’ಬೆತ್ತಲೆ ಸಂತ’ ಇಸ್ಮಾಯಿಲ್ ತಳಕಲ್ ಅವರ ಕತಾಸಂಕಲನವಾಗಿದೆ. ಮೆಲ್ನೋಟಕ್ಕೆ ‘ಬೆತ್ತಲೆ ಸಂತ’ ಕತೆಯು ಸಂಸಾರದ ಜಂಜಾಟಗಳಿಗೆ ಬೇಸತ್ತು ವಿಮುಖನಾಗಿ ಯಾವುದೋ ಅನೂಹ್ಯಕ್ಕೆ ತುಡಿಯುವ ಸಾಮಾನ್ಯನ ಕತೆಯಂತೆ ಕಂಡರೂ ಆಳದಲ್ಲಿ ಆರ್ದ್ರ ಭಾವನೆಗಳನ್ನು ಎಬ್ಬಿಸುತ್ತದೆ. ಕಾಯ ಜೀವಗಳ ಗಂಟುಗಳನ್ನು ಬಿಡಿಸುವಲ್ಲಿ ಪ್ರಾಮಾಣಿಕವಾಗಿ ತುಡಿಯುವ ಕಥಾನಾಯಕ ಶಂಕ್ರ, ಲೋಕದ ಕಣ್ಣಿಗೆ ಹುಚ್ಚನಂತೆ ಕಂಡರೂ ತಾನು ಬಯಸದ ಬೆತ್ತಲೆಯ ಬಯಲಿನೊಳಗೆ ಆಪರಿಮಿತದ ಆನಂದವನ್ನು ಕಂಡುಕೊಳ್ಳುವಲ್ಲಿ ಕತೆಗೊಂದು ತಾರ್ಕಿಕ ಅಂತ್ಯ ಸಿಕ್ಕಿದೆ. ವಾಸ್ತವದೊಂದಿಗೆ ಸತತ ಹಣಾಹಣಿ ಮಾಡಿಕೊಂಡೇ ಬೆತ್ತಲಾಗುವ, ಸಂತನಾಗುವ ಪ್ರಕ್ರಿಯೆಯನ್ನು ಎಳೆಯಾಗಿ ಬಿಚ್ಚಿಡುವಲ್ಲಿ ಇಸ್ಮಾಯಿಲ್ ಅವರು ತಿಳಿಗೊಳದ ಮೇಲೆ ಹೊಂಗಿರಣ ಬಿದ್ದು ಹೊಳೆಯುವಂತೆ ಪ್ರಶಾಂತವಾಗಿ ಅಷ್ಟೇ ಸ್ಪಷ್ಟವಾಗಿ ನಿರೂಪಿಸಿದ್ದಾರೆ.
ಇಲ್ಲಿನ ಗುಲಾಬಿ ಹೂವಿನ ಫ್ರಾಕು, ರೋಗಗ್ರಸ್ತ, ಜಸ್ಟೀಸ್ ಫಾರ್ ದುರುಗಿ, ಬೆತ್ತಲೆ ಸಂತ, ಮುರಿದ ಕೊಳಲಿನ ನಾದ ಕತೆಗಳಲ್ಲಿ ಆ ಬಗೆಯ ಮೂರ್ತರೂಪದ ಪಾತ್ರಗಳನ್ನು ಎದುರುಗೊಳ್ಳುವುದನ್ನು ಕಾಣಬಹುದು. ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಬೆಳೆದ ಕತೆಗಾರರ ಲೇಖನಿಯಲ್ಲಿ ಮೂಡುವ ಹೆಣ್ಣಿನ ಚಿತ್ರಣ ನಮ್ಮ ಸಾಮಾಜಿಕ ಸ್ಥಿತಿಗತಿಯ ಪ್ರತಿಬಿಂಬವಾಗಿರುತ್ತದೆ ಎಂಬುದನ್ನು ಕಾಣಬಹುದು. ಲೇಖಕ ’ಜಸ್ಟಿಸ್ ಫಾರ್ ದುರುಗಿ’ ಕತೆಯಲ್ಲಿ ವಾಸ್ತವವನ್ನು ಸೂಕ್ಷ್ಮವಾಗಿ ಗ್ರಹಿಸಿ ಹಿಡಿದಿಟ್ಟಿದ್ದಾರೆ. ’ಗುಲಾಬಿ ಹೂವಿನ ಫ್ರಾಕ್’ ಕತೆಯಲ್ಲಿ ಬದುಕನ್ನು ಅವುಡುಗಚ್ಚಿ ಸಹಿಸಿ ನಾಳೆಯ ಭರವಸೆಯೊಂದಿಗೆ ಬದುಕುವ ಪರ್ವೀನ್ ಳ ಚಿತ್ರ, ಗ್ರಾಮೀಣ ಭಾಗದ ಅದೆಷ್ಟೊ ಮಹಿಳೆಯರ ಜೀವನದ ಪ್ರತಿಬಿಂಬವಾಗಿ ಈ ಕೃತಿ ಇದೆ.
ಅನುಭವ ಕಥನದ ಹೊಸ ಲೋಕ ತೆರೆದಿಟ್ಟ ‘ಬೆತ್ತಲೆ ಸಂತ’ -ಸುಮಿತ್ ಮೇತ್ರಿ-ಬುಕ್ ಬ್ರಹ್ಮ
--
‘ಬೆತ್ತಲೆ ಸಂತ’ ಕೃತಿಯ ವಿಮರ್ಶೆ
'ಬೆತ್ತಲೆ ಸಂತ' ಸಂಕಲನದ ಕತೆಗಳನ್ನು ಮೊದಲಿಗೆ ಕತೆಗಾರರ ಪರಿಚಯ ಹಿನ್ನೆಲೆ ಏನೂ ತಿಳಿಯದೆ ಸುಮ್ಮನೆ ಓದಲುತೊಡಗಿದೆ. ಇಲ್ಲಿನ ಎಲ್ಲ ಕತೆಗಳೂ, ತಮ್ಮನ್ನು ತಾವೇ ಓದಿಸಿಕೊಂಡವು. ಒಂದೊಂದು ಕತೆಯನ್ನು ಓದುವಾಗಲು ಹತಾಶೆ, ತಲ್ಲಣ, ಕಾಳಜಿ, ನೋವು, ದುಃಖ ಮೊದಲಾದ ಭಾವನೆಗಳಲ್ಲಿ ಅದ್ದಿಹೋಗುವಂತೆ ಆಯಿತು.
ಕೆಲವೊಂದು ಕತೆಗಳಂತೂ ತೀವ್ರವಾರ, ಚಿಂತನೆಗೆ ತೊಡಗುವಂತೆ, ವರ್ತಮಾನವನ್ನು ಸಿಟ್ಟು ಸೆಡವುಗಳಿಂದ ಚಿಕಿತ್ಸಕವಾಗಿ ನೋಡುವಂತೆ ಕಾಡಿದವು. ಕತೆಗಾರ ಇಸ್ಮಾಯಿಲ್ ತಳಕಲ್ ಅವರ ಮೊದಲ ಕಥಾಸಂಕಲನ ಇದು, ತಮ್ಮ ಮೊದಲ ಕಥಾ ಸಂಕಲನದಲ್ಲಿ ಕಟ್ಟುವಿಕೆ, ಮೌಲ್ಯ, ಮತ್ತು ಸಾಮಾಜಿಕ ನ್ಯಾಯರ ಮೂರರಲ್ಲೂ ಸಾಕಷ್ಟು ಪರಿಣತಿಯನ್ನು ಇಲ್ಲಿನ ಕತೆಗಳಲ್ಲಿ ಇಸ್ಮಾಯಿಲ್ ತೋರಿದ್ದಾರೆ. ಭಾಷೆ ಮತ್ತು ನಿರೂಪಣಾ ಕ್ರಮಗಳಲ್ಲಿ ಇಲ್ಲಿನ ಎಲ್ಲ ಕತೆಗಳೂ ಅಪ್ಪ ಜವಾರಿ ಕತೆಗಳು.
