ಸಮಕಾಲೀನ ಕನ್ನಡ ಗದ್ಯ ಸಾಹಿತ್ಯದಲ್ಲಿ ಹೊಸ ಹಾದಿಯನ್ನು ಹಿಡಿದಿರುವ ಕನಕರಾಜ್ ಆರನಕಟ್ಟೆ ಮೂಲತ: ಚಿತ್ರದುರ್ಗ ಜಿಲ್ಲೆಯವರು. ಕರ್ನಾಟಕ, ಭಾರತ ಮೊದಲ್ಗೊಂಡು ಹಲವಾರು ದೇಶ, ಭಾಷೆ, ಸಂಸ್ಕೃತಿಗಳ ಮುಖಾಮುಖಿಯಾಗಿಸಿ ಓದುಗರಿಗೆ ಹೊಸದಾದ ಅನುಭವ ನೀಡುವ ಇವರ ಲೇಖನ ಮತ್ತು ಕಥೆಗಳು ಕನ್ನಡ ನವ್ಯೋತ್ತರ ಸಾಹಿತ್ಯದ ಯುವ ಫಸಲು. ಸಾಹಿತ್ಯ ಮಾತ್ರವಲ್ಲದೆ ಸಿನಿಮಾದಲ್ಲೂ ಆಸಕ್ತಿ ಹೊಂದಿರುವ ಇವರು ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಇವರ ಮೊದಲನೇ ಕಿರುಚಿತ್ರ “ಬರ್ಮಾ ಎಕ್ಸ್ ಪ್ರೆಸ್” ಹಲವು ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವಗಳಿಗೆ ಆಯ್ಕೆಗೊಂಡು ನ್ಯೂಯಾರ್ಕ್‍ನ “ಸೌತ್ ಏಷಿಯನ್ ಇಂಟರ್‍ನ್ಯಾಷನಲ್ ಫಿಲ್ಮ್ ಫೆಸ್ಟಿವಲ್” ಮತ್ತು “ರಾಜಸ್ತಾನ ಫಿಲಂ ಫೆಸ್ಟಿವಲ್” ಗಳಲ್ಲಿ ಉತ್ತಮ ಕಿರುಚಿತ್ರ ಎಂಬ ಗೌರವವನ್ನು ಪಡೆದಿದೆ. ತಮಿಳು ಮತ್ತು ಅರೆಬಿಕ್ ಭಾಷೆಗಳಲ್ಲೂ ಇವರು ಕಿರುಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಭಾರತ, ಮಾಲ್ಡೀವ್ಸ್, ಲಿಬಿಯಾ ದೇಶಗಳಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ ಪ್ರಸ್ತುತ ಇವರು ಸೌದಿ ಅರೇಬಿಯಾದ ಪ್ರಿನ್ಸ್ ಸತ್ತಾಮ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ ಬೋಧಿಸುತ್ತಿದ್ದಾರೆ.