‘ಕರಾವಳಿಯ ಕತೆಗಳು’ 1920ರಿಂದ 1947 ಅವಧಿಯ ಪತ್ರಿಕಗಳಿಂದ ಆಯ್ದ ಕತೆಗಳು. ಪ್ರೊ.ಕೆ.ಚಿನ್ನಪ್ಪ ಗೌಡ ಅವರ ಪ್ರಧಾನ ಸಂಪಾದಕತ್ವದಲ್ಲಿ ಪ್ರಕಟವಾದ ಈ ಕೃತಿಯನ್ನು ಲೇಖಕಿ ಡಾ. ಸಬಿಹಾ ಭೂಮಿಗೌಡ ಅವರು ಸಂಪಾದಿಸಿದ್ದಾರೆ. ಈ ಕೃತಿಗೆ ಪ್ರೊ.ಕೆ. ಚಿನ್ನಪ್ಪ ಗೌಡ ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಸ್ವಾತಂತ್ರ್ಯ ಪೂರ್ವದ ಕಾಲಘಟ್ಟವನ್ನೇ ನಿರ್ದಿಷ್ಟಪಡಿಸಿ ಹೇಳುವುದಾದರೆ ಈ ಅವಧಿಯ ಕನ್ನಡದ ಬರಹಗಾರರು ದೇಶೀಯ ಮೂಲದ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಹೊಸತೊಂದು ಅನುಸಂಧಾನದ ಕಡೆಗೆ ಸಾಗಿರುವುದನ್ನು ಗುರುತಿಸಿಸಬಹುದು. ಸಾಂಸ್ಕೃತಿಕ ಸಂಘರ್ಷಗಳನ್ನು ಎದುರಿಸಿ ಕನ್ನಡದ ಲೇಖಕರು ಕನ್ನಡದ ಸಾಹಿತ್ಯ ಪರಂಪರೆಯನ್ನು ಮುನ್ನೆಡೆಸಿದ್ದಾರೆ.
ಅನ್ಯ ಪ್ರಭಾವಗಳನ್ನು ಸ್ವೀಕರಿಸಿಯೂ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ಲೇಖಕರು ಹೋರಾಟ ನಡೆಸಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯಪೂರ್ವ ಕಾಲಘಟ್ಟದ ಕತೆಗಳಿರುವ ಈ ಸಂಕಲನದ ಮಹತ್ವವನ್ನು ಈ ಹಿನ್ನೆಲೆಯಲ್ಲಿ ನೋಡಬಹುದು ಎನ್ನುತ್ತಾರೆ ಕೆ. ಚಿನ್ನಪ್ಪ ಗೌಡ. ಜೊತೆಗೆ ಇಲ್ಲಿನ ಎಲ್ಲಾ ಕತೆಗಳಲ್ಲಿ ಪ್ರಜ್ಞಾವಂತ ಕತೆಗಾರರ ಮನಸ್ಸುಗಳು ಜಾಗತಿಕ ಪರಂಪರೆಯೊಂದಿಗೆ ಸಂವಾದ ನಡೆಸಿವೆ. ಇಲ್ಲಿನ ಕತೆಗಳಲ್ಲಿ ಪ್ರಜ್ಞಾವಂತ ಕತೆಗಾರರ ಮನಸ್ಸುಗಳು ಜಾಗತಿಕವಾಗಿ ನಡೆದ ವಿಮೋಚನಾ ಚಳುವಳಿಗಳ ಪ್ರಭಾವದಿಂದ ಮತ್ತು ನಮ್ಮ ನಾಡಿನ ಬದಲಾದ ಒಟ್ಟಾರೆ ಸಾಂಸ್ಕೃತಿಕ ಸನ್ನಿವೇಶದ ಕಾರಣದಿಂಗ ಜಾಗೃತಿ ಹೊಂದಿ ದಿಟ್ಟ ದನಿಯಿಂದ ಮಾತನಾಡಲು ತೊಡಗಿದ್ದಕ್ಕೆ ಈ ಸಂಕಲನದ ಹಲವು ಕತೆಗಳು ಸಾಕ್ಷಿಯಾಗಿವೆ. ಪತ್ರಿಕೆಗಳು ಒದಗಿಸಿದ ಸೀಮಿತ ಅವಕಾಶದಲ್ಲಿ ಬೆಳಕು ಕಂಡ ಈ ಸಂಕಲನದ ಕತೆಗಳಲ್ಲಿ ಅಪರಿಚಿತವಾದ ಅನೇಕ ಅನುಭವ ಪ್ರಪಂಚಗಳು ಅನಾವರಣಗೊಂಡಿವೆ.
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿರುವ ಸಬಿಹಾ ಭೂಮಿಗೌಡ ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದವರು. ತಂದೆ ಎಂ.ಆರ್. ಗಜೇಂದ್ರಗಡ, ತಾಯಿ ಸಾಹಿರಾ. ಎಂ.ಎ., ಪಿಎಚ್.ಡಿ. ಪಡೆದು ಪ್ರಾಧ್ಯಾಪಕಿಯಾಗಿ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರು, ಕರಾವಳಿ ಲೇಖಕಿಯರು ಮತ್ತು ವಾಚಕಿಯರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬಗೆ (ವಿಮರ್ಶೆ) 2001, ಚಿತ್ತಾರ (ಕಾವ್ಯ) 2004, ಕನ್ನಡ ಭಾಷಾ ಪ್ರವೇಶ (ಸಹಲೇಖಕರೊಂದಿಗೆ) 2005, ನಿಲುಮೆ (ವಿಮರ್ಶೆ) 2005, ನುಡಿಗವಳ ...
READ MORE