‘ಒಂದು ಫೋಟೋದ ನೆಗೆಟಿವ್’ ಕೃತಿಯು ಶ್ರೀಧರ ಬಳಗಾರ ಅವರ ಸಣ್ಣ ಕತೆಗಳ ಸಂಕಲನವಾಗಿದೆ. ಇಲ್ಲಿನ ಕತೆಗಳಲ್ಲಿ ದಕ್ಷಿಣ ಭಾಗದ ಓದುಗರಿಗೆ ಹೊಸ ಅನುಭವವನ್ನು ನೀಡುವಂತಹ ಅಂಶಗಳಿವೆ. ಉತ್ತರ ಕರ್ನಾಟಕದ ಅನೇಕ ಕಟ್ಟುಪಾಡು, ರೀತಿ ರಿವಾಜು, ಆಚಾರ-ವಿಚಾರ, ಸಂಸ್ಕೃತಿಯೂ ಪ್ರತಿ ಕತೆಯಲ್ಲಿ ಅನಾವರಣಗೊಳ್ಳುವ ಬಗೆ ಅನನ್ಯವಾಗಿದೆ. ಬಳಸಿರುವ ಅನೇಕ ಪ್ರತಿಮೆ, ರೂಪಕಗಳು ಕತೆಗಳಿಗೆ ಘನತೆಯನ್ನು ಕೊಡುತ್ತವೆ. ಹೆಣ್ಣೊಬ್ಬಳಿಗೆ ತನ್ನ ತವರಿನ ಕುರಿತು ಇರುವ ವ್ಯಾಮೋಹವನ್ನು ಲೇಖಕ ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಬಾಲ್ಯದ ಮಧುರ ಸ್ಮೃತಿಗಳುಳ್ಳ ಬಾಳಿ ಬದುಕಿದ ಮನೆಗೆ ಹೋಗುವುದಕ್ಕೆ ಹಲವಾರು ಭಾವನೆಗಳ ಜೊತೆಗೂಡಿ ಚಡಪಡಿಸುವ ರೀತಿಯನ್ನು ವಿಶ್ಲೇಷಿಸಲಾಗಿದೆ. ಈ ಕತೆಯು ಜೀವನವು ತೊಟ್ಟಿಲಂತೆ ಮೇಲಕ್ಕೆ ಕೆಳಕ್ಕೆ ಉರುಳುತ್ತಿರುತ್ತದೆ ಎನ್ನುವ ಮಾರ್ಮಿಕ ಸತ್ಯವನ್ನು ಸಾರುತ್ತದೆ .
‘ಒಂದು ಫೋಟೋದ ನೆಗಟಿವ್’ ಕೃತಿಯ ವಿಮರ್ಶೆ
ಶ್ರೀಧರ ಬಳಗಾರರ ಹೆಸರನ್ನು ಅಲ್ಲಲ್ಲಿ ಕೇಳಿದ್ದೆನಾದರೂ ಇಲ್ಲಿಯ ತನಕ ಓದಿರಲಿಲ್ಲ. ಅದ್ಯಾವುದೋ ಅಕಾಡೆಮಿಯೋ, ಪ್ರಾಧಿಕಾರದಲ್ಲೋ ಇದ್ದ ಮನು ಬಳಿಗಾರ ಎನ್ನುವ ಹೆಸರು ನೆನಪಿತ್ತು. ಇವರ ಪ್ರಸ್ತಾವನೆ ಬಂದಾಗಲೆಲ್ಲ ನೆನಪಾಗುತ್ತಿದ್ದುದು ಅದೇ ಮನು ಬಳಿಗಾರರ ಹೆಸರು. ಅಕಾಡೆಮಿ ಸಾಹಿತಿಗಳ ಸಾಹಿತ್ಯ ಎಲ್ಲರಿಗೂ ಗೊತ್ತಿರುವಂತದ್ದೆ. ಜೊತೆಗೆ ನನ್ನ ಅನಾಸಕ್ತಿ ಮತ್ತು ಅಸಡ್ಡೆಯೂ ಕಾರಣವಾಗಿ ಇವರನ್ನು ಓದಲು ಸಾಧ್ಯವಾಗಿರಲಿಲ್ಲ.
