕತೆ ಓದುಗನೊಳಗೆ ಅವಿನಾಶಿಯಾಗಿ ಉಳಿಯುತ್ತದೆ.
- ಧನುಷ್ ಹೆಚ್ ಶೇಖರ್