ಸಮಾಜದ ಆಗು-ಹೋಗುಗಳು, ತಾನು ಕಂಡುಂಡ ಅಂಶಗಳನ್ನಿಟ್ಟುಕೊಂಡು ರೂಪಿತವಾಗಿರುವ ಕತೆಗಳೇ ಕನ್ನಡಿ ಹರಳು. ತಾನು ನೋಡಿದ, ಕೇಳಿದ, ಅನುಭವಿಸಿದ ವಿಷಯಗಳಿಗೆ ಅಕ್ಷರ ರೂಪು ಕೊಟ್ಟು, ವಿಭಿನ್ನವಾಗಿ ನೋಡುವ ಪ್ರಯತ್ನ ಈ ಕೃತಿಯ ಕತೆಗಳಲ್ಲಿದೆ. ಮುನ್ನುಡಿಯಲ್ಲಿ ರಘುನಾಥ ಚ.ಹ. ಅವರು ಪುಸ್ತಕದ ಬಗ್ಗೆ ವಿಶ್ಲೇಷಿಸುತ್ತಾ, ’ಯಾವುದೇ ಬಗೆಯ ಪೋಷಾಕುಗಳಿಂದ ಮುಕ್ತವಾದ ಮಗುವಿನ ಸಹಜ ನಡಿಗೆಯಲ್ಲಿ ಪಾಲಕರಿಗೆ ತಾವು ಅಲಕ್ಷಿಸಿದ ಬದುಕಿನ ಚಿಲುವು-ಸತ್ಯಗಳು ಕಾಣಿಸುವಂತೆ, ತೋರಿಕೆಯ ಬೌದ್ದಿಕತೆ ಮತ್ತು ಪ್ರದರ್ಶನಪ್ರಿಯತೆಯ ಬ್ಯಾಗೇಜ್‌ಗಳಿಂದ ಮುಕ್ತವಾದ ಇಲ್ಲಿನ ಕಥೆಗಳು ಓದುವವರ ನೆನಪಿನ ಕೋಶಗಳಲ್ಲಿ ಕಂಪನಗಳನ್ನು ಎಬ್ಬಿಸಬಲ್ಲವು. ಭರವಸೆಗಳೆಲ್ಲ ಹುಸಿಯಾದ ಸಂದರ್ಭದಲ್ಲೂ ನಂಬಿಕೆಗಳನ್ನು ಬಿಟ್ಟುಕೊಡದ ವ್ಯಕ್ತಿಗಳು, ಅವರ ಒದ್ದಾಟ, ಜೀವನಪ್ರೇಮ ಇವೆಲ್ಲ ಎಲ್ಲ ಕಾಲದ ಸಮಾಜವೂ ಹಂಬಲಿಸುವಂಥ ಜೀವದ್ರವ್ಯಗಳು. ಇಂಥ ಹಲವು ಬಿಂಬಗಳನ್ನು ಹಿಡಿದಿಡುವ ಹಂಬಲದ ಹರಳುಗಳ ಮೂಲಕ ಸಹೃದಯರು ತಮ್ಮ ಜೀವನದ ಅಖಂಡ ಚಿತ್ರವೊಂದನ್ನು ಕಾಣಿಸುವ ಕನ್ನಡಿಯನ್ನು ಕಂಡುಕೊಳ್ಳಲು ಸಾಧ್ಯವಿದೆ. ಅಂತರಂಗದ ಖಾಸಗಿ ಕೋಣೆಗಳಲ್ಲಿನ ಪಿಸುನುಡಿಗಳನ್ನು ದಾಟಿಸುವ ಮೂಲಕ, ಬಹಿರಂಗದ ಚೌಕಟ್ಟನ್ನು ಹೊಳೆಯಿಸುವ ಶಕ್ತಿ ಈ ಸಂಕಲನದ ಕಥೆಗಳಿದೆ. ನಿರಾಭರಣ ಸುಂದರಿಯಂತಿರುವ ಈ ಕಥೆಗಳ ಭಾಷೆ ಸರಳತೆಗೆ ಮೌಲ್ಯದ ಗುಣ ತಂದುಕೊಟ್ಟಿದೆ. ಕಥೆಯ ಈ ಪರಿಣಾಮದ ಬಗ್ಗೆ ನಂಬಿಕೆ ಹಾಗೂ ಕಥೆ ಕಟ್ಟುವ ಕಸುಬುದಾರಿಕೆಯ ಬಗ್ಗೆ ಪ್ರೀತಿ ಹೊಂದಿರುವ ಮನಸ್ಸು ರೂಪಿಸಿರುವ ಕನ್ನಡಿ ಹರಳು' ಎಂದಿದ್ದಾರೆ.
ಪತ್ರಕರ್ತ, ಬರಹಗಾರ ಪದ್ಮನಾಭ ಭಟ್ ಅವರು ಜನಿಸಿದ್ದು 1990 ಜೂನ್ 27ರಂದು. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಶೇವ್ಕಾರ ಗ್ರಾಮದಲ್ಲಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಜಾವಾಣಿಯಲ್ಲಿ ವರದಿಗಾರ ಹಾಗೂ ಉಪ ಸಂಪಾದಕರಾಗಿ ವೃತ್ತಿ ಜೀವನ ಆರಂಭಿಸಿದರು. ಸುಧಾ ವಾರಪತ್ರಿಕೆಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿರುವ ಅವರು ಸದ್ಯ ವಯಾಕಾಂ (vayacom) ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿನಿಮಾ, ರಂಗಭೂಮಿ, ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಇರುವ ಇವರ ಚೊಚ್ಚಲ ಕೃತಿ ಕೇಪಿನ ಡಬ್ಬಿ. ಈ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ, ...
READ MORE