ಸಂದೀಪ ನಾಯಕ ಅವರ ಬಹು ಸೂಕ್ಷ್ಮ ಸಂಗತಿಗಳ ಈ ಕತೆಗಳ ಸಂಕಲನಕ್ಕೆ ಛಂದ ಪುಸ್ತಕ ಬಹುಮಾನ ಬಂದಿದೆ. ಹಿರಿಯ ಕತೆಗಾರರಾದ ಅಮರೇಶ ನುಗಡೋಣಿ ಅವರು ಈ ಆಯ್ಕೆಯನ್ನು ಮಾಡಿ, ಮುನ್ನುಡಿಯನ್ನು ಬರೆದಿದ್ದಾರೆ. ಈ ಸಂಕಲನದಲ್ಲಿ ಹನ್ನೆರಡು ಕಥೆಗಳಿವೆ. ಈ ಸಂಕಲನದ ಕಥೆಗಳಲ್ಲಿ ಕಾಣುವ ಪ್ರಧಾನವಾದ ಗುಣವೆಂದರೆ ಹದವಾದ ಭಾಷೆ, ಸಂಯಮದ ನಿರೂಪಣೆ. ಒಂದು ಕಥೆಯಲ್ಲಿ ಮೂರು ನಾಲ್ಕು ಪಾತ್ರಗಳು ಕಾಣಿಸಿಕೊಂಡರೂ ಅವುಗಳಲ್ಲಿ ಕೆಲವು ಮುನ್ನೆಲೆಗೆ ಬರುವುದಿಲ್ಲ. ಮುಖ್ಯ ಪಾತ್ರದ ಮುಖೇನ ಕಥೆ ನಿರೂಪಣೆಗೊಳ್ಳತ್ತದೆ. ಅದನ್ನು ಬದಲಿಸಿ ಇನ್ನೊಂದು ಪಾತ್ರದಲ್ಲಿ ಕಥೆ ಬಿಚ್ಚಿಕೊಳ್ಳುವದಿಲ್ಲ. ನಾಗವೇಣಿ (ಆನೆ ಸಾಕಿದ ಮನೆಗೆ ಎರಡು ಹೂದಂಡೆ), ಮೋನಪ್ಪ (ಕರೆ), ದೇವಿ (ಒಂಬತ್ತು, ಎಂಟು, ಎಂಟು), ಮೋಹನ (ಇಲ್ಲಿ ಬಂದೆವು ಸುಮ್ಮನೆ) ಜಿ.ಕೆ. (ಬಾಗಿಲ ಮುಂದೆ) ಭಾಗೀರಥಿ (ಸಹಿ) ಮುಂತಾದ ಕೆಲವು ಮುಖ್ಯ ಪಾತ್ರಗಳ ಮುಖೇನ ಕಥೆಯ ನಿರೂಪಣೆಯಿದೆ. ಹಾಗಂತ ಸ್ವಗತ ಮಾದರಿಯಲ್ಲಿ ಇಲ್ಲ. ವ್ಯಕ್ತಿಯ ಒಳ ತುಮುಲ, ಹೊರ ಲೋಕದ ವ್ಯವಹಾರಗಳು ಸಮಾನವಾಗಿ ವ್ಯಕ್ತವಾಗುತ್ತವೆ. ಇದು ಕಥೆಗಾರರ ಕಥನಕ್ರಮವಾಗಿದೆ. ಕಥೆಗಳಲ್ಲಿ ದುರಂತಗಳಿವೆ. ಆದರೆ ಅವು ಒಡೆದು ಕಾಣುವುದಿಲ್ಲ. ಭೀಕರವಾಗಿಯೂ ತೋರುವುಲ್ಲ. ತಣ್ಣಗೆ ಮನಸ್ಸನ್ನು ತುಂಬಿಕೊಳ್ಳುತ್ತವೆ. ಬಹುತೇಕ ಕಥೆಗಳಲ್ಲಿ ನಿರಾಶೆಯಿದೆ; ವಿಷಾದವಿದೆ. ಇಲ್ಲಿಯ ಪಾತ್ರಗಳಿಗೆ ದೊಡ್ಡ ಬದುಕಿಲ್ಲ; ವಿಶಾಲ ಪ್ರಪಂಚವಿಲ್ಲ. ಸೀಮಿತ ಬದುಕು; ಸೀಮಿತ ಲೋಕ ಮತ್ತು ಸೀಮಿತ ಸಮಸ್ಯೆಗಳು ಇವೆ. ಈ ಸಣ್ಣ ಚೌಕಟ್ಟಿನ ಒಳಗಿರುವ ತಲ್ಲಣಗಳನ್ನು, ಆಶೆ-ನಿರಾಶೆಗಳ ಆಳಗಳನ್ನು ಈ ಕಥೆಗಳು ನಿಚ್ಚಳವಾಗಿ ತೋರಿಸುತ್ತವೆ. ಕಥೆಗಳಲ್ಲಿ ನಿರಾಶೆ, ವಿಷಾದ ಕಂಡರೂ, ಒಳಗೆ ಎಲ್ಲೋ ಆಶಾವಾದದ ಬೆಳಕು ಕಾಣುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯವರು. ಅಂಕೋಲೆ, ಕಾರವಾರಗಳಲ್ಲಿ ವಿದ್ಯಾಭ್ಯಾಸ. ಎರಡು ದಶಕಗಳಿಂದ ಪತ್ರಿಕೋದ್ಯಮದಲ್ಲಿದ್ದಾರೆ. ಪ್ರಸ್ತುತ ‘ಮಯೂರ’ ಮಾಸ ಪತ್ರಿಕೆಯ ಮುಖ್ಯ ಉಪ ಸಂಪಾದಕ. ಪ್ರಕಟಿತ ಕೃತಿಗಳು: ‘ಅಗಣಿತ ಚಹರೆ’ (ಕವನ ಸಂಗ್ರಹ), ‘ಗೋಡೆಗೆ ಬರೆದ ನವಿಲು’ (ಕಥಾಸಂಕಲನ) ...
READ MORE