‘ಕಳವಳದ ದೀಗಿ’ ಲೇಖಕ ನಾಗರಾಜ ಕೋರಿ ಅವರ ಕಥಾಸಂಕಲನ. ಇಲ್ಲಿರುವ ಕಥೆಗಳು ಈಗಾಗಲೇ ರಾಜ್ಯದ ಹಲವು ಕಥಾ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆದು, ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ 9 ಕಥೆಗಳ ಗುಚ್ಚ. ಸಿಂಧನೂರು, ಮಾನ್ವಿ ಸೀಮೆಯ ಭಾಷೆ-ಬದುಕು ಇಲ್ಲಿನ ಕತೆಗಳ ಅಂತಸತ್ವ, ಅಲ್ಲಿನ ಸಾಮಾಜಿಕ ಸಂಕಟಗಳನ್ನು ತಮ್ಮದೇ ಶೈಲಿಯಲ್ಲಿ ನಾಗರಾಜ ಕೋರಿಯವರು ಕಟ್ಟಿಕೊಡಲು ಪ್ರಯತ್ನಿಸುತ್ತಾರೆ. ನಗರಕ್ಕೆ ಬಂದು ನಾವು ಮರೆತೇ ಹೋಗಿರುವ ಆ ಭಾಗದ ಎಷ್ಟೋ ವಿವರಗಳು, ವ್ಯಕ್ತಿತ್ವಗಳು, ನುಡಿಗಟ್ಟುಗಳು ಇಲ್ಲಿನ ಕತೆಗಳಲ್ಲಿ ತುಂಬಿ ತುಳುಕಿವೆ ಎಂದಿದ್ದಾರೆ ಕಥೆಗಾರ ಮಂಜುನಾಯಕ ಚೆಳ್ಳೂರು. ಹಾಗೆ ಈ ಕೃತಿಗೆ ಬೆನ್ನುಡಿ ಬರೆದಿರುವ ಚಿಂತಕ ರಂಗನಾಥ ಕಂಟನಕುಂಟೆ ಅವರು ಇಲ್ಲಿನ ಕತೆಗಳಲ್ಲಿ ಹೆಣ್ಣಿನ ನುಡಿಯೊಂದು ಕೇಳಿ ಬರುತ್ತದೆ. ಆ ನುಡಿಯನ್ನು ಕೇಳಿಸಿಕೊಳ್ಳುವ ಮನಸ್ಸು ಈ ಲೋಕಕ್ಕೆ ಇರಬೇಕಾಗಿದೆ. ಅದನ್ನು ಕೇಳಿಸಿಕೊಳ್ಳದ ಮನಸ್ಸು ಬಂಡೆಗಲ್ಲೇ ಸರಿ ಎಂದಿದ್ದಾರೆ. ಹಾಗೆಯೇ ನಮ್ಮ ಸಮಾಜವು ಜಾತಿ ಧರ್ಮಗಳ ಬೇಲಿಯನ್ನು ಮೀರಿ ಜೀವಿಸುತ್ತಿರುವ ಬಗೆಯನ್ನು, ಧರ್ಮರಾಜಕಾರಣ ಸಮಾಜವನ್ನು ಛಿದ್ರಗೊಳಿಸುತ್ತಿರುವುದನ್ನು ಇಲ್ಲಿನ ಕತೆಗಳು ಹೆಚ್ಚು ಪ್ರಸ್ತುತಪಡಿಸಿವೆ ಎಂದಿದ್ದಾರೆ.
ಯುವ ಬರಹಗಾರ ನಾಗರಾಜ ಕೋರಿ ಅವರು ಜನಿಸಿದ್ದು 1986 ಜೂನ್ 6ರಂದು. ರಾಯಚೂರು ಜಿಲ್ಲೆ ಸಿಂದನೂರು ತಾಲ್ಲೂಕಿನ ಬನ್ನಿಗನೂರು ಗ್ರಾಮದವರು. ಪ್ರಸ್ತುತ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. ಇವರ ತನುಬಿಂದಿಗೆ ಕೃತಿಯು ನಾವು ನಮ್ಮಲ್ಲಿ ಮತ್ತು ಅಹರ್ನಿಶಿ ಪ್ರಕಾಶನದ ವಾರ್ಷಿಕ ಸರಣಿಗೆ ಆಯ್ಕೆಯಾಗಿದೆ. ಇವರ ಇನ್ನೊಂದು ಪ್ರಮುಖ ಕವನ ಸಂಕಲನವೆಂದರೆ ಬುದ್ಧಗಿತ್ತಿಯ ನೆನಪು. ...
READ MORE