ಲೇಖಕ ಮಲ್ಲಿಕಾರ್ಜುನ ಢಂಗಿ ಅವರ ಕಥಾ ಸಂಕಲನ-ನಾನು ಮತ್ತು ನನ್ನ ಹೆಣ. ’ಹೆಸರಿಲ್ಲದ ಹೂವುಗಳು’ ಎನ್ನುವ ಕವನ ಸಂಕಲನ ಹೊರ ತಂದಿರುವ ಲೇಖಕರು, ಈ ಕಥಾ ಸಂಕಲನದಲ್ಲಿ ನಾಲ್ಕು ನೀಳ್ಗತೆಗಳಿವೆ. ಬದುಕಿನ ವಿವಿಧ ಆಯಾಮಗಳನ್ನು ವಿಷಯ ವಸ್ತುವಾಗಿಸಿಕೊಂಡಿರುವ ಕಥೆಗಳು, ಬದುಕಿನ ಸಲಹೆಗಳಾಗಿ, ಸೂಚನೆಗಳಾಗಿ, ಉಪದೇಶಗಳಾಗಿ, ಸಂದೇಶಗಳಾಗಿ ಓದುಗರ ಮನ ತಟ್ಟುತ್ತವೆ.
ನಾನು ಮತ್ತು ನನ್ನ ಹೆಣ ಕಥೆಯ ಆಯ್ದ ಭಾಗ ವೈಶಾಖದ ಒಂದು ರಾತ್ರಿ. ನನ್ನ ಭೂತಕಾಲದ ಮೊದಲ ದಿನ! ಅನಂತ ಆಗಸದ ಕೆಳಗೆ ಕಾಯದ ಹಂಗಿಲ್ಲದೇ ಸ್ವಚ್ಛಂದವಾಗಿ ಹಾರಾಡಿ ಹಾರಾಡಿ ಅಂಗಾತ ಮಲಗಿದೆ. ಇಡೀ ಜೀವಿತವನ್ನೇ ತನ್ನಲ್ಲಿ ಲೀನ ಮಾಡಿಕೊಳ್ಳಬಲ್ಲಷ್ಟು ವಿಪುಲವಾಗಿ ತುಂಬಿದ ಬೆಳದಿಂಗಳು! ಕಪ್ಪು ಹಿನ್ನೆಲೆಯ ಮುಗಿಯದ ಆಗಸದಲ್ಲಿ ಷೋಡಶ ಕಳೆಗಳ ಚಂದಿರ ರವಿಯ ಬೆಂಕಿಯ ಕಿರಣಗಳನ್ನು ಹಿಮಪಾತವನ್ನಾಗಿ ಪರಿವರ್ತಿಸಿ ಬುವಿಗೆ ರವಾನಿಸುತ್ತಿದ್ದ. ಅದೆಂಥ ಚೆಂದನೆಯ ಚಂದಿರ! ಚಂದಿರನನ್ನು ನೋಡಿ ಹೊಸ ಶಕ್ತಿ ಸಂಚಾರವಾಯಿತು. ಒಮ್ಮೆಲೇ ಸಿಡಿದೆದ್ದು ಮೇಲೆ ಹಾರಿದೆ! ನನಗಿಂಥ ವೇಗವಿದೆ ಎಂದು ನನಗೇ ಗೊತ್ತಿರಲಿಲ್ಲ. ಕೆಲವೇ ಕ್ಷಣಗಳಲ್ಲಿ ಚಂದಿರನನ್ನು ದಾಟಿ ದೂರ ದೂರ ಹಾರಿದೆ. ಮೇಲೆ ನಿಂತು ನೋಡುತ್ತೇನೆ. ಭೂಮಿಯ ಮೇಲಿಂದ ನೋಡಿದಾಗ ಕಾಣುವ ಹೊಳೆಯುವ ಚಂದ್ರ ಕಪ್ಪು ಗೋಲವಾಗಿ ಗೋಚರಿಸಿದ. ಮತ್ತಷ್ಟು ಹಾರಿ ಹಾರಿ ನವ ಬ್ರಹ್ಮಾಂಡ ಸೇರಬೇಕೆಂದು ಹಾತೊರೆದು ಮುನ್ನುಗ್ಗಿದೆ. ಆದರೆ ಸೋತು ಸ್ಥಿರವಾದೆ. ನನ್ನ ಶಕ್ತಿಗೆ ಒಂದು ಮಿತಿಯಿದೆ ಎಂಬ ಅರಿವಾಗಿ ನಿರಾಶೆಯಾಯಿತು. ಅಶಕ್ತತೆಯಿಂದ ಮೇಲೆ ನೋಡಿದೆ. ಮಿನುಗುವ, ಹೊಳೆಯುವ, ಥಳಥಳಿಸುವ, ನಳನಳಿಸುವ ತಾರೆಗಳು ಬಾನಂಗಳದ ತುಂಬಾ ಮೈನೆರೆದಿದ್ದವು. ಅವು ನನ್ನ ಪಾಲಿಗೆ ಕೇವಲ ಆಕಾಶಕಾಯಗಳಲ್ಲ. ಪ್ರತಿ ನಕ್ಷತ್ರವೂ ಒಂದೊಂದು ರಮ್ಯ ಕಥೆಯ ತವರುಮನೆ. ಬೆಳಕಿನ ಧಾರೆಯಾಗಿ ತುಂಬಿ ಹರಿಯುವ ಕ್ಷೀರಪಥ, ಪೌರಾಣಿಕ ಮೆರುಗಿನ ಸಪ್ತರ್ಷಿ ಮಂಡಲ, ಮಹಾಶ್ವಾನ, ಮಹಾವ್ಯಾಧ... ಹಲವು ರೂಪಗಳಲ್ಲಿರುವ ತಾರಾ ಸಮೂಹಗಳು, ರಾಶಿ ನಕ್ಷತ್ರಪುಂಜಗಳು ರಾರಾಜಿಸುತ್ತಿದ್ದವು. ನಾನು ಮಾತ್ರ ಕತ್ತಲೆಯ ಕಗ್ಗಾಡಿನಲ್ಲಿ ಭ್ರಮಿಸುತ್ತಿದ್ದೆ. ಅಂತರಪಿಶಾಚಿಯಾಗುವುದು ಬೇಡೆಂದು ಸರ್ರನೆ ಧರಣಿಗೆ ಧಾವಿಸಿದೆ. ಭೂದೇವಿ ಎಲ್ಲರನ್ನು ತನ್ನುಡಿಯಲ್ಲಿ ಹಾಕಿಕೊಂಡು ಸಲಹುವಂತೆ ನನಗೂ ತನ್ನ ಆವರಣದಲ್ಲಿ ಆಶ್ರಯ ನೀಡಿದಳು. ಎಡೆ ಸಿಕ್ಕ ಸಂತಸದಲ್ಲಿ ಸುತ್ತಾಡಿದೆ. ಚಂದ್ರಕಾಂತಿಯ ಹಾಲ್ಗಡಲಲ್ಲಿ ಮಿಂದೇಳುತ್ತ ಭೂರಮೆಯನಪ್ಪಿ ಸುಳಿದಾಡುವ ಮಲಯಮಾರುತ ಎಲ್ಲೋ ಅರಳಿದ ರಾತ್ರಿರಾಣಿಯ ಸುಗಂಧಹರಣ ಮಾಡಿ ತಂದು ಸೃಷ್ಟಿಯ ಮೇಲೆಲ್ಲ ತೀಡುತ್ತಿತ್ತು. ಭೂಗರ್ಭದಿ ಕಾಲು ಇಳಿಬಿಟ್ಟು ನಿಂತ ತೆಂಗಿನ ಮರದ ಗರಿಗಳು ಚಂದಿರನೆಡೆಗೆ ಹಾರಲು ಪಟಪಟನೆ ರೆಕ್ಕೆ ಬಡಿಯುತ್ತಿದ್ದವು. ಬೆಳೆದ ಪೈರು ನರ್ತಿಸತೊಡಗಿತು. ಬೆಳೆಯ ಆಚೆಯ ತುದಿಯಲ್ಲಿ ಗರ್ಭವತಿಯಾಗಿ ಮಂದಗತಿಯಲ್ಲಿ ಹರಿಯುವ ಸೌಪರ್ಣಿಕಾ ನದಿ ರಭಸದ ಕಿಲಕಿಲ ನಗೆಯಾಡುವುದು ಮಕ್ಕಳ ಮೇಳದ ಹಾಡಿನಂತೆ ಕೇಳಿಸಿತು. ದೂರದಿಂದ ನಿಶಾಚರಿ ಪಕ್ಷಿಗಳ ಸುಖದ ಮೆಲ್ವಾತುಗಳು ಕೇಳಿಬಂದವು. ಬೆಳಕು