‘ಬೆತ್ತಲೆ ಸಂತ’ ಕತೆಯ ಪದ್ಯ, ಗುಲಾಬಿ ಹೂವಿನ ಫ್ರಾಕು ಕತೆಯ ಪರ್ವೀನ್, ಜಸ್ಟೀಸ್ ಫಾರ್ ದುರುಗಿ ಕತೆಯ ದುರುಗಿ ಕತೆಯ ಪರೀಷ್ ಜಸ್ ಫಾರ್ ದುರುಗಿ ಕತೆಯ ದುರುಗಿ, 'ಮುರಿದ ಕೊಳಲಿನ ನಾದ ಕತೆಯ ಹುಲಿಗಳು ಇವರೆಲ್ಲ ಇಡೀ ಸಂಕಲನದಲ್ಲಿ ನಮ್ಮನ್ನು ಬಹುವಾಗಿ ಕಾಡುವ ಸ್ತ್ರೀ ಪಾತ್ರಗಳು. ಈ ನಾಲ್ಕೂ ಕತೆಗಳು ಸ್ತ್ರೀಯರನ್ನೇ ಪ್ರಧಾನವಾಗಿ ಕಥಿಸುವುದಿಲ್ಲ. ಆದಾಗ್ಯೂ ನಮ್ಮ ಸಮಾಜದಲ್ಲಿ ಹೆಣ್ಣು ಹೇಗೆಲ್ಲ ಭಿನ್ನ ಭಿನ್ನವಾಗಿ ಸಂಸಾರ, ಕುಟುಂಬ, ಹೊರಜಗತ್ತುಗಳಲ್ಲಿ ನಿರಂತರ ಹೋರಾಡುತ್ತ ಬದುಕುತ್ತಾಳೆ ಎಂಬುದನ್ನು ಅವರವರರು ಬದುಕುಗಳ ಮೂಲಕ ಚಿತ್ರಿಸಿಕೊಡುವ ಕತೆಗಲಿವು. ಹೆಣ್ಣುಕಥನ ಇಲ್ಲಿನ ಕತೆಗಳಲ್ಲಿ ಹಾಸುಹೊಕ್ಕಾಗಿದೆ.
'ಬೆತ್ತಲೆ ಸಂತ' ಮತ್ತು 'ಜಾಕೊಲೇಟ್' ಎರಡೂ ಕತೆಗಳು ತಮ್ಮ ನಿರೂಪಣಾ ಶೈಲಿ, ವಿಚಾರ ಮಂಡನೆ ಹಾಗೂ ಭಾವನಾ ಮಂಡನೆ ಮೂರೂ ನೆಲೆಯಲ್ಲಿ ಇಡೀ ಸಂಕಲನದಲ್ಲಿ ಭಿನ್ನವಾಗಿ ನಿಲ್ಲುವ ಕತೆಗಳು. ಸಮಾಜದ ಅಸಮಾನತೆಯನ್ನು ಹೇಳಲು ಗಟ್ಟಿದನಿಯಲ್ಲಿ ವಾಚ್ಯವಾಗಿ ಚೀರಬೇಕಿಲ್ಲ, ಏನನ್ನು ಹೇಳಬೇಕೋ ಆದನ್ನು ಹೇಳಲು ಕತೆಗಾರ ಅನಗತ್ಯ ವ್ಯಾಯಾಮ ಮಾಡಬಾರದು, ಸುಲಲಿತವಾಗಿ ನವಿರು ಭಾವಗಳ ಮೂಲಕವೇ ಕತೆಯನ್ನು ಮಂಡಿಸಬಹುದು ಎಂಬ ಕಥನತತ್ವ ಚಾಕೊಲೇಟ್ ಕತೆಯನ್ನು ಓದುವಾಗ ನಮಗೆ ಇಂಗಿತವಾಗುತ್ತದೆ. ಹಾಗೆಯೇ ಸಂಕೀರ್ಣವಾದ ಅನುಭವವನ್ನು ಸಮಾಜದ ಡೀವಿಯೆಟೆಡ್ ವರ್ಶನ' ಎಂಬಂಥ ವರ್ತನೆಯನ್ನು ಚಿತ್ರಿಸಲು: ಕೌಟುಂಬಿಕ ಜವಾಬ್ದಾರಿ ಮತ್ತು ಬೇಜವಾಬ್ದಾರಿತನಗಳ ನಡುವಣ ಸಂಬಂಧಾಂತರಗಳನ್ನು ಚಿತ್ರಿಸಲು ಹೇಗೆಲ್ಲ ತಂತ್ರಗಳನ್ನು ಹೊಡಬಹುದು ಎಂಬುದನ್ನು ಬೆತ್ತಲೆ ಸಂತ' ಕತೆ ತಿಳಿಸುತ್ತದೆ.
