ತರಂಗ, ಸುಧಾ, ಪ್ರಜಾವಾಣಿ, ಉದಯವಾಣಿ, ತುಷಾರ, ಮಯೂರ, ಮಂಗಳ ಇತ್ಯಾದಿ ಪ್ರತಿಕೆಗಳಲ್ಲಿ ಪ್ರಕಟಿತ ಕಥೆಗಳ ಸಂಕಲನ- 'ಅವ್ವ ಮತ್ತು ಇತರ ಕಥೆಗಳು'. ಸತ್ತ ಹೆಣ್ಣಿನ ಸುತ್ತ ಏನೆಲ್ಲಾ ನಾಟಕ, ತಾಪತ್ರಯಗಳು ಜರುಗಬಹುದು ಹಾಗೂ ಅವಳ ಗತದ ಜೀವನಚಕ್ರದೊಂದಿಗೆ ಸಂಧಿಸುತ್ತಾ ಮಾನವ ಕೌರ್ಯವನ್ನು ಇಲ್ಲಿಯ ಕತೆಗಳು ತೆರೆದಿಡುತ್ತವೆ. ಗುಲಬರ್ಗಾ ವಿಶ್ವವಿದ್ಯಾಲಯವು ಈ ಕಥಾ ಸಂಕಲನವನ್ನು ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನಾಗಿ ಆಯ್ಕೆ ಮಾಡಿರುವುದು ಈ ಕೃತಿಯ ಮತ್ತೊಂದು ಹೆಗ್ಗಳಿಕೆ.
ಕನ್ನಡದ ಲೇಖಕಿಯರಲ್ಲಿ ಒಬ್ಬರಾದ ಗೀತಾ ನಾಗಭೂಷಣ ಅವರು ತಮ್ಮ ಕಾದಂಬರಿ-ಕತೆಗಳ ಮೂಲಕ ಜನಪ್ರಿಯರಾದವರು. ಗುಲ್ಬರ್ಗದ ಬಡ ಕುಟುಂಬದಲ್ಲಿ 1942ರ ಮಾರ್ಚ್ 25ರಂದು ಜನಿಸಿದರು. ತಂದೆ ಶಾಂತಪ್ಪ-ತಾಯಿ ಶರಣಮ್ಮ. ಮೆಟ್ರಿಕ್ ಮುಗಿಸಿದ ಮೇಲೆ ಕೆಲವುಕಾಲ ಕಲೆಕ್ಟರ್ ಕಛೇರಿಯಲ್ಲಿ ಉದ್ಯೋಗ ಮಾಡಿ ಬೆಳಗಿನ ಶಾಲೆಯಲ್ಲಿ ಓದಿ ಪದವಿ ಪಡೆದು, ಸಂಜೆ ಕಾಲೇಜಿನಲ್ಲಿ ಓದಿ ಬಿಎಡ್ ಮತ್ತು ಎಂ.ಎ. ಪದವಿ ಗಳಿಸಿದರು. ಓದುವಾಗಲೇ ಉದ್ಯೋಗ ಮಾಡುತ್ತಿದ್ದ ಇವರು ಎಂ.ಎ. ಪದವಿ ಗಳಿಸಿದ ನಂತರ ಶ್ರೀ ನಗರೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ, ಪ್ರಾಚಾರ್ಯೆಯಾಗಿ 30ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದರು. ...
READ MORE