ಮಧುರವೆನಿಸಿತು. ಹಿಂದಿನ ಜನ್ಮದಲ್ಲಿ ಕೆಲವರು ಕಟ್ಟೆಯ ಮೇಲೆ ಕುಳಿತು ದೆವ್ವಗಳು ಬೆಳಕಿನಲ್ಲಿ ಸಂಚರಿಸುವುದಿಲ್ಲ. ಅವುಗಳಿಗೆ ಬೆಳಕೆಂದರೆ ಆಗಿ ಬರುವುದಿಲ್ಲ. ಎಂದು ಮಾತಾಡುವುದನ್ನು ಕೇಳಿದ್ದೆ. ಮಾನವರು ಮಾತನಾಡುತ್ತಾರೆ! ಮಾತುಗಳನ್ನು ಆಡಿ ಆಡಿಯೇ ಮಾತಿಗಿರುವ ಮಾಣಿಕ್ಯದ ಬೆಲೆಯನ್ನು ಕಳೆದಿದ್ದಾರೆ! ನಮಗೆ ಬೆಳಕು ಅಂದರೆ ಆಗಿಬರುವುದಿಲ್ಲವಂತೆ! ಯಾಕೆ? ಸ್ವತಃ ತಾವು ನಮ್ಮ ಜೊತೆಗಿದ್ದು ಪರೀಕ್ಷಿಸಿ ಕಂಡುಕೊಂಡ ಸತ್ಯವೆಂದು ಬಿಂಬಿಸುತ್ತಾರೆ! ಅವರಿಗೇನು ಗೊತ್ತು? ನಾವು ಬೆಳಕು ಪಡೆಯಲು ಅವರೇ ಹೇಳಿದ ಕಳ್ಳದಾರಿ ಅವಲಂಬಿಸಿ ಕೊನೆಯನ್ನೂ ಸರಿಯಾಗಿ ಕಾಣಲಾಗದೇ ಕತ್ತಲೆಯ ಕೂಪಕ್ಕೆ ಬಿದ್ದಿದ್ದು? ನಾನು ಸತ್ತಾಗ ನನಗಿನ್ನೂ ಮಕ್ಕಳಾಗಿರಲಿಲ್ಲ. ಹೆಂಡತಿ ಬಂಗಾರದಂಥವಳು. ಆದರೂ ಕೂಡಿ ಬಾಳಲಾಗಲಿಲ್ಲ. ಯಾರ ಕೈವಾಡ ಕೆಲಸ ಮಾಡಿತೋ ಗೊತ್ತಿಲ್ಲ. ಅಂತೂ ಈ ಭೂತಲೋಕಕ್ಕೆ ಅಡಿ ಇರಿಸಿದೆ. ಇದು ಮಾನವ ಲೋಕಕ್ಕಿಂತ ವೈವಿಧ್ಯತೆಯ ಲೋಕ! ತಿರುಗಿ ನೋಡಿದೆ. ಕಳಚಿದ ಕಾಯದಲ್ಲಿ ಯಾವ ಗಂಧವಿರಲಿಲ್ಲ. ಕೊಳೆತ ನನ್ನ ಹೆಣ ಮಾನವರಿಗೆ ಅಸಹ್ಯವಾದೀತು! ನನಗೆ ಅಲ್ಲ. ಅದರ ವಾಸನೆಯೂ ನನಗೆ ಬರುವುದಿಲ್ಲ! ಮಾನವ ಬದುಕುವ ರೀತಿಯನ್ನು ನೋಡಿದರೆ ನಗು ಉಕ್ಕಿ ಬರುತ್ತದೆ. ತಾವೂ ಒಂದು ದಿನ ಐಹಿಕವಾಗಿ ಕೊಳೆಯುವವರೇ ಎಂದು ಗೊತ್ತಿದ್ದರೂ ಅಪಸವ್ಯಗಳಿಗಾಗಿ ಹಾತೊರೆದು ಹೋರಾಡುತ್ತಾರೆ! ಅವರ ತುಂಬಿ ಹರಿಯುವ ಲೌಕಿಕತೆಗಿಂತ ನಮ್ಮ ಶೂನ್ಯ ಆತ್ಮಿಕವೇ ಎಷ್ಟೋ ಸೊಗಸಾಗಿದೆ! ದೇಹ ಬಾಡಿಗೆ ಪಡೆದು ಬದುಕಿದ್ದಾಗ ಇಂಥ ಪ್ರಾಕೃತಿಕ ಸುಖ ಅನುಭವಿಸಲೇ ಇಲ್ಲ. ಕಾರ್ಯ ನಿಮಗ್ನತೆ ಇದ್ದರೆ ತಾನೇ ಅನುಭವ? ಶರೀರದ ಹಂಗಿನಲ್ಲಿ ಕ್ಷಣಕ್ಕೊಂದು ಅವತಾರ! ಹೇಶಾರವ ಮಾಡುತ್ತ ಕುದುರೆಯಾಗಿ ಹಾರಿದೆ. ಘರ್ಜಿಸುವ ಹುಲಿ, ಸಿಂಹವಾಗಿ ಆರ್ಭಟಿಸಿದೆ. ಘೀಳಿಡುವ ಮದಾಂಧ ಗಜವಾಗಿ ಸೊಂಡಿಲೆತ್ತಿ ಕಾಲಡಿಯನ್ನು ಹೊಸಕಿ ಹಾಕಿದೆ. ಭುಸುಗುಡುವ ಹಾವಾಗಿ, ಗುಟುರು ಹಾಕುವ ಗೂಳಿಯಾಗಿ... ಏನೆಲ್ಲಾ ಆದರೂ ಕೊನೆಗೆ ನಾಯಿ... ನಾಯಿಯಾಗಿಯೂ ಪಾತ್ರ ನಿಭಾಯಿಸಿದೆ! ಬಣ್ಣಬಣ್ಣಗಳ ಹಕ್ಕಿಯಾಗಿ ಪಟಪಟನೆ ರೆಕ್ಕೆ ಬಡಿದು ಗಾಳಿಯಲ್ಲಿ ತೇಲಿ ತೇಲಿ ಸಮ್ಮೋಹನಗೊಂಡೆ. ಏನು ಮಾಡಿದರೂ ಭರಣವಾಗಲಿಲ್ಲ ಗುಹೆ. ತೀರಲಿಲ್ಲ ನವೆ! ಹುಡುಕಾಟ, ಹುಡುಗಾಟಗಳಲ್ಲಿಯೇ ಜನ್ಮ ಕಳೆಯಿತು! ಜನ್ಮಕ್ಕಂಟಿದ ಪ್ರಾರಬ್ಧ ಕಳೆಯಲಿಲ್ಲ! ಈ ಲೋಕದಲ್ಲಿ ಎಷ್ಟು ದಿನಗಳ ಅಲೆದಾಟವೋ ಗೊತ್ತಿಲ್ಲ. ಆದರೆ, ಇಲ್ಲೂ ಬೇರೆ ಬೇರೆ ಪ್ರಾಣಿಪಕ್ಷಿಗಳಾಗಿ ಆನಂದ ಪಡೆಯುವ ಸೌಲಭ್ಯ ಉಂಟಂತೆ. ನೋಡೋಣ ಏನೇನಿದೆ! ಈಗ ತಾನೇ ಬಂದಾಗಿದೆ. ಯಾವ ಯಾವ ಆಟಗಳು ಅಡ್ಡಾಡಿಸುತ್ತವೆಯೋ...? ಹಸಿ ಹೆಣ ಕೈ ಮಾಡಿ ಕರೆಯಿತು. ಆಂ! ಏನಿದು ಹೊಸ ಹೆಣದ ವಾಸನೆ?! ನನ್ನ ಹೆಣದ ವಾಸನೆಗಿಂತಲೂ ಹಿತವೆನಿಸಿತು. ಅವನನ್ನು ಆವರಿಸಿದರೆ ಹೇಗೆ?! ತಮಂಧಾಂಬರ ಸೇರಿದರೂ ವಾಂಛೆ ಬೆಂಬತ್ತಿ ಕಾಡುತ್ತಿರುವುದು! ಮಲಗಲಾಗಲಿಲ್ಲ. ಮೇಲೆದ್ದು ನಡೆದೆ. ಏಳುವಾಗ ನನ್ನ ಹೆಣದ ಕಡೆಗೆ ಮತ್ತೊಮ್ಮೆ ನೋಡಿದೆ. ಮೂಗು ಕೊಂಚ ದಪ್ಪ ಎನ್ನುವುದನ್ನು ಬಿಟ್ಟರೆ ಅಂದವಾಗಿಯೇ ಇದ್ದೆ ಅನಿಸಿತು.