ವಿಚಾರ ಮಂಡನೆಯಲ್ಲಿ ಸ್ವಲ್ಪ ಸೋತಂತೆ ಕಂಡರೂ 'ಬೆತ್ತಲೆ ಸಂತ' ಒಂದು ಸಶಕ್ತ ಪ್ರಯೋಗ: ಸಮಾಜದಲ್ಲಿನ ಜಡಗೊಂಡ ಕುಟುಂಬ ರಚನೆಯನ್ನು ಒಪ್ಪದ, ಗಂಡು ಹೆಣ್ಣುಗಳೆಂಬ ಸಿದ್ಧ ಪಾತ್ರಗಳ ಆಚ್ಚುಗಳನ್ನು ಮೀರಲು ಸದಾ ತುಡಿಯುವ ಬದುಕಿನ ತುಣುಕೊಂದನ್ನು ಈ 'ಬೆತ್ತಲೆ ಸಂತ' ಚಿತ್ರಿಸಲು ಯತ್ನಿಸಿದೆ. ಹಾಗಾಗಿ ಇದೊಂದು ಯಶಸ್ವಿ ಪ್ರಯೋಗ, ಕತೆಯ ಕೊನೆಯಲ್ಲಿ ಪದ್ದ ತನ್ನ ಗಂಡ ಶಂಕನು ತನ್ನ ಕುಟುಂಬ, ಮನೆ, ಊರು ತೊರೆದು ಹೋಗುವಾಗ ತಳಮಳಗೊಳ್ಳದೆ ನಿರ್ಲಿಪ್ತವಾಗಿ ಅವನನ್ನು ಬಿಟ್ಟುಕೊಡುವುದು ನಮ್ಮನ್ನು ತೀವ್ರವಾಗಿ ಕಾಡುವ ಸಂಗತಿ ಕುಟುಂಬದಲ್ಲಿ ಗಂಡನಾದವನು ತನ್ನ ಪಾತ್ರವನ್ನು ನಿಭಾಯಿಸದೆ ಹೋದಾಗ ಹೆಣ್ಣಾದವಳು ಕುಟುಂಬವನ್ನು ಕಟ್ಟಿಕೊಂಡು ಹೋಗುವ ಛಾತಿಯನ್ನು ತೋರೇ ತೋರುತ್ತಾಳೆ. ಅಂಥ ಶಕ್ತಿ ಸಾಮರ್ಥ್ಯ ನಮ್ಮ ಹೆಣ್ಣುಮಕ್ಕಳಿಗೆ ಇದೆ ಎಂದೇ ಈ ಕತೆ ಹೇಳುತ್ತದೆ. ಪದ್ಮಳ ದೃಷ್ಟಿಯಿಂದ ಮಾತ್ರ ನೋಡದೆ ಈ ಕತೆಯನ್ನು ಬೇರೆ ಬೇರೆ ದೃಷ್ಟಿಯಿಂದಲೂ ನೋಡುವ ಸಾಧ್ಯತೆಗಳಿವೆ. ಕುಟುಂಬಕ್ಕೆ ಪರ್ಯಾಯವಾದ ಸಾಧ್ಯತೆಗಳ ಹುಡುಕಾಟದಂತೆಯೂ ಈ ಕತೆಯನ್ನು ನೋಡಲು ಸಾಧ್ಯವಿದೆ.
'ಚಾಕೊಲೇಟ್' ಕತೆಯಲ್ಲಿ ಬಾಲಕ ಶಿವಾನಂದನ ಪಾತ್ರದ ಮೂಲಕ ಕತೆಯನ್ನು ನಿರೂಪಿಸಲಾಗಿದೆ, ಬಡತನ, ಹಸಿವುಗಳು ನಮ್ಮನ್ನು ಸಮಾಜದಲ್ಲಿ ಮೇಲೆ ಬರಲು ನಿರಂತರ ತಡೆ ಒಡ್ಡುತ್ತವೆ. ಬಡವರಿಗೆ ಹೊಟ್ಟೆ ಪಾಡೇ ಒಂದು ದೊಡ್ಡ ಹೋರಾಟ, ಹೊಟ್ಟೆ ಹೊರೆಯುವುದೆ ಹೋರಾಟ ಆಗಿರುವಾಗ ಇನ್ನು ಸಮಾಜದಲ್ಲಿ ಓದಿ ಬರೆದು ಅಸಮಾನತೆಯನ್ನು ಬೇಧಿಸಿ ಮೇಲೆ ಬರುವುದು ಎಂಥ ದೊಡ್ಡ ಸವಾಲು ಎಂಬುದನ್ನು ಬಹಳ ಲೋ ಮೆಮಾಟಿಕ್ ಆದ ಶೈಲಿಯಲ್ಲಿ ಬಾಲಕನ ಭಾವನೆಗಳ ಮೂಲಕವೆ ಇಲ್ಲಿ ಹೇಳಲಾಗಿದೆ. ಹಾಗಾಗಿ ಇದೊಂದು ಇಡೀ ಸಂಕಲನದಲ್ಲಿ ಭಿನ್ನವಾಗಿ ನಿಲ್ಲುವ ಕತೆ.