ಇಲ್ಲಿನ ಕತೆಗಳನ್ನು ಓದುತ್ತಿದ್ದರೆ, ವಿಶೇಷವಾಗಿ ದಕ್ಷಿಣ ಭಾಗದ ಕನ್ನಡಿಗರಿಗೆ, ಹೊಸ ಅನುಭವ ಕಟ್ಟಿಟ್ಟ ಬುತ್ತಿ. ಉತ್ತರ ಕರ್ನಾಟಕದ ಅನೇಕ ಕಟ್ಟುಪಾಡು, ರೀತಿ ರಿವಾಜು, ಆಚಾರ ವಿಚಾರ, ಸಂಸ್ಕೃತಿ ಪ್ರತಿ ಕತೆಯಲ್ಲಿ ಅನಾವರಣಗೊಳ್ಳುವ ಬಗೆ ಅನನ್ಯವಾದುದು. ಇತ್ತೀಚೆಗೆ ಓದಿದ ಭಿನ್ನ ಕಥಾ ಸಂಕಲನಗಳಲೆಲ್ಲ ಇದು ವಿಶೇಷವಾದುದಾಗಿದೆ. ಶ್ರೀಧರ ಅವರು ಬಳಸುವ ಅನೇಕ ಪ್ರತಿಮೆ, ರೂಪಕಗಳು ಕತೆಗಳಿಗೆ ಘನತೆಯನ್ನು ಕೊಡುತ್ತವೆ ಮಾತ್ರವಲ್ಲ ನಾವೀನ್ಯ ರೀತಿಯ ಓದುವಿಕೆಗೆ ಓದುಗ ಪಕ್ಕಾಗುತ್ತಾನೆ. ಹೊಸದಾಗಿ ಓದುವ ನನ್ನಂತಹವರು ಇಲ್ಲಿಯ ಕತೆಗಳ ಪರಿಸರಕ್ಕೆ ಹೊಂದಿಕೊಳ್ಳಲು ಚಿತ್ತಾಲರ, ಸತ್ಯಕಾಮರ ಸಾಲುಗಳನ್ನು ಎರಡೆರೆಡು ಬಾರಿ ಓದುವಂತೆ ಶ್ರೀಧರ ಬಳಗಾರರ ಸಾಲುಗಳನ್ನೂ ಪುನರಾವರ್ತಿಸಬೇಕು.
ಸಂಕಲನದ ಮೊದಲ ಕತೆ 'ಒಂದು ಫೋಟೋದ ನೆಗೆಟಿವ್' ಸ್ವಹಿತಾಸಕ್ತಿ ಮತ್ತು ಪ್ರಲೋಭನೆಗಳಿಗೆ ಬಲಿಯಾಗುತ್ತಿರುವ ಇಂದಿನವರು ಹೇಗೆ ಸಂಬಂಧಗಳನ್ನು ವ್ಯಾವಹಾರಿಕ ದೃಷ್ಟಿಕೋನದಲ್ಲಿ ನೋಡಬಲ್ಲರು ಎಂಬುದನ್ನು ಎಳೆಎಳೆಯಾಗಿ ತೆರೆದಿಡುತ್ತದೆ. ಸ್ಮೃತಿ ತಪ್ಪಿದ ತಂದೆಗೆ ಹಿಂದಿನ ನೆನಪುಗಳು ಮರಕಳಿಸಲು ಮಗನೊಬ್ಬ ಭಗೀರಥ ಪ್ರಯತ್ನ ನಡೆಸುತ್ತಾನೆ. ಕಾರ್ಯಸಾಧು ವಿಫಲಗೊಂಡ ಬಳಿಕ ಕಡೆ ಯತ್ನ ಎನ್ನುವಂತೆ ತನ್ನ ಅಪ್ಪನ ಹಳೆಯ ಫೋಟೋ ತೋರಿಸಿದರೆ ನೆನಪು ಮರುಕಳಿಸಬಹುದು ಎನ್ನುವ ದೂ(ದು)ರಾಲೋಚನೆ ಬಂದ ಕೂಡಲೇ, ಊರಿನ ಅಸಂಖ್ಯಾತ ನೆನಪುಗಳನ್ನು ತನ್ನ ಕ್ಯಾಮೆರಾ ಕಣ್ಣಲ್ಲಿ ಕಪ್ಪುಬಿಳುಪು ಕಾಲದಿಂದಲೂ ಸೆರೆ ಹಿಡಿದಿಟ್ಟ ಛಾಯಾಗ್ರಾಹಕನನನ್ನು ಎಡತಾಕುತ್ತಾನೆ. ವಯೋವೃದ್ಧ ಗುಣ ಹೊಂದಲಿ ಎನ್ನುವ ಹಾರೈಕೆಯಿಂದ ಧೂಳು ಹಿಡಿದ ಹಳೆಯ ಭಂಡಾರವನ್ನೆಲ್ಲ ತಡಕಾಡಿ ತಾನು ಸೆರೆ ಹಿಡಿದ ಅವನ ಫೋಟೋದ ನೆಗೆಟಿವ್ ಬಳಸಿ ಫೋಟೋ ಮಾಡಿ ತರುತ್ತಾನೆ. ನಿಜಕ್ಕೂ ತನ್ನ ತಂದೆ ಗುಣ ಹೊಂದಲಿ ಎನ್ನುವ ಸದಾಶಯವಲ್ಲದೆ, ಸ್ಮೃತಿ ಮರುಕಳಿಸದರೆ, ಆಸ್ತಿಯನ್ನು ತನ್ನ ಪಾಲಿಗೆ ಬರೆಸಿಕೊಳ್ಳಬಹುದೆನ್ನುವ ಕುತಂತ್ರ ಮಗನದೆಂದು ತಿಳಿದು ಛಾಯಾಗ್ರಾಹಕ ಜಿಜ್ಞಾಸೆಗೆ ಬೀಳುತ್ತಾನೆ. ಸಂಬಂಧಗಳ ನಿರರ್ಥಕತೆ, ನಿರ್ಭಾವುಕತೆ ಅವನನ್ನು ಮುತ್ತುತ್ತವೆ. ಆಸ್ತಿ ಹಂಚಿಕೆಗಾಗಿ ನಡೆದ ಮಗನ ಪ್ರಯತ್ನ ಅವನನ್ನು ಮೂಕನನ್ನಾಗಿಸುತ್ತದೆ.
'ಇರುವುದೆಲ್ಲವ ಬಿಟ್ಟು' ಕತೆ ಎಷ್ಟೇ ವರ್ಷಗಳಾದರೂ ತವರು, ತವರು ಮನೆಯ ಮೇಲೆ ತೀರದ ಬಯಕೆ, ಆರದ ಮೋಹ, ಇಂಗದ ದಾಹ, ಮುಗಿಯದ ಸೆಳತವಿದ್ದ (ಇದೆಲ್ಲ ಕೇವಲ ಕ್ಲೀಷೆ) ಹೆಣ್ಣು ಮಗಳೊಬ್ಬಳ ಕತೆಯಾಗಿದೆ. ಮಾತುಗಳಲ್ಲಿ ಜೋಡಿಸಲಾಗದ ಮಧುರ ವೇದನೆ ಹೇಗೆ ಅವ್ಯಕ್ತವೋ ಹೆಣ್ಣುಮಕ್ಕಳ ತವರಿನ ಮೋಹವೂ ಹಾಗೆಯೇ ಅವ್ಯಕ್ತ ರಸಪುಂಜಿ. ಸಂಬಂಧದ ಕೊಂಡಿ ಕಳಚಿ ಹತ್ತಾರು ವರ್ಷ ಸರಿದ ನಂತರ ತಮ್ಮ ತವರಿನಿಂದ ಅಕ್ಕನನ್ನು ನೋಡಲು ಬರುತ್ತಾನೆ. ಮನೆ ಮಾರುವ ಯತ್ನ ಅವನದು. ಶಾಪಗ್ರಸ್ಥ ಮನೆಯದು. ಹೀಗಾಗಿ ಮಾರುವ ಮುನ್ನ ಹಿರಿಯರಿಗೆ ತಿಳಿಸಿ ಮಾರಿದರೆ ಒಳ್ಳೆಯದೆನ್ನುವ ಉದ್ದೇಶಕ್ಕೆ ಭಾಗಶಃ ಮರೆತು ಹೋದ ಅಕ್ಕನ ಮನೆಗೆ ಬರುತ್ತಾನೆ. ಮುಗಿದೇ ಹೋಯಿತು ಎನ್ನುವ ತವರು ಮನೆಯ ಬಳ್ಳಿ ಮತ್ತೆ ಚಿಗುರಿದ್ದಕ್ಕೆ ಸಂತಸ ಹೊಂದಬೇಕೋ ಅಥವಾ ಬಾಲ್ಯದ ಮಧುರ ಸ್ಮೃತಿಗಳುಳ್ಳ ಬಾಳಿ ಬದುಕಿದ ಮನೆ ಹೋಗುವುದಕ್ಕೆ ಕೊರಗಬೇಕೋ ತಿಳಿಯದೆ ಚಡಪಡಿಸುತ್ತಾಳೆ. ತಾನು ಹುಟ್ಟಿ ಬೆಳದ ಮನೆಯಲ್ಲಿ ಕಟ್ಟಕಡೆಯದಾಗಿ ರಾತ್ರಿ ಮಲಗಿ ತವರಿನ ನೆನಪಿಗೆ ತಿಲಾಂಜಲಿ ಇಡುವ ಅಶುಭ ಗಳಿಗೆ ಕಣ್ಣ್ದುಂಬಿಕೊಳ್ಳಲು ಅರೆ ಮನಸ್ಸಿನಿಂದ ತಮ್ಮನ ಜೊತೆ ಬರುತ್ತಾಳೆ. ಚದುರಿದ ಜೇನುಗೂಡಿನಂತೆ ಅಸಂಖ್ಯಾತ ನೆನಪುಗಳು ಅವಳನ್ನು ಮುತ್ತಿಗೆ ಹಾಕುತ್ತವೆ. ಮರುದಿನ ಮುಂಜಾನೆ ಹೊಸ ಮಾಲೀಕ ಮನೆ ಬಾಗಿಲಿಗೆ ಬಂದು ಇನ್ನೂ ಖಾಲಿ ಮಾಡದಿರುವುದನ್ನು ನೋಡಿ ಗಡಿಬಿಡಿ ಮಾಡುತ್ತಾನೆ. ತಮ್ಮನನ್ನು ಒಳ ಕರೆದು ಮನೆ ಬಿಟ್ಟು ಹೋಗದಿರುವಂತೆ ಸೂಚನೆ ಕೊಡುತ್ತಾಳೆ. ಅಲ್ಲಿಗೆ ಬದುಕು ಅಕ್ಕ ತಮ್ಮನ ಪಾಲಿಗೆ ಮತ್ತೊಮ್ಮೆ ತಿರುವು ತೆಗೆದುಕೊಳ್ಳುತ್ತದೆ.
