ಪ್ರೇಮಕುಮಾರ್ ಹಿರಿಯಬ್ಬೆ ಅವರ ಕಥಾ ಸಂಕಲನ ‘ಅಕಾಲ’. ಪ್ರಜಾವಾಣಿ, ಸುಧಾ, ಮಯೂರದಲ್ಲಿ ಪ್ರಕಟಗೊಂಡ ಅವರ ಆಯ್ದ ಹತ್ತು ಕಥೆಗಳ ಸಂಕಲನ ಇದು. ಚಿತ್ರದುರ್ಗದ ದೇಸಿ ಭಾಷೆ, ಬಳ್ಳಾರಿ ನೆಲದ ನಂಟಿನ ಇಲ್ಲಿನ ಕಥೆಗಳು ಗ್ರಾಮೀಣ ಹಾಗೂ ನಗರವನ್ನು ಪ್ರತಿನಿಧಿಸುತ್ತವೆ.
ಪತ್ರಕರ್ತ ಮಿತ್ರ ಚ.ಹ.ರಘುನಾಥ್ ಅವರ ಮುನ್ನುಡಿ ಈ ಕಥಾ ಸಂಕಲನಕ್ಕಿದೆ. ಬರಹಗಾರ ಎನ್ ಎಸ್ ಈಶ್ವರಪ್ರಸಾದ್ ಕೃತಿಗೆ ಬೆನ್ನುಡಿ ಬರೆದು ‘ಪ್ರೇಮಕುಮಾರ್ ಹರಿಯಬ್ಬೆ ಅವರ `ಅಕಾಲ' ಸಂಕಲನದ ಬಹುತೇಕ ಕಥೆಗಳು ಗ್ರಾಮೀಣ ಬದುಕಿನ ವಿಕೃತ ಮುಖಗಳಿಗೆ ಕನ್ನಡಿ ಹಿಡಿಯುತ್ತವೆ. ಜಾತಿ, ಕೋಮು ವೈಷಮ್ಯ, ಕುಟಿಲ ರಾಜಕಾರಣ, ಅಸೂಯೆ ಇತ್ಯಾದಿಗಳಿಗೆ ಬಲಿಯಾಗುವ ಅಮಾಯಕರ ಬದುಕಿನ ದುರಂತಗಳನ್ನು ಚಿತ್ರವತ್ತಾಗಿ ಕಟ್ಟಿಕೊಡುತ್ತಿದೆ. ಚಿತ್ರದುರ್ಗ ಸೀಮೆಯ ಹಳ್ಳಿಗಾಡಿನ ಜನರ ಆಡುಭಾಷೆಯಲ್ಲಿ ಸರಳವಾಗಿ ಕತೆ ಹೇಳುತ್ತ, ಪಾತ್ರ ಹಾಗೂ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವ ಹಾಗೆ ವಿವರಿಸುವ ವಿಶಿಷ್ಟ ಶೈಲಿ ಹರಿಯಬ್ಬೆ ಅವರದು. ಕಿರು ಕಾದಂಬರಿ ಸ್ವರೂಪದ ಜಾಲ ಸರಾಗವಾಗಿ ಓದಿಸಿಕೊಳ್ಳುವ ನೀಳ್ಗತೆ. ಒಂದು ನಿರ್ದಿಷ್ಟ ಅಂತರದಲ್ಲಿ ನಿಂತು ಪೊಲೀಸ್ ವ್ಯವಸ್ಥೆ ಮತ್ತು ಭೂಗತ ಲೋಕದ ಸಂಕೀರ್ಣ ಸ್ವರೂಪದ ವಿದ್ಯಮಾನಗಳನ್ನು ವಿಶಿಷ್ಟ ನಿರೂಪಣಾ ವಿಧಾನದಿಂದ ಓದುಗರಿಗೆ ದಾಟಿಸಿದ್ದಾರೆ ಎಂದು ಪ್ರಶಂಸಿಸಿದ್ದಾರೆ.
ಹಿರಿಯ ಪತ್ರಕರ್ತ ಹಾಗೂ ಲೇಖಕ ಪ್ರೇಮಕುಮಾರ ಹರಿಯಬ್ಬೆ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹರಿಯಬ್ಬೆ ಗ್ರಾಮದವರು. ಪ್ರಜಾವಾಣಿ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಅವರು ತಮ್ಮ ವೃತ್ತಿ ಜೀವನವನ್ನು ಆರಂಭಿಸಿ, ಬಳ್ಳಾರಿ ಹಾಗೂ ಧಾರವಾಡ ಜಿಲ್ಲಾ ವರದಿಗಾರರಾಗಿ, ನಂತರ ಪ್ರಜಾವಾಣಿ ಭಾನುವಾರದ ವಿಶೇಷ ಪುರವಣಿಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿ ಸದ್ಯ ನಿವೃತ್ತರು. ಕೃತಿಗಳು: ಸತ್ತವರು (1980), ದೇವಕಣಗಿಲೆ (2010), ಅಕಾಲ(2021) ಇವು ಮೂರು ಕಥಾ ಸಂಕಲನಗಳು. ಪ್ರಶಸ್ತಿ-ಪುರಸ್ಕಾರಗಳು: ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಇವರಿಗೆ 2018ನೇ ಸಾಲಿನ ‘ವಾರ್ಷಿಕ ಪ್ರಶಸ್ತಿ’ ಲಭಿಸಿದೆ. ...
READ MORE