‘ಈಸಾಡತಾವ ಜೀವಾ’ ಲೇಖಕ ಶ್ರೀಧರ ಬಳಗಾರ ಅವರ ಕಥಾಸಂಕಲನ. ದಟ್ಟವಾದ ವಿವರಗಳು ಸನ್ನಿವೇಶಗಳನ್ನೂ, ಪಾತ್ರಗಳನ್ನೂ ಅಧಿಕೃತವಾಗಿ ಚಿತ್ರಿಸುವ ಬಳಗಾರರು ತಾವು ಕಟ್ಟಿಕೊಡುವ ಜೀವನಸಂದರ್ಭಗಳ ಮೂಲಕ ಸಮಕಾಲೀನ ನಾಗರೀಕತೆಯ ಸ್ವರೂಪವನ್ನೂ ಅದರ ವೈವಿಧ್ಯಮಯ ಪರಿಣಾಮಗಳನ್ನೂ ಸ್ಪರ್ಶಿಸಿಬಿಡುವ ಮಹತ್ವಾಕಾಂಕ್ಷೆಯಲ್ಲಿ ತಮ್ಮ ಕತೆಗಳನ್ನು ರಚಿಸಿದ್ದಾರೆ. ಸೂಕ್ಷ್ಮದಿಂದ ಸ್ತೂಲವನ್ನು, ಸ್ಥಳೀಯವಾದುದರಿಂದ ವಿಶ್ವಾತ್ಮಕವಾದುದನ್ನು ಮುಟ್ಟ ಬಯಸುವ ಇಲ್ಲಿನ ಕತೆಗಳು ಸಮಕಾಲೀನ ಕಥಾಸಾಹಿತ್ಯಕ್ಕೆ ಗುಣಾತ್ಮಕ ಸೇರ್ಪಡೆಗಳಾಗಿವೆ. ಸೂಕ್ಷ್ಮವಾಗಿ ಗಮನಿಸಿದರೆ ಬಳಗಾರರ ಎಲ್ಲ ಕಥೆಗಳಲ್ಲಿರುವ ದೃಶ್ಯ, ಶ್ರವ್ಯ ಮತ್ತು ಪ್ರಾಣೇಂದ್ರಿಯದ ಖಚಿತ ಪ್ರತಿಮೆಗಳು ಬರವಣಿಗೆಗೆ
ಕವಿತೆಯ ಸೊಬಗನ್ನೂ ಮಿಂಚನ್ನೂ ತಂದಿರುವುದು ತಿಳಿಯುತ್ತದೆ. ಇಳೆಯೊಡನೆ ಪವಿತ್ರವಾದ, ನಿಕಟವಾದ ಸಜೀವ ಸಂಬಂಧ ಮನುಷ್ಯರಿಗೆ ಸಾಧ್ಯವಾಗಬೇಕು ಅನ್ನುವುದು ಅವರ ಎಲ್ಲ ಕಥೆಗಳ ಮೂಲದಲ್ಲಿ ಕೇಳುವ ಶೃತಿ. ಸಂಪ್ರದಾಯ ಶರಣವಲ್ಲದ, ಬಂಡಾಯದ ವ್ಯಕ್ತ ಘೋಷಣೆಯೂ ಅಲ್ಲದ, ಆದರೆ ತನ್ನ ನಿಲುವನ್ನು ಪ್ರಕಟಿಸಲು, ಪರೀಕ್ಷಿಸಿಕೊಳ್ಳಲು ಹಿಂಜರಿಯದ ಸಂಯಮಪೂರ್ಣ ಸಾವಧಾನದ ಕಥೆಗಳು ಓದುಗರಲ್ಲಿ ಸಾರ್ಥಕ ಭಾವವನ್ನು ಮೂಡಿಸುತ್ತವೆ.
ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ 'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ. ...
READ MOREಕತೆ ಕೇಳೋಣ ಬನ್ನಿ ಸರಣಿಯಲ್ಲಿ ಕತೆಗಾರ ಶ್ರೀಧರ ಬಳಗಾರ ಅವರಿಂದ ‘ಹಾದಿಯಲ್ಲ’ ಕತೆ ವಾಚನ