ಚಂದ್ರು ಆರ್ ಪಾಟೀಲ್ ಅವರ ಮೊದಲ ಕತೆಗಳ ಸಂಕಲನವಿದು. ಈ ಸಂಕಲನದಲ್ಲಿ ಒಟ್ಟು ಹನ್ನೆರಡು ಕತೆಗಳಿವೆ. ಮೊದಲ ಸಂಕಲನದ ಕತೆಗಳಾಗಿಯೇ ಹಲವು ಪ್ರಶಸ್ತಿ ಪುರಸ್ಕಾರ ಪಡೆದಿರುವ ಚಂದ್ರು ಭರವಸೆ ಮೂಡಿಸಿರುವ ಕತೆಗಾರ. ಚಂದ್ರು ಅವರ ಕತೆಗಳ ಕುರಿತು ಮತ್ತೊಬ್ಬ ಕತೆಗಾರ ನಾಗರಾಜ ವಸ್ತಾರೆ ಅವರು ಹೀಗೆ ಬರೆದಿದ್ದಾರೆ-
ಚಂದ್ರು ಆರ್ ಪಾಟೀಲ್ ನನಗಿಂತಲೂ ವಯಸ್ಸಿನಲ್ಲಿ ಚಿಕ್ಕವರಾದ ಮತ್ತು ಅನುಭವದಲ್ಲಿ ಭಿನ್ನವಿರುವ ಚಂದ್ರು ಆರ್ ಪಾಟೀಲರಿಗೆ, ತನ್ನ ಬರವಣಿಗೆಯ ಉದ್ದೇಶದ ಬಗ್ಗೆ ನನ್ನಲ್ಲಿರದ (ಅಂದರೆ ನನ್ನ ಬರವಣಿಗೆಯ ಕುರಿತಾಗಿ ನನಗಿರದ) ಎಚ್ಚರವಿದೆಯಂದು-ಅವರ ’ಬಡ್ತಿ' ಸಂಕಲನದ ಹನ್ನೆರೆಡೂ ಕತೆಗಳನ್ನು ಓದುವಾಗ, ನನಗೆ ಅನಿಸಿದ್ದು ಹೌದು. ಯಾಕೆಂದರೆ, ಅವರು ಕತೆಗಳನ್ನು ಸೊಗಸಾಗಿ, ಸಲೀಸಾಗಿ ಹೆಣೆಯಬಲ್ಲರು. ಹೇಳುವುದನ್ನು ಹೇಳಬೇಕಾದಷ್ಟೇ ಹೇಳಬಲ್ಲರು. ಅನುಭವಕ್ಕೆ ನಿಷ್ಠನಿದ್ದು ಕತೆಯನ್ನು ಅದೇ ನಿಷ್ಠೆಯಿಂದ, ಅಂದರೆ ಕತೆ ಹೇಳುವದಷ್ಟೇ ಸದ್ಯದ ಕೆಲಸ ಆಚೀಚಿನದಲ್ಲ ಎಂಬಂತೆ ಯಾವುದೇ ಸೋಗುಗೀಗಿಲ್ಲದೆ, ಸರ್ಕಸು ಮಾಡದೆ ಕತೆಯನ್ನು ಓದುಗರಿಗೆ ದಾಟಿಸಬಲ್ಲರು. ಈ ಕತೆಗಳಲ್ಲಿನ ಶಕ್ತಿಯೇ ಅವರ ಕಥನಗಾರಿಕೆಯೆಂದು ನನಗೆ ಗಾಢವಾಗಿ ಅನ್ನಿಸಿದೆ’.
ಕತೆಗಾರ ಚಂದ್ರು ಆರ್. ಪಾಟೀಲ್ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ರೊಟ್ಟಡಗಿ ಎಂಬ ಗ್ರಾಮದವರು. 1987ರ ಜುಲೈ 30ರಂದು ಜನಿಸಿದ ಚಂದ್ರು ಅವರು ಡಿಪ್ಲೋಮ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಶಿಕ್ಷಣ ಪಡೆದರು. ನಂತರ ಬೆಂಗಳೂರಿನಲ್ಲಿ 2009-17ರವರೆಗೆ ಪ್ರೊಡಕ್ಷನ್ ಸುಪರ್ ವೈಸರ್ ಹುದ್ದೆಯನ್ನು ನಿರ್ವಹಿಸಿದ್ದಾರೆ. ಸದ್ಯ ಕೃಷಿ, ಸ್ವ ಉದ್ಯೋಗ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಇವರ ಹಲವಾರು ಕತೆಗಳು ರಾಜ್ಯ ಮಟ್ಟದ ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಜಾವಾಣಿ ’ಮುಕ್ತ ಛಂದ’ದಲ್ಲಿ ಪ್ರಕಟವಾದ ಇವರ 'ಬಡ್ತಿ' ಕತೆಯು ಕುವೆಂಪು ವಿಶ್ವವಿದ್ಯಾಲಯದ ಪ್ರಥಮ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ...
READ MORE