ಆದರೆ ಸಾಯುವಾಗ ಈ ಹಾಳಾದ ಶರೀರ ತುಂಬಾ ಕಪ್ಪಾಗಿ ಹೋಯಿತು. ಇರಲಿ, ಇನ್ನೇನು ಮಾಡುವುದು? ಮಣ್ಣು ಕೊಡುವಾಗ ಸೇರಿದ ಜನ ಏನಂದುಕೊಂಡರೋ ಏನೋ! ಸಾಯುವ ಮೊದಲೇ ಸ್ವಲ್ಪ ಕಟಿಂಗ್ ಮತ್ತು ಶೇವಿಂಗ್ ಆದರೂ ಮಾಡಿಸಬೇಕಾಗಿತ್ತು. ಹೆಣವಾದಾಗ ಚೆಂದ ಕಾಣಿಸ್ತಿದ್ದೆ! ಎಂದುಕೊಳ್ಳುತ್ತ ನಡೆದೆ. ಹಾಗೆ ನೋಡಿದರೆ ನನಗೆ ನಡೆಯಿಲ್ಲ. ಸುಮ್ಮನೆ ಮಾಯವಾಗಿ ಹೋಗುವುದು! ಅಥವಾ ಹೋಗುವ ಮಾಯೆ ಎಂದರೂ ಸರಿಯೇ! ಹೊಸ ಶರೀರದ ಸಮಾಧಿಯ ಮುಂದೆ ನಿಂತೆ. ನಿಮ್ಮ ಲೋಕದಲ್ಲಿ ಹುಟ್ಟಿದವರು ಹೊಸಬರಾದರೆ, ನಮ್ಮ ಲೋಕದಲ್ಲಿ ಸತ್ತವರು ಹೊಸಬರು! ಉಬ್ಬಿದ ಗೋರಿಯ ಮಣ್ಣನ್ನು ಸರಿಸಬೇಕೆಂದೆ. ಆಶ್ಚರ್ಯ! ಅಂದುಕೊಂಡ ತಕ್ಷಣ ಭೂಕುಸಿತವಾಯಿತು! ಗೋರಿಯ ಮೇಲಿನ ಮಣ್ಣೆಲ್ಲ ಎಲ್ಲಿ ಹಾರಿ ಹೋಯಿತೋ? ನಾನೇ ಫಾಸ್ಟ್ ಅಂದುಕೊಂಡಿದ್ದೆ. ಈ ಮಣ್ಣು ನನಗಿಂಥ ಫಾಸ್ಟ್ ಇದೆ! ಒಳಗಿನ ಹೆಣ ಗಾಢ ನಿದ್ರೆಯಲ್ಲಿತ್ತು. ಇರುವಾಗಲೇ ಕಣ್ಣು ತೆರೆಯಲಿಲ್ಲ. ಮಣ್ಣು ಮುಚ್ಚಿದ ಮೇಲೆ ಇನ್ನೇನಿದೆ? ಕೆಂಪನೆಯ ಬಣ್ಣದ ಮುಖದಲ್ಲಿ ನೀಳ ಮೂಗು, ಹಾರಾಡುವ ಕೇಶ, ಗಟ್ಟಿಮುಟ್ಟಾಗಿದ್ದ ಶರೀರ. ಹೊಳಪಿತ್ತು. ತುಟಿಯ ನಗುವಿನ್ನೂ ಮಾಸಿಲ್ಲ. ಸುಂದರವಾಗಿದ್ದಾನೆ! ಇಂಥಾ ಸುಂದರ ಶರೀರ ಬಿಟ್ಟು ಎಲ್ಲಿ ಹೋದನೋ! ಸೆಳೆತ ಹೆಚ್ಚಾಯಿತು. ಆ ಶರೀರವನ್ನು ಸೇರಲು ನನಗಾವುದೇ ಅಡ್ಡಿಗಳಿರಲಿಲ್ಲ. ಹೇಗೆ ಬೇಕಾದರೂ ಅನಾಯಾಸವಾಗಿ ಆ ಒಡಲನ್ನು ಆಕ್ರಮಿಸಬಹುದಿತ್ತು. ಯಾಕೆ ಬಿಡಬೇಕು? ಗುಂಗಿ ಹುಳದಂತೆ ಗಿರ್ರ್ಶರ್ರ್ ... ಅಂತಾ ನಾಲ್ಕಾರು ಸುತ್ತು ಹಾಕಿ ಸುಂದರನ ಎದೆಯ ಮೇಲಿನ ರೋಮ ರಂಧ್ರದ ಮೂಲಕ ಒಳ ತೂರಿದೆ! ಅಬ್ಬಬ್ಬಾ! ಅಳು, ನಗು, ಒದ್ದಾಟ, ಗುದ್ದಾಟ ಇವ್ಯಾವುವೂ ಇಲ್ಲದೇ ಹೊಸ ಮನುಷ್ಯನಾಗಿ ಎದ್ದು ಕುಳಿತೆ. ಎದ್ದು ಕುಳಿತಾಗ ಗೋರಿಯಲ್ಲಿ ಭೂಕಂಪ! ನವಚೇತನ ಧರಿಸಿದಂತಾಯಿತು. ಜೋಮು ಹಿಡಿದ ಕೈ, ಕಾಲು, ಕುತ್ತಿಗೆಗಳನ್ನು ಕಡ್ರ್... ಲಟಕ್... ಎಂದು ಮುರಿದುಕೊಂಡೆ. ಎಲ್ಲ ಅವಯವಗಳು ಎಚ್ಚೆತ್ತವು. ಅವುಗಳಿಗೆ ನಾನು ಅಂದುಕೊಂಡಂತೆ ಮಾಡಿರಿ ಎಂದು ಆಜ್ಞೆ ನೀಡಿದೆ. ಮಣ್ಣಡರಿದ ಮೈಯನ್ನು ಜಾಡಿಸಿಕೊಂಡು ಮೇಲೆದ್ದು ಠಣ್ಣನೆ ಗೋರಿಯ ಮೇಲೆ ಹಾರಿದೆ. ಗಾಳಿಗಿಂತ ಹಗುರಾಗಿ ಹೊರ ಬಂದವನಿಗೆ ಮತ್ತೇನೋ ಭಾರ ಹೊತ್ತುಕೊಂಡು ದಣಿದ ಹಾಗಾಯಿತು. ಹೊಸ ಪ್ರವೇಶ! ಹೊಸ ಉತ್ಸಾಹ! ಹೊಸ ಪ್ರಕೃತಿ, ಹೊಸ ಪುರುಷ-ಪೌರುಷ! ಸಿಂಹದಂತೆ ಹೆಜ್ಜೆ ಹಾಕಿದೆ! ವೀರನಾಗಿ ಬದುಕಲಿಲ್ಲ. ಸತ್ತ ಮೇಲಾದರೂ ಕುಸ್ತಿ ಆಡೋಣ ಅನಿಸಿತು! ಎಂಥಾ ಸುಖ...! ಮೈತುಂಬ ಕೈಯ್ಯಾಡಿಸಿಕೊಂಡೆ. ಮುಟ್ಟಿ ಮುಟ್ಟಿ ನೋಡಿಕೊಂಡೆ. ಕೆಲವು ಕಂಡವು! ಕೆಲವು ಕಾಣಿಸಿದವು! ಮೈಯೊಳಗೆ ಮರೆಯಾದೆ! ಮರೆವು ಆವರಿಸಿತು. ಇರದ ಇಂದ್ರಿಯಗಳು ಜಾಗೃತವಾದವು. ಮತ್ತೆ ಸುಖದ ಹಂಬಲ! ಬದುಕಿದವರು, ನೂರು ವರುಷ ಬದುಕುವೆ ಎಂದುಕೊಂಡವರು, ಜನ್ಮಾಂತರಗಳ ಸುಖದ ಬಗ್ಗೆ ಸುಖಿಸುತ್ತಾರೆ. ನನ್ನದೇನಿದೆ? ಬದುಕಲೂ ಇಲ್ಲ, ಬದುಕಿಯೂ ಇಲ್ಲ. ಈಗ ಅನಿಸುತ್ತಿದೆ. ಪರಿಪೂರ್ಣವಾಗಿ ಬದುಕಿದವರು ಮಾತ್ರ ಪರಿಪೂರ್ಣ ಸಾಯಬಲ್ಲರು! ಒಂದೊಂದೇ ಹೆಜ್ಜೆ ಇಟ್ಟೆ! ಹೆಜ್ಜೆಗೊಂದು ಗೆಜ್ಜೆನಾದ! ಒಂದೊಂದೇ ಕಾಲುಗಳನ್ನು ಎತ್ತಿ ಅಲುಗಾಡಿಸಿದೆ! ಸಪ್ಪಳವಿಲ್ಲ! ಕಿತ್ತು ಮುಂದೆ ಹೋದಾಗ ಮಾತ್ರ ಗೆಜ್ಜೆ ಎಚ್ಚರವಾಗುವುದು! ಹಿಂದಡಿಯಿಟ್ಟೆ! ಆಗಲೂ ಗಿಲಕ್ ಅಂದಿತು. ಹೆದರಲಿಲ್ಲ. ಏಕೆ ಹೆದರಬೇಕು? ಈ ಶರೀರವೇ ನನ್ನದಲ್ಲವಲ್ಲ! ಯಾರಾದರೂ ಬೇಡಿದರೆ ಕೊಟ್ಟು ಬಿಟ್ಟರಾಯಿತು! ನಾನುಂಡ ಅಪಮೌಲ್ಯದ ಸುಖ ಇನ್ನೊಬ್ಬರೂ ಸ್ವಲ್ಪ ರುಚಿ ನೋಡಲಿ! ಎಂದುಕೊಂಡು ಮುಂದುವರಿದೆ. ಮುಂದೆ ಹೋದಂತೆ ಹೋದಂತೆ ನನ್ನನ್ನಾರೋ ಬೆಂಬತ್ತಿದ್ದಾರೆ ಎನಿಸಿತು. ಶರೀರಿಯಾಗಿ ಬದುಕಿದಾಗ ಬಿಡದವರು ಇಲ್ಲಿಯೂ ಬಂದರೇ? ಎಂದು ಅನುಮಾನಿಸಿ ಕುತ್ತಿಗೆಗೆ ತಿರುಗಲು ಹೇಳಿ ಕಣ್ಣುಗಳಿಗೆ ನೋಡಲು ಆಜ್ಞಾಪಿಸಿದೆ. ಅವು ತಮ್ಮ ಕೆಲಸ ಮಾಡಿದಾಗ ಭೂತಲೋಕದ ಆಶ್ಚರ್ಯ ಮಾಯೆಯಾಗಿ ಕಾಡಿತ್ತು. ಮತ್ತೇನು... ನನ್ನದೇ ಶರೀರ ಬಿಡದೇ ಬೆಂಬತ್ತಿದೆ! ಬೆಂಕಿಯಿಂದ ಉದ್ಭವಿಸಿದ ಇದ್ದಿಲಿನ ಮುಳ್ಳುಹಂದಿ ನಡೆದು ಬರುತ್ತಿರುವಂತೆ ಕಂಡಿತು. ಅಕಟಕಟಾ...! ನಾನು ಇದನ್ನು ಬಿಟ್ಟರೂ ಇದು ನನ್ನ ಬಿಡುತ್ತಿಲ್ಲವಲ್ಲ ಎಂದು ಸರಸರ ಹೆಜ್ಜೆ ಹಾಕಿದೆ. ಬಿರುಗಾಳಿಯಂತೆ ಪಕ್ಕದಲ್ಲೇ ಹಾರಿ ಒಮ್ಮೆಲೇ ಬ್ರೇಕ್ ಹಾಕಿಕೊಂಡು ಧುತ್ತೆಂದು ಮುಂದೆ ಬಂದು ನಿಂತಿತು. ನೋಡಿದೆ. ಮುಂದೆ ಬಂದರೆ ನೋಡಲೇಬೇಕಲ್ಲ! ಇದು ನನ್ನ ಪೂರ್ವಜರು ಹೇಳಿದ ಮಾತು! ಇತ್ತ ಭೂಮಿಗೂ ತಾಕದೇ ಅತ್ತ ಆಕಾಶಕ್ಕೂ ಮುಟ್ಟದೇ ನನ್ನ ಹೆಣ ಮಧ್ಯದಲ್ಲಿಯೇ ವಿಕೃತರೂಪದಲ್ಲಿ ನರಳುತ್ತ ಜೋತಾಡಲಾರಂಭಿಸಿತು. ಕಪ್ಪುಕುಳಿಗಳಂತೆ ಕಾಣುವ ಕೊನೆಯಿಲ್ಲದ ಕಣ್ಣುಗಳು ನಾನುಟ್ಟ ಹೊಸ ಶರೀರವನ್ನು ನುಂಗುವಂತೆ ನೋಡಿದವು. ಅರೆ... ಇದನ್ನು ಬಿಡುವಾಗ ನಾನು ಕಣ್ಣುಗಳನ್ನೇ ಮುಚ್ಚಲಿಲ್ಲವೇ! ಎಂದು ಮುಚ್ಚಲು ಯೋಚಿಸಿದರೆ ಅವುಗಳಿಗೆ ರೆಪ್ಪೆಗಳೇ ಇಲ್ಲ! ಬೂದಿಗೆ ಆಕಾರ ಬಂದಂತಿರುವ ಆ ಶರೀರವನ್ನು ನೋಡಿ ರೋಷ ಉಕ್ಕಿ ಬಾಯಿಗೆ ಬೈಯಲು ಹೇಳಿದೆ. ಲೇ, ಮಾನ ಮರ್ಯಾದೆ ಇಲ್ಲವೇ ದರಿದ್ರ? ನಾ ನಿನ್ನ ಬಿಟ್ಟರೂ ನಿನಗೆ ಜೀವ ಹೇಗೆ ಬಂತು? ಎಂದು ಬಾಯಿ ಹಲುಬಿದಾಗ ಸಿಡಿಲಂತೆ ನಕ್ಕ ಶರೀರ, ಲೋ, ಹುಚ್ಚ. ನೀನೆಲ್ಲಿ ನನ್ನ ಬಿಟ್ಟಿದ್ದೀಯಾ? ನೀನಿರುವುದು ನನ್ನದೇ ಇನ್ನೊಂದು ರೂಪದಲ್ಲಿ ಅಷ್ಟೇ. ನೀ ಬಂದ ಮೇಲೆ ನಿನ್ನ ಅಳಿದುಳಿದ ಚೇತನಗಳನ್ನು ತುಂಬಿಕೊಂಡು ಮತ್ತೆ ಎದ್ದು ಬಂದೆ. ನನ್ನನ್ನೇ ಆವರಿಸಿಕೊಂಡು ನನಗೇ ಹಂಗಿಸುವೆಯಾ? ನೀನೆಲ್ಲಿ ಹೋದರೂ ನಾ ನಿನ್ನ ಬಿಡಲ್ಲ. ಎಂದಿತು. ಹಾಳಾಗಿ ಹೋಗು. ನನಗೆ ಹೊಸ ಕಾಯ ದೊರಕಿರುವಾಗ ನಿನ್ನ ಹಂಗೇಕೆ? ಎಂದುಕೊಂಡು ನಡೆದೆ. ನನ್ನ ಹೆಣವೂ ಹಿಂದೆಯೇ ಉಪಕ್ರಮಿಸಿತು. ನನ್ನದು ನಡಿಗೆ ಎನಿಸಲಿಲ್ಲ. ಹಗುರಾಗಿ ಹಾರಿ ಕೆಳಗಿಳಿದಂತಾಗುತ್ತಿತ್ತು. ಹೊಲದ ಮಧ್ಯದ ಕಾಲುದಾರಿ. ಮೆತ್ತನೆಯ ಹುಲ್ಲು ಹಾಸಿಗೆ. ಕಾಲುಗಳಿಗೆ ಇಬ್ಬನಿಯ ಸ್ಪರ್ಶ. ಸುತ್ತಲೂ ನಿಧಾನವಾಗಿ ಮಂಜು ಮುಸುಕುತ್ತಿತ್ತು. ಇಂದ್ರಿಯಗಳನ್ನು ನಿಮಿರಿಸಿಕೊಂಡು ನದಿ ತಟ ತಲುಪಿದೆ. ಎತ್ತರದ ಹುಣಸೆ, ಆಲ, ಮಾವು, ಬೇವುಗಳ ಜೊತೆಗೆ ಸೀಬೆ, ನೆಲ್ಲಿಯ ಮರಗಳು, ಒಂದಕ್ಕೊಂದು ಅಂಟಿಕೊಂಡು ದಟ್ಟವಾಗಿ ಬೆಳೆದ ಬಿದಿರು ಎರಡೂ ದಡಗಳಲ್ಲಿ ಬೆಳೆದು ನಿಂತಿವೆ. ಸಂಸಾರ ಮಾಡಿಕೊಂಡಿರಲು ಪ್ರಸ್ತವಾದ... ಅಲ್ಲಲ್ಲ. ಪ್ರಶಸ್ತವಾದ ಸ್ಥಳ! ಊರು ಬಿಟ್ಟು ಬಂದ ಮೇಲೆ ಎಲ್ಲಿದ್ದರೇನು? ಜಗತ್ತೇ ನನ್ನ ಮನೆ!
©2024 Book Brahma Private Limited.