ಕತೆಗಾರ ಚಂದ್ರು ಆರ್. ಪಾಟೀಲ್ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ರೊಟ್ಟಡಗಿ ಎಂಬ ಗ್ರಾಮದವರು. 1987ರ ಜುಲೈ 30ರಂದು ಜನಿಸಿದ ಚಂದ್ರು ಅವರು ಡಿಪ್ಲೋಮ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಶಿಕ್ಷಣ ಪಡೆದರು. ನಂತರ ಬೆಂಗಳೂರಿನಲ್ಲಿ 2009-17ರವರೆಗೆ ಪ್ರೊಡಕ್ಷನ್ ಸುಪರ್ ವೈಸರ್ ಹುದ್ದೆಯನ್ನು ನಿರ್ವಹಿಸಿದ್ದಾರೆ. ಸದ್ಯ ಕೃಷಿ, ಸ್ವ ಉದ್ಯೋಗ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಇವರ ಹಲವಾರು ಕತೆಗಳು ರಾಜ್ಯ ಮಟ್ಟದ ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಜಾವಾಣಿ ’ಮುಕ್ತ ಛಂದ’ದಲ್ಲಿ ಪ್ರಕಟವಾದ ಇವರ 'ಬಡ್ತಿ' ಕತೆಯು ಕುವೆಂಪು ವಿಶ್ವವಿದ್ಯಾಲಯದ ಪ್ರಥಮ ಸೆಮಿಸ್ಟರ್ ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಕರ್ನಾಟಕ ಸರಕಾರ ಯೋಜನೆಯ 2018 ರ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹಧನಕ್ಕೂ ಇವರ ’ಬಡ್ತಿ' ಕಥಾ ಸಂಕಲನ ಆಯ್ಕೆಯಾಗಿದೆ. 2018 ರ ಸಾಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಜಯತೀರ್ಥ ರಾಜಪುರೋಹಿತ ದತ್ತಿ ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ 'ಸಂಕ್ರಮಣ' ಕತೆಗೆ ಪ್ರಥಮ ಬಹುಮಾನ ಮತ್ತು ಚಿನ್ನದ ಪದಕ ಲಭಿಸಿದೆ.