ಸುರೇಶ್.ಎನ್,ಮಲ್ಲಿಗೆ ಮನೆ ಅವರ ಕಥಾಸಂಕಲನ ಅಂತಃಕರಣ. ಮಲೆನಾಡು ಮತ್ತು ಬಯಲುಸೀಮೆಯರ ಆಂತರಿಕ ಬದುಕಿನ ರಮ್ಯ ಚಿತ್ರಣವನ್ನು ಭಿನ್ನ ಭಿನ್ನ ಮುಖಗಳಲ್ಲಿ ಓದುಗರ ಮುಂದಿಟ್ಟು, ಅಲ್ಲಿನ ವೈಶಿಷ್ಟ್ಯ ಅಚ್ಚರಿಗಳನ್ನು ಪರಿಚಯಿಸುತ್ತಾ ನೈಜ ದರ್ಶನವನ್ನು ಮಾಡಿಸಲು ಈ ಕೃತಿಯಲ್ಲಿ ಪ್ರಯತ್ನಿಸಿದೆ. ಜಗತ್ತಿನ ಸರ್ವಶ್ರೇಷ್ಠ, ನಿಷ್ಕಲ್ಮಶ, ಏನನ್ನೂ ಅಪೇಕ್ಷಿಸದ ಪ್ರೀತಿಯೆಂದರೆ ಅದು ತಂದೆ-ತಾಯಿ ಮತ್ತು ಮಕ್ಕಳ ನಡುವಿನ ಕರುಳಬಳ್ಳಿಯ ಸಂಬಂಧವೊಂದೆ. ಇಲ್ಲಿ ಆಳಕ್ಕೆ ಅಗೆದಷ್ಟೂ ಪ್ರೀತಿಯ ಚಿಲುಮೆಯು ಉಕ್ಕುತ್ತಾ ಸುಖ-ದುಃಖವೆಂಬ ನೀರಿನೊಂದಿಗೆ ಜಿನುಗುತ್ತಿರುತ್ತದೆ. ಅದೆಷ್ಟೋ ಅನುರಣಿತ ನೋವು-ನಲಿವು, ಕಷ್ಟಸುಖಗಳನ್ನು ತಮ್ಮ ಅಂತರಾಳದಲ್ಲಿ ಹುದುಗಿಸಿಟ್ಟುಕೊಂಡು ಬರೀ ನಗುವಿನಿಂದಲೇ ನಮ್ಮನ್ನು ಸಾಕಿ, ಸಲಹಿ, ಪೋಷಿಸುವ ಅವರ ಕಾಳಜಿ ನಿಜಕ್ಕೂ ಅವರ್ಣನೀಯ. ಅವರ ಪ್ರೀತಿ, ತ್ಯಾಗ ನಮಗೆ ಸಂಪೂರ್ಣವಾಗಿ ಅರ್ಥವಾಗುವುದು ಬಹುಶ: ಅವರ ಅನುಪಸ್ಥಿತಿಯಲ್ಲಿ ಮಾತ್ರ..! ಈ ಕೃತಿಯಲ್ಲಿ ಬರುವ ಪ್ರತಿಯೊಂದು ಕಥೆಯೂ ಪ್ರತಿಯೊಬ್ಬರ ಮನ-ಮನೆಗಳಲ್ಲಿ ನಡೆದ, ನಡೆಯುತ್ತಿರುವ ನೈಜ ಕಥೆಗಳಂತೆ ಭಾಸವಾಗುತ್ತವೆ. ಕೃತಿಗೆ ಡಾ.ನಾ ಡಿಸೋಜ ಬೆನ್ನುಡಿಯಿದ್ದು, ಗುಂಡುರಾವ್ ದೇಸಾಯಿ ಮುನ್ನುಡಿ ಇದೆ.
ಸುರೇಶ್ ಮಲ್ಲಿಗೆ ಮನೆ ಇವರು ಮೂಲತಃ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನವರು. ಪ್ರಸ್ತುತ ರಾಯಚೂರಿನ ಲಿಂಗಸೂರು ತಾಲೂಕಿನಲ್ಲಿ ಕಳೆದ ಹನ್ನೆರಡು ವರ್ಷಗಳಿಂದ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬರವಣಿಗೆ, ಫೋಟೋಗ್ರಫಿ, ಓದು, ಕಾಡು ಸುತ್ತಾಟ, ಹಾಡುವಿಕೆ, ಯೋಗಾಸನ, ಕ್ರೀಡೆ ಮತ್ತು ಚಿತ್ರಕಲೆ ಇವರ ಹವ್ಯಾಸಗಳು. “ಕಥೆ ಮತ್ತು ಕವನ” ಇವರ ಆಸಕ್ತಿಯ ಕ್ಷೇತ್ರಗಳು. 'ಅಂತಃಕರಣ' ಇವರ ಮೊದಲ ಕಥಾ ಸಂಕಲನ. ಇವರ ಕಥೆಗಳು ಹಲವಾರು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದೆ. ...
READ MORE