'ತೊಟ್ಟಿಲು' ಕತೆ ಮತ್ತದೇ ನೆನಪಿನ ಸುರುಳಿಯನ್ನು ಸರಿಸುತ್ತ ತಾನು ಮಾಸ್ತರನಾಗಿ ಕೆಲಸ ಮಾಡಿದ ಹಳ್ಳಿಯನ್ನು ಹಲವು ವರ್ಷಗಳ ನಂತರ ಸಂದರ್ಶಿಸುವ ಮಾಸ್ತರನೊಬ್ಬನ ಮೂಲಕ ಹೇಗೆ ಇಂದಿನ ಯುವ ಜನಾಂಗ ವಿದ್ಯೆಯನ್ನು ಕಲಿತು, ತಕ್ಕುದಾದ ಸಂಸ್ಕಾರ ಮರೆತು ನಗರ, ಪಗಾರ ತರುವ ಕೆಲಸ, ವಿದೇಶ ಪ್ರಲೋಭನೆಗಳಿಗೆ ಸಿಕ್ಕು ತಾನು ಹುಟ್ಟಿ ಬೆಳದ ಮಣ್ಣನ್ನು, ಹೆತ್ತವರನ್ನು ಅನಾಥರನ್ನಾಗಿಸಿ ಹೊರಟು ಬಿಡುತ್ತಾರೆ ಎನ್ನುವ ಮನಕಲಕುವ ದಾರ್ಶನಿಕತೆಯನ್ನು ಮಾಡಿಸುವ ಕತೆ. ರಂಕಲು ರಾಟೆ ಎಂದು ಬಾಲ್ಯ ಕಾಲದಲ್ಲಿ ನಾವು ಮನೆ ಮುಂದಿನ ಬಯಲಲ್ಲಿ, ಶಾಲೆಯ ಮೈದಾನದಲ್ಲಿ, ಜಾತ್ರೆಗಳಲ್ಲಿ ಆಡಿದ್ದೆವೆಲ್ಲ? ಅದೇ ಇಲ್ಲಿ ತೊಟ್ಟಿಲಾಗಿ ಬರುತ್ತದೆ. ಜೀವನ ತೊಟ್ಟಿಲಂತೆ ಮೇಲಕ್ಕೆ ಕೆಳಕ್ಕೆ ಉರುಳುತ್ತಿರುತ್ತದೆ ಎನ್ನುವ ಮಾರ್ಮಿಕ ಸತ್ಯವೂ ಕತೆ ಸಾರುತ್ತದೆ. ಕತೆಯಲ್ಲಿ ಬರುವ ತೊಟ್ಟಿಲನ್ನು ಶ್ರೀಧರ ಬಳಗಾರರು ಆಟಿಕೆಯನ್ನಾಗಿಸದೆ ಜೀವಂತ ಪಾತ್ರವಾಗಿ ಚಿತ್ರಿಸಿದ್ದಾರೆ. ಬೇಕಿದ್ದರೆ ಈ ಸಾಲುಗಳನ್ನೋದಿ: "ಸಾವಿರಾರು ವರ್ಷಗಳ ಹಳೆಯ ಊರನ್ನು ತೊಟ್ಟಿಲು ಪುಟ್ಟ ಮಗುವನ್ನಾಗಿ ಮಾಡಿಕೊಂಡು ಜೋಗುಳ ಹಾಡುತ್ತ ಜೀಕುತ್ತ ಕನಸಿನ ನಿದ್ದೆಗೆ ರಮಿಸತೊಡಗಿತು. ಇಡೀ ಊರೇ ಒಂದು ಅವಿಭಕ್ತ ಕುಟುಂಬವಾಗಿ, ಜಾತ್ರೆಗೆ ಬಂದು ತೊಟ್ಟಿಲು ತೂಗಿಕೊಳ್ಳುವವರೆಲ್ಲ ಒಡಹುಟ್ಟಿದವರಾಗಿ ಬಿಡುವ ಸುಂದರ ಕಲ್ಪನೆಯೇ ಅನಂತಪ್ಪನವರನ್ನು ಕಲಕಿಬಿಟ್ಟಿತು. ತನ್ನ ಗದ್ದೆಯಲ್ಲಿ ನಿಲ್ಲಿಸಿಕೊಂಡು ತೊಟ್ಟಿಲನ್ನು ತೂಗುವ ಅದೃಶ್ಯ ಕೈಗಳು ತನ್ನದೆಂಬ ಮಾತೃತ್ವ ಅವರೊಳಗೆ ಜಿನುಗತೊಡಗಿತು. ಹೊಸದೇ ಆದ ಬಾಲ್ಯ ಆರಂಭವಾಗಿದೆಯೆಂದು ಅವರು ಆವೇಶದಿಂದ ಓಡಾಡತೊಡಗಿದರು"
