’ಚೆಲುವಿ ಚಂದ್ರಿ’ ಲೇಖಕ ಪ್ರಕಾಶ ಗ. ಖಾಡೆ ಅವರ ಕಥಾಸಂಕಲನ. ಉತ್ತರ ಕರ್ನಾಟಕದ ಭಾಷಾ ಶೈಲಿಯನ್ನೂ ಮೈಗೂಡಿಸಿಕೊಂಡಿರುವ ಇಲ್ಲಿನ ಕತೆಗಳು ಪರಿಸರವನ್ನೇ ಕೇಂದ್ರವಾಗಿರಿಸಿವೆ. ಅಲ್ಲಿನ ಮೌಲಿಕ ಸುಂದರ ಬದುಕು, ಅದೂ ಆಧುನಿಕತೆಯಿಂದ ಆಗಾಗ ತಲ್ಲಣಗೊಳ್ಳುವ ಆತಂಕ, ಅಲ್ಲೊಂದು ಇಲ್ಲೊಂದು ಜೀವ ಕೊಲ್ಲುವ ಘಟನೆಗಳ ಜೊತೆಗೆ ಸೂಕ್ಷ್ಮವಾಗಿ ಹಳ್ಳಿ ಪರಿಸರದ ವಿವರಗಳನ್ನು ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಬಹುತೇಕ ಕತೆಗಳು ಸಾಮಾಜಿಕ ಅಂತಃಕರಣದ ಬದುಕಿಗೆ ಮಿಡಿಯುವ, ಮನುಷ್ಯ ಸ್ವಭಾವದ ಎಲ್ಲೆಗಳನ್ನು ಸ್ಪರ್ಶಿಸುವ ಗುಣಗಳನ್ನು ಹೊಂದಿವೆ. ಕತೆಗಳ ಹರಿವು, ಭಾಷೆಯ ಸೊಗಡು, ಸಶಕ್ತ ನಿರೂಪಣಾ ಶೈಲಿಯಿಂದ ’ ಚೆಲುವಿ ಚಂದ್ರಿ’ ಸಂಕಲನದ ಕತೆಗಳು ಓದುಗರಿಗೆ ಆಪ್ತವಾಗುವಂತಿವೆ.
ಡಾ.ಪ್ರಕಾಶ ಗಣಪತಿ ಖಾಡೆಯವರು ಕನ್ನಡದ ಜಾನಪದ ಮತ್ತು ನವ್ಯಕಾವ್ಯದ ಕವಿ- ಲೇಖಕ. ಪ್ರಕಾಶ ಗಣಪತಿ ಖಾಡೆ ಅವರು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ. ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾದ ಅವರು 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು. ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ...
READ MORE