‘ಅಂತರಂಗದಿಂದ ಅಕ್ಷರಕ್ಕೆ' ಕರುಣಾಕರ ಎನ್. ಶೆಟ್ಟಿ ಅವರ ಸಣ್ಣಕತೆಗಳ ಸಂಕಲನ. ಇಲ್ಲಿಯ ಹೆಚ್ಚಿನ ಕತೆಗಳಲ್ಲಿ ಮುಂಬಯಿಗೆ ವಲಸೆ ಬಂದು ಬದುಕು ಕಟ್ಟಿಕೊಳ್ಳುವ ಪುಟ್ಟ ಪುಟ್ಟ ಸಂಸಾರಗಳ ಸಹಜವೆನ್ನಬಹುದಾದ ಹೋರಾಟದ ಅಂಶಗಳಿವೆ. ಆತ್ಮೀಯವೆನಿಸುವ, ನಿಷ್ಕಲ್ಮಷ ಸಂಬಂಧಗಳು ಸಂಶಯಕ್ಕೆ ಒಳಗಾಗುವ “ಅನನ್ಯ” ಕತೆಯಾಗಲಿ, ಇಷ್ಟವಿಲ್ಲದ ಮದುವೆಯಿಂದ ನೊಂದು ವಿನಾಕಾರಣ ನಿಂದನೆಗೆ ಒಳಗಾಗುವ ಸುನೀತಾ, ಬಯಸುವ ವಿಚ್ಛೇದನವಾಗಲಿ (ಸಂತೆಯಲ್ಲೊಂದು ಮನೆಯ ಮಾಡಿ), ಅಣ್ಣನನ್ನು ಗಾಢವಾಗಿ, ಪ್ರೀತಿಸುವ ಹೇಮಾ, ಕೊನೆಗೂ ತನ್ನ ಪತ್ನಿಯ ಮಾತಿನಂತೆ, ರಕ್ಷಾಬಂಧನವನ್ನು ನಿರಾಕರಿಸುವ ಶಶಾಂಕನ ವರ್ತನೆಗೆ ಮರುಗುವ ಕ್ಷಣಗಳಾಗಲಿ, ನೆರೆಯ ದಂಪತಿ ತನ್ನ ಶಿಕ್ಷಣಕ್ಕೆ ಸಹಾಯ ನೀಡಿದಾಗಲೂ, ಆ ಮನೆಯಲ್ಲಿ ಉಳಿದುದಕ್ಕೆ ತಿಂಗಳು ತಿಂಗಳು ಸಂಬಳ ಪಡೆಯುವ ಸುಧಾ, ಸಾಕುತಂದೆಯ ಸಾವಿನಲ್ಲಿ ತೋರುವ ನಿರ್ದಯತೆಯ ಪ್ರಸಂಗವಾಗಲಿ, ಕೃತ್ರಿಮತೆಯ ಸೋಂಕಿಲ್ಲದ ನೈಜ ಕತೆಗಳೇ ಆಗುತ್ತವೆ. ಇಲ್ಲಿಯ ಘಟನೆಗಳು ಎಲ್ಲಿಯೂ ಯಾವ ಸಂದರ್ಭದಲ್ಲಾದರೂ ನಡೆಯುವಂಥವು. ಕತೆಗಾರರೇ ಹೇಳುವಂತೆ “ಅನಿರೀಕ್ಷಿತ ಮತ್ತು ಅನಪೇಕ್ಷಿತ ಬೆಳವಣಿಗೆಗಳು.” ಇವೇ ಇಲ್ಲಿಯ ಹೆಚ್ಚಿನ ಕತೆಗಳ ಮೂಲದ್ರವ್ಯವೂ ಆಗಿವೆ.
ಕರುಣಾಕರ ಎನ್. ಶೆಟ್ಟಿ ಅವರು ಕರಾವಳಿಯ ಉಡುಪಿ ಜಿಲ್ಲೆಯ ಪಣಿಯೂರಿನಲ್ಲಿ ಜನಿಸಿದರು. ಉಡುಪಿಯಲ್ಲೇ ಬಿ.ಎ ಪದವಿಗಳಿಸಿ 1978ರಲ್ಲಿ ಮುಂಬಯಿಯ ಅಭ್ಯುದಯ ಸಹಕಾರಿ ಬ್ಯಾಂಕಿಗೆ ನೇಮಕಾತಿಗೊಂಡು ವೃತ್ತಿಯೊಡನೆ ಪ್ರವೃತ್ತಿ ವಿದ್ಯಾಭ್ಯಾಸ ಮುಂದುವರಿಸುತ್ತಾ ಎಂ.ಎ., ಎಂ.ಫಿಲ್, ಪಿಎಚ್.ಡಿ ಪದವಿ ಗಳಿಸಿದವರು-ಡಾ. ಕರುಣಾಕರ್ ಎನ್. ಶೆಟ್ಟಿ ಪಣಿಯೂರ್. ಬದುಕಿನ ಮಾರ್ಗವನ್ನು ಹುಡುಕಿಕೊಂಡು ದೂರದ ಮಾಯಾನಗರಿ ಮುಂಬಯಿಗೆ ಹೋದವರು ಅಲ್ಲೂ ತಮ್ಮನ್ನು ಕೇವಲ ದುಡಿತಕ್ಕೆ ಸೀಮಿತವಾಗಿರಿಸಿಕೊಳ್ಳದೆ, ತಮ್ಮಲ್ಲಿ ಅಂತರ್ಗತವಾಗಿರುವ ಪ್ರತಿಭೆಯನ್ನು ಪರಿಚಯಿಸಿದ್ದಾರೆ. ಮುಂಬಯಿಯ ಡಾ. ಜಿ.ಡಿ. ಜೋಶಿ ಮತ್ತಿತರ ಸಹೃದಯರ ಸಹಕಾರದಿಂದ ಅವರಲ್ಲಿದ್ದ ಸಾಹಿತ್ಯ ಕಲೆ ಅರಳಿತು. ನಾಡಿನ ಒಳನಾಡಿನ ಬಹುತೇಕ ಪತ್ರಿಕೆಗಳಲ್ಲಿ ...
READ MORE