'ಸಂಲಗ್ನ' ಕತೆ ಸಂಕಲನದಲ್ಲಿರುವ ಧೀರ್ಘ ಕತೆಗಳಲ್ಲೊಂದು. ರಾತ್ರಿ ನಿಲ್ಲಿಸಿದ್ದ ಬಸ್ಸು ಇದ್ದಕ್ಕಿದ್ದಂತೆ ಕಣ್ಮರೆಯಾಗುವ ಮೂಲಕ ಕತೆ ತೆರೆದುಕೊಳ್ಳುತ್ತದೆ. ಬಸ್ಸನ್ನು ಹುಡುಕಲು ಹೊರಟ ಚಾಲಕ ಅನಂತ ದೇಶ ಕಾಲದ ಪರಿಮಿತಿಯನ್ನು ದಾಟಿ ತಾನು ಹುಟ್ಟಿ ಬೆಳೆದ ಹಳ್ಳಿಗೆ ಅರಿವಿನ ಸಂಗಡವೋ ಅಥವಾ ಹೊರತಾಗಿಯೋ ಬರುತ್ತಾನೆ. ಅಲ್ಲಿ ಅವನ ಬಾಲ್ಯವೆನ್ನುವ ಅಮರಕೋಶದಲ್ಲಿ ಸೇರಿಹೋಗಿದ್ದ ಬೆಳ್ಳಜ್ಜನ ದರ್ಶನವಾಗುತ್ತದೆ. ವರ್ತಮಾನದಿಂದ ಭೂತಕ್ಕೆ ಜಿಗಿಯುತ್ತಾನೆ. ಬಾಲ್ಯ ಮರುಕಳಿಸುತ್ತದೆ. ಶಾಲೆಯಲ್ಲಿ ಏಳು ಜನ ಹುಡುಗಿಯರ ನಡುವೆ ಇದ್ದ ಏಕೈಕ ಹುಡುಗ ಅವನಾಗಿರುತ್ತಾನೆ. ವಾರ್ಷಿಕೋತ್ಸವದಲ್ಲಿ ಆಡಿದ ದುಷ್ಯಂತ ಶಕುಂತಲಾ ನಾಟಕ, ಅದರಲ್ಲಿ ಭವಾನಿಗೆ ಉಂಗುರ ತೋಡಿಸಿದ್ದು ಮೋಹದಿಂದಲೋ ಮಾಯೆಯಿಂದಲೋ ತಿಳಿಯದೆ ಚಡಪಡಿಸಿದ್ದು, ಅವನ ಮನೆಯ ಹಿರಿಯರು ಊರಿಗೆ ವಲಸೆ ಬಂದದ್ದು, ನೆಲೆ ನಿಂತದ್ದು, ಹಳ್ಳಿಯಲ್ಲಿ ಪ್ರಾರಂಭಗೊಂಡ ಹೆಂಚಿನ ಕಾರ್ಖಾನೆ, ಕಾಲಾನಂತರದಲ್ಲಿ ಹೊಸ ತಂತ್ರಜ್ಞಾನ ಆವಿಷ್ಕಾರಕ್ಕೆ ಪತನಗೊಂಡಿದ್ದು, ಈಗ ಮತ್ತೊಮ್ಮೆ ನೆನಪಾಗಿ ನಾಟಕ ಆಡಲು ನಡೆಸಿದ ತಯಾರಿ, ತಾಲೀಮು, ಅದೇ ಭವಾನಿಯ ಕೈಗೆ ಮತ್ತೊಮ್ಮೆ ಉಂಗುರ ತೊಡಿಸುವ ಅವಕಾಶ, ಮನದಲ್ಲೆದ್ದ ಅರ್ಥವಾಗದ ಬಯಕೆಗಳು, ಬಯಕೆ ಬಸಿರಾಗಿ ರೆಕ್ಕೆ ಮೂಡಿ ಹಾರಬೇಕೆನ್ನುವ ಗಳಿಗೆಯಲ್ಲಿ ಅಜ್ಞಾತವಾಗಿ ಕಳೆದು ಹೋಗಿದ್ದ ಬಸ್ಸು ಚಾತುರ್ಯವೋ ಚಮತ್ಕಾರವೋ ಎನ್ನುವಂತೆ ಸಿಕ್ಕು ಅವನಿಗೆ ಸುದ್ದಿ ಬಂದದ್ದು, ಹೇಳಬೇಕಾದ ಆಡಿ ನೀಗಿಸಿಕೊಳ್ಳಬೇಕಾದ ಪಿಸುಮಾತು ಕೊರಳ ಸೆರೆಯಲ್ಲೇ ಬಂದಿಯಾದದ್ದು..ಕತೆ ಕಾಲವನ್ನು ದಾಟಿ ನಮ್ಮನ್ನು ಪರಕಾಯ ಪ್ರವೇಶಿಸುವಂತೆ ಮಾಡುತ್ತದೆ.
