ಮಾನವ ಕಾಳಜಿಯ ಆಶಯಗಳಿಗೆ ಪ್ರಖರವಾದ ಭಾಷೆಯ ಎರಕವೂ ಹೊಯ್ದು ಕತೆಯನ್ನು ಪರಿಣಾಮಕಾರಿಯಾಗಿಸಿದ ಕೃತಿ-ಕಿಬ್ಬದಿಯ ಕಿಲುಳುಕಿ. ಸುತ್ತಮುತ್ತ ನಡೆಯುವ ಘಟನಾವಳಿಗಳಿಗೆ ಸೂಕ್ಷ್ಮ ಸಂವೇದನೆಯೊಂದಿಗೆ ಸ್ಪಂದಿಸುತ್ತ ಕರಾಳ ಮುಖಗಳನ್ನು ಅನಾವರಣಗೊಳಿಸುವ ಕಥೆಗಳು ಜೀವಪರ ಚಿಂತನೆಗೆ ಓದುಗರನ್ನು ಪ್ರೇರೇಪಿಸುತ್ತವೆ.
ಚನ್ನಪ್ಪ ಅಂಗಡಿ ಅವರು ಎಮ್ ಎಸ್ ಸಿ (ಕೃಷಿ) ಸಹಾಯಕ ಕೃಷಿ ನಿರ್ದೇಶಕರಾಗಿದ್ದಾರೆ. ಇವರು ಜನಿಸಿದ್ದು15.04.1970, ಬಮ್ಮನಹಳ್ಳಿ ಹಾವೇರಿ ಜಿಲ್ಲೆಯಲ್ಲಿ. ಮಂದ ಬೆಳಕಿನ ಸಾಂತ್ವನ, ಭೂಮಿ ತಿರುಗುವ ಶಬ್ದ (ಕವನಸಂಕಲನ), ಮಣ್ಣಿನೊಳಗಣ ಮರ್ಮ, ಕಿಬ್ಬದಿಯ ಕೀಲುಳುಕಿ (ಕಥಾಸಂಕಲನ), ಎದೆಯ ಒಕ್ಕಲಿಗ (ವೈಚಾರಿಕ), ಕೃಷಿ ಕಾರಣ ಸಂಪಾದನೆ : ಮಡಿಲು, ಕಾಯಕಯೋಗಿ, ಕದಂಬ, ಬಿತ್ತೋಣ ಹತ್ತಿ ಬೆಳೆಯೋಣ, ಗಿಡಗಂಟೆಗಳ ಕೊರಳು ಕೃತಿಗಳನ್ನು ರಚಿಸಿದ್ದಾರೆ. ಭೂಚೇತನ ಪ್ರಶಸ್ತಿ , ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಕಾವ್ಯ), ಮುದ್ದಣ ರತ್ನಾಕರವರ್ಣಿ ಅನಾಮಿಕ (ಕಸಾಪ) ಪ್ರಶಸ್ತಿ, ವಿಭಾ ಸಾಹಿತ್ಯ ಪ್ರಶಸ್ತಿ, ...
READ MORE(ಹೊಸತು, ಜೂನ್ 2015, ಪುಸ್ತಕದ ಪರಿಚಯ)
ಜ್ವಲಂತ ಸಮಸ್ಯೆಗಳ ಅನಾವರಣ: 'ಕಿಬ್ಬದಿಯ ಕೀಲುಳುಕಿ' ಕಥೆಗಾರ ಚನ್ನಪ್ಪ ಅಂಗಡಿಯವರ ಎರಡನೆಯ ಕಥಾ ಸಂಕಲನ, ಕೃಷಿ ಅಧಿಕಾರಿಯಾಗಿರುವ ಅವರು, ನಿರ್ವಹಿಸುತ್ತಿರುವ ವೃತ್ತಿ ಕಾರಣವಾಗಿ ಪಡೆದುಕೊಂಡ ಮತ್ತು ಸಾಮಾಜಿಕ ಅನುಭವಗಳ ಹಿನ್ನೆಲೆಯಲ್ಲಿ ಅಳವಡಿಸಿಕೊಂಡ ದೃಷ್ಟಿಕೋನದ ನೆಲೆಯಲ್ಲಿಯೇ ಕಥಾ ರಚನೆಯಲ್ಲಿ ತೊಡಗಿಸಿಕೊಂಡಿರುವ ಅಪರೂಪದ ಕಥೆಗಾರ. ತಮ್ಮ ಸುತ್ತಲಿನ ಸಂಗತಿಗಳನ್ನು ಹರಿತವಾದ ಆಲೋಚನಾ ಕ್ರಮದಲ್ಲಿ ಅವಲೋಕಿಸುತ್ತ; ವಾಸ್ತವವನ್ನು ಮೀರಿದ, ಆದರೆ ಕಂಡ ವಾಸ್ತವವನ್ನೇ ಪ್ರತಿಬಿಂಬಿಸುವಂಥ ಭ್ರಮಿತ ವಾಸ್ತವ'ವನ್ನು ಕಥೆಯೊಳಗೆ ಸೃಷ್ಟಿಸುತ್ತಾರೆ. 'ಕಿಬ್ಬದಿಯ ಕೀಲುಳುಕಿ” ಸಂಕಲನದ ಕಥೆಗಳು ರೈತ ಸಮುದಾಯದ, ಕೆಳ ಮಧ್ಯಮ ವರ್ಗದ ಜನರ ಬದುಕಿನ ಘೋರ ದುರಂತಗಳ ಚಿತ್ರಣವನ್ನು ಅನಾವರಣ ಮಾಡುತ್ತವೆ. ಜಾಗತೀಕರಣ, ನಗರೀಕರಣ ಮತ್ತು ಉದಾರೀಕರಣ ಪ್ರಕ್ರಿಯೆಗಳಿಂದಾಗಿ ಶಿಥಿಲಗೊಳ್ಳುತ್ತಿರುವ ಮನುಷ್ಯ ಸಂಬಂಧಗಳು, ಆ ಮೂಲಕ ಗ್ರಾಮಗಳಲ್ಲಿನ ಕೂಡು ಕುಟುಂಬಗಳ ಬದುಕಿನಲ್ಲಿ ಉಂಟಾಗುತ್ತಿರುವ ಸ್ಥಿತ್ಯಂತರಗಳು
ಮತ್ತು ಆಧುನಿಕ ಬದುಕು ಒಳಗೊಂಡಿರಬಹುದಾದ ಅಪಾಯಗಳು - ಇವೆಲ್ಲವನ್ನೂ ಪರ-ವಿರೋಧಗಳ ಮಧ್ಯದ ಗೆರೆಯ ಮೇಲೆ ನಿಂತು ಚಿತ್ರಿಸಿರುವ ಹನ್ನೆರಡು ಕಥೆಗಳು ಈ ಸಂಕಲನದಲ್ಲಿವೆ. ಒಂದು ಕಾಲಘಟ್ಟದ, ನಿರ್ದಿಷ್ಟ ಪರಿಸರದ ಸಮುದಾಯಗಳು ಏನಕೇನ ಕಾರಣಗಳಿಂದಾಗಿ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳನ್ನು ಕಥೆಗಾರ ಚನ್ನಪ್ಪ ಅಂಗಡಿಯವರು ಈ ಸಂಕಲನದಲ್ಲಿರುವ ಕಥೆಗಳಲ್ಲಿ ಅನಾವರಣ ಮಾಡಿದ್ದಾರೆ.