ಬೊಳುವಾರು ಮಹಮದ್ ಕುಂಞಿ ಅವರ ಕಥಾಸಂಕಲನ ‘ಅಂಕ’. 1986ರಲ್ಲಿ ಪ್ರಥಮ ಮುದ್ರಣ ಕಂಡ ಈ ಸಂಕಲನ 1996ರಲ್ಲಿ ಎರಡನೇ ಮುದ್ರಣವನ್ನು ಕಂಡಿದೆ. 'ಅಂಕ' ಕಥಾಸಂಕಲನದಲ್ಲಿ ಏಳು ಸಣ್ಣ ಕಥೆಗಳಿವೆ. ಅದರಲ್ಲಿನ 'ಅಂಕ' ಎಂಬ ಕಥೆಯಲ್ಲಿ - ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ತನ್ನ ಕಿರಿಮಗ ದಾಖಲಾಗಿದ್ದಾನೆ ಎಂಬ ಸುದ್ದಿ ಕೇಳಿದ ವೃದ್ಧೆ ಉಮ್ಮಾಬಿ ಗಾಬರಿಯಿಂದ ಅವನನ್ನು ನೋಡಲು ಹೋಗುತ್ತಾಳೆ. ಮನೆಬಿಟ್ಟು ಹೋಗಿದ್ದ ಆ ಮಗನಿಗೆ ಏನಾಗಿದೆಯೆಂದೂ ಗೊತ್ತಿಲ್ಲದ ಉಮ್ಮಾಬಿ ಆಸ್ಪತ್ರೆಯಲ್ಲಿ ಅವನಿರುವ ವಾರ್ಡ್ ಹುಡುಕುವುದರಲ್ಲೇ ಸುಸ್ತಾಗುತ್ತಾಳೆ. ಕಾರಣ ಅವಳು ವಿಚಾರಿಸಿದ್ದು 'ರೆಹಮಾನ್' ಬಗ್ಗೆ. ಆಸ್ಪತ್ರೆಯ ದಾಖಲೆಗಳಲ್ಲಿ ಅವನ ಹೆಸರು 'ರಮೇಶ' ಎಂದಿತ್ತು. ಅಣ್ಣನಿಂದ ಸದಾ ಹೊಡೆತ, ಹಿಂಸೆ ಪಡೆಯುತ್ತಿದ್ದ ರೆಹಮಾನ್ ತನ್ನ ಮನೆಯಲ್ಲಿ ಕಿಂಚಿತ್ತೂ ಪ್ರೀತಿ,ಗೌರವ ಸಿಗದೆ ಖಿನ್ನತೆಗೆ ಜಾರುತ್ತಿರುವಾಗ, ತನ್ನ ಸಮುದಾಯದ ವರು ಕೆಲಸ ಕೊಡದೆ ಜಾರಿಕೊಂಡಾಗ ಅನ್ಯಧರ್ಮದ ವ್ಯಕ್ತಿ ಕೆಲಸ ಕೊಟ್ಟು ರಕ್ಷಣೆ ನೀಡಿದ್ದರು. ಹಿರಿಮಗನ ಆದಾಯವನ್ನೇ ನಂಬಿಕೊಂಡಿರುವುದರಿಂದ ತಾಯಿ ಅಸಹಾಯಕಳು. ಕಿರಿಮಗ ಮತಾಂತರ ಹೊಂದಿದ ಸುದ್ಧಿ ದಿನಪತ್ರಿಕೆಯಲ್ಲಿ ಬಂದಾಗ ಕುಗ್ಗಿಹೋಗಿದ್ದಳು. ಅಮ್ಮನನ್ನು ಕಾಣಲೆಂದು ಅವನು ಮನೆಗೆ ಬಂದಾಗ ಮುಖ ನೋಡದೆ ನಿಷ್ಠೂರಳಾಗಿ ವರ್ತಿಸಿದ್ದಳು. ಹಿರಿಮಗನ ಸಿಟ್ಟಿಗೆ ಹೆದರಿ ಆಮೇಲೆ ಉಮ್ಮಾಬಿ ಕಿರಿಮಗನನ್ನು ನೋಡಿರಲಿಲ್ಲ. ಸಮುದಾಯದವರು ಬಂದು ರೆಹಮಾನನನ್ನು ವಾಪಸ್ ಮನೆಗೆ ಕರೆತರಲು ಒತ್ತಡ ಹೇರಿದಾಗ ಅವಳು ಕೊಟ್ಟ ಉತ್ತರ ಹೀಗಿದೆ: "ನನ್ಗೆ ಎರಡು ಪಾವು ಅಕ್ಕಿಗೆ ದುಡ್ಡು ಕಳಿಸುವ ದೊಡ್ಡವನ ಮಾತು ಕೇಳ್ಬೇಕಾ? ಅಥ್ವಾ ನಿಮ್ಮ ಮಾತು ಕೇಳ್ಕೊಂಡು ಸಣ್ಣವನನ್ನು ಪುನಃ ಕರ್ಕೊಂಡು ಬಂದು ಉಪವಾಸ ಸಾಯ್ಬೇಕಾ?" ಜನ್ಮ ಕೊಟ್ಟ ತಾಯಂದಿರು ತಮ್ಮ ಆಯುಷ್ಯ ಕಳೆಯುವುದಕ್ಕಾಗಿ ಮಮತೆಯನ್ನೂ ಮರೆಮಾಚಿ ಬದುಕಬೇಕಾಗುತ್ತದೆ ಎಂಬುದು