'ಜಸ್ಟೀಸ್ ಫಾರ್ ದುರುಗಿ' ಆಧುನಿಕ ಸೂಡೋ ಪ್ರತಿಭಟನೆಗಳನ್ನು ಗೇಲಿ ಮಾಡುವ ಕತೆ, ಆದರೆ ಅದೇ ಇದರ ಉದ್ದೇಶವಲ್ಲ. ಗ್ರಾಮೀಣ ಭಾರತದಲ್ಲಿ ಬಲಿಷ್ಠ ಜಾತಿಗಳು ಆರ್ಥಿಕವಾಗಿಯು ಬಲಿಷ್ಠವೇ ಆಗಿದ್ದಾಗ ತಳಜಾತಿಗಳು ಸಂಘರ್ಷವನ್ನು ಬಿಟ್ಟುಕೊಟ್ಟು ಶೋಷಣೆಯನ್ನು ಒಪ್ಪಿ ಬಾಳಬೇಕೆ? ಎಂಬ ಪ್ರಶ್ನೆಯನ್ನು ಬಲವಾಗಿ ಕೇಳುವ ಕತೆಯಿದು. ಒಂದು ಬಡ, ದಲಿತ ಕುಟುಂಬದ ತಂದೆ-ತಾಯಿ ಮಗಳು ಮೂರೂ ಜನ ಒಬ್ಬೊಬ್ಬರ ಬಲಿಷ್ಠ ಜಾತಿಯ ದಬ್ಬಾಳಿಕೆಗೆ ಜೀವ ಕಳೆದುಕೊಳ್ಳುವ ವಿದ್ರಾವಕ ಘಟನೆಯನ್ನು ಈ ಕತೆ ಹೇಳುತ್ತ ಹೋಗುತ್ತದೆ. ಹೆಣ್ಣನ್ನು ಅತ್ಯಾಚಾರ ಮಾಡಿ ಕೊಲೆ ಮಾಡುವ ಮೂಲಕ ಇಡೀ ಬಡ, ದಲಿತ ವರ್ಗಗಳನ್ನು ಮಣಿಸಬಹುದು ಎಂಬ ಪ್ರಾಚೀನ ಸಾಮಾಜಿ ಕ ಅನಾಚಾರವನ್ನು ಬಹಳ ಚೆನ್ನಾಗಿ ಪ್ರತಿರೋಧಿಸುವ ಕತೆಯಿದು. ದುರುಗಿ ಈ ಕತೆಯಲ್ಲಿ ಅತ್ಯಾಚಾರಕ್ಕೆ ಈಡಾಗಿ ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆದರೆ ಅದು ಆತ್ಮಹತ್ಯೆ ಅಲ್ಲ: ಬಲಿಷ್ಠ ಜಾತಿಯವರು ಮಾಡಿದ ಕೊಲೆ ಎಂಬುದನ್ನು ಕತೆ ಪರೋಕ್ಷವಾಗಿ ಹೇಳುತ್ತದೆ. ಆ ಮೂಲಕ ಆತ್ಮಹತ್ಯೆಗೆ ಭಿನ್ನ ಸಾಮಾಜಿಕ ವ್ಯಾಖ್ಯಾನವನ್ನೇ ನೀಡುತ್ತದೆ.
