About the Author

ಕನ್ನಡದ  ವಿಶಿಷ್ಟ ಕತೆಗಾರ ಬೊಳುವಾರು ಮಹಮದ್ ಕುಂಞ್   ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ‘ಅತ್ತ, ಇತ್ತಗಳ ಸುತ್ತಮುತ್ತ’. ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ, ಒಂದು ತುಂಡು ಗೋಡೆ, ಅವರ ಕಥಾಸಂಗ್ರಹಗಳು. ತಟ್ಟು ಚಪ್ಪಾಳೆ ಪುಟ್ಟ ಮಗು ಅವರು ಸಂಪಾದಿಸಿದ ಮಕ್ಕಳ ಪದ್ಯಗಳ ಸಂಕಲನ. ಜಿಹಾದ್, ಸ್ವಾತಂತ್ರ್ಯದ ಓಟ, ಓದಿರಿ ಅವರ ಕಾದಂಬರಿಗಳು. ಬ್ಯಾಂಕ್ ಉದ್ಯೋಗಿಯಾಗಿ ನಾಲ್ಕು ದಶಕ ಕೆಲಸ ಮಾಡಿ ನಿವೃತ್ತರಾಗಿರುವ ಬೊಳುವಾರರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.  ಕನ್ನಡ ಗದ್ಯ ಸಾಹಿತ್ಯಕ್ಕೆ ಮುಸ್ಲಿಂ ಬದುಕನ್ನು ಮೊತ್ತ ಮೊದಲು ಪರಿಚಯಿಸಿದ ಇವರು, ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಎಂಬ ಚರ್ಚೆಗೆ ನಾಂದಿ ಹಾಡಿದವರು. ಭೂಮಿಯ ಮೇಲೆ ಒಡೆತನ ಮತ್ತು ಅಧಿಕಾರಕ್ಕಾಗಿ ಕಣ್ಣು ಕಿವಿಗಳನಷ್ಟೇ ಪ್ರಮಾಣವಾಗಿರಿಸಿಕೊಂಡು ನಿನ್ನ ದಿವ್ಯವಾಣಿಯನ್ನು ಅವಿವೇಕದಿಂದ ವಿಚಾರರಹಿತವಾಗಿ ಉದ್ಧರಿಸುವವರನ್ನು ನರಕದ ಕೆಂಡದ ರಾಶಿಯ ಮೇಲೆ ನಿಲಿಸು' ಎಂಬ ಹಕ್ಕೊತ್ತಾಯದ ಮೂಲಕ ಕನ್ನಡ ಕಥಾಲೋಕಕ್ಕೆ ಅಡಿಯಿತ್ತಿದ್ದ ಇವರ ಇನ್ನೂರಕ್ಕೂ ಮಿಕ್ಕಿದ ಕತೆಗಳು ಕನ್ನಡದ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. 

ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 1997ರಲ್ಲಿ ಗೌರವ ಪ್ರಶಸ್ತಿಗೆ ಭಾಜನರಾಗಿದ್ದ ಇವರಿಗೆ, ಆ ಮೊದಲೇ ಸಾಹಿತ್ಯ ಅಕಾಡೆಮಿಯಿಂದ ಎರಡು ಬಾರಿ ಪುಸ್ತಕ ಬಹುಮಾನ ಲಭಿಸಿತ್ತು. 1983 ರಲ್ಲಿ ಕಲ್ಕತ್ತಾದ ಭಾಷಾ ಸಂಸ್ಥಾನ ದಿಂದ ಪ್ರಶಸ್ತಿ ಪಡೆದಿದ್ದ ಇವರಿಗೆ, 1991ರಲ್ಲಿ ಆರ್ಯಭಟ,1992ರಲ್ಲಿ ಪರಶುರಾಮ,1994ರಲ್ಲಿ ದೆಹಲಿಯ ಕಥಾ ಪ್ರಶಸ್ತಿ, 2010 ರಲ್ಲಿ ತೌಳವ ಪ್ರಶಸ್ತಿಗಳೂ ಲಭಿಸಿದ್ದವು. 2001ಮತ್ತು 2002 ಹೀಗೆ ಎರಡು ಬಾರಿ ಇವರ ಸಿನೆಮಾ(ಮುನ್ನುಡಿ ಹಾಗೂ ಅತಿಥಿ )ಗಳಿಗೆ ರಾಷ್ಟ ಪ್ರಶಸ್ತಿಯೂ ದಕ್ಕಿತ್ತು. ಇವರು ಸಂಪಾದಿಸಿದ ತಟ್ಟು ಚಪ್ಪಾಳೆ ಪುಟ್ಟ ಮಗು- ಎಂಬ ಮಕ್ಕಳ ಪದ್ಯಗಳ ಸಂಕಲನದಿಂದಾಗಿ ಇವರು ಕನ್ನಡ ಮಕ್ಕಳ ಸಾಹಿತ್ಯದಲ್ಲೂ ಗಟ್ಟಿ ಜಾಗ ಪಡೆದಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ ಇವರ ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ ( ಇದು ಪ್ರಕಟವಾದ ಎರಡು ವರ್ಷಗಳಲ್ಲಿ ನಾಲ್ಕು ಮುದ್ರಣ ಕಂಡಿದೆ) ಕನ್ನಡದ ಮಕ್ಕಳಿಗೆ ಮಹಾತ್ಮ ಗಾಂಧಿಯವನ್ನು ಹೊಸದಾಗಿ ಪರಿಚಯಿಸಿದೆ. ಈ ಕೃತಿ 2010ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗಳಿಸಿದೆ. ಭಾರತದ ಬಹುತೇಕ ಭಾಷೆಗಳಿಗೆ ಇವರ ಕತೆಗಳು ಅನುವಾದಗೊಂಡಿವೆ.

ಬೊಳುವಾರು ಮಹಮದ್ ಕುಂಞ್

(22 Oct 1951)

Awards