'ಮೃಣ್ಮಯ' ಕತೆ ಕೂಡ ಬಾಲ್ಯದ ಬೆಚ್ಚಗಿನ ನೆನಪುಗಳೊಂದಿಗೆ ಬೆಸುಗೆ ಹಾಕಿಕೊಂಡಿರುವ ಕತೆ. ಹಳ್ಳಿಯಿಂದ ನಗರಕ್ಕೆ ಮದುವೆಯಾಗಿ ಬಂದ ನಂತರ ನಗರಾಕರ್ಷಣೆ ಅಸಹಜವಲ್ಲವೆನ್ನುವಂತೆ ಕೇತಕಿಗೆ ಇಳಿಮುಖವಾಗಿ ತಾನು ಹುಟ್ಟಿ ಬೆಳೆದ ಹಳ್ಳಿ ಬಾಲ್ಯ ಪರಿಸರ ಹೆಚ್ಚು ಆಪ್ತವೆನಿಸತೊಡಗುತ್ತದೆ. ದುಬಾರಿ ಹಣ ತೆತ್ತು ಒಳಹೊಕ್ಕ ಕೃತಕವಾಗಿ ನಗರದಲ್ಲಿ ನಿರ್ಮಿಸಿದ ಆದಿ ಮಾನವರ ಪರಿಸರ ಗುಹೆ ಕೂಡ ಅವಳ ಸಹಜ ಕುತೂಹಲ ಆಸಕ್ತಿ ತಣಿಸುವುದಿಲ್ಲ. ಅವಳ ಅಂತಃಸತ್ವ ಮಿಡಿಯುವುದು ಮಣ್ಣಿನಲ್ಲಿ. ಅವಳೀಗ ಬಸುರಿ. ಬಯಕೆ ಹೆಚ್ಚು. ಮಣ್ಣು ತಿನ್ನುವ, ಅದರಲ್ಲೂ ಹುಟ್ಟಿ ಬೆಳೆದ ನೆಲದ ಮಣ್ಣು ಮೂಸುವ, ಪಾದದ ಹೆಜ್ಜೆ ಗುರುತುಗಳು ಮೂಡಿ ಮಾಯವಾಗಿದ್ದ ತನ್ನ ಹಳ್ಳಿಯ ಮಣ್ಣನ್ನು ತಿನ್ನುವ ಹೆಬ್ಬಯಕೆ ಅವಳದು. ಗಂಡ ಎರಡನೆಯ ಮಾತಿಲ್ಲದೆ ಹಳ್ಳಿಗೆ ಅವಳ ಬಯಕೆಯಂತೆ 'ಮಣ್ಣು ತಿನ್ನಲು' ಕಳುಹಿಸುತ್ತಾನೆ. ಜಗತ್ತು ಕೈಗೆಟುಕಿದಂತೆಯೋ ಅಥವಾ ಅದರ ಪರಿವೆ ಇಲ್ಲದಷ್ಟು ಪರಿಮಾಣಕ್ಕೆ ಸಿಕ್ಕ ಸಂತೋಷದಿಂದಲೋ ಹಳ್ಳಿಗೆ ಬಂದು, ಬಾಲ್ಯದಲ್ಲಿ ಅವಳನ್ನು ಸ್ವಂತ ಮಗಳಂತೆ ಆಡಿಸಿ ಮುದ್ದಿಸಿ ಬೆಳೆಸಿ ಸಾಕಿದ್ದ ಅಪ್ಪಚ್ಚಿ ತಾತನೊಡನೆ ಕೇತಕಿ ಮತ್ತದೇ ಬಾಲ್ಯಕ್ಕೆ ಹಿಂದಿರುಗಿ ಮನಸೋ ಇಚ್ಛೆ ವಿಹರಿಸಿ, ಅಮ್ಮೀ ಬಸುರಿ ಬಯಕೆ ಏನು ಎಂದು ಕೇಳಿದಾಗ, ಹೇಳಲೋ ಬೇಡವೋ ಎನ್ನುವಂತೆ ಹುಸಿ ಮುನಿಸು ತೋರಿಸಿ, ಹುಟ್ಟಿ ಬೆಳೆದ ನೆಲದ ಮಣ್ಣು ತಿನ್ನುವಾಸೆ ಎಂದು ಹೇಳುವಷ್ಟರಲ್ಲಿ ಕತೆಗೆ ಉಭಯ ಕುಶಲೋಪರಿ ಸಾಂಪ್ರತ.