ಹೊಸ ತಲೆಮಾರಿನ ಕತೆಗಾರರು ಕನ್ನಡ ಕಥನ ಜಗತ್ತಿನಲ್ಲಿ ಇದುವರೆಗೆ ಹೇಳಿಲ್ಲದ ವಿಚಾರಗಳನ್ನೇ ಮೊದಲ ಬಾರಿಗೆ ಹೇಳುತ್ತಾರೆ ಎಂದೇನಿಲ್ಲ, ಅವರ ಹೊಸತನ ಹೇಳುವ ಸಂಗತಿಯಲ್ಲೇ ಇರುತ್ತದೆ ಎಂದೂ ಅಲ್ಲ, ಆದರೆ. ಅವರು ಸದ್ಯದ ಸುಡುವ ವರ್ತಮಾನವನ್ನು ಕಧಿಸಬೇಕಾಗುತ್ತದೆ. ನಿರಂತರ ಬದಲುಗೊಳ್ಳುವ ತಾನು ಬದುಕಿರುವ ವರ್ತಮಾನವನ್ನು ಚಿಕಿತ್ಸಕ ಕಣ್ಣಿನಿಂದ ನಾಡಿ ಹಿಡಿದು ಪರೀಕ್ಷೆಗೆ ಒಡ್ಡಬೇಕಾಗುತ್ತದೆ. ಇಸ್ಮಾಯಿಲ್ರ ಕತೆಗಳು ಹಾಗಮಾಡುತ್ತವೆ. ಇವರ 'ರೋಗಗಸ್ತ' ಕತೆ ಹಾಗೆ ಸಮಾಜದ ಒಳಗಿನ ಸದ್ಯದ ವರ್ತಮಾನದ ಹುಳುಕುಗಳನ್ನು ಒತ್ತಲು ಮಾಡುವ ಕತೆ. ಕೊರೊನಾ ನೆಪದಲ್ಲಿ ನಮ್ಮ ಸುತ್ತ ಇರುವ ಜಾತಿಗ್ರಸ್ತ, ಧರ್ಮರೋಗಿ ಮನಸ್ಸುಗಳು ಬತ್ತಲಾಗುವುದನ್ನು ಈ ಕತೆ ಸಶಕ್ತವಾಗಿ ಮಂಡಿಸುತ್ತದೆ.
'ಬೀದಿಗೆ ಬಿದ್ದ ಬೀದಿ', 'ಬಹಿಷ್ಕಾರ' ಕತೆಗಳು ಸ್ವಲ್ಪ ನಿರ್ದಿಷ್ಟ ತಾತ್ವಿಕತೆಯನ್ನು ಉದ್ದೇಶಿಸಿದ ಕತೆಗಳು, ತತ್ವ ಇಲ್ಲವೆ ಮೌಲ್ಯಪ್ರಜ್ಞೆ ಬಲವಂತಕ್ಕೆ ಕಟ್ಟಿದ ಸಂಗತಿ ಆಗಬಾರದು. ಅದು ಕಥನದ ಮೂಲಕವೇ ಓದುಗನಲ್ಲಿ ಅರಳಬೇಕು, ಆದಿ 'ರೆ ಈ ಎರಡು ಕತೆಗಳಲ್ಲಿ ಹಾಗೆ ಆಗಿಲ್ಲ. ಇಂಥವು ಸ್ವಲ್ಪ ಕೃತಕ ಅನ್ನಿಸುತ್ತವೆ. ಇಂತಹ ರಚನೆಗಳನ್ನು ಕತೆಗಾರ ಸಹಜ ಆಗಿಸುವ ಕಡೆ ಹೆಚ್ಚಿನ ಗಮನ ಕೊಡಬೇಕಿದೆ. ಇನ್ನು ಬೆತ್ತಲೆ ಸಂತ' ಕತೆಯ ನಿರೂಪಣೆಯನ್ನು ಇನ್ನಷ್ಟು ಧ್ಯಾನಿಸಬೇಕಿತ್ತು. ಕಥನ ನಿರೂಪಕನ ನಿಯಂತ್ರಣ ಇಲ್ಲೂ ಹೆಚ್ಚಿದೆ ಅನ್ನಿಸುತ್ತದೆ. ಅದನ್ನು ಇನ್ನಷ್ಟು ಓದುಗಮುಖಿ ಆಗಿ ಬರೆಯುವ ವಿಸ್ತರಿಸುವ ಸಾಧ್ಯತೆ ಇತ್ತು. ಇರಲಿ; ದಲಿತ, ಸ್ತ್ರೀವಾದಿ ಮತ್ತು ಮುಸ್ಲಿಮ್ ಸಾಹಿತ್ಯ ಸಂವೇದನೆಗಳು ಗ್ರಾಮೀಣ ಬದುಕಿನ ಚಿತ್ರಣದ ಮೂಲಕ ಹೊಸ ತಲೆಮಾರಿನಲ್ಲಿ ಪಡೆದುಕೊಂಡಿರುವ ಚೂಪತನವನ್ನು ಇಲ್ಲಿನ ಕತೆಗಳು ಬಹಳ ಶಕ್ತವಾಗಿ ಅಭಿವ್ಯಕ್ತಿಸಿವೆ.
(ಕೃಪೆ : ಅಕ್ಷರ ಸಂಗಾತ, ಬರಹ : ರಾಮಲಿಂಗಪ್ಪ ಬೇಗೂರು)
--
©2024 Book Brahma Private Limited.