ಶೋಭಾ ನಾರಾಯಣ ಹೆಗಡೆ ಅವರ ‘ಒಡಲ ಪ್ರೀತಿ’ ಕೃತಿಯು ಕಥಾ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಎಚ್. ಎಸ್. ಸತ್ಯನಾರಾಯಣ ಅವರು, ಶೋಭಾ ಅವರ ‘ಒಡಲ ಪ್ರೀತಿ’ ಯಲ್ಲಿ ಅಂತಃಕರಣ ತುಂಬಿದ ಆಪ್ತದನಿಯೊಂದು ಬದುಕನ್ನು ಆವರಿಸಿರುವ ಬೆರಗು, ತಲ್ಲಣ, ತಳಮಳ, ವಿಷಾದ, ಮಮತೆ ಮುಂತಾದ ಸಂಗತಿಗಳ ಸುತ್ತ ಹೊರಸೂಸಿದ ಕನವರಿಕೆಗಳಿವೆ. ಕಥೆ ಅಥವಾ ಪ್ರಬಂಧಕ್ಕಿಂತ ಭಿನ್ನವಾದ ಜಾಡಿನಲ್ಲಿ ಸಾಗುವ ಇಲ್ಲಿನ ಬರಹಗಳ ಹಿಂದೆ ಅದಮ್ಯ ಜೀವನ ಪ್ರೀತಿಯೊಂದು ಚಾಚಿಕೊಂಡಿವೆ. ನಿತ್ಯ ಬದುಕಿನ ಹತ್ತು ಹಲವು ಸಂಗತಿಗಳ ಸುತ್ತ ಬಿಚ್ಚಿಕೊಳ್ಳುವ ಈ ಕಥನ ಲೇಖಕಿಯ ಕಾಳಜಿಯನ್ನು ಎದ್ದು ಕಾಣಿಸುವಲ್ಲಿ ಸಫಲವಾಗಿವೆ. ಓದುತ್ತ ಹೋದಂತೆ ಇಲ್ಲಿರುವ ಸಂಗತಿಗಳು ಕಣ್ಣೆದುರು ನಡೆಯುವಂತೆ ಭಾಸವಾಗುತ್ತವೆ. ಇದರ ಹಿಂದಿನ ಸ್ತ್ರೀ ಚೈತನ್ಯ ಶಕ್ತಿ ಅಪರೂಪದ ಸಂವೇದನೆ ಎಂಬುದೂ ಮುಖ್ಯ. ವಾಸ್ತವತೆಗೆ ಭಾವಪೂರ್ಣತೆಯನ್ನು ಬೆರೆಸಿ ಕಟ್ಟಿಕೊಟ್ಟಿರುವ ನಾನು ನದಿಯಾದಾಗ..ಇಂತಹ ಅನೇಕ ಚಿತ್ರಗಳು ಈ ಲೇಖಕಿಯೊಳಗಿರುವ ಕವಿ ಹೃದಯವನ್ನು, ಮಾತೃ ವಾತ್ಸಲ್ಯವನ್ನು, ಸರಳ ಸುಭಗ ಶೈಲಿಯನ್ನು ಓದುಗರ ಅರಿವಿಗೆ ರವಾನಿಸುತ್ತದೆ. ಸಾಮಾನ್ಯ ಸಂಗತಿಗಳನ್ನೂ ವಿಚಾರದ ಒರೆಗೆ ಹಚ್ಚಿ ಬರಹದ ರೂಪ ಕೊಡುವ ಜಾಣ್ಮೆ ಕೂಡ ಮೆಚ್ಚುಗೆಯಾಯಿತು. ಬದುಕನ್ನು ಸಹನೀಯವಾಗಿಸಿಕೊಳ್ಳುವ ದಾರಿಯ ಶೋಧದಂತಿರುವ ಇಂತಹ ಲಘು ಧಾಟಿಯ ಬರಹಗಳು ಮನಸ್ಸನು ಪ್ರಫುಲ್ಲಗೊಳಿಸುವ ಶಕ್ತಿ ಹೊಂದಿವೆ’ ಎಂದು ಪ್ರಶಂಸಿಸಿದ್ದಾರೆ.
ಲೇಖಕಿ ಶೋಭಾ ನಾರಾಯಣ ಹೆಗಡೆ ಅವರು ಮೂಲತಃ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಗ್ರಾಮದವರು. ಪೂರ್ವವಾಹಿನಿ ಅವರ ಅಂಕಿತ ನಾಮ. ಎಸ್. ಎಸ್. ಎಲ್. ಸಿ ವರೆಗೂ ವಿದ್ಯಾಭ್ಯಾಸ ಪೂರೈಸಿ, ಸ್ವಯಂ ಉದ್ಯೋಗಿಯಾಗಿದ್ದಾರೆ. ಸಮಾಜ ಸೇವೆ ಅವರ ಆಸಕ್ತಿ. ಕೃತಿಗಳು : ಒಡಲ ಪ್ರೀತಿ (ಕಥಾಸಂಕಲನ). ...
READ MORE