‘ಕಿಟಕಿಯಂಚಿನ ಮೌನ’ ಕೃತಿಯು ರೇಣುಕಾ ಹೇಳವರ ಅವರ ಸಣ್ಣಕತಾಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಸಿಕಾ ಅವರು, ರೇಣುಕಾ ಹೆಳವರ ಅವರ ಕಿಟಕಿಯಂಚಿನ ಮೌನಕ್ಕೆ ಕಿವಿಯಾದಾಗ ಮನಸು ಚಿಂತನೆಗೊಳಗಾಯಿತು. ಇವರ ಕತೆಗಳಲ್ಲಿ ಸ್ತ್ರೀ ಪರ ಚಿಂತನೆ, ಸ್ತ್ರೀ ಸಂವೇದನೆಗೆ ಸ್ಪಂದನೆ ಇರುವುದನ್ನು ಗುರುತಿಸುತ್ತೇವೆ. ಪುರುಷ ದ್ವೇಷಿಯಂತೂ ಖಂಡಿತಾ ಅಲ್ಲ. ಹೆಣ್ಣಿನ ನೋವು, ಸಂಕಟ, ಪರದಾಟಕ್ಕೆ ಪ್ರತಿರೋಧವಿದೆ. ಜೀವನದ ದುರಂತಗಳಿಗೆ ರಾಜಿಯಾಗುವುದು ಅನಿವಾರ್ಯವಲ್ಲ. ವಿಮುಕ್ತಿಯ ಪಥ ಕಂಡುಕೊಳ್ಳುವ ಹಕ್ಕು ಹೆಣ್ಣಿಗಿದೆ ಎನ್ನುವ ಅಂಶವನ್ನು ರೇಣುಕಾರವರು ಕೆಲವಾರು ಕತೆಗಳಲ್ಲಿ ಒತ್ತಿ ಹೇಳಿದ್ದಾರೆ. ಇಲ್ಲಿಯ ಕಥಾನಾಯಕಿಯರೆಲ್ಲ ಹೆಣ್ಣು ಸಶಕ್ತಳು, ಸಮಯಪ್ರಜ್ಞೆ ಇರುವಂಥವಳು, ಅನಗತ್ಯ ಒದ್ದಾಟಕ್ಕೆ ತಿಲಾಂಜಲಿ ಹೇಳುವ ಧೈರ್ಯ ಹೊಂದಿರುವಳೆಂದು ಕತೆಗಾರ್ತಿ ಸಾಬೀತು ಪಡಿಸಿದ್ದಾರೆ. ಸಮಾಜ, ಸಾಮಾಜಿಕ ವ್ಯವಸ್ಥೆ ಎಲ್ಲವೂ ಪೂರ್ವ ನಿರ್ಧಾರಿತವಾಗಿದ್ದು ಗಂಡಿಗೊಂದು ನ್ಯಾಯ, ಹೆಣ್ಣಿಗೊಂದು ನ್ಯಾಯ ಇದೆ ಎನ್ನುತ್ತಾರೆ. ಆ ಕಾರಣಕ್ಕಾಗಿ ಯಾವತ್ತೂ ಹೆಣ್ಣೇ ಸಮಸ್ಯೆ ಎದುರಿಸ ಬೇಕಾಗುವ ಅನಿವಾರ್ಯತೆ. ಅದನ್ನು ಹೆಳವರ ಅವರು ಹಕ್ಕಿನಿಂದ ಪ್ರಶ್ನಿಸುತ್ತಾರೆ. ಇಲ್ಲಿಯ ಕತೆಗಳ ಭಾಷೆಯಲ್ಲಿ ದೇಸೀಯತೆಯ ಝುಲಕ್ಕಿದೆ. ಕಲ್ಯಾಣ ನಾಡಿನ ಕೆಲವಾರು ಜಿಲ್ಲೆಗಳ ಮಾತಿನ ಧಾಟಿ, ಧ್ವನಿ, ಶೈಲಿ ಅಲ್ಲಲ್ಲಿ ಕಂಡು ಬರುತ್ತವೆ. ಪ್ರಾದೇಶಿಕ ಚಿಂತನೆ, ಹಳ್ಳಿಗಳ ಚಿತ್ರಣ ಇಲ್ಲಿ ಸೊಗಸಾಗಿ ಮೂಡಿಬಂದಿದ್ದು, ಅಲ್ಲಿಯ ಸಮಸ್ಯೆಗಳು ವಸ್ತುವಾಗಿರುವ ಸಾರ್ಥಕ ಭಾವ ತೋರುತ್ತದೆ. ಕಥಾ ನಿರೂಪಣೆ, ಬಳಸುವ ತಂತ್ರ, ವಸ್ತು ಆಯ್ಕೆ, ಸಮಾಧಾನಕರವಾಗಿರುವುದು ಬೆಳೆಯುವ ಕತೆಗಾರ್ತಿಯ ಉತ್ತಮ ಲಕ್ಷಣವಾಗಿದೆ ಎಂದಿದ್ದಾರೆ. ಕತೆಗಾರ್ತಿಯರು ಸೂಕ್ಷ್ಮ ಸಂವೇದನೆಯ ಮನಸ್ಥಿತಿ, ತೀವ್ರತೆ ಹೊಂದಿರುವ ಭಾವನಾತ್ಮಕ ಜೀವಿ, ಇವರು ಕಲ್ಯಾಣ ನಾಡಿನ ಕಥಾ ಪ್ರಕಾರ ಹುಲುಸಾಗಿ ಬೆಳೆಯಲು ಅನುವಾಗಿರುವ ಇನ್ನೊಂದು ಹಚ್ಚ ಹಸಿರು ಪೈರು ಎಂದಿದ್ದಾರೆ.
ಗುಲ್ಬರ್ಗಾ ಜಿಲ್ಲೆಯ ಚಿಂಚೋಳಿ ಮೂಲದವರಾದ ರೇಣುಕಾ ಹೆಳವರ, 10-10-1982ರಂದು ಜನಿಸಿದರು. ರಾಜ್ಯಶಾಸ್ತ್ರ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಪೊಲೀಸ್ ಇಲಾಖೆಯಲ್ಲಿ 2005ರಿಂದ ಡಬ್ಲ್ಯು ಪಿ.ಸಿಯಾಗಿ ಕಾರ್ಯ ನಿರ್ವಹಿಸಿದ್ದ ಅವರು, ಸದ್ಯ ವಿಶ್ವವಿದ್ಯಾಲಯ ಪೋಲಿಸ್ ಠಾಣೆ ಕಲಬುರಗಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. - ಕವಿತೆ, ಕಥೆ, ಲೇಖನ ಬರೆಯುವುದು, ಓದುವುದು ಇವರ ಪ್ರಮುಖ ಹವ್ಯಾಸಗಳು. 2014ರಲ್ಲಿ ಪ್ರಕಟಗೊಂಡ ಇವರ ‘ಬೆಳಕ ಮರೆಯ ಬೆಂಕಿ’ ಕವನ ಸಂಕಲನವು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರೋತ್ಸಾಹ ಧನ ಪಡೆದಿದೆ. ಎರಡನೆಯ ಪುಸ್ತಕ ಕಥಾಸಂಕಲನ ‘ಕಿಟಕಿಯಂಚಿನ ಮೌನ’ ಅಚ್ಚಿನಲ್ಲಿದೆ. ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ...
READ MORE