ಲೇಖಕ ಕುಮಾರ ಬೇಂದ್ರೆ ಅವರ ಕಥಾಸಂಕಲನ ಪರವಶ. ಈ ಕೃತಿಯಲ್ಲಿ ಎಸ್. ದಿವಾಕರ ಅವರ ಮುನುಡಿಯ ಮಾತುಗಳಿವೆ. ಅವರು ಹೇಳುವಂತೆ, ಈ ಕತೆಗಳು ನಿರೂಪಿಸುತ್ತಿರುವ ಬದುಕಿನ ತುಣುಕುಗಳು ಅರಿವನ್ನು ಇನ್ನಷ್ಟು ತೀಕ್ಷ್ಣವಾಗಿ ಸ್ಫೋಟಿಸುವಷ್ಟು ಶಕ್ತವಾಗಿರಬಹುದಿತ್ತು ಎಂದು ಅನ್ನಿಸುತ್ತದೆ. ಇದಕ್ಕೆ ಕಾರಣ ಕುಮಾರ ಬೇಂದ್ರೆಯವರು ಕತೆಗಳ ವಿಕಾಸಕ್ಕೆ ಸಂಬAಧಿಸಿದAತೆ ತಮಗೆ ತಾವೇ ಹಾಕಿಕೊಂಡಿರುವ ಮಿತಿ. ಆದರೂ ಒಮ್ಮೊಮ್ಮೆ ಕೋಮಲತೆಯಿಂದ, ಕೆಲವೊಮ್ಮೆ ವಿಷಾದದಿಂದ ಕೊನೆಯಾಗುವ ಇಲ್ಲಿನ ಕತೆಗಳು ತಮ್ಮ ಮನೋವಿಶ್ಲೇಷಣಾತ್ಮಕ ಒಳನೋಟಗಳಿಂದ ನಮ್ಮ ಮನಸ್ಸನ್ನು ವ್ಯಾಪಿಸಿಕೊಳ್ಳುತ್ತವೆ. ಕಳೆದುಹೋದ ಕಾಲದ ಹಾಗೂ ಅರ್ಧ ಹತ್ತಿಕ್ಕಲಾದ ಹಳಹಳಿಕೆ, ಮತ್ತೆ ಮತ್ತೆ ಹಿಂತಿರುಗಿ ಕಾಡುವ ನೆನಪುಗಳು, ಅಳಿಸಲಾಗದ ಜೀವನ ಚಿತ್ರಗಳು, ಮನುಷ್ಯನ ಆಶೋತ್ತರಗಳ ಅಶಾಶ್ವತತೆ, ಇವೆಲ್ಲವೂ ಇಲ್ಲಿ ಮಡುಗಟ್ಟಿವೆ. ಈ ಕತೆಗಾರರು ಪ್ರಯತ್ನ ಪಟ್ಟರೆ ಬದುಕಿನ ಅಗೋಚರ ವಾಸ್ತವಗಳನ್ನು ಹೊಳೆಯಿಸಬಲ್ಲ ಹಲವು ಆಯಾಮಗಳನ್ನು ಏಕಸೂತ್ರದಲ್ಲಿ ಹಿಡಿದುಕೊಡುವ ಅತ್ಯುತ್ತಮ ಕತೆಗಳನ್ನು ಬರೆಯಬಲ್ಲರು ಎನ್ನುವುದಕ್ಕೆ ಈ ಸಂಕಲನವೇ ಸಾಕಷ್ಟು ಪುರಾವೆಯನ್ನು ಒದಗಿಸುತ್ತದೆ ಎಂಬುದಾಗಿ ಹೇಳಿದ್ದಾರೆ.
ಕುಮಾರ ಬೇಂದ್ರೆ ಜನನ 24-10-1977, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ. ಪ್ರಾಥಮಿಕ ಶಿಕ್ಷಣವನ್ನು ಬೆಳ್ಳಟ್ಟಿಯಲ್ಲಿ ಪಡೆದರು. ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತಕಲಾ ಮಹಾವಿದ್ಯಾಲಯದಿಂದ ಚಿತ್ರಕಲಾ ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ. ಇವರು ಹುಬ್ಬಳ್ಳಿ ನಿವಾಸಿಯಾಗಿದ್ದು 'ಉದಯವಾಣಿ' ಪತ್ರಿಕೆಯಲ್ಲಿ ಉಪಸಂಪಾದಕ ವೃತ್ತಿ, ಪತ್ನಿ ಅನುಪಮ, ಪುತ್ರರು ಚೇತನ, ಚಂದನ, ಎರಡು ದಶಕದಿಂದ ಸಾಹಿತ್ಯ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಕುಮಾರ ಬೇಂದ್ರೆ ಅವರ ಪ್ರಕಟಿತ ಕೃತಿಗಳು ಮಾದಪ್ಪನ ಸಾವು (೨೦೦೫) ಅದೃಶ್ಯ ಲೋಕದ ಮಾಯೆ (೨೦೦೭) ನಿರ್ವಾಣ (೨೦೧೧) ಗಾಂಧಿ ವೃತ್ತದ ದಂಗೆ (೨೦೧೨) ...
READ MORE