ವಿಪರ್ಯಾಸ. ಹಿಂದೆ ಜೀವನ ನಿರ್ವಹಣೆಗಾಗಿ ರೆಹಮಾನ್ ತನ್ನ ಸಮಾಜದ ಗಣ್ಯ ವ್ಯಕ್ತಿಗಳ ಬಳಿ ಹೋಗಿ ಸಣ್ಣ ಕೆಲಸ ಕೊಡುವಂತೆ ಹಲವು ಬಾರಿ ಯಾಚಿಸಿದರೂ ಸ್ಪಂದಿಸದ ಮುಖಂಡರು, ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಇದ್ದವನನ್ನು ಉಳಿಸಲು ಪ್ರಯತ್ನಿಸುವುದರ ಬದಲು ಅವನ ಸಾವನ್ನು ನಿರೀಕ್ಷಿಸುತ್ತಿದ್ದು, ಹೆಣವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಯೋಜನೆ ಬಗ್ಗೆ ಚರ್ಚಿಸಲು ಸಭೆ ಸೇರಿದ್ದರು. ಬದುಕು ಕಂಡುಕೊಳ್ಳಲು ಅವನಿಗೆ ಸಹಾಯ ಮಾಡದವರು ಅವನ ಸಾವಿನಲ್ಲಿ ಧರ್ಮ ಸಂಸ್ಥಾಪನಾ ಕಾರ್ಯ ಮಾಡಲು ಹೊರಟಿದ್ದರು. ಎಂಥಾ ವಿಡಂಬನೆ!! ಮುಂದೇನು? ತಾಯಿಯ ಮೊರೆಯಂತೆ ನಾಲ್ಕೈದು ದಿನಗಳಲ್ಲಿ ಹುಡುಗನ ಆರೋಗ್ಯವನ್ನು ಸುಧಾರಿಸಿತೇನೋ. ಅವನು ಬದುಕುಳಿದ ಖುಶಿಯಲ್ಲಿ ನೆಮ್ಮದಿ ಪಡೆದ ತಾಯಿ ಉಮ್ಮಾಬಿ ಆಸ್ಪತ್ರೆಯಿಂದ ಅವನು ಡಿಸ್ಚಾರ್ಜ್ ಆಗುವ ಹಿಂದಿನ ದಿನವೇ ಯಾರಿಗೂ ಹೇಳದೆ ಮನೆಗೆ ಹೋಗಿ ಬಿಡುತ್ತಾಳೆ. ತಾನು ಆಸ್ಪತ್ರೆಗೆ ಹೋಗಿದ್ದು ಹಿರಿಮಗನಿಗೆ ತಿಳಿಯಬಾರದೆಂಬ ಕಾಳಜಿ ಅವಳಿಗೆ!
ಕನ್ನಡದ ವಿಶಿಷ್ಟ ಕತೆಗಾರ ಬೊಳುವಾರು ಮಹಮದ್ ಕುಂಞ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ‘ಅತ್ತ, ಇತ್ತಗಳ ಸುತ್ತಮುತ್ತ’. ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ, ಒಂದು ತುಂಡು ಗೋಡೆ, ಅವರ ಕಥಾಸಂಗ್ರಹಗಳು. ತಟ್ಟು ಚಪ್ಪಾಳೆ ಪುಟ್ಟ ಮಗು ಅವರು ಸಂಪಾದಿಸಿದ ಮಕ್ಕಳ ಪದ್ಯಗಳ ಸಂಕಲನ. ಜಿಹಾದ್, ಸ್ವಾತಂತ್ರ್ಯದ ಓಟ, ಓದಿರಿ ಅವರ ಕಾದಂಬರಿಗಳು. ಬ್ಯಾಂಕ್ ಉದ್ಯೋಗಿಯಾಗಿ ನಾಲ್ಕು ದಶಕ ಕೆಲಸ ಮಾಡಿ ನಿವೃತ್ತರಾಗಿರುವ ಬೊಳುವಾರರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ ಗದ್ಯ ಸಾಹಿತ್ಯಕ್ಕೆ ಮುಸ್ಲಿಂ ಬದುಕನ್ನು ಮೊತ್ತ ಮೊದಲು ಪರಿಚಯಿಸಿದ ಇವರು, ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಎಂಬ ...
READ MORE