“ಅತೀತಭವ” ಇದು ಅಶ್ವಿನಿ ಸುನಿಲ್ ಅವರ ಸಣ್ಣ ಕಥಾಸಂಕಲನವಾಗಿದೆ. ಇಲ್ಲಿ ಬದುಕಿನಲ್ಲಿ ಅಚಾನಕ್ಕಾಗಿ ಘಟಿಸುವ ಸಂಗತಿಗಳಷ್ಟೇ ಕತೆಯಾಗಬಲ್ಲವು. ಈ ಸಂಕಲನದ ಕತೆಗಳು ಕಿರುಚಿತ್ರಗಳಂತೆ ಕಣ್ಮುಂದೆ ಹಾದುಹೋಗುತ್ತವೆ. ಅತ್ಯುತ್ತಮ ಚಿತ್ರಕ ಶಕ್ತಿ, ಒಂಚೂರು ಲಹರಿ, ಅನುಭವದಿಂದ ಹೆಕ್ಕಿದ ಒಂದೆರಡು ಸನ್ನಿವೇಶ ಮತ್ತು ಕಲ್ಪನೆ ಬೆರೆಸಿರುವ ಕೃತಿ ಇದಾಗಿದ್ದು, ಇಲ್ಲಿರುವ ಹದಿನೈದು ಕತೆಗಳೂ ನಮಗೆ ಅಪ್ಪಟ ಕತೆಗಳನ್ನು ಓದಿದ ಅನುಭವ ಕೊಡುತ್ತವೆ. ದಕ್ಷಿಣ ಕನ್ನಡದ ಭಾಷಾ ಸೊಗಡನ್ನು ಅಲ್ಲಲ್ಲಿ ಕಾಣಬಹುದು. ಅದರೊಂದಿಗೆ ಸಣ್ಣ ರೋಚಕತೆಯನ್ನು ಬೆರೆಸಿದ್ದಾರೆ. ಹದವಾದ ಭಾಷೆಯ ಕೆಲವು ಕತೆಗಳನ್ನು ಅವರು ವಿಷಾದದ ಉರಿಯಲ್ಲಿ ಬೇಯಿಸಿದ್ದಾರೆ. ವಿನ್ಸಿ ಸಿಂಟೋ, ಪೆಟ್ಟಿಗೆ ಹಿಡಿದ ಕೈ, ಮಣ್ಣಿನ ವಾಸನೆ, ಜಾಹ್ನವಿ, ಕುಲೆ ಸೊಪ್ಪು, ಅಪ್ಪ, ಫೇ(ಕ್)ಸ್ ಬುಕ್, ಭ್ರಮೆ, ಗೋಲಿ ಸೋಡಾ, ದ್ರೋಹ, ಬಣ್ಣದ ಡಸ್ಟರ್, ಅತೀತಭವ, ಶರ್ಮಿಷ್ಠಾ, ಗೊರಬು, ಹಗಲುಗನಸು ಕಥೆಗಳನ್ನೊಳಗೊಂಡ ಸುಂದರ ಪುಸ್ತಕ ಇದಾಗಿದೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಅಶ್ವಿನಿ ಸುನಿಲ್ ಪ್ರಸ್ತುತ ವಾಸವಿರುವುದು ಆಂಧ್ರಪ್ರದೇಶದ ಗುಂಟೂರಿನಲ್ಲಿ. ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದತ್ತ ವಿಶೇಷ ಆಸಕ್ತಿ. ಬಿಡುವಿನ ವೇಳೆಯಲ್ಲಿ ಬ್ಲಾಗ್, ಕಥೆ, ಕವನ , ಲೇಖನಗಳನ್ನು ಬರೆಯುವುದು ಇವರ ಹವ್ಯಾಸ. ಇವರು ಬರೆದ ಲೇಖನಗಳು ಉದಯವಾಣಿ, ವಿಶ್ವವಾಣಿ, ವಿನಯವಾಣಿ, ಸುದ್ದಿ ಬಿಡುಗಡೆ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ರಾಧಾ ರಾಮ್ ಪ್ರಸಾದ್ ಅವರ ಇಂಗ್ಲೀಷಿನ 'ಇನ್ ಎ ಹಾರ್ಟ್ ಬೀಟ್' ಪುಸ್ತಕದ ಕನ್ನಡ ಅನುವಾದ 'ತೆರೆದ ಮನಸ್ಸಿನ ಪುಟಗಳು' ಇವರ ಮೊದಲ ಅನುವಾದಿತ ಕೃತಿ. ...
READ MORE