ಅನಿಲ್ ಗುನ್ನಾಪೂರ ಅವರ ಚೊಚ್ಚಲ ಕಥಾಸಂಕಲನ ‘ಕಲ್ಲು ಹೂವಿನ ನೆರಳು'. ಸಾಹಿತಿ ಕೇಶವ ಮಳಗಿ ಅವರು ಈ ಕಥಾಸಂಕಲನಕ್ಕೆ ಬೆನ್ನುಡಿ ಬರೆದಿದ್ದಾರೆ. ‘ಉತ್ಸಾಹಿ ಕಥನಕರ್ಮಿ ಅನಿಲ್ ಗುನ್ನಾಪೂರ ತಮ್ಮ ಮೊದಲ ಸಂಕಲನದೊಂದಿಗೆ ಓದುಗರನ್ನು ಅಧಿಕೃತವಾಗಿ ಎದುರುಗೊಳ್ಳುತ್ತಿದ್ದಾರೆ.ಈ ನಾಲ್ಕೈದು ವರ್ಷಗಳಿಂದ ಇವರ ಕಥೆಗಳನ್ನು ಬೇರೆ ಬೇರೆ ಸನ್ನಿವೇಶಗಳಲ್ಲಿ ನಾನು ಓದಿ ಅವರೊಂದಿಗೆ ಚರ್ಚಿಸಿದ್ದೇನೆ. ಈ ಮಾತುಕತೆಯ ಫಲವಾಗಿ ತಮ್ಮ ಕಥೆಗಳನ್ನವರು ಅನೇಕ ಸಲ ಪರಿಷ್ಕರಣೆ ಮಾಡಿದ್ದಾರೆ. ವಸ್ತು ವೈವಿಧ್ಯತೆ ಅನಿಲರ ಕತೆಗಳಲ್ಲಿ ಎದ್ದು ಕಾಣುವ ಅಂಶ. ಹಳ್ಳಿಗಾಡಿನ ಬದುಕು, ದೊಡ್ಡವರ ಲೋಕದಲ್ಲಿ ಅವುಡುಗಚ್ಚಿ ಬದುಕುವ ಅನಿವಾರ್ಯತೆಗೆ ಒಳಗಾಗುವ ಮಕ್ಕಳ ಮನೋಲೋಕ ವಲಸೆ, ಸಾಮಾನ್ಯರ ಜೀವನದಲ್ಲಿ ಒರಗಿ ಬರುವ ಸುಖ-ಸಂಕಟಗಳು ಅಸಂಗತ ಸನ್ನಿವೇಶಗಳು ಅವರ ಕಥೆಗಳನ್ನು ಆವರಿಸಿವೆ’ ಎಂಬುದಾಗಿ ಸಾಹಿತಿ ಕೇಶವ ಮಳಗಿ ಅವರು ಹೇಳಿದ್ದಾರೆ.
ಅನಿಲ್ ಗುನ್ನಾಪೂರ ಅವರು ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಮಸಳಿಯವರು. ಸದ್ಯ ಬಾಗಲಕೋಟೆಯಲ್ಲಿ ಸರ್ಕಾರಿ ಭೂಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 'ಗುಬ್ಬಚ್ಚಿ ಗೂಡಿನಲ್ಲಿ' ಇವರ ಚೊಚ್ಚಲ ಕವನಸಂಕಲನ. ಈ ಕೃತಿ 2016ರಲ್ಲಿ ಪುಸ್ತಕ ಪ್ರಾಧಿಕಾರದಿಂದ ಪುರಸ್ಕೃತಗೊಂಡಿದೆ. ಪ್ರಜಾವಾಣಿ ಮತ್ತು ಇನ್ನಿತರ ಪತ್ರಿಕೆಗಳಲ್ಲಿ ಇವರ ಕಥೆ- ಕವಿತೆಗಳು ಪ್ರಕಟವಾಗಿವೆ. 2018 ನೇ ಸಾಲಿನ ಪ್ರಜಾವಾಣಿ ದೀಪಾವಳಿ ಕಾವ್ಯ ಸ್ಪರ್ಧೆಯಲ್ಲಿ ಇವರ ಕವಿತೆಗೆ ಮೂರನೇ ಬಹುಮಾನ ಲಭಿಸಿದೆ. 'ಕಲ್ಲು ಹೂವಿನ ನೆರಳು' ಇವರ ಚೊಚ್ಚಲ ಕಥಾಸಂಕಲನ. ...
READ MORE