ಲೇಖಕ ಯಲ್ಲಪ್ಪ ಹಂಚಿನಾಳ ಅವರ ಕಥಾ ಸಂಕಲನ- ʻಕಥಾ ಹಂದರʼ. ಈ ಕೃತಿಯಲ್ಲಿ ಜೀವ ಜೀವದೋಳ್, ಶ್ರೀರಾಮಚಂದ್ರನ ಆಗಮನದೋಳ್, ಆತಂಕಿಯ ಅಂತರಂಗದೋಳ್. ಸರಾಯಿಯ ಸಾವಿನೋಳ್ ಮತ್ತು ಭಾಗ್ಯದ ಬಾಗಿಲಿನೋಳ್ ಎಂಬ ಐದು ಕಥೆಗಳಿವೆ. ಕತೆಗಳ ನಿರೂಪಣಾ ಶೈಲಿ, ವಿಷಯ ಮತ್ತು ಭಾಷಾ ಸೊಗಡು ಓದುಗರನ್ನು ಸೆಳೆಯುತ್ತವೆ. ಕೃತಿಗೆ ಬೆನ್ನುಡಿ ಬರೆದ ಲೇಖಕ ಸೋಮು ರೆಡ್ಡಿ ಅವರು ʻ ಕಥೆಗಳನ್ನು ಹೆಣೆಯುವಾಗ ಯಾವುದೇ ಕಥಾ ಮಾದರಿಯನ್ನಾಗಲಿ, ಕಥಾ ಪರಂಪರೆಯ ಸಂಪ್ರದಾಯವನ್ನಾಗಲಿ, ಕತೆಗಿರುವ ಚೌಕಟ್ಟನ್ನಾಗಲಿ ಅನುಸರಿಸಿಲ್ಲ. ಕತೆಗೆ ಬೇಕಾದ ಒಪ್ಪ ಹೂರಣಗಳ, ಹೊಳವು-ಚೆಲುವುಗಳ ಹಂಗಿಗೆ ಬಿದ್ದಿಲ್ಲ. ಯಾರದೋ ಕತೆಗಳಿಗೆ ಮನಸೋತು ಅವರ ಪ್ರಭಾವಕ್ಕೊಳಗಾಗಿ ಸೊಪ್ಪು ಹಾಕಿಲ್ಲ. ಮನುಷ್ಯನ ಭಾಷೆ, ಲಯ, ಭಾವನೆ, ಹಪಾಹಪಿ, ಹೊಯ್ದಾಟ, ತುಡಿತ, ತುಮುಲಗಳನ್ನೆಲ್ಲಾ ಕತೆಗಳಲ್ಲಿ ತೂರಿ, ಕ್ಲಿಷ್ಟವೆನಿಸಿದ ಕಥನಗಾರಿಕೆಯ ಧಾಟಿಯನ್ನು ಅನುರಣಿಸಿ, ತಮ್ಮ ಕಲ್ಪನಾ ಶಕ್ತಿಯ ನೆರವಿನಿಂದ ಕಥೆಯ ಮೂಲ ಆಶಯವನ್ನೂ ಅರ್ಥವನ್ನೂ ನೀಡುತ್ತಾ ಸಾಗಿದ್ದಾರೆ. ಕತೆಗಳಲ್ಲಿ ಕಥೆಗಾರನ ನೆಲದ ವಾಸನೆ ದಟ್ಟವಾಗಿ ಹರಡಿಕೊಂಡಿದೆ. ಗ್ರಾಮ್ಯ ಪರಿಸರ, ಅಲ್ಲಿನ ಜನಜೀವನ, ಭಾಷೆ, ನುಡಿಗಟ್ಟಿನ ಮೂಲಕ ಕತೆಗಳು ಗಮನ ಸೆಳೆಯುತ್ತವೆʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಲೇಖಕ ಯಲ್ಲಪ್ಪ ಮುದಕಪ್ಪ ಹಂಚಿನಾಳ (ಹಂಚಿ) ಅವರು ಗದಗ ಜಿಲ್ಲೆಯ ಹುಯಿಲಗೋಳದಲ್ಲಿ 1988 ಜುಲೈ 20ರಂದು ಜನಿಸಿದರು. ತಂದೆ ಮುದಕಪ್ಪ, ತಾಯಿ ಲಕ್ಷಮ್ಮವ್ವ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವೀಧರರು. ಭಾರತೀಯ ವಾಯು ಸೇನೆಯಲ್ಲಿ ವಾಯುಯೋಧನಾಗಿ 2008ರಲ್ಲಿ ವೃತ್ತಿ ಆರಂಭಿಸಿದ ಅವರು ಪ್ರವೃತ್ತಿಯಿಂದ ಸಾಹಿತ್ಯಾಸಕ್ತರು. ಅವರ ‘ಸಾಹುಕಾರನ ಸೊಸೆ’ ಕಾದಂಬರಿ 2017ರಲ್ಲಿ ಪ್ರಕಟವಾಯಿತು. ಧರ್ಮದ ದಿಗ್ವಿಜಯ (ನಾಟಕ) 2019 ಹಾಗೂ ಅವರ ಇತ್ತೀಚಿನ ಕೃತಿ ‘ಕಥಾ ಹಂದರ' (ನೀಳ್ಗತೆಗಳು). ...
READ MORE