'ತಿಮ್ಮಕ್ಕನ ದರ್ಶನಗಳು' ಕತೆ ಇಂದಿನ ಬಹುಸಂಖ್ಯಾತ ಮನೆಗಳಲ್ಲಿ ಯಾರ ಕೃಪೆಗೂ ಒಳಗಾಗದೆ ಅವಸಾನದಲ್ಲಿರುವ ಮುರುಕು ಮಂಟಪದಂತೆ ಬೀಳಲೂ ಆಗದೆ ನಿಲ್ಲಲೂ ಆಗದೆ ಪರಿತಪಿಸುತ್ತಿರುವ ಪರಿತ್ಯಕ್ತ ವಯಸ್ಸಾದವರ ಕತೆ ವ್ಯಥೆ, ಸಂಕಷ್ಟ, ನೋವು ನಲಿವು, ಹೊಸ ಪೀಳಿಗೆಯವರೊಟ್ಟಿಗೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ, ಆಧುನಿಕತೆಯೊಂದಿಗೆ ಒಡಂಬಡದ ಸಾಂಪ್ರಾದಾಯಿಕತೆ, ಹಳೆಯ ಬೇರು ಮತ್ತು ಹೊಸ ಚಿಗುರಿನ ನಡುವೆ ಆಯಾಚಿತವಾಗಿ ಮೂಡಬಹುದಾದ ಭಿನ್ನ ನಿಲುವು ಅಭಿಪ್ರಾಯ ಅಸಮಾಧಾನಗಳ ಕುರಿತು ಹೇಳುತ್ತದೆ. ಕತೆಯಲ್ಲಿರುವ ತಿಮ್ಮಕ್ಕ ಕೇವಲ ಸೂಚ್ಯ ವ್ಯಕ್ತಿಯಷ್ಟೇ. ಕಣ್ಣ್ದೆರೆದು ನೋಡಿದಾಗ ಅಕ್ಕಪಕ್ಕದಲ್ಲಿ, ಸನಿಹದಲ್ಲಿ, ಅಷ್ಟೇ ಏಕೆ? ನಮ್ಮ ಮನೆಗಳಲ್ಲೇ ತಿಮ್ಮಕ್ಕನ ದೀನ ಹೀನ ಸ್ಥಿತಿ ಹೊತ್ತ ಅದೆಷ್ಟೋ ನಗಣ್ಯ ಹಿರಿಯರು ಕಾಣುತ್ತಾರೆ. ಅವರೆಲ್ಲರ ತವಕ ತಲ್ಲಣಗಳನ್ನು ಅಭಿವ್ಯಕ್ತಿಗೊಳಿಸುತ್ತಲೇ, ಹಿರಿಜೀವಗಳ ಬಗ್ಗೆ ಅಸಡ್ಡೆಯಿಂದಿರುವ ಯುವ ಜನಾಂಗವನ್ನು ಎಚ್ಚರಿಸುವ ಸದುದ್ದೇಶ ಕತೆಯಲ್ಲಿದೆ. ವಿದ್ಯೆ ನಾಗರೀಕತೆ ಕೆಲಸ ಸಾಮಾಜಿಕ ಸ್ಥಾನಮಾನ ನಮ್ಮನ್ನು ಮನುಷ್ಯರಾಗುವತ್ತ ಕೊಂಡೊಯ್ಯಬೇಕೇ ವಿನಃ ಹಡೆದವರನ್ನು ಹಣಿಯುವತ್ತಲ್ಲ.
(ಬರಹ ;ಡಿ.ಎನ್ ಮೋಹನ್ ಕುಮಾರ್)
©2024 Book Brahma Private Limited.