‘ಬೇಟೆಯಲ್ಲ ಆಟವೆಲ್ಲ’ ಕತೆಗಾರ ಎಂ.ಎಸ್. ಶ್ರೀರಾಮ್ ಅವರ ಕತಾ ಸಂಕಲನ. ಅಕ್ಷರ ಪ್ರಕಾಶನ ಪ್ರಕಟಿಸಿರುವ ಈ ಕೃತಿಗೆ ಕತೆಗಾರ ವಿಕ್ರಂ ಹತ್ವಾರ್ ಬೆನ್ನುಡಿ ಬರೆದಿದ್ದಾರೆ. ‘ಕೇವಲ ರೋಚಕ ಕತೆಯಷ್ಟೆ ಅಲ್ಲ. ಇದು-ತಲೆಮಾರುಗಳ ಘರ್ಷಣೆಯಂತೆ ತೋರುತ್ತಲೇ, ಒಂದೇ ತಲೆಮಾರಿನೊಳಗೆ ಹುದುಗಿರುವ ವಿಭಿನ್ನ ಮನೋಧರ್ಮಗಳ ತುಮುಲಗಳು ಒಂದರ ಮೇಲೊಂದು ಸವಾರಿ ಮಾಡುತ್ತ, ಒಂದಕ್ಕೊಂದು ಹೆಣಿಗೆ ಹಾಕಿಕೊಳ್ಳುತ್ತ ತಲೆಮಾರುಗಳ ನಡುವಿನ ಗೆರೆಯನ್ನು ಸ್ವಲ್ಪ ಸ್ವಲ್ಪವೇ ಮಸುಕಾಗಿಸುವ ಕತೆ’ ಎನ್ನುತ್ತಾರೆ ವಿಕ್ರಂ ಹತ್ವಾರ್. ‘ವ್ಯಾಪಾರೋದ್ಯಮದ ನವಸಂಸ್ಕೃತಿಯು ಧರ್ಮ, ರಾಜಕೀಯ, ಪ್ರೇಮ, ನೈತಿಕತೆಯನ್ನು ವಶಪಡಿಸಿಕೊಂಡು ಹೇಗೆ ಅವುಗಳನ್ನು ಮರುವ್ಯಾಖ್ಯಾನಿಸಿದೆ, ಇಂದಿನ ರಾಜಕೀಯ ಸನ್ನಿವೇಶವು ನಮ್ಮೊಳಗೆ ಹೊಸ ಬಗೆಯ ಪೂರ್ವಾಗ್ರಹಗಳನ್ನು ಹೇಗೆ ತುಂಬಿಸುತ್ತಿದೆ ಅನ್ನುವುದನ್ನು ನಿರೂಪಿಸುವ ಕತೆಯಿದು. ಜೀವನ ನಿರ್ವಹಣೆಗೆ ಆಧುನಿಕತೆಯ ಲಗಾಮು ಹಿಡಿದು, ಜೀವನ ವಿಧಾನದಲ್ಲಿ ಧಾರ್ಮಿಕ ನಂಬಿಕೆಯ ಪೋಷಾಕುಗಳಿಗೆ ಮೊರೆಹೋಗುವ ಅಖ್ತರ್ ಒಂದು ತುದಿಯಲ್ಲಿ. ಧಾರ್ಮಿಕ ಸ್ಥಂಬಗಳನ್ನು ಒಡೆದು ಆಧುನಿಕ ಚಿಂತನದ ಪೋಷಾಕು ಧರಿಸಿರುವ ಅನಿರುದ್ಧ ಇನ್ನೊಂದು ತುದಿ. ಅಪ್ಪಟ ವ್ಯಾಪಾರೀ ಮನೋಧರ್ಮದ ಶಿವಾನಿ ಮತ್ತೊಂದೇ ತುದಿ. ಈ ತ್ರಿಕೋಣದ ನಡುವೆ ಸುಜಾತ ಮೂರೂ ಬಿಂದುಗಳನ್ನು ಎಂದೂ ಮುಟ್ಟಲಾಗದ ಒಳವರ್ತುಲವಾದರೆ, ಚಿನ್ಮಯ ಆ ಬಿಂದುಗಳ ಬೆಸೆಯುವ ಗೆರೆಗಳನ್ನು ಎಂದೂ ಮುಟ್ಟಲಾಗದ ಹೊರವರ್ತುಲ. ಇಂಥ ಪಾತ್ರಗಳ ಜಂಜಾಟಗಳೇ ಈ ಕಾಲದ ಜಟಿಲತೆಯನ್ನು ನನ್ನ ಮನಸ್ಸಿನ ಮೇಲೆ ಗಾಢವಾಗಿ ಅಚ್ಚೊತ್ತಿದೆ. ಶಿವಾನಿಯ ಪಾತ್ರ ಕನ್ನಡ ಜಗತ್ತಿನಲ್ಲಿ ಹೊಸತೊಂದು ಚರ್ಚೆಯನ್ನು ಹುಟ್ಟುಹಾಕುವಷ್ಟು ಗರಿಗರಿಯಾಗಿದೆ. ಕತೆಗಾರ ಪಾತ್ರಗಳ ಜಗತ್ತನ್ನು ಆಕ್ರಮಿಸದಿದ್ದಾಗ ಆ ಪಾತ್ರ ಎಷ್ಟು ಪ್ರಖರವಾಗಿ ನಿಲ್ಲಬಹುದು ಅನ್ನುವುದಕ್ಕೊಂದು ಉದಾಹರಣೆ – ಶಿವಾನಿ. ಅರ್ಬನ್ ಜಗತ್ತಿನ ತಾಜಾ ಅನಾವರಣ ಇಲ್ಲೊಂದು ವಿಶಿಷ್ಟ ಮಾಹೋಲ್ ನಿರ್ಮಿಸಿದೆ. ಹಳೆಯ ರೂಪಕದಂತಿರುವ ಮಾಯಾಬಜಾರಿನಲ್ಲಿ ಹೊಸ ವ್ಯಾಪಾರೀ ಮಳಿಗೆಗಳ ಗಾಜುಗೋಡೆಗಳ ಮೇಲೆ ನಮ್ಮೆಲ್ಲರ ಆಚೆ ಈಚಿನದನ್ನು ಒಟ್ಟಿಗೆ ಕಾಣಿಸುವ ಕಲಸುಮೇಲೋಗರದಂಥ ಪ್ರತಿಫಲನವಿದೆ ಎಂಬುದು ಕತೆಗಾರ ವಿಕ್ರಂ ಹತ್ವಾರ್ ಅಭಿಪ್ರಾಯ.
ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ (1962) ಎಂ.ಎಸ್. ಶ್ರೀರಾಮ್ ಅವರು ಶಿಕ್ಷಣ ಪಡೆದದ್ದು ಉಡುಪಿ, ಬೆಂಗಳೂರು, ಮೈಸೂರು ಮತ್ತು ಆನಂದ್ ದಲ್ಲಿ. ಹೈದರಾಬಾದ್ ನ ಸ್ವಯಂ ಸೇವಾ ಸಂಸ್ಥೆಯೊಂದರಲ್ಲಿ ಎರಡು ವರ್ಷ ಕೆಲಸ ಮಾಡಿದ ಅವರು ನಂತರ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಿಂದ ಡಾಕ್ಟರೇಟ್ ಪಡೆದರು. ಆಮೇಲೆ ಆನಂದದ ಇನ್ಸ್ ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ ಮೆಂಟ್ ಸಂಸ್ಥೆಯಲ್ಲಿ ಬೋಧಕರಾಗಿ, ಹೈದರಾಬಾದ್ ನ ಬೇಸಿಕ್ ಸಂಸ್ಥೆಯಲ್ಲಿ ವೈಸ್ ಪ್ರೆಸಿಡೆಂಟ್ ಆಗಿ, ಅಹಮದಾಬಾದಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರೊಫೆಸರ್ ...
READ MORE