’ಸ್ಟೇಟಸ್ ಕತೆಗಳು’ ಧೀರಜ್ ಬೆಳ್ಳಾರೆ ಅವರ ಹನಿಕತೆಗಳ ಸಂಕಲನವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಕ್ಯಾತ್ಯಾಯಿನಿ ಕುಂಜಿಬೆಟ್ಟು ಅವರು, ವೈಜ್ಞಾನಿಕವಾಗಿ ತಾಂತ್ರಿಕವಾಗಿ ಯಾಂತ್ರಿಕವಾಗಿ ರಾಕೆಟ್ ವೇಗದಲ್ಲಿ ಓಡುತ್ತಿರುವ ಕಾಲದ ನಿತ್ಯದ ಧಾವಂತದ ಬದುಕಿನಲ್ಲಿ ದೀಘ೯ವಾದ ಕಾದಂಬರಿಗಳನ್ನು ಬಿಡಿ ಮೂರು ನಾಲ್ಕು ಪುಟಗಳ ಸಣ್ಣಕತೆ , ಕವಿತೆಗಳನ್ನೂ ಓದಲಾಗದ ವಿಲಕ್ಷಣ ಸ್ಥಿತಿಯಲ್ಲಿ ಮನಸ್ಸುಗಳು ಹಾರುತ್ತಿವೆ ಎನ್ನುತ್ತಾರೆ. ಧೀರಜ್ ಅವರ ಸಂಕಲನದ ಮೊದಲ ಕತೆ 'ಕ್ಷಮಿಸಲಾರೆಯ !'. ಈ ಕತೆಯು' ಕಾಲ ಎಲ್ಲವನ್ನು ನೆನಪಿಸುತ್ತದೆ' ಎಂಬ ವಾಕ್ಯದಿಂದ ಆರಂಭವಾಗುತ್ತದೆ. ಇಷ್ಟು ಮಾತ್ರದಿಂದಲೇ ಇಂದಿನ ಪಾತ್ರವೊಂದು ಹಿಂದನ್ನು ನೆನಪಿಸುತ್ತದೆ ಎಂಬ ಅರಿವಾಗುತ್ತದೆ. ಸಮುದ್ರ ತೀರದಲ್ಲಿ ಒಂಟಿಯಾಗಿ ಕುಳಿತಿರುವ ಪವಿತ್ರ ಇಲ್ಲಿಯ ವತ೯ಮಾನದ ಪಾತ್ರ. ಆಕೆಯ ಮನಸ್ಸು ಕಾಲದೊಂದಿಗೆ ಹಿಂದಕ್ಕೆ ಚಲಿಸುತ್ತ ಗತಭೂತದ ತೀರದ ನೆನಪುಗಳನ್ನು ನೆನಪಿಸಿಕೊಳ್ಳುತ್ತಿರುತ್ತದೆ. ಕತೆಗಾರ ಇಲ್ಲಿ ಹಿನ್ನೋಟ ತಂತ್ರವನ್ನು ಬಳಸಿದ್ದಾರೆ. ವರುಷದ ಹಿಂದೆ ಅಲೆಗಳಲ್ಲಿ ಗುಬ್ಬಿಮನೆ ಕಟ್ಟುತ್ತ ಉಪ್ಪು ನೀರು ಹಿಡಿಯುತ್ತ ಜಿಗಿದಾಡುತ್ತಿದ್ದ ಅವಳ ಪತಿ ಸಾಗರ ಹಾಗೂ ಇಬ್ಬರು ಮಕ್ಕಳನ್ನು ದೈತ್ಯ ಅಲೆಯೊಂದು ಕ್ಷಣ ಮಾತ್ರದಲ್ಲಿ ಸಾವಿನ ಮನೆಗೆ ಎಳೆದುಕೊಂಡು ಹೋದ ಚಿತ್ರಣವು ಇಲ್ಲಿದೆ. ಹೀಗೆ ಪದಗಳೇ ಧ್ವನಿಯಾಗಿ ಹಲವಾರು ಅಥ೯ಗಳಿಗೆ ಕನ್ನಡಿಯಾಗುತ್ತಿವೆ. 'ನನ್ನ ಮಾತು ಕೇಳುತ್ತಿದೆಯಾ?' ಎಂಬ ಕತೆಯಲ್ಲಿ ತನ್ನನ್ನು ಉಳಿಸಲಾಗದೆ ಅಸಹಾಯಕರಾಗಿ ನಿಂತ ವೈದ್ಯರು, ತಂದೆ-ತಾಯಿ, ಸಮಾಜವನ್ನು, ಸತ್ತು ಹೋದ ಒಂದು ತಿಂಗಳ ಶಿಶುವು ಸಾವಿನ ಬಯಲಲ್ಲಿ ನಿಂತು ಈಚೆ ಸೇತುವೆ ದಾಟಿ ಬರಲಾಗದ ಯಾತನೆಯಲ್ಲಿ ಕೇಳುವ ಪ್ರಶ್ನೆಯೂ ಇಲ್ಲಿದೆ. ಹೆಚ್ಚಾಗಿ ಕತೆಗಳು ಪಂಚೇಂದ್ರಿಯಗಳಿಗೆ ನಿಲುಕದ ಸಾವಿನಾಚಿನ ಸತ್ಯದ ಶೋಧ ನಡೆಸುವಂತ್ತಿವೆ. ಈ ಕತೆ ಓದುವಾಗ ಮಾಲತಿ ಪಟ್ಟಣ ಶೆಟ್ಟಿಯವರ 'ನಾ ಬರಿ ಭ್ರೂಣವಲ್ಲ' ಎಂಬ ಕವನ ನೆನಪಾಗುತ್ತದೆ ಎಂದಿದ್ದಾರೆ.
ಧೀರಜ್ ಬೆಳ್ಳಾರೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಉಡುಪಿಯ ತ್ರಿಶಾ ಸಮೂಹ ಸಂಸ್ಥೆಗಳು ಕಟಪಾಡಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆ, ಕಿರಿಚಿತ್ರ ನಿರ್ದೇಶನ, ಅಭಿನಯ, ಭಾಷಣ ಅವರ ಆಸಕ್ತಿ ಕ್ಷೇತ್ರವಾಗಿದ್ದು, ರಂಗಭೂಮಿ ಕಲಾವಿದರಾಗಿದ್ದಾರೆ. ದಿನಕ್ಕೊಂದರಂತೆ ಪುಟ್ಟದಾಗಿ ಸ್ಟೇಟಸ್ ಕತೆಗಳನ್ನು ಬರೆಯುವ ಅವರು ಇವರೆಗೂ 440ಕ್ಕೂ ಅಧಿಕ ಕತೆಗಳನ್ನ ಬರೆದಿದ್ದಾರೆ. ...
READ MORE