ಡಾ.ಪ್ರಕಾಶ ಗಣಪತಿ ಖಾಡೆಯವರು ಕನ್ನಡದ ಜಾನಪದ ಮತ್ತು ನವ್ಯಕಾವ್ಯದ ಕವಿ- ಲೇಖಕ. ಪ್ರಕಾಶ ಗಣಪತಿ ಖಾಡೆ ಅವರು ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದಲ್ಲಿ 10-06-1965 ರಂದು ಜನಿಸಿದರು. ಓದಿದ್ದು ತೊದಲಬಾಗಿ, ಕೆರೂರ (ಬದಾಮಿ), ಇಳಕಲ್ಲ ಹಾಗೂ ಧಾರವಾಡಗಳಲ್ಲಿ. ಕನ್ನಡದಲ್ಲಿ ಎಂ.ಎ.ಪ್ರಥಮ ದರ್ಜೆಯಲ್ಲಿ ಪಾಸಾದ ಅವರು 2005ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ "ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ" ಮಹಾ ಪ್ರಬಂಧಕ್ಕೆ ಪಿಎಚ್.ಡಿ. ಪದವಿ ಪಡೆದರು.
ಬೈಲಹೊಂಗಲ,ಚಂದರಗಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ,ಬಾಗಲಕೋಟ ಸಕ್ರಿ ಪತ್ರಿಕೋದ್ಯಮ ವಿಭಾಗ ಮತ್ತು ಇಳಕಲ್ಲ ವಿಜಯ ಚಿತ್ರಕಲಾ ಸ್ನಾತಕೋತ್ತರ ಕಾಲೇಜು ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ, ಜಾನಪದ, ಶಿಕ್ಷಣ, ಸಂಶೋಧನೆ ಹಾಗೂ ಸಂಘಟನೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ, ಆಕಾಶವಾಣಿ, ದೂರದರ್ಶನಗಳಲ್ಲಿ ಲೇಖನ, ಕವಿತೆ, ಕಥೆ, ವಿಮರ್ಶೆ ಪ್ರಕಟ ಮತ್ತು ಪ್ರಸಾರ. ಸಾಹಿತ್ಯ ಸಂಪಾದಿಸಿ ಈವರೆಗೆ ಗೀತ ಚಿಗಿತ, ಪ್ರೀತಿ ಬಟ್ಟಲು, ತೂಕದವರು, ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಕೃಷ್ಣಾ ತೀರದ ಜನಪದ ಒಗಟುಗಳು, ಮುನ್ನುಡಿ ತೋರಣ, ಜತ್ತಿ ಕಾವ್ಯಾಭಿವಂದನ, ನೆಲಮೂಲ ಸಂಸ್ಕøತಿ, ಕನ್ನಡ ಪತ್ರಿಕೆ ಮತ್ತು ಸಾಹಿತ್ಯ, ಜಾನಪದ ಕೋಗಿಲೆ ಗೌರಮ್ಮ ಚಲವಾದಿ, ಸಾಹಿತ್ಯ ಸಂಗತಿ, ಮೌನ ಓದಿನ ಬೆಡಗು, ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ, ಶಾಂತಿ ಬೀಜಗಳ ಜತನ, ಬಸವ ಸಂಪದ, ಬಸವ ಸಿರಿ, ಜಾನಪದ ಹೆಬ್ಬಾಗಿಲು 25 ಕೃತಿಗಳು ಪ್ರಕಟ. ಮುಧೋಳ, ಶಿವಮೊಗ್ಗ ಮತ್ತು ವಿಜಾಪುರ, ಮೈಸೂರುಗಳಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಕೇರಳದಲ್ಲಿ ಜರುಗಿದ ಕನ್ನಡ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ. ಉತ್ತಮ ವಾಗ್ಮಿ, ಅಪರೂಪದ ಶಿಕ್ಷಣ ಚಿಂತಕ ಡಾ. ಪ್ರಕಾಶ ಖಾಡೆ ಬಾಗಲಕೋಟ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿಯೂ ಕಾರ್ಯನಿರ್ವಹಿಸಿದ್ದಾರೆ.